₹ 2.75 ಕೋಟಿ ವೆಚ್ಚದಲ್ಲಿ ದೊಡ್ಡಕೆರೆ ಅಭಿವೃದ್ಧಿ

7

₹ 2.75 ಕೋಟಿ ವೆಚ್ಚದಲ್ಲಿ ದೊಡ್ಡಕೆರೆ ಅಭಿವೃದ್ಧಿ

Published:
Updated:
₹ 2.75 ಕೋಟಿ ವೆಚ್ಚದಲ್ಲಿ ದೊಡ್ಡಕೆರೆ ಅಭಿವೃದ್ಧಿ

ಬಂಗಾರಪೇಟೆ: ಪಟ್ಟಣದ ದೊಡ್ಡಕೆರೆ ಅಂಗಳ ಸ್ವಚ್ಛಗೊಳಿಸಿ, ₹ 2.75 ಕೋಟಿ ವೆಚ್ಚದಲ್ಲಿ ಕೆರೆ ಸುತ್ತ ಸುಮಾರು 1.75 ಕಿಲೋ ಮೀಟರ್‌ ಉದ್ದದ ಪಾದಚಾರಿ ಪಥ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ.

ಕೆರೆಯಲ್ಲಿನ ಮುಳ್ಳುಗಿಡ, ಪೊದೆಗಳನ್ನು ತೆರವುಗೊಳಿಸಿ, ವಿವಿಧ ತಳಿಯ 100ಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ಪೋಷಿಸುವ ಕೆಲಸ ನಡೆದಿದೆ. ಕೆರೆಯಂಗಳದ ಕೆಲವೆಡೆ ಮಣ್ಣಿನ ದಿಬ್ಬಗಳನ್ನು ಮಾಡಿ, ದ್ವೀಪದ ಸ್ವರೂಪ ನೀಡುವ ಕೆಲಸ ನಡೆಯುತ್ತಿದೆ.

ಪಾದಚಾರಿ ಪಥ ನಿರ್ಮಾಣಕ್ಕೆ ಶಾಸಕರು ವಿಶೇಷ ಅನುದಾನ ಬಿಡುಗಡೆ ಮಾಡಿಸಿದ್ದು, ದಾರಿಯ ಎರಡೂ ಕಡೆ ತಂತಿ ಬೇಲಿ ಅಳವಡಿಸುವ ಕಾಮಗಾರಿ ನಡೆಯಲಿದೆ. ಉದ್ದಕ್ಕೂ ಟೈಲ್ಸ್‌ ಹಾಕಿಸಿ, ವಿದ್ಯುತ್‌ ದೀಪಾಲಂಕಾರದ ವ್ಯವಸ್ಥೆ ಕಲ್ಪಿಸುವ ಜತೆಗೆ ಮೂರು ಕಡೆ ಬಾಗಿಲು ಅಳವಡಿಸುವ ಯೋಜನೆ ರೂಪಿಸಲಾಗಿದೆ ಎಂದು ಪುರಸಭೆ ಅಧಿಕಾರಿಗಳು ತಿಳಿಸಿದರು.

ದಾರಿಯ ಉದ್ದಕ್ಕೂ ಅಲ್ಲಲ್ಲಿ ಕುಳಿತುಕೊಳ್ಳಲು ಆಸನಗಳನ್ನು ಅಳವಡಿಸಿ, ಶೆಲ್ಟರ್‌ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಶಾಸಕ ಎಸ್.ಎನ್. ನಾರಾಯಣ ಸ್ವಾಮಿ ತಿಳಿಸಿದರು.

‘ಕೆರೆಗೆ ಮಳೆ ನೀರು ಹರಿಯಲು ಅಗತ್ಯ ವ್ಯವಸ್ಥೆ ಮಾಡಲಾಗಿದೆ. ಚರಂಡಿ ನೀರು ಕೆರೆಗೆ ಸೇರದಂತೆ ಮುಂದೆ ಸೂಕ್ತ ವ್ಯವಸ್ಥೆ ಮಾಡಲಾಗುವುದು’ ಎಂದು ಭರವಸೆ ನೀಡಿದ್ದಾರೆ.

ಮಳೆ ನೀರು ಕೆರೆಗೆ ಹರಿಯಲು ಪಾದಚಾರಿ ಪಥದ ಉದ್ದಕ್ಕೂ ಸುಮಾರು 8 ಕಡೆ ಅಡ್ಡಲಾಗಿ ಪೈಪ್‌ಗಳನ್ನು ಅಳವಡಿಸಲಾಗಿದೆ.

ಕೆಲವೆಡೆ ಸೇತುವೆ ನಿರ್ಮಿಸಲಾಗಿದೆ. ಪಟ್ಟಣ ಸೇರಿದಂತೆ ಕೆರೆಕೋಡಿ, ಕಾರಹಳ್ಳಿ ನಿವಾಸಿಗಳ ವಾಯು ವಿಹಾರಕ್ಕೆ ಅನುಕೂಲ ವಾಗಲಿದ್ದು, ಒಂದೆರಡು ಕಡೆ ಶೌಚಾಲಯ ಕೂಡ ನಿರ್ಮಿಸಲು ಉದ್ದೇಶಿಸಲಾಗಿದೆ.

ಈಚೆಗೆ ಸುರಿದ ಮಳೆಯಿಂದಾಗಿ ಕೆರೆಗೆ ಸ್ವಲ್ಪ ನೀರು ಸೇರಿದೆ. ಪಟ್ಟಣ, ಕಾರಹಳ್ಳಿ, ಕೆರೆಕೋಡಿ ಗ್ರಾಮಗಳ ಜಾನುವಾರುಗಳಿಗೆ ಈ ನೀರು ಆಸರೆಯಾಗಲಿದೆ. ಆದರೆ ಮೂರು ದಿಕ್ಕುಗಳಿಂದ ಚರಂಡಿ ನೀರು ಕೆರೆಗೆ ಸೇರಿ, ನೀರನ್ನು ಕಲುಷಿತಗೊಳಿಸುತ್ತಿದೆ ಎಂದು ಎಂಬುದು ಸ್ಥಳೀಯರ ಆರೋಪ.

ಪಟ್ಟಣದ ವಿವೇಕಾನಂದ ನಗರ, ವಿಜಯನಗರ, ಶಾಂತಿನಗರದಿಂದ  ಮೋರಿ ನೀರು, ಕಾರಹಳ್ಳಿ ಗ್ರಾಮದ ಚರಂಡಿ ನೀರು ಕೆರೆಯಂಗಳ ಸೇರುತ್ತಿದೆ. ಅಲ್ಲದೆ ಕೆರೆ ಸುತ್ತ ಇರುವ ಪಟ್ಟಣ ಹಾಗೂ ಗ್ರಾಮಗಳ ನಿವಾಸಿಗಳಿಗೆ ಕೆರೆಯಂಗಳ ಶೌಚದ ಸ್ಥಳವಾಗಿ ಬಳಕೆಯಾಗುತ್ತಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದೂ ಒತ್ತಾಯಿಸುವರು.

* * 

ಕ್ಷೇತ್ರದಲ್ಲಿ ಕೆರೆ ಅಭಿವೃದ್ಧಿ, ಚೆಕ್‌ ಡ್ಯಾಂ ನಿರ್ಮಾಣ ಮೂಲಕ  ಅಂತರ್ಜಲ ವೃದ್ಧಿಗೆ ಆದ್ಯತೆ ನೀಡಿದೆ. ಬಂಗಾರಪೇಟೆಯನ್ನು ಮಾದರಿಯಾಗಿ ಮಾರ್ಪಡಿಸಲಾಗುವುದು

ಎಸ್.ಎನ್. ನಾರಾಯಣಸ್ವಾಮಿ

ಶಾಸಕ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry