ಮಳೆ ಕೊರತೆ: ದಿಕ್ಕುಗಾಣದ ಅನ್ನದಾತ

7

ಮಳೆ ಕೊರತೆ: ದಿಕ್ಕುಗಾಣದ ಅನ್ನದಾತ

Published:
Updated:
ಮಳೆ ಕೊರತೆ: ದಿಕ್ಕುಗಾಣದ ಅನ್ನದಾತ

ರೋಣ: ಸತತ ನಾಲ್ಕು ವರ್ಷದಿಂದ ಉಂಟಾಗಿರುವ ಬರಗಾಲದಿಂದ ಜನ–ಜಾನುವಾರುಗಳು ತೊಂದರೆಗೀಡಾಗಿವೆ. ನೀರು, ಆಹಾರ, ಕೆಲಸಗಳ ಕೊರತೆ ಉಂಟಾಗಿದೆ.

ಈ ವರ್ಷವಾದರೂ ವರುಣದೇವ ಕೃಪೆ ತೋರಬಹುದು ಎಂಬ ನಿರೀಕ್ಷೆ ಇದ್ದರೂ ಅದೂ ಹುಸಿಯಾಗಿದೆ. ನಾಲ್ಕು ದಿನಗಳ ಹಿಂದೆ ಅಲ್ಪ–ಸ್ವಲ್ಪ ಕಾಣಿಸಿ ಕೊಂಡು ಮಳೆರಾಯ ಈಗ ಮರೆ ಆಗಿದ್ದು, ರೈತರಲ್ಲಿ ಆತಂಕ ಹೆಚ್ಚಿಸಿದೆ.

ಜೂನ್ ತಿಂಗಳದ ಮೊದಲನೆಯ ವಾರ ದಲ್ಲಿ ಬಿತ್ತನೆ ಮಾಡಬೇಕು ಎಂಬ ಆಶಾ ಭಾವನೆಯಿಂದ ತಾಲ್ಲೂಕಿನ ರೈತರು ತಿಂಗಳಿನಿಂದ ಹೊಲಗಳನ್ನು ಬಿತ್ತನೆಗಾಗಿ ಹದಗೊಳಿಸಿ ಕಾಯುತ್ತಿದ್ದಾರೆ.

ರೈತರು ಅಶ್ವಿನಿ ಮಳೆ ಪ್ರಾರಂಭವಾದ ಕೂಡಲೇ ಭೂಮಿ ಹದಗೊಳಿಸುವ ಕಾರ್ಯದಲ್ಲಿ ತಲ್ಲಿನರಾಗಿ, ಜಮೀನು ಗಳನ್ನು ಎರಡು– ಮೂರು ಬಾರಿ ಹರಗುವ ಕಾರ್ಯ ಪೂರೈಸಿದ್ದಾರೆ. ಸದ್ಯ ಉತ್ತಮ ಮಳೆ ಸುರಿದರೆ ಹೆಸರು, ಶೇಂಗಾ, ಮುಂಗಾರು ಜೋಳ, ಸೂರ್ಯಕಾಂತಿ, ಈರುಳ್ಳಿ, ಮೆಣಸಿನಕಾಯಿ, ಬಿಟಿ ಹತ್ತಿ, ಮೆಕ್ಕೆಜೋಳ ಮತ್ತಿತರ ಬೀಜ ಬಿತ್ತಲು ಕಾಯುತ್ತಿದ್ದಾರೆ.

ಬಿತ್ತನೆ ಕ್ಷೇತ್ರದ ಗುರಿ: ತಾಲ್ಲೂಕಿನಲ್ಲಿ ಒಟ್ಟು 90,235 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲು ರೈತರು ಸಿದ್ಧತೆ ಮಾಡಿ ಕೊಂಡಿದ್ದಾರೆ. ಹೆಸರು 36,000 ಹೆಕ್ಟೇರ್, ಬಿ.ಟಿ ಹತ್ತಿ 13,000 ಹೆಕ್ಟೇರ್, ಮೆಕ್ಕೆ ಜೋಳ 19,000 ಹೆಕ್ಟೇರ್, ಶೇಂಗಾ 18,000 ಹೆಕ್ಟೇರ್, ಎಣ್ಣೆಕಾಳುಗಳಾದ ಎಳ್ಳು, ಸೂರ್ಯಕಾಂತಿ, ಗುರೆಳ್ಳುಗಳನ್ನು 2,000 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿಯನ್ನು ಹೊಂದಲಾಗಿದೆ.

ತೊಗರಿ, ಅವರೆ, ಸಾವಿ, ನವಣಿ ಇತರೆ ಸೇರಿ 1300 ಹೆಕ್ಟೇರ್, ಹಾರಕ 100 ಹೆಕ್ಟೇರ್, ಉದ್ದು 50 ಹೆಕ್ಟೇರ್ ಸೇರಿ ನಾನಾ ರೀತಿಯ ವಾಣಿಜ್ಯ ಬೆಳೆಗಳಾದ ಕಬ್ಬು, ಸೀಡ್ಸ್, ಬಿಟಿ ಕಾಟನ್ ಒಟ್ಟು 1,400 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗಾಗಿ ರೈತರು ಸಿದ್ಧರಾಗಿದ್ದಾರೆ.

ಮೇ 4ನೇ ವಾರವೇ ಬೀಜ ಸಂಗ್ರಹ: ಕೃಷಿ ಇಲಾಖೆ ರೈತರಿಗೆ ಅಗತ್ಯವಾಗುವ ಬೀಜ ಪೂರೈಸುವ ಗುರುತರ ಜವಾಬ್ದಾರಿಯನ್ನು ಹೊತ್ತಿದ್ದು ಇದಕ್ಕಾಗಿ ಸರಕಾರದ ಪರ ವಾನಗಿ ಹೊಂದಿರುವ ವಿವಿಧ ಕಂಪೆನಿ ಹಾಗೂ ಬೀಜ ನಿಗಮಗಳ ಸಹಕಾರದಲ್ಲಿ ಪಟ್ಟಣದ ರೈತ ಸಂಪರ್ಕ ಕೇಂದ್ರ ಮತ್ತು ಹೊಳೆಆಲೂರ, ನರೆಗಲ್, ಗಜೇಂದ್ರ ಗಡ ಹೋಬಳಿ ಕೇಂದ್ರಗಳಲ್ಲಿ, ಹೆಚ್ಚುವರಿ ಕೇಂದ್ರಗಳಲ್ಲೂ ಮೇ 4ನೇ ವಾರದಲ್ಲಿ ಬೀಜಗಳನ್ನು ಸಂಗ್ರಹಿದೆ.

ಶೀಘ್ರ ವ್ಯವಸ್ಥೆ ಕಲ್ಪಿಸಲು ಆಗ್ರಹ: ಗೊಬ್ಬರ ಮತ್ತು ಬೀಜಗಳ ಸಂಗ್ರಹ ಸಾಕಷ್ಟಿದ್ದು, ರೈತರು ಆತಂಕ ಪಡಬೇಕಿಲ್ಲ ಎಂದು ಕೃಷಿ ಇಲಾಖೆಯವರು ಹೇಳುತ್ತಿದ್ದರೂ ಸಕಾಲ ದಲ್ಲಿ ಉತ್ತಮ ಮಳೆಯಾದರೆ ಬೀಜ, ಗೊಬ್ಬರದ ಅಭಾವ ಉಂಟಾಗುತ್ತದೆ. ಹೀಗಾಗದಂತೆ ಕೃಷಿ ಇಲಾಖೆ ಸೂಕ್ತವಾದ ಮುನ್ನೆಚ್ಚರಿಕೆ ವಹಿಸಬೇಕು ಎಂದು ಪಟ್ಟಣದ ಯುವ ರೈತ ಜಯಪ್ರಕಾಶ ಬಳಗಾನೂರ ಹೇಳುತ್ತಾರೆ.

* * 

ತಾಲ್ಲೂಕಿನಲ್ಲಿ ಬೀಜ, ಗೊಬ್ಬರದ ಅಭಾವವಾಗದಂತೆ ನೋಡಿಕೊಳ್ಳುತ್ತೇವೆ. ರೈತರು ಬೀಜಗಳು ಸಿಗುವುದಿಲ್ಲವೆಂದು

ಭಯ ಪಡುವ ಅಗತ್ಯವಿಲ್ಲ

ಸಿದ್ದೇಶ ಕೊಡಿಹಳ್ಳಿ

ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry