ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆನ್‌ಲಾಂಗ್‌ಗೆ ಸೋಲುಣಿಸಿದ ಪ್ರಣಯ್‌

ಇಂಡೊನೇಷ್ಯಾ ಸೂಪರ್‌ ಸರಣಿ ಪ್ರೀಮಿಯರ್‌ ಬ್ಯಾಡ್ಮಿಂಟನ್‌ ಟೂರ್ನಿ; ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಭಾರತದ ಶ್ರೀಕಾಂತ್‌
Last Updated 16 ಜೂನ್ 2017, 19:41 IST
ಅಕ್ಷರ ಗಾತ್ರ

ಜಕಾರ್ತ: ಅಮೋಘ ಲಯದಲ್ಲಿ ಆಡುತ್ತಿರುವ ಭಾರತದ ಆಟಗಾರ ಎಚ್‌.ಎಸ್‌. ಪ್ರಣಯ್‌ ಅವರು ಇಂಡೊನೇಷ್ಯಾ ಸೂಪರ್‌ ಸರಣಿ ಪ್ರೀಮಿಯರ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಮತ್ತೊಂದು ಅಚ್ಚರಿಯ ಫಲಿತಾಂಶಕ್ಕೆ ಕಾರಣರಾಗಿದ್ದಾರೆ.

ಟೂರ್ನಿಯಲ್ಲಿ ಚೊಚ್ಚಲ ಪ್ರಶಸ್ತಿ ಎತ್ತಿಹಿಡಿಯುವ ಮಹದಾಸೆ ಹೊತ್ತಿರುವ  ಪ್ರಣಯ್‌,  ಶುಕ್ರವಾರ ನಡೆದ ಪಂದ್ಯದಲ್ಲಿ  ಒಲಿಂಪಿಕ್ಸ್‌ನಲ್ಲಿ ಚಿನ್ನದ ಸಾಧನೆ ಮಾಡಿರುವ ವಿಶ್ವ ಚಾಂಪಿಯನ್‌ ಚೆನ್‌ ಲಾಂಗ್‌ಗೆ ಆಘಾತ ನೀಡಿದ್ದಾರೆ. ಪುರುಷರ ಸಿಂಗಲ್ಸ್‌ ವಿಭಾಗದ ಕ್ವಾರ್ಟರ್ ಫೈನಲ್‌ ಹೋರಾಟದಲ್ಲಿ ಪ್ರಣಯ್‌ 21–18, 16–21, 21–19ರಲ್ಲಿ ಚೀನಾದ ಲಾಂಗ್‌ ಅವರ ಸವಾಲು ಮೀರಿ ನಿಂತು ಸೆಮಿಫೈನಲ್‌ಗೆ ಲಗ್ಗೆ ಇಟ್ಟರು.

ಗುರುವಾರ ನಡೆದಿದ್ದ 16ರ ಘಟ್ಟದ ಹಣಾಹಣಿಯಲ್ಲಿ ಮಲೇಷ್ಯಾದ ಆಟಗಾರ, ಒಲಿಂಪಿಕ್ಸ್‌ನಲ್ಲಿ ಮೂರು ಬೆಳ್ಳಿ ಗೆದ್ದಿರುವ  ಲೀ ಚೊಂಗ್‌ ವೀ ಅವರನ್ನು ಮಣಿಸಿ ಬ್ಯಾಡ್ಮಿಂಟನ್‌ ಪಂಡಿತರ ಹುಬ್ಬೇರುವಂತೆ ಮಾಡಿದ್ದ ಪ್ರಣಯ್‌ ಅವರು ಚೆನ್‌ ವಿರುದ್ಧವೂ ಕೆಚ್ಚೆದೆಯಿಂದ ಹೋರಾಡಿ ಬ್ಯಾಡ್ಮಿಂಟನ್‌ ಪ್ರಿಯರ ಮನ ಗೆದ್ದರು.

ಅರ್ಹತಾ ಸುತ್ತಿನಲ್ಲಿ ಕಣಕ್ಕಿಳಿದು ಮುಖ್ಯ ಸುತ್ತಿಗೆ ಅರ್ಹತೆ ಗಳಿಸಿದ್ದ ಪ್ರಣಯ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಆಕ್ರಮಣಕಾರಿ ಆಟದ ಮೂಲಕ ಎದುರಾಳಿಯ ನಿದ್ದೆಗೆಡಿಸಿದರು. ವಿಶ್ವ ಕ್ರಮಾಂಕಪಟ್ಟಿಯಲ್ಲಿ 25ನೇ ಸ್ಥಾನದಲ್ಲಿರುವ ಪ್ರಣಯ್‌  ಮೊದಲ ಗೇಮ್‌ನಲ್ಲೇ ಪರಾಕ್ರಮ ಮೆರೆದರು. ಶುರುವಿನಿಂದಲೇ ಚುರುಕಾಗಿ ಆಡಿದ ಭಾರತದ ಆಟಗಾರ, ಎದುರಾಳಿ ಬಾರಿ ಸಿದ ಷಟಲ್‌ ಅನ್ನು ಅಷ್ಟೇ ಚಾಕಚಕ್ಯತೆ ಯಿಂದ ಹಿಂತಿರುಗಿಸಿ ಪಾಯಿಂಟ್ಸ್‌ ಹೆಕ್ಕಿದ ರು. ಈ ಮೂಲಕ 8–5ರ ಮುನ್ನಡೆ ಗಳಿಸಿದರು.

ಇದರಿಂದ ಸ್ವಲ್ಪ ಗಲಿಬಿಲಿಗೊಂಡಂತೆ ಕಂಡ ಲಾಂಗ್‌ ಅವರು ಷಟಲ್‌ ಅನ್ನು ನೆಟ್‌ನ ಸಮೀಪದಲ್ಲಿ ಡ್ರಾಪ್‌ ಮಾಡಲು ಪ್ರಯತ್ನಿಸಿ  ಕೈ ಸುಟ್ಟುಕೊಂಡರು. ಅವರು ಡ್ರಾಪ್‌ ಮಾಡಿದ ಷಟಲ್‌ ನೆಟ್‌ಗೆ ಬಡಿದು ಅವರ ಅಂಗಳದಲ್ಲೇ ಬೀಳುತ್ತಿತ್ತು. ಹೀಗಾಗಿ ಪ್ರಣಯ್‌ ಖಾತೆಗೆ ಸುಲಭವಾಗಿ ಪಾಯಿಂಟ್ಸ್‌ ಸೇರ್ಪಡೆ ಯಾದವು. ಇದರಿಂದ ಭಾರತದ ಆಟಗಾರನ ಮುನ್ನಡೆ 11–7ಕ್ಕೆ ಹೆಚ್ಚಿತು.

ವಿರಾಮದ ಬಳಿಕ ಪ್ರಣಯ್‌ ಆಟ ಇನ್ನಷ್ಟು ಕಳೆಗಟ್ಟಿತು. ಭಾರತದ ಆಟಗಾರನ ಹಿಂಗೈ ಮತ್ತು ಕ್ರಾಸ್‌ಕೋರ್ಟ್‌  ಹೊಡೆತಗಳಿಗೆ ಚೆನ್‌ ಲಾಂಗ್‌ ನಿರುತ್ತರ ರಾದರು. ಈ ಮೂಲಕ ಮುನ್ನಡೆಯನ್ನು  15–10ಕ್ಕೆ ಹೆಚ್ಚಿಸಿಕೊಂಡ ಪ್ರಣಯ್‌ ಆ ನಂತರವೂ ಚುರುಕಾಗಿ ಆಡಿ ಅಂಗಳದಲ್ಲಿ ಖುಷಿಯ ಅಲೆ ಏಳುವಂತೆ ಮಾಡಿದರು.

ವಿಶ್ವ ಚಾಂಪಿಯನ್‌ ಆಟಗಾರ ಲಾಂಗ್‌ ಈ ಹಂತದಲ್ಲಿ ಚೇತರಿಕೆಯ ಆಟ ಆಡಿದರು. ಚುರುಕಾಗಿ ಪಾಯಿಂಟ್ಸ್‌ ಕಲೆಹಾಕಿದ ಅವರು ಹಿನ್ನಡೆಯನ್ನು 15–18ಕ್ಕೆ ತಗ್ಗಿಸಿಕೊಂಡರು. ಇದರಿಂದ ಪ್ರಣಯ್‌ ಎದೆಗುಂದಲಿಲ್ಲ. ತುಂಬು ವಿಶ್ವಾಸದಿಂದ ಸೆಣಸಿದ ಅವರು ಲೀಲಾಜಾಲವಾಗಿ ಪಾಯಿಂಟ್ಸ್‌ ಸಂಗ್ರಹಿಸಿ ಗೆಲುವು ಒಲಿಸಿಕೊಂಡರು.

ಪ್ರಣಯ್‌ ವಿರುದ್ಧ 3–0ರ ಗೆಲುವಿನ ದಾಖಲೆ ಹೊಂದಿದ್ದ ಚೆನ್‌ ಲಾಂಗ್‌ ಎರಡನೇ ಗೇಮ್‌ನಲ್ಲಿ ಗರ್ಜಿಸಿದರು. ಇಲ್ಲಿ ಆರನೇ ಶ್ರೇಯಾಂಕ ಹೊಂದಿದ್ದ ಚೀನಾದ ಆಟಗಾರ ಅಂಗಳದ ಮೂಲೆ ಮೂಲೆಗೂ ಷಟಲ್‌ ಬಾರಿಸಿ ಪ್ರಣಯ್‌ ಅವರನ್ನು ಹೈರಾಣಾಗಿಸಿದರು. ಇದರ ನಡುವೆಯೂ ತಮ್ಮ ಸರ್ವ್‌ನಲ್ಲಿ ಪಾಯಿಂಟ್ಸ್‌ ಕಲೆಹಾಕಿದ ಭಾರತದ ಆಟಗಾರ 6–6ರಲ್ಲಿ ಸಮಬಲ ಮಾಡಿಕೊಂಡರು.

ಆ ನಂತರ ಬಿರುಸಿನ ಹೊಡೆತಗಳ ಮೂಲಕ ಸತತ ನಾಲ್ಕು ಪಾಯಿಂಟ್ಸ್‌ ಕಲೆ ಹಾಕಿದ ಚೆನ್‌, 10–6ರ ಮುನ್ನಡೆ ಪಡೆದರು.  ಮೊದಲ ಗೇಮ್‌ನಲ್ಲಿ ಗೆದ್ದು ವಿಶ್ವಾಸದ ಗಣಿ ಎನಿಸಿದ್ದ ಪ್ರಣಯ್‌ ಇದರಿಂದ ವಿಚಲಿತರಾಗಲಿಲ್ಲ. ಗುಣ ಮಟ್ಟದ ಆಟ ಆಡಿದ ಅವರು 16–16ರಲ್ಲಿ ಸಮಬಲ ಮಾಡಿಕೊಂಡರು. ಹೀಗಾಗಿ ಆಟದ ರೋಚಕತೆ ಹೆಚ್ಚಿತು.

ಈ ಹಂತದಲ್ಲಿ ಬೇಸ್‌ಲೈನ್‌ ಹೊಡೆತಗಳ ಮೂಲಕ ಪಾಯಿಂಟ್ಸ್‌ ಸಂಗ್ರಹಿಸಿದ ಚೀನಾದ ಆಟಗಾರ ಗೇಮ್‌ ಗೆದ್ದು ಸಂಭ್ರಮಿಸಿದರು. ಹೀಗಾಗಿ ಮೂರನೇ ಹಾಗೂ ನಿರ್ಣಾಯಕ ಗೇಮ್‌ ಭಾರಿ ಕುತೂಹಲ ಕೆರಳಿಸಿತ್ತು. ಗೇಮ್‌ನ ಶುರುವಿನಲ್ಲಿ ಚೆನ್‌ ಲಾಂಗ್‌ 4–1ರಿಂದ ಮುಂದಿದ್ದರು. ಆ ನಂತರ   ಪರಿಣಾಮಕಾರಿ ಆಟ ಆಡಿದ ಪ್ರಣಯ್‌ 7–7ರಲ್ಲಿ ಸಮಬಲ ಮಾಡಿ ಕೊಂಡರು.

ಬಳಿಕವೂ ಇಬ್ಬರ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿತು. ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿರುವ ಚೆನ್‌ 11–10ರಲ್ಲಿ ಮುನ್ನಡೆ ಪಡೆದು ವಿರಾಮಕ್ಕೆ ಹೋದರು. ದ್ವಿತೀಯಾರ್ಧದಲ್ಲಿ ಪ್ರಣಯ್‌ ಛಲಬಿಡದೆ ಸೆಣಸಿದರು. ದೀರ್ಘ ರ್‍ಯಾಲಿಗಳಿಂದ ಕೂಡಿದ್ದ ಪೈಪೋಟಿಯಲ್ಲಿ ಎದುರಾಳಿ ಆಟಗಾರನ ತಂತ್ರಗಳಿಗೆ ಪ್ರತಿ ತಂತ್ರ ಹೆಣೆದು ಆಡಿದ ಅವರು 19–17ರಲ್ಲಿ ಮುನ್ನಡೆ ಗಳಿಸಿದರು.  ಈ ಹಂತದಲ್ಲಿ ಚೆನ್‌, ಷಟಲ್‌ ಅನ್ನು ಅಂಗಳದ ಹೊರಗೆ ಬಾರಿಸಿ ಪಾಯಿಂಟ್ಸ್‌ ಕೈಚೆಲ್ಲಿದರು. ಇದರ ಪೂರ್ಣಲಾಭ ಎತ್ತಿಕೊಂಡ ಪ್ರಣಯ್‌ ಸಂಭ್ರಮದ ಹೊಳೆಯಲ್ಲಿ ಮಿಂದೆದ್ದರು.

ಸೆಮಿಗೆ ಶ್ರೀಕಾಂತ್‌: ಸಿಂಗಲ್ಸ್‌ ವಿಭಾಗದಲ್ಲಿ ಭಾರತದ ಭರವಸೆಯಾಗಿರುವ ಶ್ರೀಕಾಂತ್‌ ಕೂಡ ನಾಲ್ಕರ ಘಟ್ಟಕ್ಕೆ ಮುನ್ನಡೆದರು.
ಕ್ವಾರ್ಟರ್ ಫೈನಲ್‌ ಹಣಾಹಣಿಯಲ್ಲಿ ಶ್ರೀಕಾಂತ್‌ 21–15, 21–14ರಲ್ಲಿ ಚೀನಾ ತೈಪೆಯ ಜು ವೀ ವಾಂಗ್‌ ಅವರನ್ನು ಸೋಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT