ಕಳ್ಳ ದಂಪತಿಗಾಗಿ ಬೆಂಗಳೂರಿನಲ್ಲಿ ಶೋಧ

7
ತಿರುಮಲ ವೆಂಕಟೇಶ್ವರ ದೇವಾಲಯದಿಂದ ಮಗುವನ್ನು ಹೊತ್ತೊಯ್ದ ಪ್ರಕರಣ

ಕಳ್ಳ ದಂಪತಿಗಾಗಿ ಬೆಂಗಳೂರಿನಲ್ಲಿ ಶೋಧ

Published:
Updated:
ಕಳ್ಳ ದಂಪತಿಗಾಗಿ ಬೆಂಗಳೂರಿನಲ್ಲಿ ಶೋಧ

ಬೆಂಗಳೂರು: ತಿರುಮಲದ ವೆಂಕಟೇಶ್ವರ ದೇವಾಲಯದಿಂದ ಚನ್ನಕೇಶವಲು ಎಂಬ ಹತ್ತು ತಿಂಗಳ  ಮಗುವನ್ನು ಅಪಹರಿಸಿದ ದಂಪತಿಯನ್ನು ಹುಡುಕಿಕೊಂಡು ಶುಕ್ರವಾರ ಬೆಂಗಳೂರಿಗೆ ಬಂದಿರುವ ತಿರುಮಲ ಪೊಲೀಸರು, ಮೆಜೆಸ್ಟಿಕ್ ಹಾಗೂ ಕೆ.ಆರ್.ಮಾರುಕಟ್ಟೆ ಪ್ರದೇಶಗಳಲ್ಲಿ ಶೋಧ ನಡೆಸಿದರು.

ಅನಂತಪುರ ಜಿಲ್ಲೆಯ ಸಾಯಿಪುರ ಗ್ರಾಮದ ವೆಂಕಟೇಶ್‌ ಎಂಬುವರು ಪತ್ನಿ ಹಾಗೂ ನಾಲ್ಕು ಮಕ್ಕಳ ಜತೆ ಭಾನುವಾರ ತಿರುಮಲ ದೇವಸ್ಥಾನಕ್ಕೆ ಹೋಗಿದ್ದರು. ಈ ಪರಿವಾರವು ರಾತ್ರಿ ದೇವಾಲಯದ ಮುಂಭಾಗದ ಛತ್ರದಲ್ಲೇ ಮಲಗಿತ್ತು. ಮಗುವನ್ನೇ ಟಾರ್ಗೆಟ್ ಮಾಡಿಕೊಂಡಿದ್ದ ಆರೋಪಿ ದಂಪತಿ, ರಾತ್ರಿ ಆ ಕುಟುಂಬದ ಪಕ್ಕದಲ್ಲೇ ಮಲಗಿದ್ದರು.

ಸೋಮವಾರ ಬೆಳಿಗ್ಗೆ 5 ಗಂಟೆಗೆ ಎಚ್ಚರಗೊಂಡ ವೆಂಕಟೇಶ್ ದಂಪತಿ, ಮಕ್ಕಳು ಮಲಗಿದ್ದರಿಂದ ತಾವಷ್ಟೇ ದರ್ಶನಕ್ಕೆ ತೆರಳಿದ್ದರು. ಇದೇ ಸಮಯಕ್ಕಾಗಿ ಕಾಯುತ್ತಿದ್ದ ಆರೋಪಿಗಳು, ಮಗುವನ್ನು ಅಪಹರಿಸಿಕೊಂಡು ಹೋಗಿದ್ದರು. ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆ: ಬೆಳಿಗ್ಗೆ 5.30ರ ಸುಮಾರಿಗೆ ಮಗು ಎಚ್ಚರಗೊಳ್ಳುತ್ತದೆ. ಆಟವಾಡಿಸುವ ನೆಪದಲ್ಲಿ  ಆರೋಪಿ ಮಗುವಿನ ಹತ್ತಿರ ಹೋಗುತ್ತಾನೆ. ಈ ವೇಳೆ ಯಾರಿಗೂ ಅನುಮಾನ ಬರಬಾರದೆಂದು ಸ್ವಲ್ಪ ದೂರದಲ್ಲೇ ನಿಲ್ಲುವ ಆತನ ಪತ್ನಿ, ಬ್ಯಾಗ್‌ಗೆ ಬಟ್ಟೆಗಳನ್ನು ತುಂಬಿಕೊಂಡು ಹೊರಡುವ ಸಿದ್ಧತೆಯಲ್ಲಿರುತ್ತಾಳೆ.

ಎರಡು ನಿಮಿಷ ಮಗುವನ್ನು ಆಟವಾಡಿಸುವ ಆರೋಪಿ, ನಂತರ ಅದನ್ನು ಎತ್ತಿಕೊಂಡು ಹೊರಡುತ್ತಾನೆ. ಸ್ವಲ್ಪ ಸಮಯದ ನಂತರ ಈಕೆ ಕೂಡ ಬ್ಯಾಗ್‌ಗಳನ್ನು ಹಿಡಿದುಕೊಂಡು ಆತನನ್ನು ಹಿಂಬಾಲಿಸಿ ಹೋಗುತ್ತಾಳೆ. ನಂತರ ಬ್ಯಾಗ್‌ಗಳನ್ನು ಪತಿಯ ಕೈಗೆ ಕೊಡುವ ಆಕೆ, ಮಗುವನ್ನು ತಾನು ಎತ್ತಿಕೊಂಡು ಮುಖಕ್ಕೆ ವೇಲ್‌ ಸುತ್ತುತ್ತಾಳೆ. ಇಷ್ಟೂ ದೃಶ್ಯಗಳು ದೇವಾಲಯದ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಕಾರ್ಯಾಚರಣೆ ಶುರು: ‘ಆರೋಪಿಗಳ ಪತ್ತೆಗೆ ಆರು ವಿಶೇಷ ತಂಡಗಳನ್ನು ರಚಿಸಲಾಗಿದೆ. ಸಿ.ಸಿ ಟಿ.ವಿ ಕ್ಯಾಮೆರಾ ಸುಳಿವು ಆಧರಿಸಿ ಅವರ ಶೋಧ ನಡೆಸುತ್ತಿದ್ದೇವೆ. ದೇವಾಲಯದಿಂದ ಹೊರಟ ಆರೋಪಿಗಳು, ಖಾಸಗಿ ಬಸ್‌ವೊಂದನ್ನು ಹತ್ತಿದ್ದರು. ಅದು ಸಹ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ನೋಂದಣಿ ಸಂಖ್ಯೆ ಆಧರಿಸಿ ಆ ಬಸ್ ಪತ್ತೆ ಮಾಡಿ, ಅದರ ಚಾಲಕ ಹಾಗೂ ಕಂಡಕ್ಟರ್‌ನನ್ನು ವಿಚಾರಣೆ ನಡೆಸಿದೆವು.

‘ಮಗುವನ್ನು ಎತ್ತಿಕೊಂಡಿದ್ದ ಆ ದಂಪತಿ, ಬೆಂಗಳೂರಿನ ಕೆ.ಆರ್.ಮಾರುಕಟ್ಟೆಯಲ್ಲಿ ಇಳಿದುಕೊಂಡರು’ ಎಂದು ಹೇಳಿಕೆ ಕೊಟ್ಟರು. ಹೀಗಾಗಿ, ಶುಕ್ರವಾರ ಬೆಳಗಿನ ಜಾವ ನಗರಕ್ಕೆ ಬಂದೆವು’ ಎಂದು ಅಲಿಪಿರಿ ಠಾಣೆ ಇನ್‌ಸ್ಪೆಕ್ಟರ್ ಶ್ರೀನಿವಾಸ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ದಂಪತಿ, ಕೆ.ಆರ್.ಮಾರುಕಟ್ಟೆಯಿಂದ ಬಸ್ ಹತ್ತಿ ಮೆಜೆಸ್ಟಿಕ್‌ಗೆ ತೆರಳಿದ್ದಾರೆ. ಸುತ್ತಮುತ್ತಲಿನ ಲಾಡ್ಜ್‌ಗಳು, ಹೋಟೆಲ್‌ಗಳು, ರೈಲು ಹಾಗೂ ಬಸ್ ನಿಲ್ದಾಣಗಳಲ್ಲಿ ಶೋಧ ನಡೆಸುತ್ತಿದ್ದೇವೆ. ಅವರ ಪತ್ತೆಗೆ ಬೆಂಗಳೂರು ಪೊಲೀಸರೂ ನೆರವು ನೀಡುತ್ತಿದ್ದಾರೆ’ ಎಂದು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry