ಪ್ರತಿನಿತ್ಯ ಬೆಲೆ ಪರಿಷ್ಕರಣೆಗೆ ವಿರೋಧ

7

ಪ್ರತಿನಿತ್ಯ ಬೆಲೆ ಪರಿಷ್ಕರಣೆಗೆ ವಿರೋಧ

Published:
Updated:
ಪ್ರತಿನಿತ್ಯ ಬೆಲೆ ಪರಿಷ್ಕರಣೆಗೆ ವಿರೋಧ

ಚಾಮರಾಜನಗರ: ಪ್ರತಿನಿತ್ಯ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಯನ್ನು ಪರಿಷ್ಕರಿಸಲು ಮುಂದಾಗಿರುವ ಭಾರತೀಯ ತೈಲ ನಿಗಮದ (ಐಒಸಿ) ಕ್ರಮವನ್ನು ವಿರೋಧಿಸಿ ಶುಕ್ರವಾರ ಜಿಲ್ಲೆಯಾದ್ಯಂತ ಪೆಟ್ರೋಲ್‌ ಬಂಕ್‌ಗಳನ್ನು ಬಂದ್‌ ಮಾಡುವ ಮೂಲಕ ಬಂಕ್‌ ಮಾಲೀಕರು ಮುಷ್ಕರ ನಡೆಸಿದರು.

ಇಂಡಿಯನ್‌ ಆಯಿಲ್‌, ಭಾರತ್‌ ಪೆಟ್ರೋಲಿಯಂ, ಹಿಂದೂಸ್ತಾನ್‌ ಪೆಟ್ರೋಲಿಯಂ ಕಾರ್ಪೊರೇಷನ್‌ಗಳು ತೈಲ ಪೂರೈಸುವ ಜಿಲ್ಲೆಯ ಎಲ್ಲ ಬಂಕ್‌ಗಳನ್ನು ಮಧ್ಯರಾತ್ರಿ ಯಿಂದಲೇ ಮುಚ್ಚಲಾಗಿತ್ತು. ಈ ಬಗ್ಗೆ ಸರಿಯಾದ ಮಾಹಿತಿ ಯಿಲ್ಲದೆ ನಗರ ಮತ್ತು ಗ್ರಾಮೀಣ ಪ್ರದೇಶದ ಜನರು ಪರದಾಡುವಂತಾಯಿತು.

ಬಂದ್‌ ಪರಿಣಾಮ ಖಾಸಗಿ ಒಡೆತನದ ಪೆಟ್ರೋಲ್‌ ಬಂಕ್‌ಗಳು ಮತ್ತು ಗ್ರಾಮೀಣ ಪ್ರದೇಶದಲ್ಲಿ ಚಿಲ್ಲರೆ ವ್ಯಾಪಾರ ಮಾಡುವ ಅಂಗಡಿಗಳಲ್ಲಿ ಪೆಟ್ರೋಲ್‌ ಖರೀದಿಯ ಭರಾಟೆ ಜೋರಾಗಿತ್ತು. ಕೆಲವೆಡೆ ಪೆಟ್ರೋಲ್‌ ಸಂಗ್ರಹಣೆಯಿಲ್ಲದೆ ಜನರು ತೊಂದರೆ ಅನುಭವಿಸಿದರು. ಹೀಗಾಗಿ ಸ್ವಂತ ವಾಹನ ಹೊಂದಿದವರೂ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಅವಲಂಬಿಸಬೇಕಾಯಿತು.

ದೇಶಾದ್ಯಂತ ಶುಕ್ರವಾರ ಅನುಷ್ಠಾನಕ್ಕೆ ಬಂದಿರುವ ದರ ಪರಿಷ್ಕರಣೆಯಿಂದ 15 ದಿನಕ್ಕೊಮ್ಮೆ ಬದಲಾಗುತ್ತಿದ್ದ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಪ್ರತಿನಿತ್ಯ ಏರಿಳಿತವಾಗಲಿದೆ. ಪ್ರತಿದಿನ ಇಂಧನಗಳ ಬೆಲೆ ಕೆಲ ಪೈಸೆಗಳಷ್ಟು ಬದಲಾಗುತ್ತಿರುತ್ತದೆ. ಇದರಿಂದ ಮಧ್ಯರಾತ್ರಿಯೇ ಹೊಸ ದರವನ್ನು ಅಳವಡಿಸಲು ಪೆಟ್ರೋಲ್‌ ಪಂಪ್‌ಗಳಲ್ಲಿ ಹೆಚ್ಚುವರಿ ಸಿಬ್ಬಂದಿ ನೇಮಿಸಬೇಕಾಗುತ್ತದೆ ಎಂದು ಡೀಲರ್‌ಗಳು ಆಕ್ಷೇಪ ವ್ಯಕ್ತಪಡಿಸಿದರು.

‘ಪೆಟ್ರೋಲ್‌ ಮತ್ತು ಡೀಸೆಲ್‌ ದರ ಪ್ರತಿನಿತ್ಯ ಬದಲಾಗುವುದರಿಂದ ಗ್ರಾಹಕರಿಗೆ ಯಾವುದೇ ಅನುಕೂಲ ಆಗುವುದಿಲ್ಲ. 10–20 ಪೈಸೆ ಏರಿಕೆ ಅಥವಾ ಇಳಿಕೆ ಆಗುತ್ತದೆ. ಈ ಬಗ್ಗೆ ಗ್ರಾಹಕರು ಅಷ್ಟೇನೂ ಗಮನ ಹರಿಸುವುದಿಲ್ಲ’ ಎಂದು ನಗರದ ಬಂಕ್‌ ಮಾಲೀಕರು ತಿಳಿಸಿದರು.

‘ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರ ಪರಿಷ್ಕರಿ ಸುವ ಭಾರತೀಯ ತೈಲ ನಿಗಮದ ಕ್ರಮ ಸರಿಯಲ್ಲ. ಇದರಿಂದ ಬಂಕ್ ಮಾಲೀಕರು ಸಂಕಷ್ಟ ಎದುರಿಸಬೇಕಾ ಗುತ್ತದೆ. ಗ್ರಾಮೀಣ ಭಾಗದ ಪೆಟ್ರೋಲ್ ಬಂಕ್ ಮಾಲೀಕರಿಗೆ ಇದರಿಂದ ಹೆಚ್ಚು ಸಮಸ್ಯೆಯಾಗುತ್ತದೆ’ ಎಂದು ಇಂಡಿಯನ್‌ ಆಯಿಲ್‌ ಪೆಟ್ರೋಲ್‌ ಬಂಕ್‌ನ ಮಾಲೀಕ ರವಿಶಂಕರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರತಿದಿನ ದರ ಪರಿಷ್ಕರಿಸುವಾಗ ಏರುಪೇರಾದರೆ ಬಂಕ್ ಮಾಲೀಕರಿಗೆ ₹ 5ಲಕ್ಷ ದಂಡ ಹಾಗೂ 60 ದಿನ ಪೆಟ್ರೋಲ್‌ ಮತ್ತು ಡೀಸೆಲ್‌ ಮಾರಾಟಕ್ಕೆ ನಿಷೇಧ, ಎರಡನೇ ಬಾರಿಗೆ ತಪ್ಪು ಪುನರಾವರ್ತನೆಯಾದರೆ ಪರವಾನಗಿಯನ್ನೇ ರದ್ದು ಮಾಡುವ ಕಾನೂನು ಜಾರಿ ಮಾಡಲಾಗಿದೆ. ಇದು ಸರಿಯಲ್ಲ’ ಎಂದರು.

* * 

ಇಂದು ಬಂಕ್‌ಗಳ ಬಂದ್‌ ಎಂದು ತಿಳಿದಿರಲಿಲ್ಲ. ಮದುವೆ ಸಮಾರಂಭಕ್ಕೆ ಬಂದಿದ್ದೆ. ದ್ವಿಚಕ್ರ ವಾಹನ ದಲ್ಲಿ ಪೆಟ್ರೋಲ್‌ ಖಾಲಿಯಾಗಿದೆ. ಎಲ್ಲ ಕಡೆಯೂ ಬಂದ್‌ ಎಂದು ಹಾಕಿದ್ದಾರೆ. ತುಂಬಾ ತೊಂದರೆಯಾಗಿದೆ

ಶೇಖರ್‌

ಗ್ರಾಹಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry