ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

95 ಸಾವಿರ ಮಂದಿಗೆ ಸಿಗದ ಪದವಿ

Last Updated 17 ಜೂನ್ 2017, 5:48 IST
ಅಕ್ಷರ ಗಾತ್ರ

ಮೈಸೂರು: ಎರಡು ವರ್ಷಗಳ ಹಿಂದೆ ಮಾನ್ಯತೆ ಕಳೆದುಕೊಂಡಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು (ಕೆಎಸ್‌ಒಯು) 2017–18ನೇ ಶೈಕ್ಷಣಿಕ ಸಾಲಿನಿಂದ ವಿದ್ಯಾರ್ಥಿಗಳು ಇಲ್ಲದೆಯೇ ಮುಂದುವರಿಯಬೇಕಾದ ಇಕ್ಕಟ್ಟಿಗೆ ಸಿಲುಕಿಕೊಂಡಿದೆ.

ನಿಯಮ ಉಲ್ಲಂಘನೆ ಕಾರಣವೊಡ್ಡಿ 2015ನೇ ಜೂನ್‌ 16ರಂದು ವಿಶ್ವವಿದ್ಯಾಲಯ ಅನುದಾನ ಆಯೋಗವು (ಯುಜಿಸಿ) 2012–13ನೇ ಶೈಕ್ಷಣಿಕ ಸಾಲಿನಿಂದ ಮುಕ್ತ ವಿ.ವಿ ಮಾನ್ಯತೆ ರದ್ದುಪಡಿಸಿತ್ತು.

ಅಷ್ಟರಲ್ಲಾಗಲೇ ವಿವಿಧ ಕೋರ್ಸ್‌ಗಳಿಗೆ ಪ್ರವೇಶಾತಿ ಪಡೆದಿದ್ದ ಬಹುತೇಕ ವಿದ್ಯಾರ್ಥಿಗಳ ವ್ಯಾಸಂಗ ಅವಧಿ ಈಚೆಗೆ ಮುಗಿದಿದೆ. ಕೆಲವರು ಕೊನೆಯ ಸೆಮಿಸ್ಟರ್‌ನ ಪರೀಕ್ಷೆ ಬರೆಯಲು ಸಿದ್ಧತೆ ನಡೆಸುತ್ತಿದ್ದಾರೆ. 2015–16 ಹಾಗೂ 2016–17ನೇ ಶೈಕ್ಷಣಿಕ ಸಾಲಿನಲ್ಲಿ ಪ್ರವೇಶಾತಿ ನಡೆದಿರಲಿಲ್ಲ.

‘ಮಾನ್ಯತೆ ನವೀಕರಿಸದೆ ಇದ್ದರೆ ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಅಧಿಕೃತವಾಗಿ ವಿದ್ಯಾರ್ಥಿಗಳೇ ಇರುವುದಿಲ್ಲ. ಕೊನೆಯ ಸೆಮಿಸ್ಟರ್‌ನಲ್ಲಿ ವ್ಯಾಸಂಗ ಮಾಡುತ್ತಿರುವವರು, ಪುನರಾವರ್ತನೆ ವಿದ್ಯಾರ್ಥಿಗಳು ಮಾತ್ರ ಇದ್ದಾರೆ. ಹಿಂದಿನ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಕೆಲಸಗಳಲ್ಲಿ ಸಿಬ್ಬಂದಿ ತೊಡಗಿದ್ದಾರೆ. ಹೊಸದಾಗಿ ಪ್ರವೇಶಾತಿಗೆ ಅವಕಾಶ ಲಭಿಸದಿದ್ದರೆ ಮುಂದೆ ಆ ಕೆಲಸವೂ ಇರುವುದಿಲ್ಲ’ ಎಂದು ವಿ.ವಿ ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

‘ಯುಜಿಸಿ ವಿಧಿಸಿರುವ ಎಲ್ಲಾ ಮಾರ್ಗದರ್ಶನಗಳನ್ನು ಪಾಲಿಸಿದ್ದೇವೆ. ಅಗತ್ಯ ದಾಖಲೆಗಳನ್ನು ಒದಗಿಸಿದ್ದೇವೆ. ವಿ.ವಿ ಮಾನ್ಯತೆ ನವೀಕರಣಗೊಳಿಸುವುದು, ವ್ಯಾಸಂಗ ಮುಗಿಸಿರುವ ವಿದ್ಯಾರ್ಥಿಗಳಿಗೆ (ಇನ್‌ಹೌಸ್‌) ಪದವಿ ಪ್ರಮಾಣಪತ್ರ ನೀಡುವಂತೆ ಸಭೆಯಲ್ಲಿ ಕೋರಲಾಗುವುದು’ ಎಂದರು.

ಸ್ನಾತಕ ಹಾಗೂ ಸ್ನಾತಕೋತ್ತರ ಪದವಿ ಮುಗಿಸಿರುವ ಸುಮಾರು 95 ಸಾವಿರ ವಿದ್ಯಾರ್ಥಿಗಳು ಪದವಿ ಪ್ರಮಾಣಪತ್ರಕ್ಕಾಗಿ ಕಾಯುತ್ತಿದ್ದಾರೆ. ಯುಜಿಸಿ ಮಾನ್ಯತೆ ಲಭಿಸದಿದ್ದರೆ ಪದವಿ ಪಡೆದರೂ ಸಿಂಧುವಾಗುವುದಿಲ್ಲ ಎಂಬ ಆತಂಕ ಅವರಲ್ಲಿದೆ. 55 ಅಭ್ಯರ್ಥಿಗಳು ಪಿ.ಎಚ್‌ಡಿ ಸಂಶೋಧನೆಗೆ ನೋಂದಾಯಿಸಿ ಎರಡು ವರ್ಷಗಳು ಕಳೆದಿವೆ. ಅಲ್ಲದೆ, ಹೊರಭಾಗದ ಸುಮಾರು 2 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅನುಮತಿಗಾಗಿ ಕಾಯುತ್ತಿದ್ದಾರೆ.

2015ರಲ್ಲಿ ಮಾನ್ಯತೆ ರದ್ದಾಗಿದ್ದರೂ ದ್ವಿತೀಯ ಮತ್ತು ತೃತೀಯ ಬಿ.ಎ, ಬಿ.ಕಾಂ ಮತ್ತು ಅಂತಿಮ ಎಂ.ಎ, ಎಂ.ಕಾಂ ಕೋರ್ಸ್‌ಗಳಿಗೆ ಪ್ರವೇಶ ಪ್ರಕ್ರಿಯೆ ಮುಂದುವರಿಸುವಂತೆ ರಾಜ್ಯ ಉನ್ನತ ಶಿಕ್ಷಣ ಇಲಾಖೆ ಅನುಮತಿ ನೀಡಿತ್ತು. ಆದರೆ, ಯಾವುದೇ ಕೋರ್ಸ್‌ಗಳಿಗೆ ಹೊಸದಾಗಿ ಪ್ರವೇಶ ನೀಡಬಾರದು ಎಂದು ಷರತ್ತು ವಿಧಿಸಿತ್ತು.

‘ವಿ.ವಿಗೆ ಹಿಂದೆ ಲಭಿಸಿದ ಅನುದಾನವನ್ನೇ ಸಿಬ್ಬಂದಿ ವೇತನ ಹಾಗೂ ಇತರ ಕಾರ್ಯಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಅದು ಖಾಲಿಯಾದರೆ ಮುಂದಿನ ದಿನಗಳಲ್ಲಿ ಹಣಕಾಸಿನ ಸಮಸ್ಯೆ ತಲೆದೋರಲಿದೆ. ಮಾನ್ಯತೆ ಇಲ್ಲದಿರುವ ಕಾರಣ ಈಗ ಯಾವುದೇ ಅನುದಾನ ಬರುತ್ತಿಲ್ಲ’ ಎಂದು ಕುಲಸಚಿವ ಡಾ.ಕೆ.ಜಿ. ಚಂದ್ರಶೇಖರ್ ಹೇಳಿದರು.

ನವದೆಹಲಿಯಲ್ಲಿ ಸಭೆ: ವಿ.ವಿ ಮಾನ್ಯತೆ ನವೀಕರಣ ಸಂಬಂಧ ಜೂನ್ 21ರಂದು ನವದೆಹಲಿಯಲ್ಲಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಎಸ್.ಕೆ. ಶರ್ಮ ನೇತೃತ್ವದಲ್ಲಿ ಸಭೆ ನಡೆಯಲಿದೆ.

* * 

2017–18ನೇ ಶೈಕ್ಷಣಿಕ ಸಾಲಿಗಾದರೂ ಮಾನ್ಯತೆ ಪಡೆಯಲು ಪ್ರಯತ್ನ ನಡೆಸುತ್ತಿದ್ದೇವೆ. ಜೂನ್‌ 21ರಂದು ನಡೆಯಲಿರುವ ಸಭೆಯಲ್ಲಿ ಯುಜಿಸಿಗೆ ಮನವಿ ಮಾಡುತ್ತೇವೆ
ಪ್ರೊ.ಡಿ.ಶಿವಲಿಂಗಯ್ಯ
ಕೆಎಸ್‌ಒಯು, ಕುಲಪತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT