ವೆಂಕಟರಮಣಪ್ಪ ಮನೆ ಮೇಲೆ ಎಸಿಬಿ ದಾಳಿ

7

ವೆಂಕಟರಮಣಪ್ಪ ಮನೆ ಮೇಲೆ ಎಸಿಬಿ ದಾಳಿ

Published:
Updated:
ವೆಂಕಟರಮಣಪ್ಪ ಮನೆ ಮೇಲೆ ಎಸಿಬಿ ದಾಳಿ

ಚಿಕ್ಕಬಳ್ಳಾಪುರ: ತಾಲ್ಲೂಕಿನ ಪೇರೇಸಂದ್ರದ ಸರ್ಕಾರಿ ಪದವಿಪೂರ್ವ ಬಾಲಕರ  ವಿದ್ಯಾರ್ಥಿ ನಿಲಯದ ಹಿರಿಯ ಪಾಲಕ ಎನ್‌.ವೆಂಕಟರಮಣಪ್ಪ ಅವರ ನಗರದಲ್ಲಿನ ಎರಡು ಮನೆಗಳು ಮತ್ತು ವಿದ್ಯಾರ್ಥಿ ನಿಲಯದಲ್ಲಿರುವ ಅವರ ಕಚೇರಿ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ಶುಕ್ರವಾರ ಏಕಕಾಲಕ್ಕೆ ದಾಳಿ ನಡೆಸಿದರು. ಮಹತ್ವದ ದಾಖಲೆಗಳನ್ನು ಸಂಗ್ರಹಿಸಿದರು.

ವೆಂಕಟರಮಣಪ್ಪ ಅವರಿಗೆ ಸೇರಿದ ಪ್ರಶಾಂತ್‌ ನಗರ ಮತ್ತು ಚಾಮರಾಜ ಪೇಟೆಯಲ್ಲಿರುವ ಮನೆಗಳ ಮೇಲೆ ಬೆಳಿಗ್ಗೆ 6 ಸುಮಾರಿಗೆ ದಾಳಿ ಮಾಡಿದ ಎಸಿಬಿ ಡಿವೈಎಸ್‌ಪಿ ರಾಮರತ್ನಕುಮಾರ್ ನೇತೃತ್ವದ ತಂಡದ ಅಧಿಕಾರಿಗಳು ಸಂಜೆ 5ರ ವರೆಗೆ ತೀವ್ರ ತಪಾಸಣೆ ನಡೆಸಿದರು. ಚಿನ್ನ, ಬೆಳ್ಳಿ, ಬ್ಯಾಂಕ್‌ ಪಾಸ್‌ಬುಕ್‌ಗಳು, ಚರ–ಸ್ಥಿರಾಸ್ತಿಗಳ ದಾಖಲೆ ಪತ್ರಗಳನ್ನು ವಶಕ್ಕೆ ಪಡೆದರು.

‘ವೆಂಕಟರಮಣಪ್ಪ ಅವರ ಮನೆಗಳಲ್ಲಿ ₹ 18.72 ಲಕ್ಷ ಮೌಲ್ಯದ ಗೃಹಪಯೋಗಿ ವಸ್ತುಗಳು, 3 ಕಾರುಗಳು, 5 ಬೈಕ್‌ಗಳು ಪತ್ತೆಯಾಗಿವೆ. 270 ಗ್ರಾಂ ಚಿನ್ನ, 1 ಕೆ.ಜಿ 500 ಗ್ರಾಂ ಬೆಳ್ಳಿ ವಸ್ತುಗಳು, ಚಾಮರಾಜಪೇಟೆಯಲ್ಲಿರುವ 1 ಮನೆ, ಪ್ರಶಾಂತ್ ನಗರದಲ್ಲಿ 2 ಮನೆಗಳು, ಕೆಳಗಿನತೋಟ ಪ್ರದೇಶದ ಸುಣ್ಣದ ಕಲ್ಲು ಬೀದಿಯಲ್ಲಿರುವ 3 ಮನೆಗಳ ದಾಖಲೆ ಪತ್ರಗಳ ಜತೆಗೆ ಪ್ರಶಾಂತ್ ನಗರ, ಚಾಮರಾಜಪೇಟೆ ಮನೆಗಳಲ್ಲಿರುವ ಲಾಕರ್‌ಗಳ ಕೀ ವಶಕ್ಕೆ ಪಡೆದಿದ್ದೇವೆ’ ಎಂದು ರಾಮರತ್ನಕುಮಾರ್ ತಿಳಿಸಿದರು.

‘ಶುಕ್ರವಾರ ವಶಕ್ಕೆ ಪಡೆದಿರುವ ಚಿನ್ನ, ಬೆಳ್ಳಿ, ಮಹತ್ವದ ದಾಖಲೆ ಪತ್ರಗಳನ್ನು ಪಟ್ಟಿ ಮಾಡಿ ನ್ಯಾಯಾಲಯಕ್ಕೆ ಸಲ್ಲಿಸಿದ್ದೇವೆ. ಲಾಕರ್‌ಗಳ ತಪಾಸಣೆ ಮಾಡಬೇಕಿದೆ. ವೆಂಕಟರಮಣಪ್ಪ 1984ರಲ್ಲಿ ಸರ್ಕಾರಿ ಸೇವೆಗೆ ಸೇರಿದ್ದಾರೆ. ಅವರ ಈವರೆಗಿನ ಸಂಪಾದನೆಯನ್ನು ಕೂಡ ಲೆಕ್ಕ ಹಾಕುತ್ತಿದ್ದೇವೆ. ಹೀಗಾಗಿ ಶನಿವಾರ ಅಕ್ರಮ ಸಂಪಾದನೆಯ ನಿಖರ ಮಾಹಿತಿ ದೊರೆಯಲಿದೆ’ ಎಂದು ಹೇಳಿದರು.

ಆಗ  ಮೂರಂಕಿ  ಸಂಬಳ,  ಈಗ  ಕೋಟ್ಯಧೀಶ!

‘ವೆಂಕಟರಮಣಪ್ಪ ಅವರು 1984ರಲ್ಲಿ ಸರ್ಕಾರಿ ಸೇವೆಗೆ ಸೇರಿದಾಗ ಅವರ ತಿಂಗಳ ಸಂಬಳ ಕೇವಲ ₹ 390! ಇಂದು ಅವರು ₹ 45 ಸಾವಿರ ವೇತನ ಪಡೆಯುತ್ತಿರಬಹುದು. ಅವರ ಈವರೆಗಿನ ಅಧಿಕೃತ ಆದಾಯವನ್ನು ಲೆಕ್ಕ ಹಾಕಿದರೆ ಅವರ ಬಳಿ ಶೇ 200 ಪಟ್ಟು ಅಧಿಕ ಅಕ್ರಮ ಸಂಪತ್ತು ಪತ್ತೆಯಾಗಿದೆ. ಆದಾಯಕ್ಕಿಂತ ಸುಮಾರು ₹ 2 ಕೋಟಿ ಅಧಿಕ ಅಕ್ರಮ ಆಸ್ತಿ ಸಂಪಾದಿಸಿದ್ದಾರೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಇಬ್ಬರು ಪತ್ನಿಯರು

‘ವೆಂಕಟರಮಣಪ್ಪ ಅವರಿಗೆ ಇಬ್ಬರು ಪತ್ನಿಯರು. ಆ ಇಬ್ಬರು ಕೂಡ ಸ್ವಂತ ಅಕ್ಕ–ತಂಗಿಯರು. ಹಿರಿಯ ಪತ್ನಿಗೆ ಪ್ರಶಾಂತ್ ನಗರದಲ್ಲಿ ಮತ್ತು ಎರಡನೆಯ ಪತ್ನಿಗೆ ಚಾಮರಾಜಪೇಟೆಯಲ್ಲಿ ಮನೆ ಕಟ್ಟಿಸಿಕೊಟ್ಟಿದ್ದಾರೆ. ಕೆಳಗಿನತೋಟ ಪ್ರದೇಶದ ಸುಣ್ಣಕಲ್ಲು ಬೀದಿಯಲ್ಲಿ 3 ಮನೆಗಳನ್ನು ಕಟ್ಟಿಸಿ ಬಾಡಿಗೆಗೆ ನೀಡಿದ್ದಾರೆ’ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದರು.

ದಾಳಿಯಲ್ಲಿ ವಶಪಡಿಸಿಕೊಂಡಿರುವ ವಸ್ತುಗಳ ವಿವರ

6 ಪತ್ತೆಯಾಗಿರುವ ಮನೆಗಳು

270ಗ್ರಾಂ ವಶಪಡಿಸಿಕೊಂಡ ಚಿನ್ನ

1.50 ಕೆ.ಜಿ ವಶಕ್ಕೆ ಪಡೆದ ಬೆಳ್ಳಿ ವಸ್ತುಗಳು

₹2ಕೋಟಿ ಅಂದಾಜು ಅಕ್ರಮ ಗಳಿಕೆಯ ಶಂಕೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry