ರಾಜ್ಯದ ರೈಲುಗಳಿಗೂ ಸಿಗಲಿದೆಯೇ ‘ವೇಗ ಭಾಗ್ಯ’?

7

ರಾಜ್ಯದ ರೈಲುಗಳಿಗೂ ಸಿಗಲಿದೆಯೇ ‘ವೇಗ ಭಾಗ್ಯ’?

Published:
Updated:
ರಾಜ್ಯದ ರೈಲುಗಳಿಗೂ ಸಿಗಲಿದೆಯೇ ‘ವೇಗ ಭಾಗ್ಯ’?

ರೈಲುಗಳ ವೇಗ ಹೆಚ್ಚಿಸುವ ಮಂತ್ರವನ್ನು ರೈಲ್ವೆ ಇಲಾಖೆ ಜಪಿಸುತ್ತಿದೆ. ಆದರೆ ರಾಜ್ಯದ ರೈಲುಗಳಿಗೆ ‘ವೇಗ ಭಾಗ್ಯ’ ಸಿಗುವ ಲಕ್ಷಣಗಳು ಸದ್ಯಕ್ಕಂತೂ ಕಾಣಿಸುತ್ತಿಲ್ಲ.

ಇರುವ ಮಾರ್ಗಗಳನ್ನೇ ಬಲಪಡಿಸಿ ಪ್ರಯಾಣಿಕ ರೈಲುಗಳು ಹಾಗೂ ಸರಕು ಸಾಗಣೆ ರೈಲುಗಳು ಈಗ ಸಂಚರಿಸುತ್ತಿರುವ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ಚಲಿಸುವಂತೆ ಮಾಡುವ ‘ಮಿಷನ್‌ ರಫ್ತಾರ್‌’  ಯೋಜನೆಗೆ ರೈಲ್ವೆ ಇಲಾಖೆ 2016ರಲ್ಲಿ ಚಾಲನೆ ನೀಡಿದೆ. ಇದನ್ನು ಪ್ರಾಯೋಗಿಕವಾಗಿ ಅನುಷ್ಠಾನಕ್ಕೆ ತರಲು ಆರು ಮಾರ್ಗಗಳನ್ನು ಗುರುತಿಸಲಾಗಿದೆ.  ಈ ಪಟ್ಟಿಯಲ್ಲಿ ರಾಜ್ಯದ ಒಂದೂ ಮಾರ್ಗವೂ ಇಲ್ಲ.

‘ಹೈಸ್ಪೀಡ್‌ ರೈಲುಗಳನ್ನು ಓಡಿಸಲು  ಜೋಡಿ ಮಾರ್ಗಗಳಿರಬೇಕು. ಚಾಲಕನಿಗೆ ಕನಿಷ್ಠ 2 ಕಿ.ಮೀ.ಗಳಷ್ಟು ದೂರದವರೆಗೂ ಹಳಿ ಕಾಣುವಂತಿರಬೇಕು. ಇರುವ ಮಾರ್ಗವನ್ನೇ ಬಲಪಡಿಸಿ ರೈಲುಗಳ ವೇಗವನ್ನು ಹೆಚ್ಚಿಸಲು,  ಅಗತ್ಯವಿರುವ ಕಡೆ ರೈಲ್ವೆ ಮಾರ್ಗದ ತಿರುವುಗಳನ್ನು ಕಡಿಮೆಗೊಳಿಸಬೇಕು. ಲೆವೆಲ್‌ ಕ್ರಾಸಿಂಗ್‌ಗಳಿರುವಲ್ಲಿ ಸೇತುವೆ ನಿರ್ಮಿಸಬೇಕು. ಸಿಗ್ನಲಿಂಗ್‌ ವ್ಯವಸ್ಥೆ ಮೇಲ್ದರ್ಜೆಗೇರಿಸಬೇಕು.  ಸೇತುವೆ ಹಳೆಯದಾಗಿದ್ದರೆ, ಅದರ  ಸಾಮರ್ಥ್ಯ ವೃದ್ಧಿ ಮಾಡಬೇಕು.  ಹಳಿ ಹೆಚ್ಚು ಇಳಿಜಾರಿನಿಂದ (ಗ್ರೇಡಿಯೆಂಟ್‌)  ಕೂಡಿರಬಾರದು.  ಈ ಎಲ್ಲ ಕೆಲಸಗಳು ಪೂರ್ಣಗೊಂಡ ಬಳಿಕವಷ್ಟೇ ರೈಲುಗಳ ವೇಗ ಹೆಚ್ಚಿಸಲು ಸಾಧ್ಯ. ಈ ಪೂರ್ವ ಸಿದ್ಧತೆಯಲ್ಲಿ ರಾಜ್ಯ ಹಿಂದೆ ಉಳಿದಿದೆ. ಮಾರ್ಗಗಳನ್ನು ಬಲಪಡಿಸುವ ಕಾರ್ಯ ಇನ್ನೂ ವೇಗ ಪಡೆದಿಲ್ಲ’ ಎನ್ನುತ್ತಾರೆ ನೈರುತ್ಯ ರೈಲ್ವೆಯ ಬೆಂಗಳೂರು ವಿಭಾಗದ  ಹಿರಿಯ ಅಧಿಕಾರಿಯೊಬ್ಬರು.

ಇತ್ತೀಚೆಗೆ ಬೆಂಗಳೂರು–ತುಮಕೂರು ಮಾರ್ಗದಲ್ಲಿ ಈ ಕಾರ್ಯ ನಡೆದಿದೆ. ಇಲ್ಲಿ ಗಂಟೆಗೆ 100 ಕಿ.ಮೀ. ವೇಗದಲ್ಲಿ ರೈಲನ್ನು ಚಲಾಯಿಸಲು ರೈಲು ಸುರಕ್ಷತಾ ಆಯುಕ್ತರು ಅನುಮತಿಯನ್ನೂ ನೀಡಿದ್ದಾರೆ.ರಾಜ್ಯದಲ್ಲಿ ಹೈಸ್ಪೀಡ್‌ ರೈಲು ಆರಂಭಿಸುವುದಕ್ಕೆ ಅತ್ಯಂತ ಸೂಕ್ತವಾದ ಮಾರ್ಗ ಬೆಂಗಳೂರು– ಹುಬ್ಬಳ್ಳಿ (469 ಕಿ.ಮೀ. ಉದ್ದ).  ಇಲ್ಲಿ ಜೋಡಿ ಮಾರ್ಗಗಳ ನಿರ್ಮಾಣ ಇನ್ನೂ ಪೂರ್ಣಗೊಂಡಿಲ್ಲ. ಸದ್ಯಕ್ಕೆ ಬೆಂಗಳೂರು– ತುಮಕೂರು ನಡುವೆ (60 ಕಿ.ಮೀ.) ಜೋಡಿ ಮಾರ್ಗ ಇದೆ. ಅಲ್ಲಿಂದ ಅರಸಿಕೆರೆವರೆಗೆ (96 ಕಿ.ಮೀ.) ಜೋಡಿ ಮಾರ್ಗ ನಿರ್ಮಾಣದ ಕೆಲಸ ನಡೆಯುತ್ತಿದೆ. ಅರಸಿಕೆರೆಯಿಂದ ಚಿಕ್ಕಜಾಜೂರುವರೆಗೆ (104 ಕಿ.ಮೀ.) ಜೋಡಿ ಮಾರ್ಗವಿದೆ. ಅಲ್ಲಿಂದ ಹುಬ್ಬಳ್ಳಿ ನಡುವೆ (190 ಕಿ.ಮೀ.) ಇದರ ಕೆಲಸ ಪ್ರಗತಿಯಲ್ಲಿದೆ.‘ಈ ಮಾರ್ಗದಲ್ಲಿ ಇಳಿಜಾರುಗಳು ಹಾಗೂ ತಿರುವುಗಳು ಕಡಿಮೆ. ಹಾಗಾಗಿ ರೈಲ್ವೆ ಇಲಾಖೆ ಪ್ರಯತ್ನಿಸಿದರೆ ಇಲ್ಲಿ ಹೈಸ್ಪೀಡ್‌ ರೈಲು ಆರಂಭಿಸಬಹುದು’ ಎನ್ನುತ್ತಾರೆ ಕರ್ನಾಟಕ ರೈಲ್ವೆ ವೇದಿಕೆಯ ಕೆ.ಎನ್‌.ಕೃಷ್ಣಪ್ರಸಾದ್‌. ಈ ಮಾರ್ಗದಲ್ಲಿ ಸದ್ಯಕ್ಕೆ ಬೆಂಗಳೂರಿನಿಂದ ಚಿಕ್ಕಬಾಣಾವರ ನಡುವೆ ಮಾತ್ರ ವಿದ್ಯುತ್‌ ಚಾಲಿತ ರೈಲು ಓಡಿಸಲು ಅವಕಾಶವಿದೆ. ಈ ಮಾರ್ಗದಲ್ಲಿ ರೈಲುಗಳು ಸರಾಸರಿ 65 ಕಿ.ಮೀ. ವೇಗದಲ್ಲಿ ಚಲಿಸುತ್ತಿವೆ.  ‘ತಾಸಿಗೆ 160 ಕಿ.ಮೀ. ವೇಗದಲ್ಲಿ ರೈಲು ಓಡಿದರೆ ಬೆಂಗಳೂರು – ಹುಬ್ಬಳ್ಳಿ  ನಡುವೆ ಮೂರೂವರೆ ತಾಸಿನಲ್ಲಿ ಪ್ರಯಾಣ ಸಾಧ್ಯವಾಗಲಿದೆ. ಬೆಳಿಗ್ಗೆ ಹಾಗೂ ಸಂಜೆ ಹೈಸ್ಪೀಡ್‌ ರೈಲು ಓಡಿಸಿದರೆ ಪ್ರಯಾಣಿಕರಿಗೆ ತುಂಬಾ ಅನುಕೂಲವಾಗುತ್ತದೆ’ ಎನ್ನುತ್ತಾರೆ ಪ್ರಜಾ  ಸಂಘಟನೆಯ ಸಂಜೀವ ದ್ಯಾಮಣ್ಣವರ್‌.‘ತುಮಕೂರು–ದಾವಣಗೆರೆ ನಡುವೆ ನೇರ ರೈಲು ಮಾರ್ಗ ನಿರ್ಮಿಸಿದರೆ ಹುಬ್ಬಳ್ಳಿ–ಬೆಂಗಳೂರು ನಡುವಿನ ಅಂತರ 70 ಕಿ.ಮೀ.ನಷ್ಟು ಕಡಿಮೆ ಆಗಲಿದೆ. ಆದರೆ ಈ ಕಾಮಗಾರಿ ಅನುಷ್ಠಾನವಾಗಲು ಇನ್ನೂ ನಾಲ್ಕೈದು ವರ್ಷ ಕಾಯಬೇಕು’ ಎನ್ನುತ್ತಾರೆ ಅವರು.  ಡಿ.ವಿ. ಸದಾನಂದ ಗೌಡ ಅವರು ರೈಲ್ವೆ ಸಚಿವರಾಗಿದ್ದಾಗ  ಬೆಂಗಳೂರು– ಮೈಸೂರು ನಡುವೆ ರೈಲುಗಳ ವೇಗ ಹೆಚ್ಚಿಸಲು ಇರುವ ಅವಕಾಶಗಳ ಬಗ್ಗೆ ಅಧ್ಯಯನ ನಡೆಸಲು ಸೂಚಿಸಿದ್ದರು.‘ಈ ಮಾರ್ಗದಲ್ಲಿ ರೈಲುಗಳ ವೇಗ ಹೆಚ್ಚಿಸುವ  ಕುರಿತು ಕಾರ್ಯಸಾಧ್ಯತಾ ವರದಿ ಸಿದ್ಧಪಡಿಸಲಾಗುತ್ತಿದೆ’ ಎಂದು ನೈರುತ್ಯ ರೈಲ್ವೆಯ ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಶ್ರೀಧರ ಮೂರ್ತಿ ಅವರು ತಿಳಿಸಿದರು.

‘139 ಕಿ.ಮೀ. ಉದ್ದದ ಈ ಮಾರ್ಗದಲ್ಲಿ ಗಂಟೆಗೆ  140 ಕಿ.ಮೀ–150 ಕಿ.ಮೀ. ವೇಗದಲ್ಲಿ ರೈಲು ಸಂಚರಿಸುವಂತಾಗಬೇಕು. ಆಗ ಬೆಂಗಳೂರಿನಿಂದ ಮೈಸೂರನ್ನು  ಒಂದು ತಾಸಿನಲ್ಲಿ ತಲುಪಬಹುದು. ಈಗ  ಮೈಸೂರಿನಿಂದ ಕೆಂಗೇರಿವರೆಗೆ ರೈಲುಗಳು ಒಂದೂವರೆ ತಾಸಿನೊಳಗೆ ತಲುಪುತ್ತವೆ. ಅಲ್ಲಿಂದ ಸಂಗೊಳ್ಳಿರಾಯಣ್ಣ ರೈಲು ನಿಲ್ದಾಣವನ್ನು ತಲುಪಲು 45 ನಿಮಿಷಕ್ಕೂ ಹೆಚ್ಚು ಸಮಯ ತಗಲುತ್ತದೆ. ಇಂತಹ  ಸಮಸ್ಯೆಗಳನ್ನು ಮೊದಲು ಬಗೆಹರಿಸಬೇಕು’ ಎಂದು ಸಂಜೀವ ಅವರು ಒತ್ತಾಯಿಸುತ್ತಾರೆ.

ಮೈಸೂರು–ಬೆಂಗಳೂರು ನಡುವೆ ಜೋಡಿ ಮಾರ್ಗ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಶ್ರೀರಂಗಪಟ್ಟಣದ ಬಳಿ ಮಾತ್ರ ಸ್ವಲ್ಪ ಕೆಲಸ ಬಾಕಿ ಉಳಿದಿದೆ. ಬೆಂಗಳೂರಿನಿಂದ ಎಲಿಯೂರಿನವರೆಗೆ ವಿದ್ಯುದೀಕರಣ ಕಾರ್ಯವೂ ಪೂರ್ಣಗೊಂಡಿದೆ.

‘ಚೆನ್ನೈ– ಬೆಂಗಳೂರು– ಮೈಸೂರು ನಡುವೆ ಜನಶತಾಬ್ದಿ ರೈಲು ಸಂಚರಿಸುತ್ತದೆ. ಚೆನ್ನೈನಿಂದ ಬೆಳಿಗ್ಗೆ 6 ಗಂಟೆಗೆ ಹೊರಡುವ ರೈಲು ಬೆಂಗಳೂರಿಗೆ 10.30ಕ್ಕೆ ಬರುತ್ತದೆ. ಮೈಸೂರು ತಲುಪುವಾಗ ಮಧ್ಯಾಹ್ನ 12.30 ಆಗುತ್ತದೆ.   ಮೈಸೂರಿನಿಂದಲೂ ಬೆಳಿಗ್ಗೆ 6 ಗಂಟೆಗೆ ಶತಾಬ್ದಿ ರೈಲು ಆರಂಭಿಸಿದರೆ ರಾಜ್ಯದ ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾಗಲಿದೆ’ ಎನ್ನುತ್ತಾರೆ ಅವರು. 

ಬೆಂಗಳೂರಿನಿಂದ ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಕಲಬುರ್ಗಿ ತಲುಪಲು ಕನಿಷ್ಠ 10 ತಾಸು ಬೇಕಾಗುತ್ತಿದೆ.  ಉಳಿದ ರೈಲುಗಳು 12 ತಾಸಿಗೂ ಹೆಚ್ಚು ಸಮಯ ತೆಗೆದುಕೊಳ್ಳುತ್ತವೆ. ಇಲ್ಲಿಗೆ ಹೈಸ್ಪೀಡ್‌ ರೈಲು ಆರಂಭಿಸುವ ಅನಿವಾರ್ಯ ಇದೆ.   ಬಳ್ಳಾರಿ–ಬೆಂಗಳೂರು ನಡುವೆ ಪ್ರಯಾಣಿಸುವವರು   ರೈಲಿಗಿಂತ ಕಡಿಮೆ ಅವಧಿಯಲ್ಲಿ  ರಸ್ತೆಯ ಮೂಲಕ  ತಲುಪಬಹುದು. ಬೆಳಗಾವಿ– ಬೆಂಗಳೂರು ನಡುವಿನ ಪ್ರಯಾಣಕ್ಕೂ  ರೈಲಿಗಿಂತ ಹೆದ್ದಾರಿಯನ್ನೇ ಜನ ನೆಚ್ಚಿಕೊಳ್ಳುತ್ತಿದ್ದಾರೆ. ಇಲ್ಲಿಗೂ ಹೈಸ್ಪೀಡ್‌ ಸಂಪರ್ಕ ಸಾಧ್ಯವಾಗಬೇಕು.ಇತ್ತೀಚೆಗೆ ಗೋವಾ– ಮುಂಬೈ ನಡುವೆ ತೇಜಸ್‌ ರೈಲು ಸೇವೆಯನ್ನು ಆರಂಭಿಸಲಾಯಿತು. ರಾಜ್ಯದ ಕರಾವಳಿಯಲ್ಲಿ  ಕೊಂಕಣ ರೈಲು ಮಾರ್ಗ ಹಾದುಹೋಗುತ್ತದೆ. ಇದನ್ನು ಜೋಡಿ ಮಾರ್ಗವನ್ನಾಗಿ  ಪರಿವರ್ತಿಸುವ ಕಾರ್ಯವೂ ವೇಗ ಪಡೆದಿಲ್ಲ. ಮಂಗಳೂರು– ಗೋವಾ ನಡುವೆ ಜೋಡಿಮಾರ್ಗ ನಿರ್ಮಾಣವಾದರೆ ಇಲ್ಲಿನ ರೈಲುಗಳ ವೇಗವನ್ನು ಹೆಚ್ಚಿಸಲು ಸಾಧ್ಯವಿದೆ.

‘ಸದ್ಯ ಈ ಮಾರ್ಗದಲ್ಲಿ ಕೆಲವು ರೈಲುಗಳಷ್ಟೇ ತಾಸಿಗೆ ಗರಿಷ್ಠ 120 ಕಿ.ಮೀ. ವೇಗದಲ್ಲಿ ಸಂಚರಿಸುತ್ತವೆ. ರೈಲುಗಳ ವೇಗವನ್ನು ಇನ್ನಷ್ಟು ಹೆಚ್ಚಿಸುವ ಯಾವುದೇ ಯೋಜನೆ ಸದ್ಯಕ್ಕೆ ಅನುಷ್ಠಾನವಾಗುತ್ತಿಲ್ಲ’ ಎಂದು ಕೊಂಕಣ ರೈಲ್ವೆಯ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದರು.

ರಾಜ್ಯದ ರಾಜಧಾನಿ ಬೆಂಗಳೂರಿನಿಂದ ಬಂದರು ನಗರಿ ಮಂಗಳೂರಿಗೆ ಹೈಸ್ಪೀಡ್‌ ರೈಲಿನ ಅಗತ್ಯ ಹೆಚ್ಚು ಇದೆ. ಆದರೆ ಈ ಮಾರ್ಗವು ಪ್ರಶ್ಚಿಮ ಘಟ್ಟದ ಮೂಲಕ ಹಾದುಹೋಗುತ್ತದೆ. ಪಶ್ಚಿಮ ಘಟ್ಟದಲ್ಲಿ ರೈಲುಗಳು ತಾಸಿಗೆ ಗರಿಷ್ಠ 30 ಕಿ.ಮೀ. ವೇಗದಲ್ಲಿ ಚಲಿಸಲು ಮಾತ್ರ ಅನುಮತಿ ನೀಡಲಾಗಿದೆ. ಹಾಗಾಗಿ ಸದ್ಯಕ್ಕೆ ಈ ಮಾರ್ಗದಲ್ಲಿ ಹೈಸ್ಪೀಡ್‌ ರೈಲಿನ ಕನಸು ನನಸಾಗುವ ಸಾಧ್ಯತೆ ಕಡಿಮೆ.‘ಬೆಂಗಳೂರಿನಿಂದ ದೆಹಲಿ, ಮುಂಬೈ, ಹೈದರಾಬಾದ್‌, ಚೆನ್ನೈ, ಅಹಮದಾಬಾದ್‌ಗೂ ಹೈಸ್ಪೀಡ್‌ ರೈಲು ಸೇವೆ ಲಭಿಸಬೇಕು. ಇದರಿಂದ ಇಲ್ಲಿನ ಆರ್ಥಿಕ ಚಟುವಟಿಕೆಗೆ ಉತ್ತೇಜನ ಸಿಗಲಿದೆ. ನಿತ್ಯ ಸಾವಿರಾರು ಭಕ್ತರು ಭೇಟಿ ನೀಡುವ  ಶಿರಡಿ, ತಿರುಪತಿಗೂ ಇಂತಹ ಸೇವೆಯ ಅಗತ್ಯವಿದೆ’ ಎಂದು  ರೈಲ್ವೆ ಹೋರಾಟಗಾರರು ಅಭಿಪ್ರಾಯಪಡುತ್ತಾರೆ.‘ಮುಂಬೈ– ಬೆಂಗಳೂರು ನಡುವೆ ರೈಲಿನಲ್ಲಿ ಪ್ರಯಾಣಿಸಲು 24 ಗಂಟೆ ತೆಗೆದುಕೊಳ್ಳುತ್ತದೆ. ಹೈದರಾಬಾದ್‌ ತಲುಪಲು 12 ತಾಸು ಬೇಕು. ಇಲ್ಲಿಗೆ ಹೈಸ್ಪೀಡ್‌ ರೈಲು ಸೇವೆ ಸಾಧ್ಯವಾದರೆ ಪ್ರಯಾಣದ ಅವಧಿ ಅರ್ಧದಷ್ಟು ಕಡಿಮೆ ಆಗಲಿದೆ’ ಎನ್ನುತ್ತಾರೆ ಕೃಷ್ಣಪ್ರಸಾದ್‌.ಹೈಸ್ಪೀಡ್ ರೈಲಿನಿಂದ ರಸ್ತೆ ಮೇಲಿನ ಒತ್ತಡ ಇಳಿಕೆ

ಹೈಸ್ಪೀಡ್‌ ರೈಲುಗಳನ್ನು ಆರಂಭಿಸುವುದರಿಂದ ರಸ್ತೆಗಳ ಮೇಲಿನ ಒತ್ತಡ ತುಂಬಾ ಕಡಿಮೆ ಆಗಲಿದೆ. ರಸ್ತೆಗಳು ಇನ್ನಷ್ಟು ಹೆಚ್ಚುಕಾಲ ಬಾಳಿಕೆ ಬರುತ್ತವೆ. ರಸ್ತೆ ಅಪಘಾತಗಳ ಪ್ರಮಾಣ ತಗ್ಗಿಸುವುದಕ್ಕೂ ಇದು ಕಾರಣವಾಗಲಿದೆ.  ಮಾಲಿನ್ಯ ನಿಯಂತ್ರಣಕ್ಕೂ ಕೊಡುಗೆ ನೀಡಲಿದೆ. ಪ್ರಯಾಣಕ್ಕೆ ಬಳಕೆ ಆಗುವ ಸಮಯದಲ್ಲಿ ಉಳಿತಾಯವಾಗುತ್ತದೆ. ಇದರಿಂದ ಒಟ್ಟು ಉತ್ಪಾದಕತೆ ಮೇಲೆ ಸಕಾರಾತ್ಮಕ ಪರಿಣಾಮಗಳು ಉಂಟಾಗಲಿವೆ.

ಈ ಯೋಜನೆಗೆ ಖಾಸಗಿ ಸಹಭಾಗಿತ್ವದಲ್ಲಿ  ಅಗತ್ಯ ಮೂಲಸೌಕರ್ಯ ಕಲ್ಪಿಸಬಹುದು. ರೈಲ್ವೆ ಇಲಾಖೆ ಮಾರ್ಗವನ್ನು ನಿರ್ಮಿಸುವಾಗ ಹೆಚ್ಚುವರಿ ಜಾಗವನ್ನು ಸ್ವಾಧೀನಪಡಿಸಿಕೊಂಡಿರುತ್ತದೆ. ಹೈಸ್ಪೀಡ್‌ ರೈಲುಗಳಿಗೆ ಪ್ರತ್ಯೇಕ ಮಾರ್ಗ ನಿರ್ಮಿಸಲು ಈ ಜಾಗವನ್ನು ಬಳಸಿಕೊಳ್ಳಬಹುದು. ಈ ಯೋಜನೆ ಲಾಭ ತಂದುಕೊಡಲಿದೆ ಎಂದು ಮನದಟ್ಟಾದರೆ ಅನೇಕ ಖಾಸಗಿ ಹಣಕಾಸು ಸಂಸ್ಥೆಗಳು ಹೂಡಿಕೆಗೆ ಆಸಕ್ತಿ ತೋರಿಸಲಿವೆ.  ಇಂದಿನ ಧಾವಂತದ ಬದುಕಿಗೆ ಹೈಸ್ಪೀಡ್‌ ರೈಲುಗಳ ಅಗತ್ಯ ಹೆಚ್ಚು ಇದೆ. ಇದರಿಂದ ಆರ್ಥಿಕ ಚಟುವಟಿಕೆಗೂ ಉತ್ತೇಜನ ಸಿಗಲಿದೆ.

ಲೋಕೇಶ್‌ ಹೆಬ್ಬಾನಿ,

ಮೂಲಸೌಕರ್ಯ, ರಸ್ತೆ ಸುರಕ್ಷತೆ ಕುರಿತು ವಿಶ್ವಬ್ಯಾಂಕ್‌ಗೆ ಸಲಹೆಗಾರ

* * *ಕೇರಳದಲ್ಲಿ ಪ್ರತ್ಯೇಕ ನಿಗಮ

ಕೇರಳದಲ್ಲಿ ಹೈಸ್ಪೀಡ್‌ ರೈಲು ಸಂಚಾರ ಆರಂಭಿಸುವ ಕಾರ್ಯಕ್ಕೆ ಉತ್ತೇಜನ ನೀಡಲು ಪ್ರತ್ಯೇಕ ನಿಗಮವನ್ನು ಸ್ಥಾಪಿಸಲಾಗಿದೆ. ಅದೇ ಮಾದರಿಯಲ್ಲಿ ನಮ್ಮ ರಾಜ್ಯದಲ್ಲೂ ನಿಗಮವನ್ನು ಸ್ಥಾಪಿಸಿದರೆ ಈ ದಿಕ್ಕಿನಲ್ಲಿ ಸಾಗಬೇಕಾದ ಹಾದಿಯ ಬಗ್ಗೆ ಸ್ಪಷ್ಟತೆ ಸಿಗಲಿದೆ.  ರೂಪರೇಷೆ ಹಾಕಿಕೊಂಡು ತ್ವರಿತಗತಿಯಲ್ಲಿ ಯೋಜನೆ ಅನುಷ್ಠಾನ ಮಾಡಲು ಸಾಧ್ಯವಿದೆ. ಕೊಂಕಣ ರೈಲ್ವೆಗಾಗಿ ಪ್ರತ್ಯೇಕ ನಿಗಮವನ್ನು ಸ್ಥಾಪಿಸಿ, ಯೋಜನೆಯನ್ನು ಸಕಾಲದಲ್ಲಿ ಅನುಷ್ಠಾನಗೊಳಿಸಿದ ಉದಾಹರಣೆ ನಮ್ಮ ಮುಂದಿದೆ.

*

ರೈಲ್ವೆ ಸಚಿವರಾಗಿದ್ದವರು ಏನನ್ನುತ್ತಾರೆ?‘ಸರಕು ಸಾಗಣೆಗೆ ಆದ್ಯತೆ ನೀಡಿದರೆ ಯಶಸ್ವಿಯಾದೀತು’

ಕೊಂಕಣ ರೈಲ್ವೆ ಮಾರ್ಗದಲ್ಲಿ ಹಾಗೂ ಬೆಂಗಳೂರು– ಮೀರಜ್‌ ಮಾರ್ಗದಲ್ಲಿ ಹೈಸ್ಪೀಡ್‌ ರೈಲು ಆರಂಭಿಸಲು ಅವಕಾಶ ಇದೆ. ಪ್ರಯಾಣಿಕರನ್ನು ಕೇಂದ್ರೀಕರಿಸಿ ಹೈಸ್ಪೀಡ್‌ ರೈಲು ಜಾರಿಗೊಳಿಸಿದರೆ ಅದು ಯಶಸ್ವಿಯಾಗದು. ಅದರಿಂದ ಕಚ್ಚಾ ವಸ್ತುವನ್ನು ಕೈಗಾರಿಕಾ ತಾಣಗಳಿಗೆ ಹಾಗೂ ಸಿದ್ಧವಸ್ತುಗಳನ್ನು ಮಾರುಕಟ್ಟೆಗಳಿಗೆ ತಲುಪಿಸಲು ಎಷ್ಟು ಸಹಕಾರಿಯಾಗುತ್ತದೆ ಎಂಬುದು ಮುಖ್ಯ. ಏಕೆಂದರೆ ರೈಲ್ವೆಗೆ ದುಡ್ಡು ಬರುವುದು ಸರಕು ಸಾಗಣೆಯಿಂದ. ಅದರಿಂದ ಎಷ್ಟು ಆದಾಯ ಬರುತ್ತದೆ, ಲಾಭದಾಯಕವಾಗಿ ಮುಂದುವರಿಯುತ್ತದೆಯೇ ಎಂಬ ಬಗ್ಗೆಯೂ ಯೋಚಿಸಬೇಕು.ಇದಕ್ಕೆ ಪೂರಕವಾಗಿ ಹಳಿಗಳನ್ನು, ಸಿಗ್ನಲಿಂಗ್‌ ವ್ಯವಸ್ಥೆಯನ್ನು ಬಲಪಡಿಸಬೇಕು. ಸುರಕ್ಷತೆ ವಿಚಾರದಲ್ಲಿ ರಾಜಿ ಮಾಡಿಕೊಳ್ಳಲು ಸಾಧ್ಯವೇ ಇಲ್ಲ.

ಸಿ.ಕೆ.ಜಾಫರ್‌ ಷರೀಫ್‌

ಕಾಂಗ್ರೆಸ್‌ ಮುಖಂಡ (1991ರಿಂದ 95ರವರೆಗೆ  ರೈಲ್ವೆ ಸಚಿವರಾಗಿದ್ದರು)

*‘ಕರಾವಳಿಗೆ ಹೈಸ್ಪೀಡ್‌ ರೈಲು ಸಂಪರ್ಕ  ಅಗತ್ಯ’

ರಾಜ್ಯದ ಏಕೈಕ ಅಂತರರಾಷ್ಟ್ರೀಯ ಬಂದರು ಇರುವುದು ಮಂಗಳೂರಿನಲ್ಲಿ. ಇಲ್ಲಿಗೆ ರಾಜ್ಯದ ವಿವಿಧ ಭಾಗಗಳಿಂದ ಹೈಸ್ಪೀಡ್‌ ರೈಲು ಸಂಪರ್ಕ ಕಲ್ಪಿಸುವ ಅಗತ್ಯವಿದೆ.

ಸರಕು ಸಾಗಣೆ ಹೆಚ್ಚಾದರೆ ಅದರಿಂದ ಆದಾಯ ಬರುತ್ತದೆ.  ಪ್ರಯಾಣಿಕರ ಸಂಚಾರಕ್ಕೂ ಅನುಕೂಲವಾಗುತ್ತದೆ. ಬೆಂಗಳೂರು ಮತ್ತು ಹುಬ್ಬಳ್ಳಿ–ಧಾರವಾಡ ನಡುವೆ ಹೈಸ್ಪೀಡ್‌ ರೈಲು ಆರಂಭಿಸುವ ಪ್ರಸ್ತಾವವೂ ಇದೆ.

ಡಿ.ವಿ.ಸದಾನಂದ ಗೌಡ,

ಕೇಂದ್ರ ಯೋಜನೆ ಸಾಂಖ್ಯಿಕ ಸಚಿವ (2014ರಲ್ಲಿ ರೈಲ್ವೆ ಸಚಿವರಾಗಿದ್ದರು)

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry