ಗೋಲು ಗಳಿಕೆ: ಚೆಟ್ರಿಗೆ ನಾಲ್ಕನೇ ಸ್ಥಾನ

7
ಸರಾಸರಿಯಲ್ಲಿ ರೊನಾಲ್ಡೊ, ಮೆಸ್ಸಿ ಅವರನ್ನು ಹಿಂದಿಕ್ಕಿದ ಸುನಿಲ್

ಗೋಲು ಗಳಿಕೆ: ಚೆಟ್ರಿಗೆ ನಾಲ್ಕನೇ ಸ್ಥಾನ

Published:
Updated:
ಗೋಲು ಗಳಿಕೆ: ಚೆಟ್ರಿಗೆ ನಾಲ್ಕನೇ ಸ್ಥಾನ

ನವದೆಹಲಿ: ಭಾರತ ಫುಟ್‌ ಬಾಲ್ ತಂಡದ ನಾಯಕ ಸುನಿಲ್‌ ಚೆಟ್ರಿ ಅತಿ ಹೆಚ್ಚು ಗೋಲು ಗಳಿಸಿದ ವಿಶ್ವದ ನಾಲ್ಕನೇ ಆಟಗಾರ ಎಂಬ ಶ್ರೇಯವನ್ನು ಮುಡಿಗೇರಿಸಿಕೊಂಡಿದ್ದಾರೆ.

ಜೂನ್‌ 13ರಂದು ಬೆಂಗಳೂರಿನಲ್ಲಿ ನಡೆದ ಏಷ್ಯಾ ಕಪ್‌ ಅರ್ಹತಾ ಸುತ್ತಿನ ಪಂದ್ಯದಲ್ಲಿ ಏಕೈಕ ಗೋಲು ಗಳಿಸಿದ ಅವರು ವೈಯಕ್ತಿಕ ಗೋಲುಗಳ ಸಂಖ್ಯೆಯನ್ನು 54ಕ್ಕೆ ಏರಿಸಿಕೊಂಡಿದ್ದರು. ಈ ಪಂದ್ಯದಲ್ಲಿ ಭಾರತ  ಒಂದು ಗೋಲಿನಿಂದ ಜಯ ಗಳಿಸಿತ್ತು. ಬೆಂಗಳೂರಿನಲ್ಲಿ ಗಳಿಸಿದ ಗೋಲಿನ ಮೂಲಕ ಚೆಟ್ರಿ ಇಂಗ್ಲೆಂಡ್‌ನ ವೇನ್‌ ರೂನಿ ಅವರನ್ನು ಹಿಂದಿಕ್ಕಿದ್ದರು. ರೂನಿ 119 ಪಂದ್ಯಗಳಲ್ಲಿ 53 ಗೋಲು ಗಳಿಸಿದ್ದಾರೆ. ಚೆಟ್ರಿ ತಮ್ಮ 94ನೇ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ.

ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ, ಅರ್ಜೆಂಟೀನಾದ ಲಯೊನೆಲ್ ಮೆಸ್ಸಿ ಮತ್ತು ಅಮೆರಿಕದ ಕ್ಲಿಂಟ್‌ ಡೆಂಪ್ಸಿ ಈಗ ಚೆಟ್ರಿ ಅವರಿಗಿಂತ ಮುಂದೆ ಇದ್ದಾರೆ. ಆದರೆ ಭಾರತದ ಆಟಗಾರ ಗೋಲು ಸರಾಸರಿಯಲ್ಲಿ ರೊನಾಲ್ಡೊ, ಮೆಸ್ಸಿ, ಡೆಂಪ್ಸಿ ಮತ್ತು ರೂನಿ ಅವರನ್ನು ಹಿಂದಿಕ್ಕಿ ಗಮನ ಸೆಳೆದಿದ್ದಾರೆ. ಅವರು 0.57 ಗೋಲು ಸರಾಸರಿ ಹೊಂದಿದ್ದಾರೆ. ಬ್ರೆಜಿಲ್‌ನ ನೇಮರ್ ಜೂನಿಯರ್‌, ಮಾಲ್ಡೀವ್ಸ್‌ನ ಅಲಿ ಅಶ್ಫಾಕ್‌ (ಇಬ್ಬರೂ 0.68) ಹಾಗೂ ಬೋಸ್ನಿಯಾದ ಈಡನ್‌ ಜೆಂಕೊ (0.63) ಮಾತ್ರ ಚೆಟ್ರಿ ಅವರಿಗಿಂತ ಹೆಚ್ಚು ಸರಾಸರಿ ಹೊಂದಿದ್ದಾರೆ.

30 ಮಂದಿಯ ಪಟ್ಟಿಯಲ್ಲಿ ಸ್ಥಾನ: ನಿವೃತ್ತರಾದ ಮತ್ತು ಈಗ ಆಡುತ್ತಿರುವ ಮೊದಲ 30 ಮಂದಿ ಆಟಗಾರರ ಪಟ್ಟಿಯಲ್ಲೂ ಚೆಟ್ರಿ ಸ್ಥಾನ ಗಳಿಸಿದ್ದಾರೆ. ಇನ್ನು ಆರು ಗೋಲು ಗಳಿಸಿದರೆ ಅವರು ಮೊದಲ 20 ಆಟಗಾರರ ಪಟ್ಟಿಯಲ್ಲಿ ಸೇರಲಿದ್ದಾರೆ.   32 ವರ್ಷ ವಯಸ್ಸಿನ ಚೆಟ್ರಿ 100 ಪಂದ್ಯಗಳನ್ನು ಆಡುವತ್ತ ದಾಪುಗಾಲು ಹಾಕುತ್ತಿದ್ದಾರೆ. ಇದು ಸಾಧ್ಯವಾದರೆ ಭೈಚುಂಗ್ ಭುಟಿಯಾ ನಂತರ ಭಾರತದ ಪರ ಮೂರಂಕಿ ದಾಟಿದ ಆಟಗಾರ ಎಂಬ ಗೌರವಕ್ಕೆ ಅವರು ಪಾತ್ರರಾಗಲಿದ್ದಾರೆ. ಭುಟಿಯಾ 109 ಪಂದ್ಯಗಳನ್ನು ಆಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry