ಸಾಲು ಹಳ್ಳಿಗಳ ದಾರಿಯಲ್ಲಿ...

7

ಸಾಲು ಹಳ್ಳಿಗಳ ದಾರಿಯಲ್ಲಿ...

Published:
Updated:
ಸಾಲು ಹಳ್ಳಿಗಳ ದಾರಿಯಲ್ಲಿ...

ನು ಬಹಳಷ್ಟು ಬಾರಿ ಪ್ರವಾಸ ಮಾಡಿದ್ದೇನೆ... ಆದರೆ ಅದೆಲ್ಲಕ್ಕಿಂತ ವಿಭಿನ್ನವಾಗಿತ್ತು ಇತ್ತೀಚೆಗಿನ ಕೇರಳ ಪ್ರವಾಸ – ಹೊಸ ಸ್ನೇಹಿತರ ಜೊತೆ. ಪ್ರವಾಸದ ಸಲುವಾಗಿಯೇ ಮಾಡಿಕೊಂಡಂಥ ಸ್ನೇಹಿತರು..

ಅವರೆಲ್ಲ ಈ ಮುಂಚೆ ಹಲವು ಬಾರಿ ಈ ರೀತಿಯ ಪ್ರವಾಸ ಮಾಡಿದ್ದಾರೆ.. ‘ಈ ರೀತಿ’ ಅಂದ್ರೆ, ಏನೂ ಖರ್ಚಿಲ್ಲದೆ, ನಿಶ್ಚಿತ ಯೋಜನೆ ಇಲ್ಲದೆ ಮಾಡುವ ಪ್ರವಾಸ. ಹೋಗೋ ಮುಂಚೆ ಚಂದನಾ ಕೇಳಿದ್ಲು ‘ನಾವು ಟೆಂಟ್‌ಗಳಲ್ಲಿ ಉಳ್ಕೋಬೇಕು, ಪ್ರತಿ ನಿತ್ಯ ಸ್ನಾನದ ಗ್ಯಾರಂಟಿ ಇಲ್ಲ, ಊಟ ಸಮಯಕ್ಕೆ ಸರಿಯಾಗಿ ಸಿಗ್ದೆ ಇರ್ಬಹುದು, ಸಾರ್ವಜನಿಕ ಸಾರಿಗೆಯನ್ನೇ ಉಪಯೋಗಿಸ್ಬೇಕು, ನೀವು ನಟಿ.. ನಿಮಗೆ ಇದಕ್ಕೆಲ್ಲ ಅಡ್ಜಸ್ಟ್ ಆಗಕ್ಕೆ ಆಗುತ್ತಾ’ ಅಂತ. ನನಗೆ ನನ್ನ ಎನ್‌.ಸಿ.ಸಿ. ದಿನಗಳು ಜ್ಞಾಪಕಕ್ಕೆ ಬಂದ್ವು. ‘ಓಹೋ, ಎಲ್ಲದಕ್ಕೂ ನಾನು ಸೈ’ ಎಂದು ಸಿದ್ಧಳಾದೆ.

ಏಳು ದಿನಗಳ ಪ್ರವಾಸ. ನಾಲ್ಕು ಜನ. ನಾನು, ಚಂದನಾ, ಸುನಿಲ್, ಪವನ್.

ಪ್ರವಾಸದ ಮೊದಲ ಹಂತವಾಗಿ ಟ್ರೇನ್‌ನಲ್ಲಿ ಅಲೆಪ್ಪಿ ತಲುಪಿದೆವು. ಅಲ್ಲಿ ಆಗಲೇ ರೂಮ್ ವ್ಯವಸ್ಥೆ ಆಗಿತ್ತು.. ಯೂತ್‌ ಹಾಸ್ಟೆಲ್‌ ತರಹದ ಜಾಗ. ಹೊರಗೆ ಜಾಗ ಇದ್ದಿದ್ದರಿಂದ ಅಲ್ಲೇ ಟೆಂಟ್ ಹಾಕಿದ್ವಿ.

(ಘಟ್ಟದ ದಾರಿಯಲ್ಲಿ ಕೆಂಪು ಬಸ್ಸಿನ ಕಿಟಕಿಯಿಂದ ಗಾಳಿಗೆ ಮುಖವೊಡ್ಡುವ ಖುಷಿಯೇ ಬೇರೆ)

ಒಂದು ರೂಮ್ ಇಟ್ಕೊಂಡು, ಅದರಲ್ಲಿಯೇ ಎಲ್ಲರೂ ಸ್ನಾನ ಮಾಡಿದ್ದು, ಲಗೇಜ್ ಇಟ್ಟಿದ್ದು, ತಯಾರಾಗಿದ್ದು ಎಲ್ಲ...

ಅಲೆಪ್ಪಿ ಹೌಸ್‌ಬೋಟ್‌ಗಳಿಗೆ ಪ್ರಸಿದ್ಧ. ಆದರೆ ನಾವು ಸರ್ಕಾರಿ ಫೆರ್ರಿಯಲ್ಲಿ ಪ್ರವಾಸ ಮಾಡಿದೆವು. ಯಾವುದೋ ಒಂದು ಹಳ್ಳಿ ಹತ್ರ ಇಳಿದು, ಅಲ್ಲಿಂದ ಮುಂದಕ್ಕೆ ನಡೆದುಕೊಂಡು ಹೊರಟೆವು.

ಅದು ಮಾವಿನ ಹಣ್ಣಿನ ಕಾಲ.. ಮರದಿಂದ ಮಾವಿನ ಕಾಯಿ ಕಿತ್ತು ತಿನ್ನೋ ಮಜಾನೇ ಬೇರೆ. ಅದು ದುಡ್ಡು ಕೊಟ್ಟು ತಿನ್ನೋದ್ರಲ್ಲಿ ಸಿಗೋಲ್ಲ. ಒಬ್ಬರ ಮರದಿಂದ ಕಾಯಿ ಕಿತ್ತು, ಅವರ ಮನೆಯಲ್ಲೇ ಉಪ್ಪು ಖಾರ ಇಸ್ಕೊಂಡು ನೀರಿನ ತೀರದಲ್ಲಿ ಮರದ ದಿಮ್ಮಿಯ ಮೇಲೆ ಕೂತು ಚಪ್ಪರಿಸಿಕೊಂಡು ತಿಂದೆವು..

ಜಲದ ದಾರಿಯ ಗುಂಟ ಹಳ್ಳಿಗಳ ಸಾಲು

ಮುಂದೆ ಸಾಲು ಸಾಲು ಹಳ್ಳಿಗಳು. ಎಲ್ಲಿ ಒಂದು ಹಳ್ಳಿ ಮುಗಿಯುತ್ತೆ, ಎಲ್ಲಿ ಮತ್ತೊಂದು ಶುರು ಆಗುತ್ತೆ ಗೊತ್ತಾಗಲ್ಲ. ಹರಿಯುತ್ತಿದ್ದ ನೀರಿನ ಹಾಗಿತ್ತು ಹಳ್ಳಿಗಳ ಸಾಲು...

ಇಲ್ಲಿ ನಾವು ಹೇಗೆ ದಿನ ನಿತ್ಯದ ಕೆಲಸಗಳಿಗೆ ಗಾಡಿಗಳಲ್ಲಿ ಪ್ರಯಾಣ ಮಾಡ್ತೀವೋ, ಅಲ್ಲಿ ಹಾಗೆ ದೋಣಿಗಳನ್ನು ಉಪಯೋಗಿಸ್ತಾರೆ.. ಎಲ್ಲರ ಮನೆಯಲ್ಲೂ ಒಂದು ದೋಣಿ... ನಮ್ಮಲ್ಲಿ ಬಸ್‌ಸ್ಟಾಪ್‌ಗಳು ಇರುವ ಹಾಗೆ ಅಲ್ಲಿ ಬೋಟ್ ಸ್ಟಾಪ್! ನಮ್ಮಲ್ಲಿ ನಡೆದು ರೋಡ್ ಕ್ರಾಸ್ ಮಾಡ್ತೀವಿ. ಅಲ್ಲಿ ಅದಕ್ಕೆ ಅಂತಾನೇ ಕೆಲವು ದೋಣಿಗಳು ಮೀಸಲು. ಐದು ರೂಪಾಯಿ ದರದಲ್ಲಿ ಅವನು ಈ ಕಡೆಯಿಂದ ಆ ಕಡೆಗೆ ಆ ಕಡೆಯಿಂದ ಈ ಕಡೆಗೆ ಜನರನ್ನು ಸಾಗಿಸ್ತಾನೇ ಇದ್ದ. ದಾಟಲು ಅರ್ಧ ನಿಮಿಷ ಸಾಕು. ಆದ್ರೆ ಸುಮಾರು ಹತ್ತು ನಿಮಿಷಗಳು ಕಾಯ್ಬೇಕು. 

ನಾನು ಒಬ್ಬರ ಜೊತೆ ಮಾತಾಡುತ್ತಾ, ‘ಮಕ್ಕಳೆಲ್ಲ ವಿದ್ಯಾಭ್ಯಾಸಕ್ಕೆ ಯಾವ ಊರಿಗೆ ಹೋಗ್ತಾರೆ’ ಅಂತ ಕೇಳಿದೆ. ಅವರಿಗೆ ನನ್ನ ಪ್ರಶ್ನೆಯಿಂದ ಕೋಪ ಬಂದಂತೆ ಕಾಣಿಸಿತು. ‘ನೀವೆಲ್ಲ ಏನ್ ಅನ್ಕೊಂಡ್ಬಿಟ್ಟಿದ್ದೀರ ಬ್ಯಾಕ್ ವಾಟರ್ಸ್ ಅಂದ್ರೆ? ಇಲ್ಲಿ ಏನೂ ಇಲ್ಲ ಅಂತಾನ? ಇಲ್ಲೇ ಶಾಲೆಗಳಿವೆ.. ಇಲ್ಲೇ ಓದುತ್ತಾರೆ ನಮ್ಮ್ ಮಕ್ಳು!’

ನಮ್ಮಲ್ಲಿ ಸ್ಕೂಲ್ ಬಸ್ ಇರುವ ಹಾಗೆ ಅಲ್ಲಿ ಸ್ಕೂಲ್ ಬೋಟ್! ಅಲ್ಲಿ ಎಲ್ಲವೂ ಜಲಮಯ. ಆದ್ರೆ ಕುಡಿಯೋ ನೀರಿನ ಅಭಾವ! ನಡೆದು ಹೋಗುತ್ತಾ ದಣಿದಿದ್ದರಿಂದ, ಒಂದು ಮನೆಯಲ್ಲಿ ನೀರು ಕೇಳಿದೆವು. ಅರ್ಧ ಬಾಟಲ್ ತುಂಬಿಸಿ ಕೊಟ್ರು. ಆಮೇಲೆ ಗೊತ್ತಾಯ್ತು ಅಲ್ಲಿ ನೀರಿನ ಸಮಸ್ಯೆ ಇದೆ ಅಂತ. ಈ ಮಧ್ಯೆ ಒಂದು ಮನೆಯವರು ಬ್ಯಾಡ್ಮಿಂಟನ್ ಆಡ್ತಾ ಇದ್ರು. ನಾವು ಹೋಗಿ, ಅವರ ಕೈಯಿಂದ ರಾಕೆಟ್‌ ಕಸಿದು ಒಂದೆರಡು ಆಟ ಆಡಿದ್ವಿ. ಕೊನೆಗೆ ಬಿಸಿಲು ತಡೆಯಲಾರದೆ ಅಲ್ಲಿಂದ ಹೊರಟಿದ್ದಾಯ್ತು.

(ಚೆಂಗನಶೇರಿಯಲ್ಲಿ ಆತಿಥ್ಯ ನೀಡಿದ ಕುಟುಂಬದೊಂದಿಗೆ...)

ಅಷ್ಟೊತ್ತಿಗೆ ಹೊಟ್ಟೆ ತಾಳ ಹಾಕಕ್ಕೆ ಶುರು ಮಾಡ್ತು. ಯಾವ ಹೋಟೆಲೂ ಇರ್ಲಿಲ್ಲ  ಅಲ್ಲಿ. ಎಲ್ಲೋ ದೂರದಲ್ಲಿ ಒಂದು ದೇವಸ್ಥಾನವಿತ್ತು. ಸ್ಪೀಕರ್‌ನಲ್ಲಿ ಜೋರು ಪ್ರಾರ್ಥನೆ ಪ್ರವಚನ. ‘ಅಲ್ಲಿ ಊಟ ಹಾಕ್ತಾರಾ’ ಅಂತ ಕೇಳಿದ್ದಕ್ಕೆ ‘ಹೂಂ’ ಅಂದ್ರು ಜನ. ಅದೇ ಸದ್ದನ್ನು ಹಿಂಬಾಲಿಸಿ ಹೋದ್ವಿ. ಕೊನೆಗೂ ಸಿಕ್ತು... ಅಲ್ಲಿ ಎಲ್ಲ ಹಳ್ಳಿಗಳಿಂದ ಬಂದ ಜನ ಊಟಕ್ಕೆ ಕಾಯ್ತಿದ್ರು. ನಾವು ಅವರ ಮಧ್ಯೆ ವಿದೇಶಿಯರಂತೆ ಕಾಣ್ತಿದ್ವಿ. ಭರ್ಜರಿ ಊಟ. ಧಾರಾಳವಾಗಿ ಬಡಿಸಿದ್ರು. ನನಗೆ ಅತಿ ಪ್ರಿಯವಾದ ಅವಿಯಲ್ ಕೂಡ ಇತ್ತು. ಚೆನ್ನಾಗಿ ಹೊಟ್ಟೆ ಹಸಿದಿತ್ತು. ಹೊಟ್ಟೆ ತುಂಬಾ ತಿಂದ್ವಿ. ನಂತರ ಮಕ್ಕಳ ಜೊತೆ ಆಟ ಆಡಿದ್ವಿ. ಮುಂದೆ ಎಲ್ಲಿಗೆ ಹೋಗ್ಬಹುದು ಅಂತ ಕೇಳ್ಕೊಂಡ್ ಹೊರಟ್ವಿ.

ಹಾಗೇ ಸುತ್ತಾಡ್ತಾ ಅಲ್ಲಿಂದ ತುಸು ದೂರದಲ್ಲಿದ್ದ ಸನ್‌ಸೆಟ್ ಪಾಯಿಂಟ್‌ ತಲುಪಿದ್ವಿ. ಅದು ಒಂದು ರೆಸಾರ್ಟ್. ಇನ್ನೂ ಕಟ್ಟುತ್ತಿದ್ದರು. ಅಷ್ಟೊತ್ತು ನಾವು ನೋಡಿದ ಹಳ್ಳಿಗಳಿಗೂ ಇದಕ್ಕೂ ತದ್ವಿರುದ್ಧ!

ನೀರಿನ ಮಧ್ಯದಲ್ಲಿ ಸುಮಾರು ಕಾಲು ಕಿ.ಮೀ ಉದ್ದದ ಸೇತುವೆ. ತುದಿಯಲ್ಲಿ ಹೋಗಿ ಕುಳಿತು ಸೂರ್ಯಾಸ್ತ ನೋಡಬಹುದು. ಅದ್ಭುತ ಅನುಭವ. ಈ ಅನುಭವಕ್ಕೆ ಯಾರೂ ದುಡ್ಡು ಕೇಳಲಿಲ್ಲ. ಹುಡುಗರ ಗುಂಪೊಂದು ಬಂದಿತ್ತು. ಹಾಡಿ, ಕುಣಿದು, ನೀರಿಗೆ ಜಿಗಿಯುತ್ತ ಮಜಾ ಮಾಡ್ತಿದ್ರು. ನಮ್ಮ ಜೊತೆ ಮಾತಾಡಿ, ನಮಗೆಂದೇ ಒಬ್ಬ ಹಾಡಿ, ಮತ್ತೊಬ್ಬ ಸೊಗಸಾಗಿ ಡಾನ್ಸ್ ಮಾಡಿದ. ಮತ್ತೊಬ್ಬ ಮೇಲಿಂದ ನೀರಿಗೆ ಜಿಗಿದ. ಸೂರ್ಯಾಸ್ತವನ್ನು ಆನಂದಿಸಿದೆವು. ಕತ್ತಲಾಗ್ತಿದ್ದಂತೆ, ಅಲ್ಲಿಂದ ಹೊರಟು ಬಸ್‌ನಲ್ಲಿ ತಿರುಗಿ ಆಲೆಪ್ಪಿ ತಲುಪಿದೆವು. ನಾವು ಇಡೀ ದಿನ ಖರ್ಚು ಮಾಡಿದ್ದು ಸುಮಾರು 50 ರೂಪಾಯಿಗಳು.

ದಟ್ಟ ಕಾಡಿನ ಬೆಟ್ಟ...   ಕಾಡಿತ್ತ... ಜಲದ ದಾರಿ

ಆದರೆ ಪಡೆದ ಅನುಭವಕ್ಕೆ ಬೆಲೆ ಕಟ್ಟಕ್ಕೇ ಆಗಲ್ಲ. ಅದೂ ಅಲ್ದೆ ಅಷ್ಟೊಂದು  ದುಬಾರಿಯಾದ ಹೌಸ್ ಬೋಟ್‌ನಲ್ಲಿ ನಾವು ಹೋಗಿದ್ರೆ, ಈ ಯಾವ ಅನುಭವಾನೂ ನಮಗೆ ದಕ್ಕುತ್ತಿರಲಿಲ್ಲ!

ಅಲೆಪ್ಪಿಗೆ ಮರಳಿ ಬಂದ್ಮೇಲೆ ರಸ್ತೆ ಬದಿಯಲ್ಲಿ ಒಂದು ಟೆಂಟ್ ಹಾಕ್ಕೊಂಡು ದೋಸೆ ಹುಯ್ಯುತಿದ್ರು. ತುಂಬಾ ರುಚಿಕರವಾಗಿತ್ತು. ಅದಕ್ಕೆ ಯಾವ ಫೈವ್ ಸ್ಟಾರ್ ಹೋಟೆಲ್ಲಿನ ಊಟವೂ ಸಾಟಿಯಲ್ಲ. ‘ಕಾಸಿಗೆ ತಕ್ಕ ಕಜ್ಜಾಯ’ ಅನ್ನುವ ಮಾತು ಈ ವಿಚಾರದಲ್ಲೇ ನೋಡಿ ಹೊಡೆತ ತಿನ್ನೋದು! ಹೊಟ್ಟೆ ತುಂಬಾ ತಿಂದು ಹೋಗಿ ಮಲಗಿದೆವು.

ಹೈ ಫೈ ಹಳ್ಳಿಯಲ್ಲೊಂದು ದಿನ

ಮರುದಿನ, ನಾವು ಹತ್ತಿರದ ಚೆಂಗನಶೇರಿ ಎಂಬ ಹಳ್ಳಿಗೆ ಪ್ರಯಾಣ ಬೆಳೆಸಿದ್ವಿ. ಅಲ್ಲಿ ಒಬ್ಬರು ಪರಿಚಿತರ ಮನೆಯಲ್ಲಿ ತಂಗುವ ಪ್ಲಾನ್ ಇತ್ತು. ಇದು ಸ್ವಲ್ಪ ‘couch surfing’ ಧಾಟಿಯಲ್ಲಿ ಅಂತರ್ಜಾಲದಲ್ಲಿ ನಡೆಯುತ್ತಿರುವ ಒಂದು ಹೊಸ ಪ್ರಯೋಗ. ಆ ಒಂದು ಜಾಲತಾಣದಲ್ಲಿ ನೋಂದಾಯಿಸಿಕೊಂಡರೆ, ಪ್ರವಾಸ ಮಾಡುವಾಗ, ನಾವು ಹೋಗಬೇಕೆಂದಿರುವ ಊರಿನಿಂದ ಯಾರಾದ್ರೂ ಆ ಜಾಲತಾಣದ ಸದಸ್ಯರಾಗಿದ್ದಲ್ಲಿ, ಅವರ ಮನೆಗೆ ಹೋಗಿ ತಂಗಬಹುದು. ನಮ್ಮ ವಿಚಾರದಲ್ಲಿ ಆ ಜಾಲತಾಣದ ಪಾತ್ರವಿರಲಿಲ್ಲವಾದರೂ, ಅಂತರ್ಜಾಲವೇ ಬೆಸೆದ ಸಂಬಂಧವಂತೂ ಆಗಿತ್ತು. ಮುರಳಿ ಚಂದನಾಳ ಸ್ನೇಹಿತ-ತಮ್ಮ..

(ಅಲೆಪ್ಪಿಯಲ್ಲಿ ನೀರಲ್ಲಿ ಪಾದ ಇಳಿಬಿಟ್ಟು ಸಂಜೆ ಹೊಂಬೆಳಕಿನ ಸೂರ್ಯಪಾನದ ಪುಲಕ)

ಆ ಹಳ್ಳಿ ಸಾಮಾನ್ಯ ಹಳ್ಳಿಯಲ್ಲ.. ISO9001 certified ಹಳ್ಳಿ.. ಪ್ರಧಾನ ಮಂತ್ರಿ ಪ್ರಶಸ್ತಿಯೂ ಸೇರಿ, ಹಲವಾರು ಪ್ರಶಸ್ತಿಗಳಿಂದ ಪುರಸ್ಕೃತವಾದ ಹಳ್ಳಿ, ಹೈ-ಟೆಕ್ ವೈ-ಫೈ ಹಳ್ಳಿ. ಅಲ್ಲಿಯ ಜಿಲ್ಲಾ ಪಂಚಾಯತ್ ಕಚೇರಿ ಪೂರ್ತಿ ಗಣಕೀಕೃತಗೊಂಡಿದೆ. ಎಲ್ಲವೂ ಟಾರ್ ರಸ್ತೆಗಳು! ಹಾಗೂ ಕೆಲವು ರಸ್ತೆಗಳನ್ನು ಪ್ಲಾಸ್ಟಿಕ್‌ ತ್ಯಾಜ್ಯದಿಂದ ಮಾಡಲಾಗಿದೆ. ಅದು ಒಂದು ‘ಮಾದರಿ ಹಳ್ಳಿ’ಯ ಪಟ್ಟ ಪಡೆದಿರುವುದರಿಂದ,  ಅದರ ವ್ಯವಸ್ಥೆಯ ಅಧ್ಯಯನ ಮಾಡಲು ಹಲವಾರು ವಿದೇಶೀಯರು ಅಲ್ಲಿಗೆ ಪ್ರವಾಸ ಬೆಳೆಸುತ್ತಿರುತ್ತಾರೆ.

ನಾವೂ ಜಿಲ್ಲಾ ಕಚೇರಿಗೆ ಹೋಗಿ ಎಲ್ಲರ ಸಂದರ್ಶನ ಮಾಡಿದ್ವಿ. ಹಳ್ಳಿಯಲ್ಲೆಲ್ಲಾ ಸುತ್ತಾಡಿದ್ವಿ. ಎಲ್ಲೂ ಅದು ಹಳ್ಳಿ ಅನ್ನಿಸಲಿಲ್ಲ ಅಷ್ಟೆ. ನೋಡಲು ಹಳ್ಳಿ ಎನಿಸಲಿಲ್ಲವಾದರೂ, ಅವರು ನಮಗೆ ಕೊಟ್ಟ ಆತಿಥ್ಯ ಹಳ್ಳಿಯವರದ್ದೇ! 

ನಾವು ತಂಗಿದ್ದ ಮನೆ ನಾಕು ಜನರ ಒಂದು ಪುಟ್ಟ ಕುಟುಂಬ. ಇಬ್ಬರು ಗಂಡು ಮಕ್ಕಳು. ದೊಡ್ಡವನೇ ಚಂದನಾಳ ಸ್ನೇಹಿತ. ಚಿಕ್ಕವನಂತೂ ನನಗೆ ತುಂಬಾ ಹತ್ತಿರವಾಗಿಬಿಟ್ಟ. ರಾತ್ರಿಯೆಲ್ಲಾ ನನಗೆ ಮಲಯಾಳಂ ಹೇಳಿಕೊಟ್ಟ.. ‘ಚೇಚಿ’ ಎಂದು ಪ್ರೀತಿಯಿಂದ ಕರೆಯತೊಡಗಿದ.

ಮನೆ ಅವರ ತಾತ ಕಟ್ಟಿಸಿದ್ದು. ಸುತ್ತ ಮರಗಿಡಗಳು. ಬಾವಿ. ಅವರ ಸಂಬಂಧಿಕರೆಲ್ಲ ಸುತ್ತಮುತ್ತ ಇದ್ದಾರಂತೆ. ಹಳ್ಳಿ ಎಂದಮೇಲೆ ಗೊತ್ತಲ್ಲ. ಎಲ್ಲರಿಗೂ ಎಲ್ಲರ ಪರಿಚಯವೂ ಇರುತ್ತದೆ. ನಾವು ಬಂದಿದ್ದೆವೆಂದು, ನೆರೆಹೊರೆಯವ್ರು ಅಡುಗೆಗೆ ಸಹಾಯ ಮಾಡಕ್ಕೆ ಬಂದಿದ್ರು.

ಮಧ್ಯಾಹ್ನ ಊಟಕ್ಕೆ 10-12 ಬಗೆಯ ತಿನಿಸುಗಳು ಇದ್ವು.. ‘ಅಯ್ಯೋ ಇಷ್ಟೆಲ್ಲ ಯಾಕೆ ಮಾಡಕ್ಕೆ ಹೋದ್ರಿ? ನಮ್ಮಿಂದ ನಿಮಗೆ ತೊಂದರೆ ಆಯ್ತೇನೋ’ ಅಂದ್ರೆ ಅವ್ರು, ‘ಇಲ್ಲ ಇದೆಲ್ಲ ನಾವು ದಿನ ನಿತ್ಯ ಮಾಡೋದು.. ನಮಗೆ ಊಟ ಅಂದ್ರೆ ಇಷ್ಟು ಬಗೆ ಪದಾರ್ಥ ಇರ್‍ಲೇಬೇಕು’ ಅಂದ್ರು! ನಾವು ಹಳ್ಳಿಯೆಲ್ಲ ಸುತ್ತಾಡಿ ಮನೆಗೆ ಹಿಂದಿರುಗಿದಾಗ, ಅವರಪ್ಪ ಪಡಸಾಲೆಯಲ್ಲಿ ಆರಾಮ ಕುರ್ಚಿಯಲ್ಲಿ ಕೂತು ಪೇಪರ್ ಓದುತ್ತಿದ್ದರು..

ಮನೆ ಒಳಕ್ಕೆ ಹೋದ ತಕ್ಷಣ ಒಂದು ಮಂಕರಿ ಮಾವಿನ ಹಣ್ಣು ತಂದು ನಮ್ಮ ಮುಂದೆ ಇಟ್ಟು ಹೊಟ್ಟೆ ತಣ್ಣಗೆ ಮಾಡಿದ್ರು!

ರಾತ್ರಿ ಕತ್ತಲಲ್ಲಿ ಟಾರ್ಚ್‌್ ಹಿಡಿದುಕೊಂಡು ನಮ್ಮ ಆರು ಜನರ ಸೈನ್ಯ ಹೊರಟು ನಿಂತಿತ್ತು. ಯಾಕೆಂದರೆ ಅವರಲ್ಲಿ ರಾತ್ರಿ ಸ್ನಾನ ಮಾಡುವ ಅಭ್ಯಾಸ. ನಾವು ಬೇಡವೆಂದರೂ ನಮ್ಮನ್ನು ಸ್ನಾನಕ್ಕೆ ದಬ್ಬಿದರು. ಅದೂ ಮತ್ತೊಬ್ಬರ ಮನೆಗೆ! ಯಾಕೆಂದ್ರೆ ಅಲ್ಲೂ ಕೂಡ ನೀರಿನ ಸಮಸ್ಯೆ!

ಬೆಳಿಗ್ಗೆ ಬಾವಿಯಿಂದ ನೀರು ಸೇದಿ, ಕೈ ಕಾಲು ಮುಖ ತೊಳೆದು, ಅವರು ಬೆಳಿಗ್ಗೆ ಬೇಗ ಎದ್ದು ಮಾಡಿದ್ದ ಮೂರು ಬಗೆಯ ತಿಂಡಿ ತಿಂದು ತೇಗಿ ಹೊರಟು ನಿಂತ್ವಿ. ನಾವು ಇದ್ದಿದ್ದು ಅಲ್ಲಿ ಒಂದು ದಿನವಷ್ಟೇ ಆದರೂ, ಮರುದಿನ ಬೆಳಿಗ್ಗೆ ಹೊರಡುವಷ್ಟರಲ್ಲಿ ಹತ್ತಿರದ ಸಂಬಂಧಿಗಳನ್ನು ಅಗಲುತ್ತಿರುವ ಭಾವನೆ. ಚಿಕ್ಕವನ ಕಣ್ಣಲ್ಲಿ ನೀರು. ನಮಗೆ ಮುಖ ತೋರಿಸಲು ಅವನಿಗೆ ನಾಚ್ಕೆ. ಅಮ್ಮನನ್ನು ತಬ್ಬಿ ಅಳುತ್ತಿದ್ದ. ಅವರ ಅಮ್ಮ ಹೊರಡುವ ಮುನ್ನ ನಮ್ಮೆಲ್ಲರ ಹಣೆಗೆ ವಿಭೂತಿ ಇಟ್ಟು ಬೀಳ್ಕೊಟ್ಟರು.

‘ಮುಂದಿನ ಸಲ ಬೆಂಗಳೂರಿಗೆ ಬಂದಾಗ ನಮ್ಮನೆಗೇ ಬಂದು ತಂಗಬೇಕು’ ಎಂದು ಹೇಳಿ ಬಂದೆ.

(ಕ್ಯೂಬಾದ ಮ್ಯೂಸಿಶಿಯನ್‌)

ಬೆಟ್ಟಸಾಲಿನಲ್ಲಿ ಬಸ್ಸು ಪ್ರಯಾಣ

ಮುಂದೆ ನಾವು ತೆರಳಿದ್ದು ಮುನ್ನಾರ್‌ಗೆ. ಇಡೀ ಪ್ರವಾಸದಲ್ಲಿ ನನಗೆ ತುಂಬಾ ಕಸಿವಿಸಿ ಉಂಟಾಗಿದ್ದೆಂದರೆ ಆ ಬಸ್ ಪ್ರಯಾಣ.   ಘಟ್ಟದ ದಾರಿಯಲ್ಲಿ ಕೆಂಪು ಬಸ್ಸಿನಲ್ಲಿ ಹೋಗುವುದೆಂದರೆ ನನಗೆ ಹೊಟ್ಟೆ ತೊಳಸು. ಅದೊಂಥರಾ ವಾಸನೆ- ಟಿಪಿಕಲ್ ರೆಡ್ ಬಸ್ ವಾಸನೆ. ಅದೂ ಘಟ್ಟದ ದಾರಿಯ ಬಸ್‌ಗಳಲ್ಲಿ  ಹೆಚ್ಚು. ಒಣಗಿದ ವಾಂತಿಯಿಂದ ತೊಯ್ದು ಹೋಗಿರುತ್ವೆ ಆ ಬಸ್‌ಗಳು!

ಅದೇ ಕಾರಣಕ್ಕೆ ಊಟ ಕೂಡ ಮಾಡದೆ ಕಿರಿ ಕಿರಿ ಮೋರೆ ಹಾಕಿಕೊಂಡು ಒಬ್ಬಳೇ ಕೂತಿದ್ದೆ. ಯಾವಾಗ್ಲೋ ನಿದ್ದೆ ಬಂದಿದೆ. ಎಚ್ಚರವಾಗಿದ್ದು ಮುನ್ನಾರ್ ಹತ್ತಿರ. ಆ ತಣ್ಣಗಿನ ಗಾಳಿ ಬೀಸಿದಾಗ.. ಎದ್ದ ತಕ್ಷಣ ನನ್ನ ಮೂಡ್ ಟಕ್ಕನೆ ಬದಲಾಯ್ತು. ಬಸ್‌ನಿಂದ ಇಳಿದು ನಮಗೆ ಬೇಕಾದ ತಂಗುವ ಸ್ಥಳ ಸಿಕ್ಕಿ ಅಲ್ಲಿಗೆ ಹೋಗುವಷ್ಟರಲ್ಲಿ ಎರಡು ತಾಸಾಯಿತು.

ಮುನ್ನಾರ್‌ ರಾತ್ರಿಯ ಹಾಲು ಹಾದಿ...

ಹಸಿರು ಬಟ್ಟೆ ಉಟ್ಟ ಬೆಟ್ಟಗಳ ನಡುವೆ ನಮ್ಮ ನೀಲಿ ಹಾಗೂ ಬಿಳಿ ಟೆಂಟ್‌ಗಳನ್ನು ನೆಟ್ಟ್ವಿ. ಚಳಿ ಹೆಚ್ಚಾಗುತ್ತಿದ್ದಂತೆಯೇ ಕಟ್ಟಿಗೆ ತಂದು ಬೆಂಕಿ ಹಾಕಿಕೊಟ್ಟರು. ತಣ್ಣಗಿನ ರಾತ್ರೀಲಿ ಬೆಟ್ಟಗಳ ನಡುವೆ ಬೆಂಕಿಯಲ್ಲಿ ಮೈ ಕಾಯಿಸುತ್ತಾ  ನಕ್ಷತ್ರಗಳು ಚೆಲ್ಲಾಡಿದ ಆಕಾಶವನ್ನು ನೋಡುತ್ತಾ ಅರ್ಧ ಚಂದ್ರನ ಬೆಳಕಿನಲ್ಲಿ ಹಾಡು ಗುನುಗುನಿಸುತ್ತಾ ಕುಳಿತೆವು. ಮೂರು ಟೆಂಟ್‌ಗಳು ಇದ್ದವಾದ್ದರಿಂದ ನನ್ನ ಟೆಂಟನ್ನು ಮಧ್ಯಕ್ಕೆ ಹಾಕಿಸಿಕೊಂಡಿದ್ದೆ..

ಬಸ್‌ಸ್ಟಾಪ್‌ನ ಹತ್ರ, ರೂಮ್ ಹುಡುಕುವಾಗ, ‘ಇಲ್ಲಿ ಎಲ್ಲೂ ಟೆಂಟ್ ಹಾಕ್ಕೋಬಾರ್ದು. ಸೇಫ್ ಅಲ್ಲ, ಇದು ಆನೆಗಳು ಓಡಾಡೋ ಜಾಗ’ ಎಂದು ಹೆದರಿಸಿದ್ರು. ಹೋಟೆಲ್‌ನವರು ಕೂಡ ‘ಒಂದು ತಿಂಗಳ ಹಿಂದೆ ಇಲ್ಲಿಂದ 5 ಕಿ.ಮೀ ದೂರದಲ್ಲಿ ಆನೆ ಒಬ್ಬನನ್ನು ಬಲಿ ತೆಗೆದುಕೊಂಡಿತ್ತು. ಆದ್ರೆ ಅದು ಇಲ್ಲಿ ಬರಲ್ಲ’ ಅಂದಿದ್ರು. ಯಾರಿಗ್ ಗೊತ್ತು ಇವತ್ತು ಆನೆಯ ಮೂಡ್ ಚೇಂಜ್ ಆಗಿ ಅದು ವಿಹಾರದ ದಾರಿ ಬದಲಾಯಿಸಿದ್ರೆ? ಅದಲ್ಲದೆ, ನಾವು ಟೆಂಟ್ ಹಾಕುವ ಸ್ಥಳದಲ್ಲಿ ಮಂಕರಿಗಟ್ಟಲೆ ಲದ್ದಿ ಕಾಣಿಸ್ತು! ಹೋಟೆಲ್‌ನವ್ರು ಹಸುವಿಂದು ಅಂದ್ರು. ನಮ್ಮ ಸಿಟಿ ಹಸುಗಳು ಅಷ್ಟು ಲದ್ದಿ ಹಾಕೋದು ನಾನು ನೋಡಿರ್ಲಿಲ್ಲ. ಆದ್ದರಿಂದ ನಾನು ಸೇಫ್ ಆಗಕ್ಕೆ ಮಧ್ಯಕ್ಕೆ ಟೆಂಟ್ ಹಾಕಿಸ್ಕೊಂಡೆ! ಕಂತ್ರಿ ಬುದ್ಧಿ ಅಲ್ವಾ?

(ಅಲೆಪ್ಪಿ ಹಿನ್ನೀರಿನ ಜಲಗನ್ನಡಿ)

ನನಗೆ ಮಧ್ಯರಾತ್ರೀಲಿ ಟಾಯ್ಲೆಟ್‌ಗೆ ಹೋಗೋ ಅಭ್ಯಾಸ. ಆದ್ರೆ ರಾತ್ರಿ ಕತ್ತಲಲ್ಲಿ ಕಾಡಲ್ಲಿ ಒಬ್ಬಳೇ 30 ಹೆಜ್ಜೆ ದೂರ ನಡೆದು ಹೋಗೋ ಅಭ್ಯಾಸ ಇರ್ಲಿಲ್ಲ! ಅದಕ್ಕೆ, ನಾಚ್ಕೆ ಇಲ್ದೆ ‘ನಿಮ್ಮಲ್ಲಿ ಯಾರ್‍ನಾದ್ರು ಎಬ್ಬಿಸ್ತೀನಿ ನನ್ ಜೊತೆ ಬರಕ್ಕೆ’ ಅಂತ ಹೇಳೇ ಮಲಗ್ದೆ. ಬೆಳಗಿನ ಜಾವ 4 ಗಂಟೆಗೆ ಎಚ್ಚರ ಆಯ್ತು. ಅಯ್ಯೋ ಈಗ ಯಾರನ್ನ ಎಬ್ಬಿಸ್ಲಪ್ಪಾ ಎಂದುಕೊಂಡೇ ಟೆಂಟ್ ತೆರೆದೆ.

ತಕ್ಷಣ ಕಣ್ಣಿಗೆ ಬಿದ್ದಿದ್ದು ಆಕಾಶ. ಚಂದ್ರ ಮುಳುಗಿದ್ದ. ನಮಗೆ ಮೊದಲು ಕಂಡದ್ದಕ್ಕಿಂತ ಲಕ್ಷಪಟ್ಟು ಹೆಚ್ಚು ನಕ್ಷತ್ರಗಳು ಕಂಡವು. ಮಧ್ಯದಲ್ಲಿ ಹಾಲು ಚೆಲ್ಲಿದಂತೆ ನಮ್ಮ ಹಾಲು ಹಾದಿ ಗ್ಯಾಲ್ಯಾಕ್ಸಿ. ಅದರ ಮಧ್ಯದಲ್ಲಿ ನಾವು. ಆ ದೃಶ್ಯವನ್ನು ನೋಡಲು ನನ್ನ ಕಣ್ಣುಗಳು ಎಷ್ಟು ಹಸಿದಿದ್ದವೋ! ನಮ್ಮನ್ನ ನೋಡಕ್ಕೆ ಬೆಳಕು ಬೇಕು, ಆದ್ರೆ ಆಕಾಶ ನೋಡಕ್ಕೆ ಕತ್ತಲಿದ್ದಷ್ಟೂ ರೋಮಾಂಚನ.

ಪಕ್ಕದ ಟೆಂಟ್‌ನಲ್ಲಿ ಸದ್ದು ಕೇಳಿಸ್ತು. ಹಾಗಾಗಿ ಕೂಗಿ ಎಬ್ಬಿಸ್ದೆ. ಪವನ್ ಏನೋ ಆಯ್ತು ಎಂದು ಬೆದರಿ ಹೊರಬಂದ. ಆಕಾಶ ನೋಡಿ ಎಲ್ಲರೂ ಅವಾಕ್ಕಾದರು. ಇದರ ಮಧ್ಯೆ ನನ್ನ ಅವಸರದ ಬಗ್ಗೆ ಮರ್ತೇ ಹೋಗಿತ್ತು. ಮತ್ತೊಬ್ರು ಟಾಯ್ಲೆಟ್ ಕಡೆ ಹೊರಟಾಗ್ಲೇ ಜ್ಞಾಪ್ಕ ಬಂದಿದ್ದು. ಸೈಲೆಂಟ್ ಆಗಿ ಅವರ ಹಿಂದೆ ನಡೆದೆ.. ಸದ್ಯ ಈ ಕೆಲ್ಸಕ್ಕೆ ಅಂತ ಎಬ್ಬಿಸ್ಬೇಕಾಗ್ಲಿವಲ್ಲ ಅಂತ ನಿಟ್ಟುಸಿರು ಬಿಟ್ಟೆ.

ಕಾಡ ಮಡಿಲಲ್ಲಿ ಬಿಕ್ಕಳಿಸುವ ಮನ

ಮರುದಿನದ ಟ್ರೆಕಿಂಗ್ ಬಗ್ಗೆ ಹೆಚ್ಚೇನೂ ಹೇಳಲ್ಲ. ಹುಲ್ಲು, ಬಂಡೆಗಳಿದ್ದ ಬೆಟ್ಟ ಹತ್ತಿದ ನಮಗೆ ಮುಂದೆ ಕಂಡಿದ್ದು ದಟ್ಟ ಕಾಡಿನ ಬೆಟ್ಟ. ಈ ಎರಡು ಬೆಟ್ಟಗಳ ನಡುವೆ ನಿಂತಿದ್ವಿ ನಾವು. ಎದುರು ಕಾಣುತ್ತಿದ್ದ ಬೆಟ್ಟದಲ್ಲಿ ಕಾಡಿನ ಮೌನ. ಸದ್ದುಗಳಿಂದ ಕೂಡಿದ ಮೌನ. ಅಲ್ಲಿಗೆ ಮನುಷ್ಯ ಕಾಲೇ ಇಟ್ಟಿಲ್ಲ ಅನ್ನೋ ಹಾಗಿತ್ತು. ಒಂಥರಾ ಚೈತನ್ಯ. ಮೋಡ ತನ್ನ ಚಲನೆಯಲ್ಲಿ ನಿರತವಾಗಿತ್ತು. ನಮ್ಮನ್ನು ಆವರಿಸಿಕೊಂಡಿತ್ತು. ಒಂದು ಕ್ಷಣ ಗೋಚರವಾಗುತ್ತಿದ್ದ ದೃಶ್ಯ ಮರುಕ್ಷಣ ಮಾಯವಾಗುತ್ತಿತ್ತು. ಮೋಡಗಳಲ್ಲಿ ಮುಳುಗಿ ಹೋಗುತ್ತಿತ್ತು.

ನನಗೆ ಎಷ್ಟೊಂದ್ ಸಲ, ನಾನು ಹೇಗೆ ಕಾಡನ್ನು ನೋಡಕ್ಕೆ ಬಯಸ್ತೀನಿ, ಹಾಗೆ ಕಾಡು, ಮರಗಳು ನನ್ನನ್ನು ನೋಡಲು ಬಯಸುತ್ವೆ ಅನ್ಸುತ್ತೆ. ಹಾಗೆ ನೋಡಬೇಕೆನಿಸಿದಾಗ ನನ್ನನ್ನು ಕರೆಸಿಕೊಳ್ಳುತ್ತವೆ ಅನ್ಸುತ್ತೆ. ಅಲ್ಲೂ ಈ ಕಾಡು ನನ್ನ ಕರೆಸ್ಕೊಂಡಿದೆ ಅನಿಸ್ತು. ಈ ಭಾವನೆ ನನ್ನನ್ನು ಆವರಿಸಿಕೊಂಡಾಗ ಕಣ್ತುಂಬಿ ಬಂತು. ಅಲ್ಲೇ ನಿಂತು ಬಹಳಷ್ಟು ಹೊತ್ತು ಅತ್ತೆ. ಅಲ್ಲೇ ದೂರದ ಬಂಡೆಯ ಮೇಲೆ ಹೋಗಿ ಕಾಡನ್ನು ಆಸ್ವಾದಿಸಿದೆ. ಇಂಥ ಕಾಡನ್ನು ನಾಶ ಮಾಡ್ತಿದ್ದೀವಲ್ಲ ಅಂತ ಬೇಸರ ಆಯ್ತು. ಅದರಲ್ಲಿ ನಾನೂ ಪಾಲುದಾರಳು ಅಂತ ನಾಚಿಕೆ ಆಯ್ತು. ನನ್ನ ಕೊಳ್ಳುಬಾಕುತನ ಕಾಡನ್ನೇ ನುಂಗಿ ಹಾಕ್ತಾ ಇದ್ಯಲ್ಲ ಅನ್ನೋದು ಮನಸ್ಸಿಗೆ ಬಂದು ಕಪಾಳಕ್ಕೆ ಹೊಡೆದಂಗಾಯ್ತು.

ನಾವು ಹಾಕಿರುವ ಟೆಂಟ್‌ನ ಜಾಗ ಕೂಡ ಕಾಡೇ ಆಗಿತ್ತಲ್ಲವೆ ಕೆಲ ವರ್ಷಗಳ ಹಿಂದೆ? ನನ್ನಂಥವರಿಂದಾನೆ ತಾನೇ, ಅಲ್ಲಿ ಹೋಟೆಲ್ ಕಟ್ಟಿರೋದು, ಕಾಡಿನ ನಡುವೆ? ನನ್ನಂಥವರ ಸಲುವಾಗಿಯೇ ತಾನೇ ಅಲ್ಲಿಗೆ ಆನೆಗಳು ಬಾರದೆಯಿರುವಂತಾಗಿದ್ದು? ಅದು ಕಾಡಿಂದ ನಾಡಾಗಿ ಪರಿವರ್ತನೆಗೊಳ್ಳುತ್ತಿರೋದು ನನ್ನಂಥವರ ಆಸೆಬುರುಕತನದಿಂದಾನೆ ತಾನೇ? ಈ ಎಲ್ಲ ಆಲೋಚನೆಗಳು ನನ್ನ ಕಾಡುತ್ತಿದ್ವು. ಕಾಡು ನನ್ನ ಕರೆಯುತ್ತಿತ್ತು. ಮೋಡ ನನ್ನನ್ನು ಆಗಾಗ ಮರೆಮಾಚುತ್ತಿತ್ತು. ಅಲ್ಲಿಂದ ಎದ್ದು ಬರಲು ಮನಸ್ಸೇ ಆಗ್ಲಿಲ್ಲ. ಮಳೆ ಬರೋಹಾಗಿದೆ ಅಂತ ಬಲವಂತ ಮಾಡಿ ಕರ್ಕೊಂಡ್ ಬಂದ್ರು. ಬೆಟ್ಟ ಹತ್ತೋದಕ್ಕಿಂತ ಇಳಿಯೋದೆ ಕಷ್ಟ. ಜಾರುವ ಸಾಧ್ಯತೆ ಹೆಚ್ಚು. ಜೀವನದಲ್ಲೂ ಹಾಗೆ ಅಲ್ವಾ?

ಮತ್ತೆ ಊಟ - ಸ್ನಾನ - ಬೆಂಕಿ - ಹಾಡು  - ಕುಣಿತ - ನಕ್ಷತ್ರ - ನಿದ್ದೆ.. ಎದ್ದು ಹೊರಟ್ವಿ.

ಹೊರಡುವಾಗ ಬಂದಿದ್ದು ಗಮ್ಮತ್ತು. ಹೋಟೆಲ್‌ನವನು ಕೊಟ್ಟ ಬಿಲ್ಲು ನನ್ನ ಸ್ನೇಹಿತರ ಲೆಕ್ಕಾಚಾರಕ್ಕಿಂತ ಹೆಚ್ಚಿತ್ತು. ಈ ಸಮಸ್ಯೆಯನ್ನು ನಿವಾರಿಸಲು ನನ್ನ ಸ್ನೇಹಿತರು ಬಳಸಿದ ಅಸ್ತ್ರ ‘ಬಾರ್‌ಟರ್ ಸಿಸ್ಟಂ- ದುಡ್ಡಿಲ್ಲದ ಕೊಟ್ಟು ತೆಗೆದುಕೊಳ್ಳುವಿಕೆ’.

ಅಂತರ್ಜಾಲದಲ್ಲಿ ನಿಮ್ಮ ಜಾಗದ ಬಗ್ಗೆ ಪ್ರಚಾರ ಮಾಡುತ್ತೇವೆ ಎಂದರು. ಅವನಿಗೆ ಪ್ರಚಾರ ಬೇಕು. ನಮಗೆ ಅವನು ಕೊಡೊ ಸೌಲಭ್ಯಗಳು ಬೇಕು. ಅಲ್ಲಿಗೆ ಲೆಕ್ಕ ಚುಕ್ತಾ! ನನಗೆ ಇದು win - win situation ಅನ್ನಿಸ್ತು. ನನಗೆ ಮುಂಚಿಂದಾನೂ ಬಾರ್‌ಟರ್ ಸಿಸ್ಟಂ ಮೇಲೆ ಒಲವು. ಅದು ಎಲ್ಲರನ್ನೂ ಕ್ರಿಯಾಶೀಲರನ್ನಾಗಿ ಮಾಡುತ್ತೆ ಅನ್ನ್ಸುತ್ತೆ. ಈ ಎರಡು ದಿನಗಳಲ್ಲಿ ಬಸ್ ಖರ್ಚು ಬಿಟ್ಟು ಬೇರೆ ಯಾವ ಖರ್ಚೂ ಮಾಡ್ಲಿಲ್ಲ. (ಇಬ್ಬರೇ ಹೋದಲ್ಲಿ ಈ ಖರ್ಚನ್ನೂ ಉಳಿಸಬಹುದು, ಹಿಚ್ ಹೈಕಿಂಗ್ ಮಾಡಿ. ಆದರೆ ನಾವು ನಾಕು ಜನರಿದ್ದದ್ದರಿಂದ ಲಿಫ್ಟ್ ಸಿಗುವ ಸಾಧ್ಯತೆ ಕಮ್ಮಿ)

ಮುಂದೆ ನಾವು ಹೋಗಿದ್ದು ಫೋರ್ಟ್ ಕೊಚ್ಚಿ, ಬ್ಯಾಕ್‌ವಾಟರ್‌ನಿಂದ ಬೆಟ್ಟ, ಬೆಟ್ಟದಿಂದ ಸಮುದ್ರ ದೆಸೆಯಿಂದ ಚಳಿಯಿಂದ ಹೆಚ್ಚು ಸೆಕೆ! ಬೆಳಗಿನ ಜಾವ ಎದ್ದು ಒಂದು ಊರನ್ನು, ಜಾಗವನ್ನು ನೋಡೋದು ನನಗೆ ಖುಷಿ. ಆ ಊರಿನ ನಾಡಿ ಮಿಡಿತ ಹಿಡಿಯೋ ಪ್ರಯತ್ನ. ಬೆಳಿಗ್ಗೆ ಬೇಗ ಎದ್ದು ಸುತ್ತಾಡಕ್ಕೆ ಹೊರಟೆ. ಆ ದಿನದ ಸಂಜೆಯೇ ನಮ್ಮ ಟ್ರೇನ್ ಇತ್ತು ಕೊಚ್ಚಿಯಿಂದ. ಆದ್ದರಿಂದ ಇಡೀ ದಿನ ಏನೂ ಪ್ಲಾನ್ ಇರ್ಲಿಲ್ಲ. ಸುತ್ತಾಡೊದೇ  ಕೆಲಸ.. ನಾನು ದಿನಕ್ಕೆ ಆರು ಜಾಗಗಳನ್ನು ನೋಡುವವರ ಪೈಕಿ ಅಲ್ಲ. ಆರು ದಿನ ಒಂದೇ ಜಾಗದಲ್ಲಿ ಇರುವವರ ಪೈಕಿ.

ಬೆಳಿಗ್ಗೆ ಆ ಪೋರ್ಚುಗೀಸ್‌ ಕಾಲೊನಿಗೆ ನಡೆದು ಹೊರಟೆ. ನಿಧಾನಕ್ಕೆ ಊರು ಏಳುತ್ತಿತ್ತು. ಬೆಳಿಗ್ಗೆ ಮೊದಲು ಕಣ್ಣಿಗೆ ಬೀಳೋರೇ ಕಸ ಎತ್ತೋರು. ಆ ಊರಲ್ಲಿ ನನಗೆ ಕಂಡದ್ದೂ ಅವರೇ. ಜೊತೆಗೆ, ಚರ್ಚ್‌ಗೆ ಬಂದ ಜನ, ಲಾಟರಿ ಮಾರೋರು (ದಿನಕ್ಕೆ ಸುಮಾರು 70ಲಕ್ಷ ಲಾಟರಿಗಳು ಮಾರಾಟವಾಗುತ್ವೆ ಕೇರಳದಲ್ಲಿ), ಮೀನು ಹಿಡಿಯೋರು, ಆಟೋ ಚಾಲಕರು.. ಇತ್ಯಾದಿ..

ಅಲ್ಲಿ ಸಾಲು ಸಾಲಾಗಿ ಚೈನೀಸ್ ಫಿಶಿಂಗ್ ನೆಟ್‌ಗಳಿದ್ವು. ನಾನು ಅದನ್ನು ನೋಡಿದ್ದು ಅದೇ ಮೊದಲನೇ ಸಾರಿ. ಅದು ಹೇಗೆ ಕೆಲಸ ಮಾಡುತ್ತೆ ಎಂಬ ಕುತೂಹಲದಿಂದ ಹತ್ತಿರ ಹೋದೆ. ಆಗತಾನೆ ನೆಟ್‌ನಿಂದ ಮೀನು ತೆಗೆದು ಟ್ರೇಗೆ ಸುರಿಯುತ್ತಿದ್ದರು. ಅದರಲ್ಲಿ ಒಂದಷ್ಟು ಕಸ, ಒಂದಷ್ಟು ಪುಟ್ಟ ಮೀನುಗಳನ್ನು ಬಿಟ್ಟರೆ ಒಂದೇ ಒಂದು ಸಮೃದ್ಧವಾಗಿ ಕಾಣುವ ಮೀನಿತ್ತು. ಹೊಳೀತಿತ್ತು. ಉಸಿರಿಗಾಗಿ ಹೋರಾಡುತ್ತಿತ್ತು.. ವಿಲವಿಲನೆ ಒಂದಷ್ಟು ಹೊತ್ತು ಸತ್ತಂಗೆ ಬಿದ್ದು ಮತ್ತೆ ಒದ್ದಾಡುತಿತ್ತು.. ನನಗೆ ಅದನ್ನು ತಿರುಗಿ ನೀರಿನಲ್ಲಿ ಬಿಡುವ ಮನಸ್ಸಾಯಿತು. ಆತುರದಿಂದ ಎಷ್ಟು ಆ ಮೀನಿಗೆ ಎಂದೆ.. ‘700 ನಿಮಗೆ 300ಕ್ಕೆ ಕೊಡ್ತೀನಿ’ ಅಂದ. ಕೊಟ್ಟ. ತೆಗೆದುಕೊಂಡು ಓಡಿಹೋಗಿ ನೀರಿಗೆ ಎಸೆದೆ. ಆ ಮೀನಿನ ಗತಿಯೇನಾಯಿತೆಂದು ನೋಡುವ ಕುತೂಹಲದಿಂದ ಸುತ್ತಮುತ್ತ ಇದ್ದವರೆಲ್ಲ ಬಂದರು. ದಿನವಿಡೀ ನೂರಾರು ಮೀನು ಹಿಡಿಯುವವರು, ಒಂದು ಮೀನನ್ನು ಬದುಕಿಸುವ ಪ್ರಯತ್ನವನ್ನು ಎಷ್ಟು ಆಸಕ್ತಿಯಿಂದ ನೋಡ್ತಿದ್ದಾರೆ ಅಂತ ನನಗೆ ಆಶ್ಚರ್ಯ.. ಕೊನೆಗೂ ಅದು ಬದುಕಿ ಈಜುತ್ತಾ ಕಣ್ಮರೆಯಾಯ್ತು. ಅದನ್ನು ನೋಡಿ ಅಲ್ಲಿ ನೆರೆದವರೆಲ್ಲಾ ನಗ್ತಾ ನಗ್ತಾ ಚದುರಿದರು. ಚೈನೀಸ್ ಫಿಶಿಂಗ್ ನೆಟ್ ಮತ್ತೆ ಮೀನುಗಳನ್ನು ಬಾಚಲು ಅಣಿಯಾಯ್ತು. ನಾನು ಅಲ್ಲಿಂದ ಜಾಗ ಖಾಲಿ ಮಾಡ್ದೆ.

ಸಂಜೆ ನಾಲ್ಕರವರೆಗೆ ಸುತ್ತೋಣ ಅನ್ಕೊಂಡಿದ್ದೆ.. ಆದ್ರೆ ನಾನು ತಿಂಡಿಗೆ ಅಂತ ಹೋದ ಹೋಟೆಲ್‌ನಲ್ಲಿ ಕ್ಯೂಬಾ ದೇಶದಿಂದ ಬಂದ 50ರ ಆಸುಪಾಸಿನ ಒಬ್ಬ ಮ್ಯುಸೀಶಿಯನ್‌ನ ಪರಿಚಯ ಆಯ್ತು. ಶಂಕರ್ ಮಹಾದೇವನ್, ಝಾಕೀರ್‌ಹುಸೈನ್‌ ತಮ್ಮನಾದ ತೌಫಿಕ್‌ ಖುರೇಷಿ, ಪ್ರಸಿದ್ಧ ಘಟಂ ವಾದಕರಾದ ಟಿ. ಎಚ್‌. ವಿನಾಯಕರಾಮ್‌ ಮುಂತಾದವರ ಜೊತೆ ಅನೇಕ ಸಂಗೀತ ಕಛೇರಿಗಳಲ್ಲಿ ಭಾಗಿಯಾಗಿದ್ದವನು. ಮುಂದಿನ 4 - 5 ತಾಸು, ಯೂಟ್ಯೂಬ್‌ನಲ್ಲಿ ಹಾಡುಗಳನ್ನು ಕೇಳುತ್ತಾ, ಮಾತಾಡುತ್ತಾ ಕುಳಿತ್ವಿ ಅಲ್ಲೇ.

ಅವನು ತಾನು ಸಂಯೋಜಿಸಿದ ಸಂಗೀತವನ್ನು ಕೇಳಿಸಿದ, ತೋರಿಸಿದ. ಅವನಿಗಿಷ್ಟವಾದ ಮಹಮ್ಮದ್‌ ರಫಿ ಹಾಡುಗಳನ್ನು ಕೇಳಿಸಿದ. ನಮ್ಮ ಜೊತೆ ಸ್ವಲ್ಪ ಹೊತ್ತು ಕುಳಿತಿದ್ದ ಒಬ್ಬ ತಮಿಳಿನವ, ಅವನಿಗಿಷ್ಟವಾದ ತೆಲುಗು, ಮಲಯಾಳಂ ಹಾಡುಗಳನ್ನು ಕೇಳಿಸಿದ!

ನಂತರ ನಾನು ಕ್ಯೂಬಾದವನಿಗೆ ಕನ್ನಡ ಹಾಡುಗಳನ್ನು ಕೇಳಿಸಿದೆ. ‘ನಗುವಾ ನಯನ’, ‘ಯಾವ ಮೋಹನ ಮುರಳಿ ಕರೆಯಿತು’...  ಅವನಿಗೆ ಭಾಷೆ ಅರ್ಥವಾಗದೆ ಹೋದ್ರೂ ಹಾಡಿನಲ್ಲಿ ಮುಳುಗಿ ಹೋದ. ಅವನು ಹಾಡನ್ನು ಅನುಭವಿಸುತ್ತಿದ್ದ ರೀತಿಯನ್ನು ನೋಡುವುದೇ ಆನಂದ! ನನ್ನ ಮನಸ್ಸಿನಲ್ಲಿ ಅವನನ್ನು ಕ್ಯೂಬಾದಿಂದ ಈ ದೂರದ ಭಾರತದ ತೀರಕ್ಕೆ ಯಾವ ಮುರಳಿ ಕರೆದು ತಂದಿದ್ದು ಎಂಬ ಆಲೋಚನೆ...ಒಂದು ವೇಳೆ ಕೇಳಿದರೂ ಉತ್ತರ ಕೊಡುವ ಮೂಡ್‌ನಲ್ಲಿ ಅವನು ಇರ್ಲಿಲ್ಲ.

ಹಾಡಿನಲ್ಲಿ ತನ್ಮಯನಾಗಿದ್ದ. ನಾನು ಸುಮ್ಮನಾದೆ. ಅವನಿಗೆ ತನ್ನ ಮಾತೃ ಭಾಷೆ ಬಿಟ್ಟು ಯಾವುದೇ ಭಾಷೆ ಸರಿಯಾಗಿ ಬರ್ತಿರ್ಲಿಲ್ಲ. ಹಾಗೆಯೇ 15 ವರ್ಷ ಇಲ್ಲಿ ಜೀವನ ಮಾಡಿದ್ದಾನೆ! ಸಂಗೀತವೇ ಅವನ ಭಾಷೆ. ‘ತ ಕ ತೋಂ’, ‘ತೈ ತೈ’, ‘ದಿ ಗಿ ತ ತೊಮ್’ ಅಂತಲೇ ಮಾತಾಡುತ್ತಾನೆ. ಅದರ ಜೊತೆ ಅವನ ಕಣ್ಣು, ತಲೆ, ಭುಜ, ತೋಳುಗಳು ಎಲ್ಲವೂ ಮಾತಾಡ್ತಿದ್ವು! ಹಾಗಾಗಿ ಅರ್ಥವಾಗದೆ ಹೋಗುತ್ತಿರಲಿಲ್ಲ! ಹಾಗೇ ಒಂದಷ್ಟು ಹೊತ್ತು ಮಾತಾಡಿ ಅವನು ಹೊರಟ. ‘ಬೆಂಗಳೂರಿನಲ್ಲಿ ಸಿಗ್ತೀನಿ ಅಂದ’... ಹೋದವನು ಮತ್ತೆ ಬಂದು ಕ್ಯೂಬಾದ ಒಂದು ಪುಟ್ಟ ಕಲ್ಲು ಹಾಗೂ ಒಂದು ಮಫ್ಲರ್ ಕೊಟ್ಟ ನೆನಪಿಗೆ. ಹೋಟೆಲ್‌ನವರು ಅಷ್ಟೊತ್ತಿಗೆ ಚೆನ್ನಾಗ್ ಪರಿಚಯ ಆಗಿ ಬಿಟ್ಟಿದ್ರು. ಎಲ್ಲರ ಜೊತೆ ಸೆಲ್ಫಿ ತೆಗೆದುಕೊಂಡು ಅಲ್ಲಿಂದ ಹೊರಟೆ.. ಮತ್ತೆ ಸ್ವಲ್ಪ ಶಾಪಿಂಗ್- ಬಸ್- ಟ್ರೈನ್-ನಮ್ಮ ಬೆಂಗಳೂರು!

ಅಂತೂ ನಾವು ಏಳು ದಿನದ ಪ್ರವಾಸದಲ್ಲಿ  ಒಟ್ಟು ಖರ್ಚು ಮಾಡಿದ್ದು ತಲಾ 1300! ಹಾಗಂತ ಎಲ್ಲೂ ಕಷ್ಟ ಆಗ್ಲಿಲ್ಲ. ಸುಖವಾಗಿತ್ತು. ಆಹ್ಲಾದಕರವಾಗಿತ್ತು! ಈಗ್ಲೂ ಬಹುತೇಕ ಹಣವೇ ಇಲ್ಲದೆ ಪ್ರವಾಸ ಮಾಡಬಹುದು ನಮ್ಮ ದೇಶದಲ್ಲಿ ಅಂತ ಹೆಮ್ಮೆಯಾಯ್ತು. ಹೀಗೆ ಕಿಸೆಯಲ್ಲಿ ದುಡ್ಡಿಲ್ಲದಿದ್ದರೂ, ಪ್ರೀತಿ, ವಿಶ್ವಾಸ, ಅನುಭವಕ್ಕೆ ಏನೂ ಕೊರತೆ ಇಲ್ಲ ನಮ್ಮ ದೇಶದಲ್ಲಿ ಅನ್ನುವುದು ಮನದಟ್ಟಾಯ್ತು. ನನಗೆ ಅಲ್ಲಿ ಆದ ಅನುಭವಗಳಲ್ಲಿ ಕೆಲವನ್ನು ನಿಮಗೆ ಕಟ್ಟಿಕೊಡುವ ಪ್ರಯತ್ನ ಮಾಡಿದ್ದೀನಿ.. ಇನ್ನೂ ಹಲವಾರು ಅನುಭವಗಳು ನನ್ನಲ್ಲೇ ಉಳಿದಿವೆ. ಲೀನವಾಗಿವೆ. ನಾನೂ ಆ ಅನುಭವಗಳಲ್ಲಿ ಲೀನಳಾಗಿದ್ದೇನೆ. ‘ವಸುಧೈವ ಕುಟುಂಬಕಂ’ ಅನ್ನುವುದನ್ನು ಒಂದು ಮಟ್ಟಿಗೆ ಚಾಲ್ತಿಯಲ್ಲಿಡುವ ಅವಕಾಶವಿದೆ, ಭಾರತದಲ್ಲಿ! ಮತ್ತೆ ಯಾರಾದ್ರೂ ಇಂಥ ಪ್ರವಾಸಕ್ಕೆ ಬರುತ್ತೀರಾ ಎಂದರೆ ಸೈ ಅಂದುಬಿಡ್ತೀನಿ! ನೀವು? 

**

ಕೋಚ್‌ ಸರ್ಫಿಂಗ್‌ ಎಂಬ ಸಹಕಾರಿ ಮಾದರಿ

‘ಕೋಚ್‌ ಸರ್ಫ್‌’ ಎಂದರೆ ನಿರಂತರವಾಗಿ ಬೇರೆ ಬೇರೆಯವರ ಮನೆಯಲ್ಲಿ ತಂಗುವುದು ಎಂಬ ಅಕ್ಷರಶಃ ಅರ್ಥವಿದೆ. ಪ್ರವಾಸಪ್ರಿಯರಿಗೆ ಕೋಚ್‌ ಸರ್ಫಿಂಗ್‌ ಎಂಬುದು ಚಿರಪರಿಚಿತ ಶಬ್ದ.  www.couchsurfing.com ಇದು ಒಂದು ಸೋಷಿಯಲ್‌ ನೆಟ್‌ವರ್ಕ್‌ ವೆಬ್‌ಸೈಟ್‌.

ತನ್ನ ಸದಸ್ಯರು ವಿವಿಧ ಉದ್ದೇಶಗಳಿಗೆ ಬೇರೆ ಸ್ಥಳಗಳಿಗೆ ಪ್ರಯಾಣ ಬೆಳೆಸಿದಾಗ ಆ ಸ್ಥಳದಲ್ಲಿರುವ ಉಳಿದ ಯಾವುದಾದರೂ ಸದಸ್ಯರ ಮನೆಯಲ್ಲಿ ಉಳಿದುಕೊಳ್ಳುವ ಅವಕಾಶ ಕಲ್ಪಿಸುವುದು ಈ ಜಾಲತಾಣದ ಮುಖ್ಯ ಉದ್ದೇಶ. ಉದಾಹರಣೆಗೆ ನೀವು ಈ ಜಾಲತಾಣದ ಸದಸ್ಯರು ಎಂದಿಟ್ಟುಕೊಳ್ಳಿ. ಬೆಂಗಳೂರಿನಿಂದ ಕೋಲ್ಕತ್ತಾಗೆ ಪ್ರವಾಸಕ್ಕೆಂದು ತೆರಳಿದ್ದೀರಿ.  ಆಗ ಅಲ್ಲಿರುವ couchsurfing.comನ ಇನ್ನೊಬ್ಬ ಸದಸ್ಯರ ಮನೆಯಲ್ಲಿ ನೀವು ಉಳಿದುಕೊಳ್ಳಬಹುದು. ಅದಕ್ಕಾಗಿ ನೀವು ಯಾವುದೇ ಹಣವನ್ನು ಪಾವತಿಸಬೇಕಿಲ್ಲ. ನಿಮಗೆ ಆತಿಥ್ಯ ನೀಡುವವರೂ ನಿಮ್ಮಿಂದ ಯಾವುದೇ ಪ್ರತಿಫಲಾಪೇಕ್ಷೆ ಇರಿಸಿಕೊಂಡಿರುವುದಿಲ್ಲ.

ಕನಿಷ್ಠಹಣದಲ್ಲಿ ಪ್ರವಾಸ ಮಾಡುವ ಈ ಸಹಕಾರಿ ಮಾದರಿಯು ಇತ್ತೀಚೆಗೆ ಸಾಕಷ್ಟು ಜನಪ್ರಿಯವಾಗಿದೆ. ಇದೇ ಮಾದರಿಯ ಇನ್ನೂ ಹಲವು ಸಹಕಾರಿ ಜಾಲಗಳೂ ಚಾಲ್ತಿಯಲ್ಲಿವೆ.

**

ನನಗೆ ಎಷ್ಟೊಂದ್ ಸಲ, ನಾನು ಹೇಗೆ ಕಾಡನ್ನು ನೋಡಕ್ಕೆ ಬಯಸ್ತೀನಿ, ಹಾಗೇ ಕಾಡು, ಮರಗಳು ನನ್ನನ್ನು ನೋಡಲು ಬಯಸುತ್ವೆ ಅನ್ಸುತ್ತೆ. ಹಾಗೆ ನೋಡಬೇಕೆನಿಸಿದಾಗ ನನ್ನನ್ನು ಕರೆಸಿಕೊಳ್ಳುತ್ತವೆ ಅನ್ಸುತ್ತೆ. ಈ ಕಾಡೂ ನನ್ನ ಕರೆಸ್ಕೊಂಡಿದೆ ಅನಿಸ್ತು. ಈ ಭಾವನೆ ನನ್ನನ್ನು ಆವರಿಸಿಕೊಂಡಾಗ ಕಣ್ತುಂಬಿ ಬಂತು. ಅಲ್ಲೇ ನಿಂತು ಬಹಳಷ್ಟು ಹೊತ್ತು ಅತ್ತೆ.

**

ಸಂಬಂಜ ಎಂಬುದು...

ಇದು ಚೆಂಗನಶೇರಿಯಲ್ಲಿ ಚಂದನಾಳ ಸ್ನೇಹಿತನ ಮನೆಯಲ್ಲಿ ತಂಗಿದ್ದ ದಿನ ನಡೆದ ಘಟನೆ. ರಾತ್ರಿ 8.30ರ ಸಮಯಕ್ಕೆ ಅವರಮ್ಮ ಮುರಳಿಗೆ ‘ಊಟ ಕೊಟ್ಟು ಬರ್ತೀಯಾ?’ ಅಂದ್ರು.. ಅವ್ನು ‘ಆಯ್ತು ಕೊಡು’ ಅಂದ. ನನಗೆ ಕುತೂಹಲ.. ‘ನಾನೂ ಬರ್ತೀನಿ’ ಅಂದೆ. ದಾರಿಯಲ್ಲಿ ನಾವು ಊಟ ಕೊಡಕ್ಕೆ ಹೋಗುತ್ತಿದ್ದವರ ಕಥೆ ಹೇಳಿದ.

ಅವರು ಆ ಊರಿನ ಮರಗೆಲಸಗಾರರು. ಇವರ ಮನೆಲಿರುವ ಪೀಠೋಪಕರಣಗಳನ್ನೆಲ್ಲ ಅವರೇ ತಯಾರಿಸಿರುವುದು. ಒಂದು ವಿಶೇಷವೆಂದರೆ, ಅವರು ಮಾಡಿರುವ ಪೀಠೋಪಕರಣದಲ್ಲಿ ಎಲ್ಲೂ ಮೊಳೆ ಉಪಯೋಗಿಸಿಲ್ಲ! ಈಗ ಅವರಿಗೆ ವಯಸ್ಸಾಗಿದೆ. ಮಕ್ಕಳು ಮೊಮ್ಮಕ್ಕಳು ಅವರ ಎದುರುಗಡೆ ಮನೆಯಲ್ಲೇ ಇದ್ದಾರೆ. ಆದ್ರೆ ಯಾರೂ ತಾತನಿಗೆ ಕ್ಯಾರೆ ಆನ್ನಲ್ವಂತೆ. ಅದಕ್ಕೆ ಊರಿನವರು ಹೋಗಿ ಊಟ ಕೊಡ್ತಾರಂತೆ, ಪ್ರತಿನಿತ್ಯ, ಹಲವು ವರ್ಷಗಳಿಂದ!

ಅವರ ಮನೆ ಬಂತು. ಎದುರುಗಡೆ ಮಕ್ಕಳ ಮನೇಲಿ ದೀಪಗಳು ಉರಿಯುತ್ತಿದ್ದವು. ಟೀವಿ ಸದ್ದು, ಮಾತಾಡುವ ಸದ್ದು ಕೇಳಿಸ್ತಿತ್ತು. ತಾತನ ಮನೆ ಕತ್ತಲಲ್ಲಿ ಮುಳುಗಿತ್ತು. ನೀರವ ಮೌನ. ಮುರಳಿ ಹೋಗಿ ಕದ ತಳ್ಳಿದ. ತೆರೆದುಕೊಳ್ತು. ಒಳಗೆ ಕತ್ತಲು. ಇವ ಹೋಗಿ ಕತ್ತಲಲ್ಲೇ ಸ್ವಿಚ್‌ ಹಾಕಿದ. ಅವನು ತಡಕಾಡಲಿಲ್ಲವೆಂಬುದು ನನ್ನ ಗಮನಕ್ಕೆ ಬಂತು. ಬೆಳಕು ಚೆಲ್ಲಿದ ತಕ್ಷಣ ಬಾಗಿಲಿನ ಎದುರಿಗೆ ಒಂದು ಆರಾಮ-ಕುರ್ಚಿಯಲ್ಲಿ ಅವರು ಕೂತಿದ್ದು ಗೋಚರವಾಯ್ತು.

ಹಣ್ಣು ಹಣ್ಣು ಮುದುಕ. ಕಣ್ಣು  ಮಿಟುಕಿಸುತ್ತಿದ್ದರಷ್ಟೆ. ಹಾಗೆಯೇ ಎಷ್ಟು ಗಂಟೆಗಳಿಂದ ಕೂತಿದ್ದರೋ ಗೊತ್ತಿಲ್ಲ. ಸುತ್ತ ಕಣ್ಣಾಡಿಸಿದೆ. ಅದು ಮನೆಯಲ್ಲ, ಒಂದು ಕೋಣೆ. ಬಾಗಿಲಿಂದ ಒಂದು ಹೆಜ್ಜೆ ಒಳಕ್ಕೆ ಒಂದು ಆರಾಮ ಕುರ್ಚಿ, ಬಾಗಿಲ ಎದುರಿಗೆ. ಆ ಕಡೆ ಮಂಚ– ಈ ಕಡೆ ಕಪಾಟು. ಕುರ್ಚಿಯ ಬೆನ್ನಿಗೆ ಗೋಡೆ. 

ಅವರಿಗೆ ಕೇಳಿಸುವುದಿಲ್ಲವೆಂದು ಜೋರಾಗಿಯೇ ಮುರಳಿ ಯೋಗಕ್ಷೇಮ ವಿಚಾರಿಸಿದ. ಅವರು ತಲೆ ಅಲ್ಲಾಡಿಸಿದರು. ನಮ್ಮನ್ನು ಪರಿಚಯಿಸಿಕೊಟ್ಟ. ಅವರು ಕಣ್ಣು ಮಿಟುಕಿಸಿ ‘ಆ’ ‘ಊ’ ಅಂತ ಉದ್ಗಾರ ತೆಗೆದರು. ‘ನೀವು ಊಟ ಮಾಡಿ, ನಾವು ಬರ್ತೀವಿ.. ಈಗ್ಲೇ ತಿನ್ನಿ’ ಅಂದ. ನಾವು ಹೊರಟೆವು. ದೀಪ ಆರಿಸಲಿಲ್ಲ, ಕದ ಹಾಕಿಕೊಂಡ. ಅವರು ಹಾಗೇ ಕೂತಿದ್ದರು. ಅಲ್ಲಾಡಲಿಲ್ಲ. ಮನಸ್ಸು ಕಲಕುವ ದೃಶ್ಯ. ನಗರದಲ್ಲಿದ್ದಿದ್ದರೆ ಇವರ ಗತಿ ಏನಾಗಿರುತ್ತಿತ್ತು ಎಂದುಕೊಂಡೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry