ಮುಂದಿನ ಚುನಾವಣೆಯಲ್ಲಿ ಹೊಂದಾಣಿಕೆ ಇಲ್ಲ

7

ಮುಂದಿನ ಚುನಾವಣೆಯಲ್ಲಿ ಹೊಂದಾಣಿಕೆ ಇಲ್ಲ

Published:
Updated:
ಮುಂದಿನ ಚುನಾವಣೆಯಲ್ಲಿ ಹೊಂದಾಣಿಕೆ ಇಲ್ಲ

ಹಾಸನ: ವಿಧಾನ ಪರಿಷತ್‌ ಸಭಾಪತಿ ಆಯ್ಕೆ ವಿಚಾರದಲ್ಲಿ ಮಾತ್ರ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳಲಾಗಿದ್ದು, ಮುಂದಿನ ಚುನಾವಣೆಯಲ್ಲಿ ಯಾವ ಪಕ್ಷದ ಜೊತೆಯೂ ಹೊಂದಾಣಿಕೆ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಸ್ಪಷ್ಟಪಡಿಸಿದರು.

ರೈತರ ಸಾಲ ಮನ್ನಾ ಮಾಡುವುದು ರಾಜ್ಯ ಸರ್ಕಾರದ ಕರ್ತವ್ಯ.  ಅವರು ಮಾಡದಿದ್ದರೆ ಬಿಜೆಪಿ ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಸಾಲ ಮನ್ನಾ  ಮಾಡಲಾಗುವುದು. ಸಹಕಾರಿ ಸಂಘದ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿ ಬೆಂಗಳೂರಿನಲ್ಲಿ ಜುಲೈ 7, 8, 9 ರಂದು ಸತ್ಯಾಗ್ರಹ ಹಾಗೂ 10 ರಂದು 4 ಲಕ್ಷ ರೈತರೊಂದಿಗೆ ವಿಧಾನಸೌಧ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಭ್ರಷ್ಟಾಚಾರದಲ್ಲಿ ಕರ್ನಾಟಕ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ ಎಂಬುದನ್ನು ಸೆಂಟರ್ ಫಾರ್‌ ಮಿಡಿಯಾ ಸ್ಟಡೀಸ್‌ ಸಂಸ್ಥೆ ವರದಿ ನೀಡಿದೆ. ರೈತರ ಆತ್ಮಹತ್ಯೆ ವಿಚಾರದಲ್ಲಿ ರಾಜ್ಯ ಮೂರನೇ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ ಐದು ತಿಂಗಳಲ್ಲಿ 39 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ನೀರಾವರಿ ಯೋಜನೆಗೆ ಸರ್ಕಾರ ಆದ್ಯತೆ ನೀಡುತ್ತಿಲ್ಲ. 4 ವರ್ಷದಲ್ಲಿ ₹ 32,323 ಕೋಟಿ ಬೃಹತ್‌ ಮತ್ತು ಸಣ್ಣ ನೀರಾವರಿ ಕಾಮಗಾರಿಗೆ ಖರ್ಚು ಮಾಡಲಾಗಿದೆ. ಕೇಂದ್ರ ಸರ್ಕಾರ ₹ 1,13,475 ಕೋಟಿ ರಾಜ್ಯಕ್ಕೆ ನೀಡಿದರೆ, ರಾಜ್ಯ ಸರ್ಕಾರ ₹ 90 ಸಾವಿರ ಕೋಟಿ ಸಾಲ ಮಾಡಿದೆ.

ಬೆಳೆಗಾರರಿಗೆ ದೃಢೀಕೃತ ಆಲೂಗೆಡ್ಡೆ ಬೀಜ ಕೊಡುವಲ್ಲಿ ಸರ್ಕಾರ ವಿಫಲವಾಗಿದೆ. ಬಿತ್ತನೆ ಬೀಜ ವಿತರಣೆಯಲ್ಲಿ ಅವ್ಯವಹಾರ ನಡೆದಿದ್ದು, ಸರ್ಕಾರ ಶಾಮೀಲಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಆರೋಪಿಸಿದರು.ಗೋಷ್ಠಿಯಲ್ಲಿ ಶಾಸಕ ಸಿ.ಟಿ.ರವಿ, ಮುಖಂಡರಾದ ತೇಜಸ್ವಿನಿ ರಮೇಶ್‌, ನಾಗೇಂದ್ರ, ರವಿಕುಮಾರ್‌, ಕರೀಗೌಡ, ಗುರುದೇವ್‌, ಯೋಗಾ ರಮೇಶ್‌ ಇದ್ದರು.

ಏತ ನೀರಾವರಿ ಯೋಜನೆ ಅಸಮರ್ಪಕ: ಬೇಸರ

ಹಳೇಬೀಡು: ‘ನಾನು ಮುಖ್ಯಮಂತ್ರಿಯಾಗಿದ್ದಾಗ ಯಗಚಿ ಏತ ನೀರಾವರಿ ಯೋಜನೆಗೆ ಹಣ ಮಂಜೂರು ಮಾಡಿದ್ದೆ. ಅಧಿಕಾರದಿಂದ ಕೆಳಗಿಳಿದ ನಂತರ ಆ ಯೋಜನೆ ಸರಿಯಾಗಿ ಮುಂದುವರಿಯಲಿಲ್ಲ’ ಎಂಬ ದೂರು ಕೇಳಿ ಬರುತ್ತಿರುವುದು ನೋವಿನ ಸಂಗತಿ ಎಂದು ಯಡಿಯೂರಪ್ಪ ಹೇಳಿದರು.

ಹಳೇಬೀಡು, ಮಾದಿಹಳ್ಳಿ ಹೋಬಳಿಯ ಬರ ಅಧ್ಯಯನದ ಸಂದರ್ಭದಲ್ಲಿ ಶುಕ್ರವಾರ ಜಿ.ಸಾಣೇನಹಳ್ಳಿ ಗ್ರಾಮದಲ್ಲಿ ಹಿಂದುಳಿದ ಕುರುಬ ಜನಾಂಗದವರ ಮನೆಯಲ್ಲಿ ಮಧ್ಯಾಹ್ನದ ಊಟ ಸೇವಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಬರಗಾಲದಿಂದ ರೈತವರ್ಗ ತತ್ತರಿಸಿದೆ. ಕೆರೆಕಟ್ಟೆ ಬರಿದಾಗಿದ್ದು ಕುಡಿಯುವ ನೀರಿಗೆ ಜನತೆ ಪರದಾಡುತ್ತಿದ್ದಾರೆ. ನೀರಾವರಿ ಯೋಜನೆ ಸಮರ್ಪಕವಾಗಿ ಅನುಷ್ಠಾನವಾಗಿದ್ದರೆ ಕುಡಿಯುವ ನೀರು ದೊರಕುತ್ತಿತ್ತು ಎಂದು ಯಡಿಯೂರಪ್ಪ ತಿಳಿಸಿದರು.

‘ಇಲ್ಲಿ ಉಣಬಡಿಸಿದ ರಾಗಿ ರೊಟ್ಟಿ, ಕಾಳಿನ ಪಲ್ಯ ನಾನು ದಿನ ನಿತ್ಯ ಸೇವಿಸುವ ಆಹಾರ. ಆದರೂ, ಇಲ್ಲಿ ತಯಾರಿಸಿದ ಅಡುಗೆಯ ರುಚಿ  ಸ್ವಾದಿಷ್ಟವಾಗಿತ್ತು’ ಎಂದು ಸುದ್ದಿಗಾರರ ಪ್ರಶ್ನೆಗೆ ಅವರು ಉತ್ತರಿಸಿದರು.

‘ಮಾಜಿ ಮುಖ್ಯಮಂತ್ರಿಯೊಬ್ಬರು ನಮ್ಮ ಮನೆಗೆ ಬಂದು ಊಟ ಮಾಡಿದ್ದರಿಂದ ಆನಂದವಾಯಿತು. ಸಿಹಿಯೊಂದಿಗೆ ಗ್ರಾಮೀಣ ಸೊಗಡಿನ ರಾಗಿ ರೊಟ್ಟಿ, ಹುರುಳಿ ಕಟ್ಟು ಹಾಗೂ ಕಾಳು–ಕಡಿಯ ಪಲ್ಯ ಮಾಡಿಸಿದ್ದೆವು’ ಎಂದು ಕುಟುಂಬ ಮುಖ್ಯಸ್ಥ ಸೋಮೇಗೌಡ ತಿಳಿಸಿದರು.

ಶಾಸಕ ಸಿ.ಟಿ.ರವಿ, ಬಿಜೆಪಿ ಜಿಲ್ಲಾ ಮುಖಂಡ ಯೋಗಾ ರಮೇಶ್‌, ಬಿಜೆಪಿ ಬೇಲೂರು ಮಂಡಲ ಅಧ್ಯಕ್ಷ ಕೊರಟಗೆರೆ ಪ್ರಕಾಶ್‌, ಮುಖಂಡರಾದ ಅಡಗೂರು ಬಸವರಾಜು, ಗಂಗೂರು ಶಿವಕುಮಾರ್‌, ಎ.ಎಸ್‌.ಆನಂದ್‌ ಇದ್ದರು.

ಅಕ್ಕಿರೊಟ್ಟಿ, ಉಪ್ಪಿಟ್ಟು ತಿಂದ ಯಡಿಯೂರಪ್ಪ

ಹಾಸನ: ‘ಬಿಜೆಪಿ ನಡಿಗೆ ದಲಿತರ ಮನೆಗೆ’ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ ಶುಕ್ರವಾರ ಪ್ರವಾಸ ಕೈಗೊಂಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ದಲಿತರ ಕಾಲೊನಿಗೆ ಭೇಟಿ ನೀಡಿ ಸ್ಥಳಿಯರೊಂದಿಗೆ ಸಮಾಲೋಚನೆ ನಡೆಸಿದರು. 

ಬಳಿಕ ಅರಸೀಕೆರೆ ತಾಲ್ಲೂಕಿನ ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಕೆರೆ, ಕಟ್ಟೆಗಳನ್ನು ವೀಕ್ಷಿಸಿ, ದಲಿತರ ಮನೆಗಳಲ್ಲಿ ತಿಂಡಿ, ಊಟ ಸೇವಿಸಿದರು. ತಾಲ್ಲೂಕಿನ ತಟ್ಟೆಕೆರೆ ಗ್ರಾಮವನ್ನು ತಳಿರು, ತೋರಣಗಳಿಂದ ಸಿಂಗಾರ ಮಾಡಲಾಗಿತ್ತು. ಎಲ್ಲೆಲ್ಲೂ ಬಿಜೆಪಿ ಬಾವುಟಗಳು ರಾರಾಜಿಸುತ್ತಿದ್ದವು. ಯಡಿಯೂರಪ್ಪಗೆ ಮಹಿಳೆಯರು ಆರತಿ ಎತ್ತಿ, ಪೂರ್ಣಕುಂಭ ಸ್ವಾಗತ ಕೋರಿದರು.

ತಮಟೆ, ಡೋಲು ಬಾರಿಸುವ ಮೂಲಕ ಮೆರವಣಿಗೆಯಲ್ಲಿ ಲಕ್ಷ್ಮೀ ದೇವಾಲಯದವರೆಗೂ ಕರೆದುಕೊಂಡು ಹೋಗಲಾಯಿತು.  ದಲಿತ ಮುಖಂಡ ಪ್ರಕಾಶ್‌, ರುಕ್ಮಿಣಿ  ದಂಪತಿ ಮನೆಯಲ್ಲಿ ಆತಿಥ್ಯ ಸ್ವೀಕರಿಸಿದರು. ರಾಗಿ, ಅಕ್ಕಿ ರೊಟ್ಟಿ, ಚಟ್ನಿ, ಮೊಸರು ಮತ್ತು ಅವರೆಕಾಳು ಉಪ್ಪಿಟ್ಟು ಸೇವಿಸಿದರು. 

ಇದೇ ವೇಳೆ ದಲಿತ ಸಂಘಟನೆಗಳು ಮತ್ತು ಹಸಿರು ಸೇನೆ ಕಾರ್ಯಕರ್ತರು ಯಡಿಯೂರಪ್ಪ ಅವರಿಗೆ ಕಪ್ಪು ಪಟ್ಟಿ ಪ್ರದರ್ಶಿಸಿ ಘೋಷಣೆ ಕೂಗಿದರು. ಬಳಿಕ ಸಭೆ ಉದ್ದೇಶಿಸಿ ಮಾತನಾಡಿದ ಯಡಿಯೂರಪ್ಪ, “ದಲಿತರು ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕು. ಮಕ್ಕಳಿಗೆ ಶಿಕ್ಷಣ ಕೊಡಿಸಿ, ಯಾರ ಮುಂದೆಯೂ ಕೈಯೊಡ್ಡದಂತೆ ಮಾಡಿ ಎಂದು ಕಿವಿಮಾತು ಹೇಳಿದರು.

ಬೆಳೆ ನಷ್ಟದಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು ಎಂದು ಆಗ್ರಹಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ್‌ ಅವರು ಬಿಜೆಪಿಗೆ ಸೇರ್ಪಡೆಯಾದರು. ಕಾರ್ಯಕ್ರಮದಲ್ಲಿ ಮುಖಂಡರಾದ ಪರ್ವತಯ್ಯ, ಪ್ರೀತಂ ಗೌಡ, ಯೋಗಾ ರಮೇಶ್‌,  ಮಲ್ಲಿಗೆವಾಡ ದೇವಪ್ಪ ಇದ್ದರು.

ಸರ್ಕಾರದ ಕುಂಭಕರ್ಣ ನಿದ್ದೆ

ಅರಸೀಕೆರೆ: ಬರ ಪರಿಹಾರ ಕಾಮಗಾರಿ ನಡೆಸುವ ಬದಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆ ಸ್‌ ಸರ್ಕಾರ ಕುಂಭಕರ್ಣ ನಿದ್ದೆಯಲ್ಲಿದೆ ಎಂದು ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಟೀಕಿಸಿದರು.

ನಗರದ ಪಿ.ಪಿ. ವೃತ್ತದಲ್ಲಿ  ಶುಕ್ರವಾರ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು. ನಾಲ್ಕು ವರ್ಷಗಳಿಂದ ಗಾಢ ನಿದ್ರೆಯಲ್ಲಿದ್ದ ಸರ್ಕಾರ ಚುನಾವಣೆ ಸಮೀಪಿಸುತ್ತಿದ್ದಂತೆ ಜನರ ಗಮನ ಸೆಳೆಯಲು ಅಭಿವೃದ್ಧಿಯ ನಾಟಕವಾಡುತ್ತಿದೆ ಎಂದರು.

ಕೇಂದ್ರ ಸರ್ಕಾರ ಉದ್ಯೋಗ ಖಾತರಿ ಯೋಜನೆಗೆ ಹಣ ಬಿಡುಗಡೆ ಮಾಡಿದ್ದರೂ ರಾಜ್ಯ ಸರ್ಕಾರ ಸಮರ್ಪಕವಾಗಿ ಅನುಷ್ಠಾನಗೊಳಿಸುತ್ತಿಲ್ಲ. ಇದರ ನೇರ ಪರಿಣಾಮ ರೈತ ಕೂಲಿಕಾರರ ಮೇಲೆ ಬೀದ್ದಿದೆ ಎಂದು ಆರೋಪಿಸಿದರು.

ಮಾಜಿ ಶಾಸಕರಾದ ಗುರುದೇವ್‌, ಎ.ಎಸ್‌.ಬಸವರಾಜ್‌, ಕೆ.ಪಿ.ಪ್ರಭುಕುಮಾರ್‌, ಡಿ.ಆರ್‌.ಕರೀಗೌಡ, ಮುಖಂಡರಾದ ನವಿಲೆ ಅಣ್ಣಪ್ಪ, ಜಿ.ವಿ.ಟಿ ಬಸವರಾಜ್‌, ಬಿಜೆಪಿ ಜಿಲ್ಲಾ ವಕ್ತಾರ ಎನ್‌.ಡಿ.ಪ್ರಸಾದ್‌, ಕೆ.ವಿ.ಎನ್‌.ಶಿವು, ರಾಜ್‌ಕುಮಾರ್‌, ಡಿ.ಆರ್‌.ಆಕಾಶ್‌, ಹಿರಿಯಪ್ಪ, ದುಮ್ಮೇನಹಳ್ಳಿ ಗಂಗಾಧರ್‌, ಮೈಲನಹಳ್ಳಿ ರಾಜಣ್ಣ, ಶಿವನ್‌ ರಾಜ್‌ ಇದ್ದರು.

* *

ಲೋಕಾಯುಕ್ತ ಸಂಸ್ಥೆಯನ್ನು ಶಕ್ತಿ ಇಲ್ಲದಂತೆ ಮಾಡಲಾಗಿದೆ. ಎಸಿಬಿ ರಚಿಸಿ  ಸರ್ಕಾರ ಬೇಕಾದವರಿಗೆ ರಕ್ಷಣೆ, ಬೇಡವಾದವರಿಗೆ ಕಿರುಕುಳ ನೀಡುತ್ತಿದೆ

ಬಿ.ಎಸ್‌.ಯಡಿಯೂರಪ್ಪ

ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry