ತೊಗರಿಬೇಳೆ ಬೆಲೆ ಭಾರಿ ಇಳಿಕೆ

7
ಉತ್ತಮ ಇಳುವರಿ, ನೋಟು ರದ್ದತಿ ಪ್ರಭಾವ: ಹೆಚ್ಚಿದ ಪೂರೈಕೆ ಪ್ರಮಾಣ

ತೊಗರಿಬೇಳೆ ಬೆಲೆ ಭಾರಿ ಇಳಿಕೆ

Published:
Updated:
ತೊಗರಿಬೇಳೆ ಬೆಲೆ ಭಾರಿ ಇಳಿಕೆ

ಬೆಂಗಳೂರು: ಕಳೆದ ಒಂದೂವರೆ ವರ್ಷದಿಂದ  ಗಗನಮುಖಿಯಾಗಿದ್ದ ಬೇಳೆಕಾಳುಗಳ ಧಾರಣೆ ಇದೀಗ ಭಾರಿ ಇಳಿಕೆ ಕಂಡಿದೆ. ಸಗಟು ಮಾರುಕಟ್ಟೆಯಲ್ಲಿ ಕೆ.ಜಿಗೆ ₹200ರವರೆಗೂ  ಏರಿಕೆ ಕಂಡಿದ್ದ ತೊಗರಿ ಬೇಳೆ ಬೆಲೆ ಸದ್ಯ ಗರಿಷ್ಠ ₹70 ರಂತೆ ಮಾರಾಟವಾಗುತ್ತಿದೆ.

ಉತ್ತಮ ಇಳುವರಿ: ಬೇಳೆಕಾಳುಗಳ ಉತ್ಪಾದನೆ ಹೆಚ್ಚಿಸಲು ಕೇಂದ್ರ ಸರ್ಕಾರ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಏರಿಕೆ ಸೇರಿದಂತೆ ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ಇದರಿಂದ ಇಳುವರಿ ಪ್ರಮಾಣ ಹೆಚ್ಚಾಗಿದೆ. 2015–16ರಲ್ಲಿ 1.63 ಕೋಟಿ ಟನ್‌ಗಳಷ್ಟು ಬೇಳೆಕಾಳು ಉತ್ಪಾದನೆ ಆಗಿತ್ತು. 2016–17ರಲ್ಲಿ 2.21 ಕೋಟಿ ಟನ್‌ಗಳಿಗೆ ಅಂದರೆ ಶೇ 19.52 ರಷ್ಟು ಏರಿಕೆ ಕಂಡುಬಂದಿದೆ.

ನೋಟು ರದ್ದತಿ ಪ್ರಭಾವ: ಬೇಳೆಕಾಳು ಬೆಲೆ ಇಳಿಕೆ ಕಾಣುಲು ಮುಖ್ಯವಾಗಿ ನೋಟು ರದ್ದತಿ ಪರಿಣಾಮವೇ ಹೆಚ್ಚಿದೆ. ಆ ಸಂದರ್ಭದಲ್ಲಿ ಗ್ರಾಮೀಣ ಭಾಗದಲ್ಲಿ ನಗದು ಕೊರತೆಯಾಗಿ ಖರೀದಿ ತಗ್ಗಿತ್ತು. ಉತ್ತಮ ಬೆಲೆ ಬರುವ ನಿರೀಕ್ಷೆಯಲ್ಲಿ ದಾಸ್ತಾನು ಮಾಡಿದ್ದವರು ಅನಿವಾರ್ಯವಾಗಿ ಈಗ  ಮಾರುಕಟ್ಟೆಗೆ ಸರಕನ್ನು ತರುತ್ತಿದ್ದಾರೆ. ಇದರಿಂದ ಪೂರೈಕೆ ಹೆಚ್ಚಾಗಿದ್ದು, ಬೆಲೆ ಇಳಿಕೆ ಕಾಣುವಂತಾಗಿದೆ ಎಂದು ಕರ್ನಾಟಕ ವಾಣಿಜ್ಯೋದ್ಯಮ ಮಹಾಸಂಘದ (ಎಫ್‌ಕೆಸಿಸಿಐ) ಆಹಾರ ಸಂಸ್ಕರಣೆ ಮತ್ತು ಆಂತರಿಕ ವ್ಯಾಪಾರ ಸಮಿತಿ ಅಧ್ಯಕ್ಷ ಭರತ್‌ ಕುಮಾರ್‌ ಷಾ ಅವರು ಮಾಹಿತಿ ನೀಡಿದರು.

ಆಮದು : ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವಾಲಯದ  ಮಾಹಿತಿಯಂತೆ, ದೇಶಿ ಬೇಡಿಕೆ ಪೂರೈಸುವ ಉದ್ದೇಶದಿಂದ 2016–17ರ ಏಪ್ರಿಲ್‌–ಅಕ್ಟೋಬರ್‌ ಅವಧಿಯಲ್ಲಿ 27 ಲಕ್ಷ ಟನ್‌ಗಳಷ್ಟು ಬೇಳೆಕಾಳು ಆಮದು ಮಾಡಿಕೊಳ್ಳಲಾಗಿತ್ತು. ಕಳೆದ ವರ್ಷ 58 ಲಕ್ಷ ಟನ್‌ಗಳಷ್ಟು  ಆಮದು ಮಾಡಿಕೊಳ್ಳಲಾಗಿತ್ತು. ದೇಶಿ ಬೆಳೆಗಾರರಿಂದ ಮತ್ತು ಆಮದು ಮಾಡಿಕೊಳ್ಳುವ ಮೂಲಕ 20 ಲಕ್ಷ ಟನ್‌ಗಳಷ್ಟು ಹೆಚ್ಚುವರಿ ದಾಸ್ತಾನು ಮಾಡಲು ಸರ್ಕಾರ ನಿರ್ಧರಿಸಿದೆ.

ಬಿತ್ತನೆ ಪ್ರಮಾಣ ಇಳಿಕೆ: ಬೇಳೆಕಾಳುಗಳ ಬೆಲೆ ಇಳಿಕೆ ಕಾಣುತ್ತಿರುವುದರಿಂದ ರೈತರು ಈ ಬಾರಿ ಬಿತ್ತನೆಗೆ ಹೆಚ್ಚು ಉತ್ಸಾಹ ತೋರುತ್ತಿಲ್ಲ..

ಮುಂಗಾರು ಹಂಗಾಮಿನಲ್ಲಿ ಜೂನ್‌ 16ರವರೆಗೆ ದೇಶದಾದ್ಯಂತ ಬೇಳೆಕಾಳು ಬಿತ್ತನೆ ಪ್ರಮಾಣ 3.63 ಲಕ್ಷ ಹೆಕ್ಟೇರ್‌ಗಳಿಂದ 2.22ಲಕ್ಷ ಹೆಕ್ಟೇರ್‌ಗಳಿಗೆ ಇಳಿಕೆ ಕಂಡಿದೆ ಎಂದು ಕೇಂದ್ರ ಕೃಷಿ ಸಚಿವಾಲಯ ತಿಳಿಸಿದೆ. ಇದು ಹೀಗೆಯೇ ಮುಂದುವರಿದರೆ ಇಳುವರಿ ಕುಂಠಿತವಾಗಿ, ಮತ್ತೆ ಬೆಲೆ ಏರಿಕೆ ಕಾಣುವ ಸಾಧ್ಯತೆ ಇದೆ.

ಜಿಎಸ್‌ಟಿ ಪ್ರಭಾವ

ಸರಕು ಮತ್ತು ಸೇವಾ ತೆರಿಗೆಯಲ್ಲಿ (ಜಿಎಸ್‌ಟಿ) ಪ್ಯಾಕ್‌ ಆಗಿರುವ ಆಹಾರ ಪದಾರ್ಥಗಳಿಗೆ ಶೇ 5 ರಷ್ಟು ತೆರಿಗೆ ನಿಗದಿಮಾಡಲಾಗಿದೆ. ಇದರಿಂದ ಬೆಲೆಯಲ್ಲಿ ಏರಿಕೆಯಾಗಲಿದೆ. ಬೇಳೆಕಾಳು ಒಳಗೊಂಡು ಎಲ್ಲಾ ರೀತಿಯ ಆಹಾರ ಪದಾರ್ಥಗಳ ಧಾರಣೆ ಪ್ರತಿ ಕೆ.ಜಿಗೆ ₹3 ರಿಂದ ₹4 ರಷ್ಟು ಏರಿಕೆಯಾಗಲಿದೆ. ಇದರಿಂದ ಜನರಿಗೆ ಹೆಚ್ಚುವರಿ ಹೊರೆಯಾಗುತ್ತದೆ ಎಂದು ಭರತ್‌ ಕುಮಾರ್‌ ಷಾ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry