ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕಿತ್ಸಾ ವೆಚ್ಚ ನಿಗದಿ ಖಂಡಿಸಿ ಆಸ್ಪತ್ರೆ ಬಂದ್

Last Updated 17 ಜೂನ್ 2017, 6:50 IST
ಅಕ್ಷರ ಗಾತ್ರ

ಬೀರೂರು: ಖಾಸಗಿ ಆಸ್ಪತ್ರೆಗಳು ನೀಡುವ ವೈದ್ಯಕೀಯ ಚಿಕಿತ್ಸಾ ಶುಲ್ಕ ವನ್ನು ಸರ್ಕಾರ ನಿಗದಿ ಪಡಿಸಲು ಮುಂದಾಗಿರುವುದು, ಜನರ ದೂರು ಆಲಿಸಲು ಸಮಿತಿ ರಚನೆ ಮಾಡುವುದು ಸೇರಿದಂತೆ ವೈದ್ಯಕೀಯ ಸಂಸ್ಥೆಗಳನ್ನು ನಿಯಂತ್ರಿಸುವ ಉದ್ದೇಶದ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ವಿಧೇಯಕ ಜಾರಿ ವಿರೋಧಿಸಿ ಶುಕ್ರವಾರ ಬೀರೂರಿನ ಖಾಸಗಿ ನರ್ಸಿಂಗ್‌ ಹೋಮ್‌ ಗಳು ಮತ್ತು ಕ್ಲಿನಿಕ್‌ಗಳು ಬಾಗಿಲು ಮುಚ್ಚಿ ಬೆಂಬಲ ವ್ಯಕ್ತಪಡಿಸಿದವು.

ಖಾಸಗಿ ಆಸ್ಪತ್ರೆಗಳ ವೈದ್ಯರು, ಕ್ಲಿನಿಕ್‌ ಮತ್ತು ಡಯಾಗ್ನಸ್ಟಿಕ್ ಸೆಂಟರ್, ಲ್ಯಾಬೊ ರೇಟರಿ ಸೇರಿದಂತೆ ವೈದ್ಯಕೀಯ ಸಂಸ್ಥೆಗಳು ಕರೆನೀಡಿದ್ದ ವೈದ್ಯಕೀಯ ಸೇವೆ ಸ್ಥಗಿತ ಆಂದೋಲನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಹಿರಿಯ ವೈದ್ಯ ಡಾ. ಎಂ.ಡಿ.ಟೀಕಪ್ಪ, ಸರ್ಕಾರ ಖಾಸಗಿ ಆಸ್ಪತ್ರೆಗಳ ಸೇವೆಯ ಮೇಲೆ ನಿಯಂತ್ರಣ ಹೇರುವ ಭರದಲ್ಲಿ ಸಾರ್ವಜನಿಕರಿಗೆ ಖಾಸಗಿ ವೈದ್ಯಕೀಯ ಸೇವೆಯೇ ದೊರೆಯದಂತಹ ವಾತಾವ ರಣ ಸೃಷ್ಟಿಸಹೊರಟಿದೆ.

ತಿದ್ದುಪಡಿ ವಿಧೇಯಕ ಜಾರಿಗೆ ಬಂದರೆ ಹೋಬಳಿ, ತಾಲ್ಲೂಕು ಮಟ್ಟದ ಖಾಸಗಿ ಆಸ್ಪತ್ರೆಗ ಳನ್ನು ಮುಚ್ಚಬೇಕಾಗುತ್ತದೆ. ಬಾಡಿಗೆ ಕಟ್ಟಡದಲ್ಲಿ ಚಿಕಿತ್ಸಾ ಸಲಕರಣೆಗಳನ್ನು ಹೊಂದಿಸಿಕೊಂಡು, ಸಿಬ್ಬಂದಿಗೆ ವೇತನ ನೀಡಿ,  ತೆರಿಗೆಗಳನ್ನು ಭರಿಸಿ ಸೇವೆ ನೀಡುತ್ತಿರುವ ಖಾಸಗಿ ಆಸ್ಪತ್ರೆಗಳ ಮೇಲೆ ನಿಯಂತ್ರಣ ಹೇರಲು ಮುಂದಾಗುವುದು ತರವಲ್ಲ, ಅಲ್ಲದೆ ಸರ್ಕಾರ ತನ್ನ ಯಶಸ್ವಿನಿಯಂತಹ ಆರೋಗ್ಯ ಕಾರ್ಯಕ್ರಮಗಳಿಗೂ ಖಾಸಗಿ ಆಸ್ಪತ್ರೆಯ ಸೇವೆ ಬಳಸಿಕೊಂಡಿವೆ.

ಆದರೆ ಅದನ್ನು ಸರ್ಕಾರ ಸಮರ್ಪಕವಾಗಿ ನಿರ್ವಹಿಸದೇ, ಈಗಾಗಲೇ ಹಲವು ಖಾಸಗಿ ಆಸ್ಪತ್ರೆಗಳು ಸೇವೆ ಮುಂದುವರಿಸಲಾರದಂತಹ ಸಂಕಷ್ಟದಲ್ಲಿವೆ, ವಿನಾಕಾರಣ ಖಾಸಗಿ ಆರೋಗ್ಯಸೇವೆಯ ಮೇಲೆ ಗದಾಪ್ರಹಾರ ನಡೆಸುವ ಸರ್ಕಾರದ ಧೋರಣೆ ಖಂಡಿಸಿ ವೈದ್ಯಕೀಯ ಸಂಘ ಕರೆನೀಡಿರುವ ಈ ಹೋರಾಟಕ್ಕೆ ಸಂಪೂರ್ಣ ಸಹಕಾರ ನೀಡುತ್ತಿರುವುದಾಗಿ ತಿಳಿಸಿದರು.

ಅತ್ಯಂತ ಕಡಿಮೆ ಸೇವಾಶುಲ್ಕದಲ್ಲಿ ಗ್ರಾಮೀಣ ಮತ್ತು ಹೋಬಳಿ ಜನರಿಗೆ ಚಿಕಿತ್ಸೆ ನೀಡುತ್ತಿರುವ ಖಾಸಗಿ ವೈದ್ಯರಾದ ಡಾ.ಸಜ್ಜನರ್,ಡಾ ಅನಂತಪದ್ಮನಾಭ್, ಡಾ,ಜಗದೀಶ್, ಡಾ.ಶ್ರೀನಿವಾಸ ಮೂರ್ತಿ, ಡಾ.ಶ್ರೀರಾಮ ಮತ್ತಿತರರು  ಅಭಿಪ್ರಾಯಕ್ಕೆ ಸಹಮತ ವ್ಯಕ್ತಪಡಿಸಿ  ಸರ್ಕಾರ ಸರಿಯಾದ ರೀತಿಯಲ್ಲಿ ಖಾಸಗಿ ವೈದ್ಯಕೀಯ ಸೇವೆ ಬಳಸಿಕೊಳ್ಳದಿದ್ದರೆ ಹೋರಾಟ ಮುಂದುವರಿಸುವ ರಾಜ್ಯ ಸಂಘದ ನಿರ್ಧಾರಕ್ಕೆ ಬದ್ಧರಾಗಿರುವು ದಾಗಿ ತಿಳಿಸಿದರು. ಹೊರರೋಗಿಗಳಾಗಿ ಚಿಕಿತ್ಸೆ ಪಡೆಯಲು ಬಂದ ಸಾರ್ವಜನಿಕರು ಕ್ಲಿನಿಕ್‌ಗಳು ಬಾಗಿಲು ಹಾಕಿದ್ದರಿಂದ ಪರಿತಪಿಸುವಂತಹ ಸ್ಥಿತಿ ನಿರ್ಮಾಣ ಆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT