ಸರ್ಕಾರಿ ಆಸ್ಪತ್ರೆಗಳನ್ನು ಸೇರಿಸಬೇಡಿ

7

ಸರ್ಕಾರಿ ಆಸ್ಪತ್ರೆಗಳನ್ನು ಸೇರಿಸಬೇಡಿ

Published:
Updated:
ಸರ್ಕಾರಿ ಆಸ್ಪತ್ರೆಗಳನ್ನು ಸೇರಿಸಬೇಡಿ

ಬ್ರೆಜಿಲ್ ಮತ್ತು ಥಾಯ್ಲೆಂಡ್‌ಗಳಂತಹ ಅಭಿವೃದ್ಧಿಶೀಲ ದೇಶಗಳಲ್ಲಿ ಸಾರ್ವತ್ರಿಕವಾಗಿ ಎಲ್ಲರಿಗೂ ಆರೋಗ್ಯ ಸೇವೆಗಳು ಕೈಗೆಟುಕುವಂತಹ  ಸದೃಢ ಸರ್ಕಾರಿ ಆರೋಗ್ಯ ವ್ಯವಸ್ಥೆ ರೂಪಿಸಿರುವುದು ಅಲ್ಲಿನ ಸರ್ಕಾರಗಳ ಮಹತ್ವದ ಸಾಧನೆ. ಅಲ್ಲಿನ ಸರ್ಕಾರಗಳು ಆರೋಗ್ಯಕ್ಕೆ  ಖರ್ಚು ಮಾಡುತ್ತಿರುವ ಪ್ರಮಾಣ ಇದಕ್ಕೆ ಕಾರಣ. ಆದರೆ, ಭಾರತದಲ್ಲಿ  ಶೇ 70ರಷ್ಟು ಆರೋಗ್ಯ ಸೇವೆಗಳು ಖಾಸಗಿ ಆರೋಗ್ಯ ವಲಯದಿಂದಲೇ ಲಭ್ಯ.ಇಂತಹ ಸಂದರ್ಭದಲ್ಲಿ ಹತ್ತು  ವರ್ಷಗಳ ಹಿಂದೆ  ಖಾಸಗಿ ಆಸ್ಪತ್ರೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದ ಕಾಯ್ದೆಯೊಂದು  ರಾಜ್ಯದಲ್ಲಿ ಜಾರಿಯಾಯಿತು. ಈಗ ಈ ಕಾಯ್ದೆಗೆ ತಿದ್ದುಪಡಿ ತರಲು  ಮಸೂದೆಯೊಂದು ವಿಧಾನಸಭೆಯಲ್ಲಿ ಮಂಡನೆಯಾಗಿದೆ.ಸರ್ಕಾರಿ ಆಸ್ಪತ್ರೆಗಳನ್ನು ಈ ಮಸೂದೆಯಿಂದ ಹೊರಗಿಟ್ಟಿದ್ದು ನಿಜಕ್ಕೂ ಸೂಕ್ತವಾಗಿದೆ. ಏಕೆಂದರೆ ಸಂಪೂರ್ಣವಾಗಿ ಕುಲಗೆಟ್ಟಿರುವ ಸರ್ಕಾರಿ ಆಸ್ಪತ್ರೆಗಳನ್ನು  ಈಗಿರುವ ಅಸಮರ್ಥ, ಅನಾರೋಗ್ಯ ಸ್ಥಿತಿಯಲ್ಲೇ ಈ ಮಸೂದೆಯಡಿ  ತರಬೇಕೆನ್ನುವ ಬೇಡಿಕೆ ಅಪಾಯಕಾರಿ. ಏಕೆಂದರೆ ಮೂಲ ಸೌಕರ್ಯ ಹಾಗೂ ವೈದ್ಯರ ಕೊರತೆಯಿಂದ ಬಳಲುತ್ತಿರುವ ಸರ್ಕಾರಿ ಆಸ್ಪತ್ರೆಗಳನ್ನು ಅದೇ ಸ್ಥಿತಿಯಲ್ಲಿ ಈ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ಮಸೂದೆ ಅಡಿಯಲ್ಲಿ ಒಳಪಡಿಸಿದರೆ ಕಾನೂನಿನ  ಮಾನದಂಡಗಳಿಗೆ ಅನುಗುಣವಾಗಿಲ್ಲ ಎಂಬ ನೆಪ ಆಧರಿಸಿ ಸರ್ಕಾರಿ ಆಸ್ಪತ್ರೆಗಳನ್ನು ಮುಚ್ಚಲು ಅಥವಾ ಖಾಸಗಿ ವಲಯಕ್ಕೆ ಹಸ್ತಾಂತರ ಮಾಡಲು ಖುಲ್ಲಂ ಖುಲ್ಲಾ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಸರ್ಕಾರಿ ಆಸ್ಪತ್ರೆಗಳು ಖಾಸಗಿ ಆಸ್ಪತ್ರೆಗಳ ಐಷಾರಾಮಿ ಸೌಲಭ್ಯಗಳ  ಎದುರು ಸ್ಪರ್ಧಿಸಲು ಸಾಧ್ಯವೇ ಇಲ್ಲದೆ ಕ್ರಮೇಣ ಅಸ್ತಂಗತವಾಗಲಿವೆ.ಇದಕ್ಕೆ ಉದಾಹರಣೆಯಾಗಿ ಶಿಕ್ಷಣ ವಲಯವನ್ನು ಗಮನಿಸಿ. ರಾಜ್ಯದ ಎಲ್ಲಾ ಜಾತಿ, ವರ್ಗಗಳ ಮಕ್ಕಳಿಗೆ ಸಮಾನ ಶಿಕ್ಷಣವನ್ನು ಕೊಡಬೇಕೆನ್ನುವ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿರುವ ರಾಜ್ಯ ಸರ್ಕಾರ, ಕಳೆದ 30  ವರ್ಷಗಳಲ್ಲಿ ಸಾರ್ವಜನಿಕ ಶಿಕ್ಷಣವನ್ನು ಕ್ರಮೇಣ ಖಾಸಗೀಕರಣಗೊಳಿಸುತ್ತಿದೆ. ಆ ಮೂಲಕ ಶಿಕ್ಷಣ ಮತ್ತು ಮಾನವ ಸಂಪನ್ಮೂಲ ಕ್ಷೇತ್ರಗಳನ್ನು ವ್ಯಾಪಾರೀಕರಣಗೊಳಿಸಿದೆ. ರಾಜ್ಯದ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ಮುಂಚೂಣಿಯಲ್ಲಿ ನಿಂತು ಸಮಾನ ಶಿಕ್ಷಣದ ನೇತೃತ್ವವನ್ನು ವಹಿಸಿಕೊಳ್ಳಬೇಕಾದಂತಹ ಸಂದರ್ಭದಲ್ಲಿ  ಸರ್ಕಾರವೇ ತನ್ನ ಶಾಲೆಗಳನ್ನು ಮುಚ್ಚುತ್ತಿದೆ. ಖಾಸಗಿ ಶಾಲೆಗಳನ್ನು ಪ್ರೋತ್ಸಾಹಿಸುತ್ತಿದೆ.ಇದರ ಮುಂದುವರೆದ ಭಾಗವೇ ಆರ್‌ಟಿಇ ಕಾಯ್ದೆ– 2009.  ಈ ಕಾಯ್ದೆಯು ಬಡತನ ರೇಖೆಗಿಂತ ಕೆಳಗಿರುವ ಸಮಾಜದ ಶೇ 25 ರಷ್ಟು  ಮಕ್ಕಳಿಗೆ ಉಚಿತ, ಕಡ್ಡಾಯ ಮತ್ತು ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸಬೇಕು ಎಂದು ಸರ್ಕಾರಕ್ಕೆ ನಿರ್ದೇಶಿಸುತ್ತದೆ. ನೆರೆಹೊರೆ ಶಾಲಾ ಪದ್ಧತಿಯನ್ನು ಪ್ರೋತ್ಸಾಹಿಸುವ ಉದ್ದೇಶದ ಈ ಕಾಯ್ದೆ  ಎಲ್ಲಿಯೂ ಖಾಸಗಿ ಶಾಲೆಗೆ ಮಕ್ಕಳನ್ನು ಸೇರಿಸಿ ಎಂದು ಹೇಳುವುದಿಲ್ಲ. ಆದರೆ ಸಾರ್ವಜನಿಕ ಶಿಕ್ಷಣ ಇಲಾಖೆಯು ತನ್ನ ವೈಫಲ್ಯವನ್ನು ಬಚ್ಚಿಟ್ಟುಕೊಳ್ಳಲು, ‘ಅತ್ಯುತ್ತಮ ಗುಣಮಟ್ಟದ ಶಿಕ್ಷಣ ಪಡೆಯಬೇಕೆಂದರೆ ಅದು ಸರ್ಕಾರಿ ಶಾಲೆಗಳಲ್ಲಿ ದೊರಕುವುದಿಲ್ಲ. ಹೀಗಾಗಿ ಖಾಸಗಿ ಶಾಲೆಗಳಲ್ಲಿ ಪ್ರವೇಶ ಪಡೆಯಿರಿ’ ಎಂದು  ಪೋಷಕರಿಗೆ ಹೇಳುತ್ತಾ  ಪ್ರತಿ ಮಗುವಿಗೆ  ವಾರ್ಷಿಕ ₹ 16 ಸಾವಿರ ಶುಲ್ಕವನ್ನು ಖಾಸಗಿ ಶಾಲೆಗಳಿಗೆ ಕೊಡುತ್ತಿದೆ. ಅಂದರೆ ಸಾರ್ವಜನಿಕ  ಶಿಕ್ಷಣ  ಇಲಾಖೆಯು ತಾನೇ ಮುಂದೆ ನಿಂತು ಸರ್ಕಾರಿ  ಶಾಲೆಗಳನ್ನು   ಮುಚ್ಚುತ್ತಾ ಮತ್ತೊಂದೆಡೆ ಜನಸಾಮಾನ್ಯರ ಹಣದಲ್ಲಿ ಖಾಸಗಿ ಶಾಲೆಗಳನ್ನು ಪೋಷಿಸುತ್ತಿದೆ. ಇದು ಆರ್‌ಟಿಇ ಕಾಯ್ದೆಯ ದುರಂತ. ಸಾರ್ವಜನಿಕ ಶಿಕ್ಷಣಕ್ಕಾದ ಈ ದುರಂತವೇ ಸ್ವಲ್ಪ ಎಚ್ಚರ ತಪ್ಪಿದರೂ ಸರ್ಕಾರಿ ಆಸ್ಪತ್ರೆಗಳಿಗೂ ಬಂದೆರಗುತ್ತದೆ. ಈ ಕಾರಣಕ್ಕಾಗಿ ಸರ್ಕಾರಿ ಆಸ್ಪತ್ರೆಗಳನ್ನು ಹೊರತುಪಡಿಸಿ, ಖಾಸಗಿ ಆಸ್ಪತ್ರೆಗಳನ್ನು ಮಾತ್ರ ಕೇಂದ್ರೀಕರಿಸಿರುವುದು ಉತ್ತಮ.ರೋಗಿಗಳ ಹಕ್ಕು ಸಂರಕ್ಷಣೆ, ದೂರು ನಿವಾರಣಾ ವ್ಯವಸ್ಥೆ, ಬೆಲೆ ನಿಯಂತ್ರಣ ಒಳಗೊಂಡಂತೆ ಖಾಸಗಿ ಆಸ್ಪತ್ರೆಗಳ ವ್ಯಾಪಾರೀಕರಣಕ್ಕೆ ಕಡಿವಾಣ ಹಾಕುವ ಈ ಮಸೂದೆಯ ಉದ್ದೇಶ  ಸೂಕ್ತವಾಗಿರುವಂತಿದೆ. ಆದರೆ ಇದರ ಸಾಧಕ ಬಾಧಕ ಕುರಿತು ಸಮಗ್ರವಾಗಿ ಚರ್ಚೆಯಾಗಲಿ.

ಬಿ.ಶ್ರೀಪಾದ ಭಟ್,

ಬೆಂಗಳೂರು

*

ಸಾಮಾಜಿಕ ಭದ್ರತೆಗಾಗಿ ಕಾಯ್ದೆ ರೂಪಿಸಿ

‘ಕರ್ನಾಟಕ ಖಾಸಗಿ  ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ಮಸೂದೆ–2017’  ಮುಖ್ಯವಾಗಿ ಖಾಸಗಿ ಆಸ್ಪತ್ರೆಗಳನ್ನು ಮಾತ್ರ ಕೇಂದ್ರವಾಗಿ ಇರಿಸಿಕೊಂಡಿದೆ. ಇದು ಖಾಸಗಿ ಆಸ್ಪತ್ರೆಗಳ ನೋಂದಣಿ, ಮೇಲ್ವಿಚಾರಣೆ ಹಾಗೂ ನಿಯಂತ್ರಣ ಉದ್ದೇಶದ ಮಸೂದೆ. ಸರ್ಕಾರಿ ಆಸ್ಪತ್ರೆಗಳ ಮೇಲೆ ನಿಗಾ  ಇಡುವ ಉದ್ದೇಶ ಹೊಂದಿಲ್ಲ. ಇದು ಕಾಯ್ದೆಯಾದರೆ  ಚಿಕಿತ್ಸಾ ಶುಲ್ಕದ ಮೇಲೆ  ನಿಯಂತ್ರಣ ಹೇರಲಿದೆ. ಆದಕಾರಣ ಖಾಸಗಿ ವೈದ್ಯಕೀಯ ಸಂಸ್ಥೆಗಳು ಇದನ್ನು ವಿರೋಧಿಸುತ್ತಿವೆ. ಸಾಮಾಜಿಕ ಭದ್ರತೆಯ ಬಹುಮುಖ್ಯ ಭಾಗ ಆರೋಗ್ಯ. ಜನಸಾಮಾನ್ಯರಿಗೆ ಉಚಿತ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವುದು ಸರ್ಕಾರದ ಆದ್ಯ ಕರ್ತವ್ಯ. ಆದರೆ, ಇಂದಿನ ದಿನಗಳಲ್ಲಿ ಉಚಿತ ವೈದ್ಯಕೀಯ ಸೇವೆಯ ಪರಿಕಲ್ಪನೆ ಹಾಸ್ಯಾಸ್ಪದವಾಗಿದೆ.  ಗುಣಮಟ್ಟದ ವೈದ್ಯಕೀಯ ಸೇವೆಯು ಖಾಸಗಿ ಆಸ್ಪತ್ರೆಗಳಿಂದ ಮಾತ್ರ ಸಾಧ್ಯ ಎಂಬ  ಹುಸಿ ನಂಬಿಕೆಯನ್ನು ಜನರ ಮನಸ್ಸಿನಲ್ಲಿ ಬಿತ್ತಲಾಗಿದೆ.‘ಅಭಿವೃದ್ಧಿ’ ಎನ್ನುವುದು ಆರ್ಥಿಕತೆ ವಿಷಯ ಮಾತ್ರವಲ್ಲ, ಅದು ನೇರವಾಗಿ ಆರೋಗ್ಯಕ್ಕೂ ಸಂಬಂಧಿಸಿದೆ. ವಿಪರ್ಯಾಸವೆಂದರೆ, ನಮ್ಮ ದೇಶದಲ್ಲಿ ಹೆಚ್ಚಿನ ಜನರು ಖಾಸಗಿ ಆರೋಗ್ಯ ಸೇವೆ ಪಡೆಯಲು ತಮ್ಮ ಆದಾಯದ ಗಣನೀಯ ಭಾಗವನ್ನು ವ್ಯಯಿಸುತ್ತಿದ್ದಾರೆ.ಭಾರತದಂತಹ ಪ್ರಜಾಪ್ರಭುತ್ವ, ಕಲ್ಯಾಣ ರಾಷ್ಟ್ರದಲ್ಲಿ ಇಂತಹ ಸ್ಥಿತಿ ಇರಬಾರದು. ಸರ್ಕಾರಿ ಆರೋಗ್ಯ ಸೇವೆ ಇದೆ  ಎನ್ನುವುದೇ ಬಡ ಮತ್ತು ಮಧ್ಯಮ ವರ್ಗದವರಿಗೆ ಮರೆತುಹೋಗಿದೆ. ಚಿಕಿತ್ಸೆಗಾಗಿ  ಸಾಲ ಮಾಡುತ್ತಿದ್ದಾರೆ. ಆರೋಗ್ಯದ ಬಗೆಗಿನ ಕಾಳಜಿ ಇತ್ತೀಚಿನ ದಿನಗಳಲ್ಲಿ ಜಾಗೃತವಾಗಿದೆ. ಆದರೆ ಅದನ್ನು ಪಡೆಯುವ ದಾರಿ ಮಾತ್ರ ದುಬಾರಿ. ಹೀಗಾಗಿ  ಖಾಸಗಿ ಆಸ್ಪತ್ರೆಗಳ ಸೇವೆಯ ಮೇಲೆ ದರ ನಿಯಂತ್ರಣಕ್ಕೆ ಹಾಗೂ ಅವುಗಳ ಲಾಭಕೋರತನಕ್ಕೆ ಕಡಿವಾಣ ಹಾಕುವುದು ಅನಿವಾರ್ಯವಾಗಿದೆ.  ಸರ್ಕಾರ ಮಾರ್ಗಸೂಚಿಯನ್ನು ನೀಡಲೇಬೇಕು. ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎನ್ನುವುದು  ಸಾಮಾಜಿಕ ಭದ್ರತೆಯಾಗಬೇಕು. ಇಂತಹದೊಂದು ವ್ಯವಸ್ಥೆ ತಮ್ಮನ್ನು  ಕಾಪಾಡುತ್ತದೆ ಎಂಬ ಭರವಸೆ ಮೂಡುವಂತೆ ಸರ್ಕಾರ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು.

ಕ್ಷಿತಿಜ್ ಅರಸ್,

ಬೆಂಗಳೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry