ಖಾಸಗಿ ಆಸ್ಪತ್ರೆ ಸ್ಥಗಿತ: ಚಿಕಿತ್ಸೆ ಅಲಭ್ಯ

7

ಖಾಸಗಿ ಆಸ್ಪತ್ರೆ ಸ್ಥಗಿತ: ಚಿಕಿತ್ಸೆ ಅಲಭ್ಯ

Published:
Updated:
ಖಾಸಗಿ ಆಸ್ಪತ್ರೆ ಸ್ಥಗಿತ: ಚಿಕಿತ್ಸೆ ಅಲಭ್ಯ

ತುಮಕೂರು: ಕರ್ನಾಟಕ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ (ಕೆಪಿಎಂಇ) ಕಾಯ್ದೆಗೆ ಸರ್ಕಾರ ತಿದ್ದುಪಡಿ ತರಲು ಮುಂದಾಗಿರುವುದನ್ನು ವಿರೋಧಿಸಿ ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್‌ ಹೋಂಗಳು ಶುಕ್ರವಾರ ಇಡೀ ದಿನ ಕಾರ್ಯನಿರ್ವಹಿಸಲಿಲ್ಲ. ಖಾಸಗಿ ಆಸ್ಪತ್ರೆ ವೈದ್ಯರು ಕೂಡ ಕರ್ತವ್ಯಕ್ಕೆ ಹಾಜರಾಗಲಿಲ್ಲ.

ನಗರ ಸೇರಿದಂತೆ ಜಿಲ್ಲೆಯಾದ್ಯಂತ ಯಾವುದೇ ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್‌ ಹೋಂಗಳಲ್ಲಿ ಒಳ ರೋಗಿಗಳನ್ನು ಹೊರತುಪಡಿಸಿ, ಹೊರ ರೋಗಿಗಳಿಗೆ ಚಿಕಿತ್ಸೆ ದೊರಕಲಿಲ್ಲ. ಖಾಸಗಿ ಆಸ್ಪತ್ರೆಗಳು ಬಂದ್‌ಗೆ ಕರೆ ನೀಡಿರುವ ಮಾಹಿತಿ ಗೊತ್ತಿದ್ದವರು ಖಾಸಗಿ ಆಸ್ಪತ್ರೆಗಳತ್ತ ಸುಳಿಯಲಿಲ್ಲ. ತುರ್ತು ಚಿಕಿತ್ಸೆ ಅಗತ್ಯವಿದ್ದವರು ಜಿಲ್ಲಾ ಆಸ್ಪತ್ರೆಗೆ ತೆರಳಿ, ಚಿಕಿತ್ಸೆ ಪಡೆದುಕೊಂಡರು.

ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್‌ ಹೋಂಗಳಲ್ಲಿನ ಹೊರ ರೋಗಿಗಳ ವಿಭಾಗ, ತುರ್ತು ಅವಶ್ಯಕತೆ ಇಲ್ಲದ ಶಸ್ತ್ರ ಚಿಕಿತ್ಸೆ ವಿಭಾಗ, ಸ್ಕ್ಯಾನಿಂಗ್‌, ಎಕ್ಸ್‌ರೇ, ರಕ್ತ ಪರೀಕ್ಷೆ ವಿಭಾಗಗಳು ಸ್ಥಗಿತಗೊಂಡಿದ್ದವು. ತುರ್ತು ಸೇವೆ, ಹೆರಿಗೆ ವಿಭಾಗ, ಮೂಳೆ ವಿಭಾಗ, ಮೂಳೆ ಮುರಿತ, ಅಪಘಾತ ಚಿಕಿತ್ಸಾ ವಿಭಾಗ ಮಾತ್ರ ತೆರೆದಿದ್ದವು.

‘ಪ್ರತಿ ದಿನ ಸುಮಾರು 200ಕ್ಕೂ ರೋಗಿಗಳು ಆಸ್ಪತ್ರೆಗೆ ಬರುತ್ತಿದ್ದರು. ಬಂದ್‌ ಇರುವ ಕಾರಣಕ್ಕೆ ಹೊರ ರೋಗಿಗಳು ಅಷ್ಟಾಗಿ ಬರಲಿಲ್ಲ. ಬೆರಳೆಣಿಕೆ ಸಂಖ್ಯೆಯಲ್ಲಿ ಬಂದವರಿಗೂ ವೈದ್ಯರು ಲಭ್ಯವಿಲ್ಲದ ಬಗ್ಗೆ ಮಾಹಿತಿ ಕೊಟ್ಟು ಕಳುಹಿಸಿದ್ದೇವೆ. ಆಸ್ಪತ್ರೆಯಲ್ಲಿ ದಾಖಲಾಗಿರುವ ಒಳ ರೋಗಿಗಳಿಗೆ ವೈದ್ಯರ ಸಲಹೆ ಮೇರೆಗೆ ನರ್ಸ್‌ಗಳು ಮತ್ತು ಸಹಾಯಕ ಸಿಬ್ಬಂದಿ ಚಿಕಿತ್ಸೆ ಮುಂದುವರಿಸಿದ್ದಾರೆ’ ಎಂದು ನಗರದ ವಿನಾಯಕ ಆಸ್ಪತ್ರೆಯ ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಕಾಯ್ದೆ ತಿದ್ದುಪಡಿಗೆ ವೈದ್ಯರ ವಿರೋಧ: ಕೆಪಿಎಂಇ ಕಾಯ್ದೆಗೆ ಮುಂದಾಗಿರುವ ಸರ್ಕಾರ ಇದಕ್ಕಾಗಿ ನ್ಯಾಯಮೂರ್ತಿ ವಿಕ್ರಂಜಿತ್‌ ಸೇನ್‌ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿತ್ತು. ಈ ಸಮಿತಿ ನೀಡಿದ ವರದಿಯಲ್ಲಿ ಸರ್ಕಾರಿ ಆಸ್ಪತ್ರೆಗಳನ್ನು ಕಾಯ್ದೆಯಡಿ ತರಬೇಕು, ಪ್ರತ್ಯೇಕ ನಿಯಂತ್ರಣ ಸಮಿತಿಗಳನ್ನು ರಚಿಸುವ ಅಗತ್ಯವಿಲ್ಲವೆಂದು ಹೇಳಿತ್ತು. ಆದರೆ, ತಿದ್ದುಪಡಿ ವಿಧೇಯಕ ವಿಕ್ರಂಜಿತ್‌ ಸೇನ್‌ ಸಮಿತಿ ವರದಿಗೆ ತದ್ವಿರುದ್ಧವಾಗಿದೆ ಎಂದು ವೈದ್ಯರು ಕಿಡಿಕಾರಿದ್ದಾರೆ.

ಕೆಪಿಎಂಇ ಕಾಯ್ದೆ ವೈದ್ಯಕೀಯ ಸಂಸ್ಥೆಗಳ ನೋಂದಣಿ ಹಾಗೂ ನಿಯಂತ್ರಣ ಕಾಯ್ದೆಯಾಗಿದೆ. ತಿದ್ದುಪಡಿ ವಿಧೇಯಕವು ವೈದ್ಯಕೀಯ ಸಂಸ್ಥೆಗಳನ್ನು ನಿಯಂತ್ರಿಸುವ ಬದಲು, ವೈದ್ಯರನ್ನೇ ನಿಯಂತ್ರಿಸಲಿದೆ. ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ನೇತೃತ್ವದ ಪ್ರಸ್ತಾವಿತ ಸಮಿತಿಗಳು, ಪ್ರತಿ ವೈದ್ಯರ ಮೇಲೂ ನಿಯಂತ್ರಣ ಹೊಂದಲಿವೆ ಎಂದು ವೈದ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೇಡಿಕೆ ಈಡೇರದಿದ್ದರೆ ಮತ್ತೆ ಪ್ರತಿಭಟನೆ

‘ನಮ್ಮ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದೇವೆ. ಈಗ ರಾಜ್ಯದಾದ್ಯಂತ ಎಲ್ಲ ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್‌ ಹೋಂಗಳಲ್ಲಿ ಒಂದು ದಿನ ಸೇವೆ ಸ್ಥಗಿತಗೊಳಿಸಿ, ಸಾಂಕೇತಿಕ ಪ್ರತಿಭಟನೆ ಮಾಡಿದ್ದೇವೆ. ಈ ಬಾರಿಯ ಅಧಿವೇಶನದಲ್ಲೇ ಸರ್ಕಾರ ನಮ್ಮ ಬೇಡಿಕೆ ಈರೇರಿಸಲು ತೀರ್ಮಾನ ತೆಗೆದುಕೊಳ್ಳಬೇಕು.

ನ್ಯಾಯಮೂರ್ತಿ ವಿಕ್ರಂಜಿತ್‌ ಸೇನ್‌ ನೇತೃತ್ವದ ಸಮಿತಿ ನೀಡಿರುವ ವರದಿ ಅನುಷ್ಠಾನಗೊಳಿಸಬೇಕು’ ಎಂದು ಭಾರತೀಯ ವೈದ್ಯಕೀಯ ಸಂಘದ ತುಮಕೂರು ಶಾಖೆ ಅಧ್ಯಕ್ಷ ಡಾ.ಎಸ್‌.ಪರಮೇಶ್‌ ಒತ್ತಾಯಿಸಿದ್ದಾರೆ.

ಕಾರ್ಪೋರೆಟ್‌ ಆಸ್ಪತ್ರೆಗಳಲ್ಲಿ ಹಣ ಸುಲಿಗೆ ನಡೆಯುತ್ತಿದೆ ಎನ್ನುವ ಆರೋಪಗಳ ಆಧಾರದ ಮೇಲೆ, ಕಾಯ್ದೆಗೆ ತಿದ್ದುಪಡಿ ತರಲು ಸರ್ಕಾರ ಮುಂದಾಗಿದೆ ಎನ್ನಲಾಗುತ್ತಿದೆ. ಅದು ನಿಜವೇ ಆಗಿದ್ದರೆ, ಈ ತಿದ್ದುಪಡಿ ಕಾಯ್ದೆಯಿಂದ ವ್ಯತಿರಿಕ್ತ ಪರಿಣಾಮ ಉಂಟಾಗಲಿದೆ.

ಸರ್ಕಾರಿ ಆಸ್ಪತ್ರೆ ಮತ್ತು ಸಣ್ಣ, ಮಧ್ಯಮ ಖಾಸಗಿ ಆಸ್ಪತ್ರೆಗಳಿಗೆ ಬಹಳಷ್ಟು ಹೊಡೆತ ಬೀಳಲಿದೆ. ಕಾರ್ಪೋರೆಟ್‌ ಆಸ್ಪತ್ರೆಗಳಿಗೆ ಇನ್ನಷ್ಟು ಒಳಿತಾಗಲಿದೆ. ತಿದ್ದುಪಡಿ ಕಾಯ್ದೆ ಜಾರಿಯಾದರೆ ರಾಜ್ಯದ ವೈದ್ಯರು ಕಾರ್ಯನಿರ್ವಹಿಸಲು ಸಾಧ್ಯವಾಗದ ಸ್ಥಿತಿ ಉಂಟಾಗಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಅಂಕಿ –ಅಂಶ

110 ಜಿಲ್ಲೆಯಲ್ಲಿರುವ ಖಾಸಗಿ ಆಸ್ಪತ್ರೆಗಳು

15 ನಗರದಲ್ಲಿರುವ ವೈದ್ಯಕೀಯ ಪ್ರಯೋಗಾಲಯಗಳು

40 ನಗರದಲ್ಲಿರುವ ಖಾಸಗಿ ಆಸ್ಪತ್ರೆಗಳು

50 ಜಿಲ್ಲೆಯಲ್ಲಿರುವ ವೈದ್ಯಕೀಯ ಪ್ರಯೋಗಾಲಯಗಳು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry