ವರದಿಯಲ್ಲಿ ಸ್ಪೇನ್‌- ಮೊರಕ್ಕೊ ಗಡಿ ಚಿತ್ರ: ತೀವ್ರ ಮುಜುಗರದ ಬಳಿಕ ತನಿಖೆಗೆ ಆದೇಶಿಸಿದ ಗೃಹ ಸಚಿವಾಲಯ

7

ವರದಿಯಲ್ಲಿ ಸ್ಪೇನ್‌- ಮೊರಕ್ಕೊ ಗಡಿ ಚಿತ್ರ: ತೀವ್ರ ಮುಜುಗರದ ಬಳಿಕ ತನಿಖೆಗೆ ಆದೇಶಿಸಿದ ಗೃಹ ಸಚಿವಾಲಯ

Published:
Updated:
ವರದಿಯಲ್ಲಿ ಸ್ಪೇನ್‌- ಮೊರಕ್ಕೊ ಗಡಿ ಚಿತ್ರ: ತೀವ್ರ ಮುಜುಗರದ ಬಳಿಕ ತನಿಖೆಗೆ ಆದೇಶಿಸಿದ ಗೃಹ ಸಚಿವಾಲಯ

ನವದೆಹಲಿ: ಪಾಕಿಸ್ತಾನ ಮತ್ತು ಬಾಂಗ್ಲಾದೇಶದೊಂದಿಗೆ ಹಂಚಿಕೊಂಡಿರುವ ಗಡಿಯಲ್ಲಿ ಪ್ರಖರ ದೀಪಗಳನ್ನು (ಫ್ಲಡ್‌ಲೈಟ್‌) ಅಳವಡಿಸಿರುವುದನ್ನು ಬಿಂಬಿಸಲು ತನ್ನ ವಾರ್ಷಿಕ ವರದಿಯಲ್ಲಿ ಸ್ಪೇನ್‌–ಮೊರಕ್ಕೊ ಗಡಿಯ ಚಿತ್ರ ಬಳಕೆಯಾದ ಬಗ್ಗೆ ಸಮಗ್ರ ತನಿಖೆಗೆ ಗೃಹ ಸಚಿವಾಲಯ ಆದೇಶಿಸಿದೆ.

ಗೃಹ ಸಚಿವಾಲಯದ 2016–17ರ ವಾರ್ಷಿಕ ವರದಿಯಲ್ಲಿ ಸ್ಪೇನ್‌–ಮೊರಕ್ಕೊ ಗಡಿಯ ಚಿತ್ರವನ್ನು ಮುದ್ರಿಸಲಾಗಿದೆ. ಆಲ್ಟ್‌ ನ್ಯೂಸ್‌ (Alt News) ಸುದ್ದಿತಾಣ ಬುಧವಾರ (ಜೂನ್ 14) ಈ ವಿಷಯವನ್ನು ಬಹಿರಂಗಗೊಳಿಸಿತ್ತು. ಇದರಿಂದ ಗೃಹ ಸಚಿವಾಲಯ ತೀವ್ರ ಮುಜುಗರಕ್ಕೆ ಒಳಗಾಗಿತ್ತು.

ಸ್ಪ್ಯಾನಿಷ್‌ ಛಾಯಾಗ್ರಾಹಕ ಜಾವೇರ್‌ ಮೊಯನೊ 2006ರಲ್ಲಿ ತೆಗದ ಸ್ಪೇನ್‌–ಮೊರಕ್ಕೊ ಗಡಿಯ ಚಿತ್ರ ಇದು ಎಂದು ಆಲ್ಟ್‌ ನ್ಯೂಸ್‌ ವರದಿಯಲ್ಲಿ ಹೇಳಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಈ ಚಿತ್ರವನ್ನು ಪೋಸ್ಟ್‌ ಮಾಡಿ ಗೃಹ ಸಚಿವಾಲಯದ ‘ಅಸಲಿತನ’ವನ್ನು ಪ್ರಶ್ನಿಸಿದ್ದಾರೆ.

ತೀವ್ರ ಮುಜುಗರಕ್ಕೊಳಗಾದ ಬಳಿಕ ಗೃಹ ಸಚಿವಾಲಯ ಈ ಬಗ್ಗೆ ಸಮಗ್ರ ತನಿಖೆಗೆ ಆದೇಶಿಸಿದೆ. ಆದರೆ, ಗೃಹ ಸಚಿವಾಲಯ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.

‘ಈ ಬಗ್ಗೆ ಅಧಿಕಾರಿಗಳಿಂದ ವಿವರಣೆ ಕೇಳಲಾಗಿದೆ. ಒಂದು ವೇಳೆ ತಪ್ಪಾಗಿದ್ದರೆ ಅದಕ್ಕಾಗಿ ಕ್ಷಮೆ ಕೋರುತ್ತೇವೆ’ ಎಂದು ಗೃಹ ಕಾರ್ಯದರ್ಶಿ ರಾಜೀವ್‌ ಮಹರ್ಷಿ ತಿಳಿಸಿದ್ದಾರೆ.

ಪಾಕಿಸ್ತಾನ ಮತ್ತು ಬಾಂಗ್ಲಾದೇಶಕ್ಕೆ ಹೊಂದಿಕೊಂಡಿರುವ ಗಡಿಯಲ್ಲಿ ಅಕ್ರಮ ಸಾಗಣೆ ಮತ್ತು ಭಯೋತ್ಪಾದಕರ ನುಸುಳುವಿಕೆ ಮೇಲೆ ನಿಗಾ ಇಡಲು 647 ಕಿ.ಮೀ. ಗಡಿಯುದ್ದಕ್ಕೂ ಫ್ಲಡ್‌ಲೈಟ್ ಅಳವಡಿಸಿರುವುದಾಗಿ ಗೃಹ ಸಚಿವಾಲಯದ ವಾರ್ಷಿಕ ವರದಿಯಲ್ಲಿ ಹೇಳಲಾಗಿದೆ. ಇದಕ್ಕಾಗಿ ಸ್ಪೇನ್‌–ಮೊರಕ್ಕೊ ಗಡಿ ಚಿತ್ರ ಬಳಸಿ ಪೇಚಿಗೆ ಸಿಲುಕಿದೆ.

ಪ್ರವಾಹ ವೀಕ್ಷಣೆಯ ಮೋದಿ ಚಿತ್ರ ತಂದಿತ್ತು ಮುಜುಗರ
ಅಂದ ಹಾಗೆ ಕೇಂದ್ರ ಸರ್ಕಾರ ನಕಲಿ ಚಿತ್ರಗಳ ವಿಚಾರದಲ್ಲಿ ಮುಜುಗರ ಅನುಭವಿಸುತ್ತಿರುವುದು ಇದೇ ಮೊದಲಲ್ಲ. 2015ರ ಡಿಸೆಂಬರ್‌ನಲ್ಲಿ ಚೆನ್ನೈ ಪ್ರವಾಹ ವೀಕ್ಷಣೆ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರವೊಂದು ಇದೇ ರೀತಿ ಕೇಂದ್ರ ಸರ್ಕಾರ ಮತ್ತು ಮೋದಿ ಅವರನ್ನು ಪೇಚಿಗೆ ಸಿಲುಕಿಸಿತ್ತು.

ಎಡಿಟ್‌ ಮಾಡಿದ್ದ ಚಿತ್ರ

ಮೋದಿ ಪ್ರವಾಹ ವೀಕ್ಷಣೆ ಮಾಡುತ್ತಿರುವ ಮೂಲ ಚಿತ್ರವನ್ನು ಎಡಿಟ್‌ ಮಾಡಿದ್ದ ಚಿತ್ರವನ್ನು ಪಿಐಬಿ (Press Information Bureau) ಪ್ರಕಟಿಸಿತ್ತು. ಈ ಚಿತ್ರ ಕೂಡಾ ನೆಟ್ಟಿಗರ ಅಣಕಕ್ಕೆ ಗುರಿಯಾಗಿತ್ತು.

ಮೂ‌ಲ ಚಿತ್ರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry