ಉತ್ತರಕ್ಕೆ ಖುಷಿ– ದಕ್ಷಿಣಕ್ಕೆ ನಿರಾಸೆ

7

ಉತ್ತರಕ್ಕೆ ಖುಷಿ– ದಕ್ಷಿಣಕ್ಕೆ ನಿರಾಸೆ

Published:
Updated:
ಉತ್ತರಕ್ಕೆ ಖುಷಿ– ದಕ್ಷಿಣಕ್ಕೆ ನಿರಾಸೆ

ಬೆಂಗಳೂರು: ಈ ವರ್ಷ ಮುಂಗಾರು  ಉತ್ತರ ಒಳನಾಡಿನ ಜನರಿಗೆ  ಹರ್ಷ ಉಂಟು ಮಾಡಿದ್ದರೆ, ದಕ್ಷಿಣ ಒಳನಾಡಿನ ನಿವಾಸಿಗಳಿಗೆ ನಿರಾಸೆ ಮೂಡಿಸಿದೆ.

‘ಜೂನ್‌ ಮೊದಲಾರ್ಧದಲ್ಲಿ ಸಾಮಾನ್ಯವಾಗಿ 575 ಮಿ.ಮೀ. ಮಳೆಯಾಗುತ್ತದೆ. ಈ ಸಲ ಅದಕ್ಕಿಂತ ಹೆಚ್ಚು (651 ಮಿ.ಮೀ) ಮಳೆಯಾಗಿದೆ. ಆದರೆ, ದಕ್ಷಿಣ ಒಳನಾಡಿನಲ್ಲಿ ಶೇ 39ರಷ್ಟು ಕೊರತೆ ಉಂಟಾಗಿದೆ’ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಶ್ರೀನಿವಾಸ ರೆಡ್ಡಿ ತಿಳಿಸಿದರು.‘ಮುಂಗಾರು ದುರ್ಬಲ ಆಗಿರುವುದರಿಂದ ಎಲ್ಲ ಪ್ರದೇಶಗಳಲ್ಲಿ ಸಮಾನವಾಗಿ ಮಳೆ ಹಂಚಿಕೆ ಆಗಿಲ್ಲ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗುತ್ತಿದ್ದರೆ ತೇವಾಂಶ ಭರಿತ ಮೋಡಗಳು ರಾಜ್ಯದತ್ತ ಬರುತ್ತಿದ್ದವು’ ಎಂದು ಅವರು ವಿಶ್ಲೇಷಿಸಿದರು.ಉತ್ತರದಲ್ಲಿ ಅತ್ಯುತ್ತಮ ಮಳೆ: ಉತ್ತರ ಒಳನಾಡಿನಲ್ಲಿ ಶೇ 42ರಷ್ಟು ಹೆಚ್ಚುವರಿ ಮಳೆ ಸುರಿದಿದೆ. ಕಲಬುರ್ಗಿಯಲ್ಲಿ ಶೇ 209ರಷ್ಟು ಮಳೆಯಾಗಿದೆ. ಇಲ್ಲಿ ವಾಡಿಕೆಯಂತೆ 56 ಮಿ.ಮೀ ಮಳೆಯಾಗಬೇಕಿತ್ತು. ಈ ಬಾರಿ 173.9 ಮಿ.ಮೀ ಮಳೆಯಾಗಿದೆ. ಶುಕ್ರವಾರ 43.3 ಮಿ.ಮೀ ಮಳೆ ದಾಖಲಾಗಿದೆ.

ಜಲಾಶಯಗಳಿಗೆ ನೀರು ಬಂದಿಲ್ಲ: ಕೇರಳದ ವೈನಾಡು ಹಾಗೂ ರಾಜ್ಯದ ಕೊಡಗು, ಚಿಕ್ಕಮಗಳೂರು, ಹಾಸನ ಜಿಲ್ಲೆಗಳಲ್ಲಿ ನಿರೀಕ್ಷಿತ ಮಳೆಯಾಗದ ಕಾರಣ ಕಾವೇರಿ ಜಲಾಯನದ ಪ್ರದೇಶದ ನಾಲ್ಕು ಜಲಾಶಯಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿಲ್ಲ.ಕೊಡಗು ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆ ಸುರಿಯುವ ತಲಕಾವೇರಿ ಮತ್ತು ಭಾಗಮಂಡಲದಲ್ಲಿ ಈ ಹಿಂದೆ ದಿನಕ್ಕೆ 50 ಮಿ.ಮೀ.ಯಷ್ಟು ಮಳೆ ಸುರಿಯುತ್ತಿತ್ತು. ಆದರೆ, ಈ ಸಲ ವಾರವಾದರೂ 150 ಮಿ.ಮೀ ಮಳೆಯಾಗಿಲ್ಲ. ಕೊಡಗು ಜಿಲ್ಲೆಯಲ್ಲಿ ಒಟ್ಟಾರೆ ಶೇ 32ರಷ್ಟು ಮಳೆ ಕೊರತೆಯಾಗಿದೆ.ಹೊನ್ನಾವರದಲ್ಲಿ ಗರಿಷ್ಠ ಮಳೆ

ಶುಕ್ರವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ರಾಜ್ಯದ  ಹಲವೆಡೆ ಮಳೆಯಾಗಿದೆ. ಹೊನ್ನಾವರದಲ್ಲಿ 8, ಅಂಕೋಲಾದಲ್ಲಿ 7, ಕಾರವಾರ, ಮಂಕಿ, ಕೆಂಬಾವಿ, ಗುರುಮಿಟ್ಕಲ್, ಆಗುಂಬೆಯಲ್ಲಿ ತಲಾ 6, ಬೆಳ್ತಂಗಡಿ, ಸಿದ್ದಾಪುರ, ಶಿರಾಲಿ, ಕುಮಟಾ, ಕಲಬುರ್ಗಿ, ಕಜೂರಿ, ನೆಲೊಗಿಯಲ್ಲಿ ತಲಾ 5, ಕೋಟ, ಕೊಲ್ಲೂರು, ಗೇರುಸೊಪ್ಪ,  ಯಲ್ಲಾಪುರ, ಕುಡಚಿ, ತಾಳಿಕೋಟೆಯಲ್ಲಿ ತಲಾ 4 ಸೆಂ.ಮೀ. ಮಳೆಯಾಗಿದೆ,

ಹವಾಮಾನ ಮುನ್ಸೂಚನೆ: ಮುಂದಿನ 48 ಗಂಟೆಗಳಲ್ಲಿ ರಾಜ್ಯದ  ಕರಾವಳಿಯ ಬಹುತೇಕ ಪ್ರದೇಶಗಳಲ್ಲಿ ಮಳೆಯಾಗಲಿದೆ. ದಕ್ಷಿಣ ಮತ್ತು ಉತ್ತರ ಒಳನಾಡಿನ ಕೆಲ ಪ್ರದೇಶಗಳಲ್ಲಿ  ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.ಕರಾವಳಿಯಲ್ಲಿ ಮತ್ತೆ ಮಳೆ: ಮಂಗಳೂರು: ಎರಡು ದಿನ ಬಿಡುವು ಕೊಟ್ಟ ಮುಂಗಾರು ಮಳೆ ಕರಾವಳಿ ಭಾಗದಲ್ಲಿ ಶುಕ್ರವಾರ ಬೆಳಿಗ್ಗೆಯಿಂದ ಮತ್ತೆ ಆರಂಭವಾಗಿದೆ.ಮಧ್ಯಾಹ್ನದವರೆಗೂ ಸುರಿದ ಮಳೆ ಬಳಿಕ ಬಿಡುವು ಪಡೆದುಕೊಂಡಿತು. ಈ ಮಧ್ಯೆ, ಕರಾವಳಿಯಾದ್ಯಂತ ಭತ್ತದ ಕೃಷಿ ಚಟುವಟಿಕೆ ಚುರುಕಾಗಿದೆ.

ಚಿಕ್ಕಮಗಳೂರು ಮತ್ತು ಮೂಡಿಗೆರೆಯಲ್ಲೂ ಮಳೆಯಾಗಿದೆ. ಉಡುಪಿಯಲ್ಲಿ  ಸಾಧಾರಣ ಮಳೆಯಾಯಿತು.ಉತ್ತರ ಕರ್ನಾಟಕದಲ್ಲಿ ಮಳೆ (ಹುಬ್ಬಳ್ಳಿ): ಧಾರವಾಡ, ಬೆಳಗಾವಿ, ವಿಜಯಪುರ, ಉತ್ತರಕನ್ನಡ ಹಾಗೂ ಗದಗ ಜಿಲ್ಲೆಗಳಲ್ಲಿ ಶುಕ್ರವಾರ ಉತ್ತಮ ಮಳೆಯಾಗಿದೆ.ಹುಬ್ಬಳ್ಳಿ, ಧಾರವಾಡದಲ್ಲಿ ದಿನವಿಡೀ ಸಾಧಾರಣ ಮಳೆಯಾಗಿದ್ದು, ಬೆಳಗಾವಿ ಜಿಲ್ಲೆಯ ಬೆಳಗಾವಿ, ಖಾನಾಪುರ, ಬೈಲಹೊಂಗಲ, ಚಿಕ್ಕೋಡಿ, ರಾಯಬಾಗ ತಾಲ್ಲೂಕಿನ ಕೆಲವೆಡೆ ಮಳೆಯಾಗಿದೆ. ವಿಜಯಪುರ ಜಿಲ್ಲೆಯ ಆಲಮಟ್ಟಿ, ಮುದ್ದೇಬಿಹಾಳ ಹಾಗೂ ತಾಳಿಕೋಟೆಯಲ್ಲಿ ಬಿರುಸಿನ ಮಳೆಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry