ಪೆಟ್ರೋಲ್‌ ಬಂಕ್‌ ಬಂದ್‌: ಪರದಾಟ

7

ಪೆಟ್ರೋಲ್‌ ಬಂಕ್‌ ಬಂದ್‌: ಪರದಾಟ

Published:
Updated:
ಪೆಟ್ರೋಲ್‌ ಬಂಕ್‌ ಬಂದ್‌: ಪರದಾಟ

ಮಂಡ್ಯ: ನಿತ್ಯ ಮಧ್ಯರಾತ್ರಿ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆ ಪರಿಷ್ಕರಣೆ ವಿರೋಧಿಸಿ ಶುಕ್ರವಾರ ನಗರದಲ್ಲಿ ಪೆಟ್ರೋಲ್‌ ಬಂಕ್‌ ಮಾಲೀಕರು ಬಂಕ್‌ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು.

ಬೆಳಿಗ್ಗೆ 6 ಗಂಟೆಯಿಂದಲೂ ಬಂಕ್‌ಗಳಲ್ಲಿ ಇಂಧನ ಸಿಗದ ಕಾರಣ ವಾಹನ ಸವಾರರು ಪರದಾಡಿದರು. ಬಂಕ್‌ ಸುತ್ತಲೂ ಕಬ್ಬಿಣದ ಸರಳಿನ ಕಂಪೌಂಡ್‌ ನಿರ್ಮಿಸಿ ವಾಹನಗಳು ಬಂಕ್‌ಒಳಗೆ ಬಾರದಂತೆ ತಡೆಹಿಡಿದಿದ್ದರು. ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸದಾ ವಾಹನಗಳ ಸಾಲು ಇರುತ್ತಿದ್ದ ಪ್ರಮುಖ ಬಂಕ್‌ಗಳು ಜನರಿಲ್ಲದೆ ಬಿಕೋ ಎನ್ನುತ್ತಿದ್ದವು.

‘ಬೆಲೆ ಪರಿಷ್ಕರಣೆ ಕುರಿತು ನಮ್ಮದೇನೂ ತಕರಾರಿಲ್ಲ. ಆದರೆ ಮಧ್ಯರಾತ್ರಿಯಲ್ಲಿ ಬೆಲೆ ಬದಲಾಗುವ ಬಗ್ಗೆ ಸ್ವಯಂಚಾಲಿತ ಯಂತ್ರ ಅಳವಡಿಸಬೇಕು. ಹೆಚ್ಚು ವ್ಯವಹಾರ ನಡೆಸುವ ಬಂಕ್‌ಗಳಿಗಷ್ಟೇ ಅಳವಡಿಸಿದ್ದಾರೆ. ಯಂತ್ರಗಳನ್ನು ಎಲ್ಲಾ ಬಂಕ್‌ಗಳಿಗೂ ಅಳವಡಿಸಬೇಕು’ ಪೆಟ್ರೋಲ್‌ಬಂಕ್‌ ಮಾಲೀಕರ ಸಂಘದ ಖಜಾಂಚಿ ಅನಂತಕುಮಾರ್‌ ಹೇಳಿದರು.

ಖಾಸಗಿ ಬಂಕ್‌ ಮುಂದೆ ವಾಹನ ಸಾಲು:

ನಗರದ ಉಮ್ಮಡಹಳ್ಳಿ ಗೇಟ್‌ನಲ್ಲಿರುವ ಖಾಸಗಿ ರಿಲಾಯನ್ಸ್‌ ಪೆಟ್ರೋಲ್‌ ಬಂಕ್‌ ಶುಕ್ರವಾರ ಕಾರ್ಯನಿರ್ವಹಿಸಿತು. ಹೀಗಾಗಿ ಬೈಕ್‌ ಸವಾರರು ರಿಲಾಯನ್ಸ್‌ ಬಂಕ್‌ ಮುಂದೆ ಸಾಲುಗಟ್ಟಿ ನಿಂತಿದ್ದರು. ಮಧ್ಯಾಹ್ನ 3 ಗಂಟೆ ವೇಳೆಗೆ ರಿಲಾಯನ್‌್ಸ ಬಂಕ್‌ನಲ್ಲಿ ಪೆಟ್ರೋಲ್‌ ಖಾಲಿಯಾಯಿತು. ಸಂಜೆ ಐದು ಗಂಟೆಗೆ ಡೀಸೆಲ್‌ ಖಾಲಿಯಾಯಿತು. ಆದರೆ ಸಂಜೆ ಆರು ಗಂಟೆಗೆ ಎಲ್ಲ ಪೆಟ್ರೋಲ್‌ ಬಂಕ್‌ಗಳು ಇಂಧನ ವಿತರಿಸಿದ ನಂತರ ಗ್ರಾಹಕರು ನಿಟ್ಟುಸಿರುಬಿಟ್ಟರು.

ಖಾಸಗಿ ಬಂಕ್‌ ಕಾರ್ಯನಿರ್ವಹಣೆ

ಮದ್ದೂರು: ಪೆಟ್ರೊಲ್ ಬಂಕ್ ಮಾಲೀಕರ ಮುಷ್ಕರ ಹಿನ್ನೆಲೆಯಲ್ಲಿ ತಾಲ್ಲೂಕಿನಾದ್ಯಂತ ಇರುವ 23 ಪೆಟ್ರೋಲ್‌ಬಂಕ್‌ಗಳು ಮುಚ್ಚಿದ್ದವು. ಪಟ್ಟಣದಲ್ಲಿ ರಿಲಯನ್ಸ್, ಎಂಆರ್‌ಪಿಎಲ್ ಪೆಟ್ರೋಲ್ ಬಂಕ್‌ಗಳು ಮಾತ್ರ ಎಂದಿನಂತೆಯೇ ಕಾರ್ಯ ನಿರ್ವಹಿಸಿದವು.

ಆದ್ದರಿಂದ ಈ ಬಂಕ್‌ಗಳ ಮುಂದೆ ಸಾಲುಗಟ್ಟಿ ನಿಂತು ಜನರು ಪೆಟ್ರೋಲ್ ಪಡೆದದ್ದು ಕಂಡು ಬಂತು. ಮಧ್ಯಾಹ್ನದ ವೇಳೆಗೆ ಈ ಬಂಕ್‌ಗಳಲ್ಲಿ ಇಂಧನ ಖಾಲಿಯಾಯಿತು. ಸಂಜೆ 6 ಗಂಟೆ ಬಳಿಕ ಬಂಕ್‌ಗಳನ್ನು ತೆರೆದು ಮಾಲೀಕರು ವಹಿವಾಟು ನಡೆಸಿದರು. 

ಮಳವಳ್ಳಿ ವರದಿ: ಪೆಟ್ರೋಲ್ ಬಂಕ್ ದಿಢೀರ್ ಬಂದ್ ಮಾಡಿದ ಕಾರಣ ಶುಕ್ರವಾರ ವಾಹನ ಸವಾರರು ಪರದಾಡುವಂತಾಗಿತ್ತು. ಪೆಟ್ರೋಲ್ ಬಂಕ್ ಮಾರಾಟಗಾರರು ಕೆಲವು ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ದಿಢೀರ್ ಬಂದ್ ಮಾಡಿದರು. ಆದ್ದರಿಂದ ಸಾರ್ವಜನಿಕರು ಪೆಟ್ರೋಲ್ ಹಾಗೂ ಡೀಸೆಲ್‌ಗಾಗಿ ಅಲೆದಾಡಿದರು.

ನಾಗಮಂಗಲ ವರದಿ: ಪೆಟ್ರೋಲ್ ಹಾಗೂ ಡಿಸೇಲ್ ಬೆಲೆಯಲ್ಲಾಗುವ ಏರಿಳಿತವನ್ನು ನಿತ್ಯ ಪರಿಷ್ಕರಿಸಬೇಕೆಂಬ ಕೇಂದ್ರ ಸರ್ಕಾರದ ಆದೇಶವನ್ನು  ವಿರೋಧಿಸಿ ತಾಲ್ಲೂಕಿನಲ್ಲೂ ಪೆಟ್ರೋಲ್ ಬಂಕ್‌ಗಳು ಬಂದ್ ನಡೆಸಿದವು.

ಪೆಟ್ರೋಲ್ ಬಂಕ್ ಬಂದ್ ಬಗ್ಗೆ ಮಾಹಿತಿ ಇರದ ವಾಹನ ಸವಾರರು, ಬಂಕ್‌ಗಳಿಗೆ ಬಂದು ಪೆಟ್ರೋಲ್‌ಗಾಗಿ ಬೇಡಿಕೆ ಇಡುತ್ತಿದ್ದುದು ಕಂಡು ಬಂದಿತು. ಮೈಸೂರು ರಸ್ತೆಯ ಎಎಸ್‌ಆರ್ ಪೆಟ್ರೋಲ್ ಬಂಕ್‌ನಲ್ಲಿ ಮಾತ್ರ ಪೆಟ್ರೋಲ್ ವಿತರಿಸಿದ್ದರಿಂದ ವಾಹನಗಳ ಮಾಲೀಕರು ಆ ಬಂಕ್‌ನ ಮುಂದೆ ಸರತಿ ಸಾಲಿನಲ್ಲಿ ನಿಂತು ಇಂಧನವನ್ನು ಹಾಕಿಸಿ ಕೊಳ್ಳುತ್ತಿರುವ ದೃಶ್ಯ ಕಂಡು ಬಂತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry