ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರಮಜೀವಿಗಳ ಒಗ್ಗಟ್ಟು; ದೇವಿಕೆರೆಗೆ ಸುಭದ್ರ ಕಟ್ಟು

Last Updated 17 ಜೂನ್ 2017, 8:37 IST
ಅಕ್ಷರ ಗಾತ್ರ

ಶಿರಸಿ: ಶ್ರಮಿಕ ಜೀವಿಗಳ ಸಾಂಘಿಕ ಬಲದಿಂದ ಕೇವಲ ಒಂಬತ್ತು ದಿನಗಳಲ್ಲಿ ಕೆರೆಯ ಸುರಕ್ಷಾ ಗೋಡೆ ನಿರ್ಮಾಣ ವಾದ ಫಲವಾಗಿ ನಗರದ ಹೃದಯ ಭಾಗದಲ್ಲಿರುವ ದೇವಿಕೆರೆ ಜೋರು ಮಳೆಗಾಲ ಆರಂಭವಾಗುವ ಪೂರ್ವ ದಲ್ಲಿ ಸುಸಜ್ಜಿತಗೊಂಡು ಬೃಹತ್ ಜಲಪಾತ್ರೆ ಯಾಗಿ ರೂಪುಗೊಂಡಿದೆ.

ಕೆರೆ ಕಾಯಕಕ್ಕೆ ಕೈಜೋಡಿಸಿದ ಕೆನರಾ ಬಾರ್ ಬೆಂಡಿಂಗ್ ಅಸೋಸಿಯೇಷನ್ ಅಧ್ಯಕ್ಷ ವೆಂಕಟೇಶ ನಾಯ್ಕ ಹಾಗೂ ಜಲಮೂಲ ಸಂರಕ್ಷಣೆಯ ಕಾರ್ಯ ಮಾಡುತ್ತಿರುವ ಶಿರಸಿ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ ಅವರನ್ನು ನಗರಸಭೆ ವತಿಯಿಂದ ಸನ್ಮಾನಿಸಲಾಯಿತು.

ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಅರುಣಾ ವೆರ್ಣೇಕರ, ಸದಸ್ಯರು, ಪೌರಾಯುಕ್ತ ಮಹೇಂದ್ರ ಕುಮಾರ ಅವರು ಜಲ ಸಂರಕ್ಷಣೆಗೆ ಹೆಗಲುಕೊಟ್ಟ ಇವರಿಬ್ಬರನ್ನು ಸನ್ಮಾನಿಸಿ ದರು. ವೆಂಕಟೇಶ ನಾಯ್ಕ ಮಾತನಾಡಿ ‘ಕೆನರಾ ಬಾರ್‌ ಬೆಂಡಿಂಗ್ ಮತ್ತು ಸೆಂಟರಿಂಗ್ ಅಸೋಸಿಯೇಷನ್ ಒಳ್ಳೆಯ ಕೆಲಸ ಮಾಡಲು ರಚಿಸಿಕೊಂಡ ಸಂಘಟನೆಯಾಗಿದೆ. ನಾವೆಲ್ಲ ಒಟ್ಟಾಗಿ ದೇವಿಕೆರೆಯ ಸುರಕ್ಷಾ ಗೋಡೆ ನಿರ್ಮಾಣ ಮಾಡಿರುವ ಬಗ್ಗೆ ಹೆಮ್ಮೆಯಿದೆ’ ಎಂದರು.

‘ನಮ್ಮ ಸಂಘದಲ್ಲಿ ಸದಸ್ಯರು ನಿತ್ಯ ದುಡಿದು ಹೊತ್ತಿನ ಅನ್ನ ಉಣ್ಣುವವರು. ಹೀಗಾಗಿ ಸಂಘ ಸದಸ್ಯರ ಬೆನ್ನೆಲುಬಾಗಿ ನಿಂತಿದೆ. ಕಟ್ಟಡ ನಿರ್ಮಾಣದ ವೇಳೆ ಬಿದ್ದು ಪೆಟ್ಟಾದರೆ ಅಂತಹ ಸದಸ್ಯರ ಆಸ್ಪತ್ರೆ ವೆಚ್ಚದ ಶೇ 80ರಷ್ಟನ್ನು ಸಂಘ ಭರಿಸುತ್ತದೆ. ಸದಸ್ಯರ ಪತ್ನಿಯರು ಹೆರಿಗೆಯಾದರೆ ತಕ್ಷಣದ ಖರ್ಚಿಗೆ ₹ 1500 ನೆರವು ನೀಡಲಾಗುತ್ತದೆ. ಪ್ರತಿ ವರ್ಷ ಅಂಗನವಾಡಿ ಗಳಿಗೆ ಬೇಂಚ್‌ಗಳನ್ನು ನೀಡ ಲಾಗುತ್ತಿದೆ’ ಎಂದರು.

ಶ್ರೀನಿವಾಸ ಹೆಬ್ಬಾರ ಮಾತನಾಡಿ ‘ಸಾರ್ವಜನಿಕರು ನೀಡಿದ ದೇಣಿಗೆ ಹಣದಿಂದ ನಗರದ ಕೆರೆಗಳನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ. ಪ್ರಚಾರ ಕ್ಕಿಂತ ಕೆಲಸ ಮುಖ್ಯ ಎಂಬ ಧ್ಯೇಯದೊಂದಿಗೆ ಕಾರ್ಯಪಡೆಯ ಎಲ್ಲ ಸದಸ್ಯರು ಕೆಲಸ ಮಾಡುತ್ತಿದ್ದಾರೆ’ ಎಂದರು.

ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ ಮಾತನಾಡಿ ‘ದೇವಿಕೆರೆ ಅಭಿವೃದ್ಧಿ ಮಾಡುವ ಉದ್ದೇಶದಿಂದ ಜಿಲ್ಲಾ ಉಸ್ತುವಾರಿ ಸಚಿವರಿಗೆ ಪಟ್ಟು ಹಿಡಿದ ಪರಿಣಾಮ ಪ್ರವಾಸೋದ್ಯಮ ಇಲಾಖೆಯಿಂದ ₹ 2.5 ಕೋಟಿ ಅನುದಾನ ತರಲು ಸಾಧ್ಯವಾಯಿತು’ ಎಂದರು. ನಗರಸಭೆ ಸದಸ್ಯ ಅರುಣ ಕೋಡ್ಕಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸದಸ್ಯ ಅರುಣ ಪ್ರಭು ಕಾರ್ಯಕ್ರಮ ನಿರೂಪಿಸಿದರು.

100 ಸದಸ್ಯರ ಶ್ರಮ
ನಗರಸಭೆಯ ಮೀಸಲಿಟ್ಟಿದ್ದ ₹ 30 ಲಕ್ಷ ಅನುದಾನದಲ್ಲಿ ದೇವಿಕೆರೆ ಹೂಳೆತ್ತುವ ಕಾಮಗಾರಿ ನಡೆಸಲಾಗಿತ್ತು. ಕಾಮಗಾರಿಯ ವೇಳೆ ಕೆರೆಯ ಪಿಚ್ಚಿಂಗ್ ನಿರ್ಮಾಣ ಮಾಡಲು ಹೂಳಿನ ಕಾಲು ಭಾಗ ಮಣ್ಣನ್ನು ಏರಿಯ ಮೇಲೆ ಹಾಕಲಾಗಿತ್ತು.

ಪ್ರವಾಸೋದ್ಯಮ ಇಲಾಖೆಯ ಅನುದಾನದಲ್ಲಿ ಮಂಜೂರು ಆಗಿದ್ದ ಪಿಚ್ಚಿಂಗ್, ಸುರಕ್ಷಾ ಗೋಡೆ ನಿರ್ಮಾಣ ಗುತ್ತಿಗೆ ಪಡೆದಿದ್ದ ಕರ್ನಾಟಕ ಮೂಲ ಸೌಕರ್ಯ ಅಭಿವೃದ್ಧಿ ನಿಗಮವು ಕಾಮಗಾರಿಯನ್ನು ವಿಳಂಬವಾಗಿ ಪ್ರಾರಂಭಿಸಿದ್ದರಿಂದ ಮಳೆಗಾಲದಲ್ಲಿ ಏರಿಯ ಮಣ್ಣು ಪುನಃ ಕೆರೆಯೊಳಗೆ ಸೇರುವ ಆತಂಕ ಎದುರಾಗಿತ್ತು.

ಈ ಸಂದರ್ಭದಲ್ಲಿ ವಿಶೇಷ ಮುತುವರ್ಜಿ ವಹಿಸಿದ ನಗರಸಭೆ ಸದಸ್ಯ ಶ್ರೀಕಾಂತ ತಾರೀಬಾಗಿಲು ಅವರು ಕೆನರಾ ಬಾರ್ ಬೆಂಡಿಂಗ್ ಅಸೋಸಿಯೇಷನ್ ಸದಸ್ಯರ ಜೊತೆ ಮಾತುಕತೆ ನಡೆಸಿ ದೇವಿಕೆರೆ ಕೆಲಸಕ್ಕೆ ಬರುವಂತೆ ವಿನಂತಿಸಿದರು. ಸಂಘದ 100ಕ್ಕೂ ಅಧಿಕ ಸದಸ್ಯರು ಐದು ತಂಡಗಳಲ್ಲಿ ಹಗಲು ರಾತ್ರಿ ಕೆಲಸ ಮಾಡಿದ ಪರಿಣಾಮ ಕೇವಲ ಒಂಬತ್ತು ದಿನಗಳಲ್ಲಿ ಕಾಮಗಾರಿ ಪೂರ್ಣಗೊಂಡಿದೆ.

* * 

ಜನರೆಲ್ಲ ಸೇರಿ ಆನೆಹೊಂಡದ ಮೂಲಕ ಜಲ ಆಂದೋಲನ ಪ್ರಾರಂಭಿಸಿದಾಗ ನಗರಸಭೆ ಸದಸ್ಯರು ಒಕ್ಕೊರಲಿನಿಂದ ದೇವಿಕೆರೆ ಅಭಿವೃದ್ಧಿಗೆ ಸಮ್ಮತಿ ಸೂಚಿಸಿದರು. ಇದರಿಂದ ಕೆರೆ ಕೆಲಸ ಶೀಘ್ರ ಪೂರ್ಣಗೊಂಡಿತು
ಮಹೇಂದ್ರಕುಮಾರ
ಪೌರಾಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT