ಕರಾಳ ಮಸೂದೆ ಬೇಡ

7
ರಾಜ್ಯದಾದ್ಯಂತ ವೈದ್ಯರು, ವೈದ್ಯಕೀಯ ಸಿಬ್ಬಂದಿ ಪ್ರತಿಭಟನೆ

ಕರಾಳ ಮಸೂದೆ ಬೇಡ

Published:
Updated:
ಕರಾಳ ಮಸೂದೆ ಬೇಡ

ಬೆಂಗಳೂರು: ‘ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳು (ತಿದ್ದುಪಡಿ)–2017’ (ಕೆಪಿಎಂಇ) ಮಸೂದೆ ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘದ (ಐಎಂಎ) ರಾಜ್ಯ ಶಾಖೆ ವತಿಯಿಂದ ನಗರದಲ್ಲಿ ಶುಕ್ರವಾರ ಬೃಹತ್‌ ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸಾವಿರಾರು ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ, ಸರ್ಕಾರ ಮಸೂದೆಯನ್ನು  ಹಿಂಪಡೆಯಬೇಕೆಂದು ಒತ್ತಾಯಿಸಿದರು.

‘ಈ ಮಸೂದೆ ವೈದ್ಯಕೀಯ ಸಂಸ್ಥೆಗಳ ಬದಲಿಗೆ ವೈದ್ಯರನ್ನೇ ನಿಯಂತ್ರಿಸಲಿದೆ. ವೈದ್ಯರನ್ನು ಅಪರಾಧಿಗಳೆಂದು ಪರಿಗಣಿಸುತ್ತದೆ. ಈ ಹಿಂದೆ ನ್ಯಾಯಮೂರ್ತಿ ವಿಕ್ರಂಜಿತ್‌ ಸೇನ್‌ ಅವರ ನೇತೃತ್ವದಲ್ಲಿ ರಚಿಸಿದ್ದ ಕರಡನ್ನು ಒಳಗೊಂಡ ಮಸೂದೆಯನ್ನೇ ಅಂಗೀಕರಿಸಬೇಕು’ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.ಐಎಂಎ ರಾಜ್ಯ ಶಾಖೆ ಅಧ್ಯಕ್ಷ ಡಾ.ರಾಜಶೇಖರ ಬಳ್ಳಾರಿ, ‘ವೈದ್ಯಕೀಯ ರಂಗಕ್ಕೆ ಇದು ಕರಾಳ ಮಸೂದೆ. ವೈದ್ಯರ ಮೇಲ್ವಿಚಾರಣೆ ಮಾಡಲು ಭಾರತೀಯ ವೈದ್ಯಕೀಯ ಮಂಡಳಿ, ರಾಜ್ಯ ವೈದ್ಯಕೀಯ ಮಂಡಳಿ ಇದೆ.  ರೋಗಿಗಳಿಗೆ ತೊಂದರೆಯಾದರೆ ಅದನ್ನು ಬಗೆಹರಿಸಲು ಗ್ರಾಹಕ ನ್ಯಾಯಾಲಯ, ಮಾನವ ಹಕ್ಕುಗಳ ಆಯೋಗ ಹಾಗೂ ಪೊಲೀಸ್‌ ವ್ಯವಸ್ಥೆ ಇದೆ. ಹೊಸ ಕಾಯಿದೆ ರಚಿಸುವ ಅಗತ್ಯವಿಲ್ಲ’ ಎಂದರು.‘ಮಸೂದೆಯನ್ನು ಹಿಂಪಡೆಯದಿದ್ದರೆ ಆಸ್ಪತ್ರೆಗಳನ್ನು ಅನಿರ್ದಿಷ್ಟಾವಧಿಯವರೆಗೆ ಮುಚ್ಚಿ ಧರಣಿ ನಡೆಸುತ್ತೇವೆ’ ಎಂದು ಎಚ್ಚರಿಸಿದರು.‘ವೈದ್ಯರಿಗೆ ದಂಡ ಮತ್ತು ಜೈಲು ಶಿಕ್ಷೆಯ ಭಯವಿದ್ದಾಗ ಮಾನಸಿಕ ಒತ್ತಡ ಹೆಚ್ಚುತ್ತದೆ. ಆಗ ಚಿಕಿತ್ಸೆಯ ಮೇಲೆ ವ್ಯತಿರಿಕ್ತ ಪರಿಣಾಮ ಬಿರಲಿದೆ’ ಎಂದು ಹೃದಯ ಶಸ್ತ್ರಚಿಕಿತ್ಸಕ ಡಾ.ದೇವಿಪ್ರಸಾದ್‌ ಶೆಟ್ಟಿ ಹೇಳಿದರು.ಐಎಂಎ ನಿಯೋಜಿತ ಅಧ್ಯಕ್ಷ ಎಚ್‌.ಎನ್‌.ರವೀಂದ್ರ ಮಾತನಾಡಿ, ‘ಸರ್ಕಾರ ವೈದ್ಯಕೀಯ ರಂಗವನ್ನು  ವ್ಯಾಪಾರವೆಂದು ಪರಿಗಣಿಸಿ, ವೈದ್ಯಕೀಯ ಸೇವೆ ನೀಡಲು ಪರವಾನಗಿ ನೀಡುತ್ತಿದೆ.ನಾವು ಸೇವೆಗೆ ನಿರ್ದಿಷ್ಟ ಬಿಲ್‌ ನೀಡಿ, ಹಣ ಪಡೆಯುತ್ತವೆ. ಆದರೆ, ರಾಜಕಾರಣಿಗಳು ಬಿಲ್‌ ನೀಡದೆಯೇ ಹಣ ಗಳಿಸುತ್ತಾರೆ’ ಎಂದು ಅವರು ವ್ಯಂಗ್ಯವಾಡಿದರು.‘ಸಂವಿಧಾನ ವಿರೋಧಿ’

‘ಸಂವಿಧಾನದ 14ನೇ ವಿಧಿಯನ್ವಯ ಧರ್ಮ, ಜನಾಂಗ, ಲಿಂಗ, ಜಾತಿ ಮತ್ತು ವೃತ್ತಿ ಆಧಾರದಲ್ಲಿ ತಾರತಮ್ಯ ಮಾಡುವಂತಿಲ್ಲ. ಆದರೆ, ಸರ್ಕಾರ ಸರ್ಕಾರಿ ವೈದ್ಯರಿಗೊಂದು, ಖಾಸಗಿ ವೈದ್ಯಕೀಯ ಸಿಬ್ಬಂದಿಗೊಂದು ನಿಯಮ ರೂಪಿಸಿದೆ. ಇದು ಸಂವಿಧಾನ ವಿರೋಧಿ ನಡೆ’ ಎಂದು ನಿವೃತ್ತ ನ್ಯಾಯಮೂರ್ತಿ ಎನ್‌. ಸಂತೋಷ್‌ ಹೆಗ್ಡೆ ಕಿಡಿಕಾರಿದರು.

*

ವಕೀಲರು, ಲೆಕ್ಕಪರಿಶೋಧಕರು ತಮ್ಮ ಕೆಲಸಕ್ಕೆ ನಿರ್ದಿಷ್ಟ ಶುಲ್ಕ ನಿಗದಿಪಡಿಸಿಕೊಳ್ಳುತ್ತಾರೆ. ವೈದ್ಯರಿಗೂ ಆ ಅವಕಾಶ ನೀಡಬೇಕು.

ಡಾ.ರಾಜಶೇಖರ ಬಳ್ಳಾರಿ

ಐಎಂಎ ರಾಜ್ಯ ಶಾಖೆ ಅಧ್ಯಕ್ಷ

*

ವೈದ್ಯರನ್ನು ದಂಧೆಕೋರರು, ಸುಲಿಗೆಗಾರರು, ಲಜ್ಜೆಗೆಟ್ಟವರೆಂದು ಕರೆದ ಆರೋಗ್ಯ ಸಚಿವರ ನಾಲಿಗೆಗೆ ಬರೆ ಹಾಕಬೇಕು.

ಡಾ. ಎಚ್‌.ಎನ್‌.ರವೀಂದ್ರ

ಐಎಂಎ ನಿಯೋಜಿತ ಅಧ್ಯಕ್ಷ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry