ಕಸದ ರಾಶಿ: ಅಧಿಕಾರಿಗಳ ವಿರುದ್ಧ ಗರಂ

7

ಕಸದ ರಾಶಿ: ಅಧಿಕಾರಿಗಳ ವಿರುದ್ಧ ಗರಂ

Published:
Updated:
ಕಸದ ರಾಶಿ: ಅಧಿಕಾರಿಗಳ ವಿರುದ್ಧ ಗರಂ

ಬೆಂಗಳೂರು: ‘ಪಾರ್ಕ್‌್ ನಿರ್ವಹಣೆ ಸರಿಯಾಗಿಲ್ಲ. ಉದ್ಯಾನ, ಆಸ್ಪತ್ರೆ ಸುತ್ತಲೂ ಕಸದ ರಾಶಿ ಹಾಗೆಯೇ ಇದೆ’ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಮೇಯರ್‌ ಮತ್ತು ಅಧಿಕಾರಿಗಳೊಂದಿಗೆ ನಗರಾಭಿವೃದ್ಧಿ ಸಚಿವ ಆರ್. ರೋಷನ್ ಬೇಗ್ ಹಾಗೂ ಸಚಿವ ಜಾರ್ಜ್ ಅವರು ಶುಕ್ರವಾರ ಭಾರತಿ ನಗರದ ವಾರ್ಡ್‌ನಲ್ಲಿ ₹29 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿರುವ ಸಮುದಾಯ ಭವನ, ಉರ್ದು ಶಾಲೆ ಹಾಗೂ ಹೆರಿಗೆ ಆಸ್ಪತ್ರೆಗಳ ಪರಿಶೀಲನೆ ನಡೆಸಿದರು.

‘ಕಾರ್ಯನಿರ್ವಾಹಕ ಎಂಜಿನಿಯರ್‌ ರಜೆಯಲ್ಲಿದ್ದಾರೆ ಹಾಗಾಗಿ ಕಸ ತೆರವು ಮಾಡಲು ಆಗಿಲ್ಲ, ಉದ್ಯಾನ ಅಭಿವೃದ್ಧಿಗಳು ಬಾಕಿ ಉಳಿದಿವೆ’ ಎಂದು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಸೈಫುದ್ಧೀನ್‌ ಉತ್ತರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಾರ್ಜ್‌, ‘ನೀವು ಕಸ ಎತ್ತಿ ಹಾಕುತ್ತೀರಾ? ಇಲ್ಲವಲ್ಲ, ಗುತ್ತಿಗೆದಾರರಿಗೆ ಹೇಳಿಸಿ ಕೆಲಸ ಮಾಡಿಸಲು ಏನು ತೊಂದರೆ. ಪ್ರತಿ ಬಾರಿ ಹೇಳಿದರೂ ಹೀಗೆಯೇ ಮಾಡುತ್ತೀರಿ. ಕೆಲಸ ಮಾಡಲು ಏನು ರೋಗ ನಿಮಗೆ’ ಎಂದು ತರಾಟೆ ತೆಗೆದುಕೊಂಡರು.

₹16 ಕೋಟಿ ವೆಚ್ಚದಲ್ಲಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಿರ್ಮಿಸುತ್ತಿರುವ ಉರ್ದು ಶಾಲೆಯನ್ನು ವೀಕ್ಷಿಸಿದ ಸಚಿವರು, ‘ಶಿಥಿಲವಾಗಿರುವ ಈ ಶಾಲೆಯನ್ನು ಶೀಘ್ರ ಪುನರ್‌ನಿರ್ಮಾಣ ಮಾಡಿ. ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡುವುದರ ಜತೆಗೆ ಉತ್ತಮ ಕಟ್ಟಡ ಹೊಂದುವುದು ಅಗತ್ಯ’ ಎಂದು ಹೇಳಿದರು.

ಶಾಲೆಯ ಶಿಕ್ಷಕರು, ‘ಐದು ವರ್ಷದಿಂದ ಅಧಿಕಾರಿಗಳು ಬಂದು ಶಾಲೆಯನ್ನು ನೋಡಿಕೊಂಡು ಹೋಗುತ್ತಿದ್ದಾರೆಯೇ ಹೊರತು ಯಾವುದೇ ಕೆಲಸ ಮಾಡಿಲ್ಲ. ಎರಡು ತಿಂಗಳ ಹಿಂದೆಯೂ ಅಧಿಕಾರಿಗಳು ಶಾಲೆಯನ್ನು ವೀಕ್ಷಿಸಿದ್ದರು. ಬೇಸಿಗೆ ರಜೆಯಲ್ಲಿ ನವೀಕರಣಗೊಳ್ಳುತ್ತದೆ ಎಂದು ಭಾವಿಸಿದ್ದೆವು. ಆದರೆ, ಏನೂ ಆಗಿಲ್ಲ’ ಎಂದು ದೂರಿದರು.

‘700 ವಿದ್ಯಾರ್ಥಿಗಳಿದ್ದ ಈ ಶಾಲೆಯ ದಾಖಲಾತಿ ಪ್ರಮಾಣ ಈಗ 250ಕ್ಕೆ ಇಳಿದಿದೆ. ಶಿಕ್ಷಣ ಚೆನ್ನಾಗಿದ್ದರೂ ಮೂಲಸೌಕರ್ಯ ಸರಿಯಾಗಿದ್ದಿದ್ದರೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತದೆ. ಈ ಶಾಲೆಯಲ್ಲಿ ಒಟ್ಟು 10 ಕೊಠಡಿಗಳಿವೆ. ಸಾಕಷ್ಟು ಜಾಗ ಇದ್ದರೂ ಮಕ್ಕಳಿಗೆ ಇಕ್ಕಟ್ಟಿನಲ್ಲಿ ತರಗತಿ ಮಾಡುವ ಹಾಗಾಗಿದೆ’ ಎಂದು ಮಾಹಿತಿ ನೀಡಿದರು.

ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಹೋಟೆಲ್‌, ಅಂಗಡಿಗಳು ಅಡ್ಡಿಯಾಗುತ್ತಿವೆ. ಅಲ್ಲದೆ, 13 ರೆಸ್ಟೊರೆಂಟ್‌ಗಳು ತ್ಯಾಜ್ಯ ನೀರನ್ನು ಸಂಸ್ಕರಿಸದೆ ಬಿಡುತ್ತಿರುವುದರಿಂದ ಒಳಚರಂಡಿ ಪದೇ ಪದೇ ಕಟ್ಟಿಕೊಳ್ಳುತ್ತಿದೆ’ ಎಂದು ಅಧಿಕಾರಿಗಳು ಹೇಳಿದರು. ‘ಕಾಮಗಾರಿ ಅಡ್ಡಿಯಾಗುತ್ತಿರುವ ಹೋಟೆಲ್‌, ರೆಸ್ಟೋರೆಂಟ್‌ಗಳನ್ನು ಮುಚ್ಚಿಸಿ’ ಎಂದು ಸಚಿವರು ಸೂಚನೆ ನೀಡಿದರು. ಮೇಯರ್‌ ಜಿ. ಪದ್ಮಾವತಿ, ‘ಎಲ್ಲಾ ಕಾಮಗಾರಿಗಳನ್ನು ಮುಂದಿನ ವಾರದಲ್ಲಿ ಪ್ರಾರಂಭಿಸುತ್ತೇವೆ. ಕಮರ್ಷಿಯಲ್‌ ಸ್ಟ್ರೀಟ್‌ನಲ್ಲಿ ಟೆಂಡರ್‌ ಶ್ಯೂರ್‌ ರಸ್ತೆ ಮಾಡಲಾಗುವುದು’ ಎಂದು ಹೇಳಿದರು.

ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್‌, ‘ಕಮರ್ಷಿಯಲ್ ಸ್ಟ್ರೀಟ್ ರಸ್ತೆಯಲ್ಲಿನ ಅನಧಿಕೃತ ಜಾಹೀರಾತು ಫಲಕಗಳನ್ನು ಅಂಗಡಿ ಅವರು ತೆರವುಗೊಳಿಸಲಿಲ್ಲ ಎಂದರೆ ಪಾಲಿಕೆಯಿಂದಲೇ ಅವುಗಳನ್ನು ತೆರವು ಮಾಡುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry