ಪರೋಕ್ಷ

7

ಪರೋಕ್ಷ

Published:
Updated:
ಪರೋಕ್ಷ

ನಟ್ಟಿರುಳಿನ ಹೊತ್ತಲ್ಲದ ಹೊತ್ತಿನಲ್ಲಿ, ನನ್ನ ಕೈಫೋನು ಬೀಪ್ಬೀಪೆಂದು ಸದ್ದಿಸುವಾಗ- ನನಗೂ ಹೆಚ್ಚಾಗಿ ಅಚ್ಚರಿ ಪಟ್ಟಿದ್ದು ಮಹತಿ. ‘ಯಾರದರೀ ಮೆಸೇಜು? ಅದೂ ಈ ಹೊತ್ತಿನಲ್ಲಿ...’ ಎಂದು ನಿದ್ದೆಗಣ್ಣಿನಲ್ಲಿ ಕೇಳಿ, ಸಿಡಿಮಿಡಿಸುತ್ತಲೇ ಮಗ್ಗುಲಾದಳು. ಅವಳಿಗೆ ಉತ್ತರಿಸಬೇಕೆಂಬ ಪ್ರಮೇಯದಲ್ಲಿ ನಾನು ತೊಡಗಲಿಲ್ಲ. ಅವೇಳೆಯಲ್ಲಿ ಮೆಸೇಜಿಸಿದ್ದಾರೆಂಬ ಕುತೂಹಲವನ್ನು ಒತ್ತಾಯದಿಂದ ಕೊಂಚವೇ ಒತ್ತರಿಸಿ, ಮಲಗಿದ್ದಲ್ಲೇ ತುಸುವೆದ್ದು, ಮಹತಿಯ ಮೋರೆಯೆಡೆಗೆ ಬಾಗಿ- ನಿದ್ದೆ ಹೋಗಿದ್ದಾಳೆಂಬುದನ್ನು ಖಾತ್ರಿಗೈದು, ದಿಂಬಿನಾಚೆಗಿದ್ದ ಕೈಫೋನೆತ್ತಿಕೊಂಡು ನೋಡಿದೆ. ಹನ್ನೆರಡೂ ಮುಕ್ಕಾಲಾಗಿತ್ತು. ಯಾರ ಸಂದೇಶವೆಂಬುದು ಫಕ್ಕನೆ ಗೊತ್ತಾಗಲಿಲ್ಲ... ಮಂಜುಗಟ್ಟಿದ್ದ ನಿದ್ದೆಗಣ್ಣೊರೆಸಿಕೊಂಡು ವ್ಯವಧಾನಿಸಿ ನೋಡಿದೆ. ‘ಮುಗ್ಧಾ ಏಬಿ’ಯ ಮೆಸೇಜೆಂದು ತುಸುವೇ ನಿಚ್ಚಳಿಸುವಾಗ, ಒಮ್ಮೆಗೇ ದಿಗಿಲಾಯಿತು! ಈ ಹೊತ್ತಿನಲ್ಲೇಕೆ? ದಿಗ್ಭ್ರಮೆಯೂ ಆಯಿತು! ಏನೂ ಎಡವಟ್ಟಾಗಿಲ್ಲವಷ್ಟೆ? ಇವಳ ಗಂಡನನ್ನು ಬೀಳ್ಕೊಟ್ಟು ಬಂದು ಮಲಗಿ ಮುಕ್ಕಾಲು ತಾಸು ಕೂಡ ಆಗಿಲ್ಲ! ಇನ್ನೇನಾಗಿ ಹೋಯಿತು? ಇವನಿನ್ನೂ ಮನೆಗೆ ಹೋಗಿಲ್ಲವೆ? ಕೈಫೋನಿನ ತೆರೆಯಲ್ಲಿ ನಾಲ್ಕು ಮಿಸ್ಸಾದ ಕರೆಗಳ ಸೂಚನೆಯೂ ಇದ್ದು, ಯಾರವೆಂದು ನೋಡಿದರೆ- ಅವಳವೇ!

ಮೆಸೇಜನ್ನು ಓದತೆರೆಯುವಾಗ, ಫೋನ್ಬೆಳಕು ಮಹತಿಯ ಕಣ್ಕುಕ್ಕಿತಾಗಿ ‘ಯಾರದ್ದರೀ ಮೆಸೇಜು?’ ಎಂದು ರೇಗುವಾಗ,  ಥಟಕ್ಕನೆ ಮೊಬೈಲಾಫುಗೈದು, ‘ಅಯ್ಯೋ... ಯಾವುದೋ ಆಫೀಸಿನ ಮೆಸೇಜು... ನೀನು ಮಲಕ್ಕೋ...’ ಸುಳ್ಳು ಹೊಸೆದೆ. ಅವಳು, ‘ಏನೋಪ್ಪ... ಇತ್ತಿತ್ತಲಾಗಿ ನಿಮ್ಮ ಬಿಹೇವಿಯರ್ರೇ ಸರಿ ಅನಿಸಲ್ಲ... ಮೊದಲು ಅದನ್ನ ಆಫು ಮಾಡಿ ಮಲಕೊಳ್ಳಿ...’ ಅನ್ನುತ್ತ ಮತ್ತೆ ಮಗ್ಗುಲಾಗುವಾಗ, ಫೋನನ್ನು ದಿಂಬಿನ ಕೆಳಹುದುಗಿಸಿ ತೆಪ್ಪಗಾದೆ. ‘ಮುಖೇಶ್... ನನಗೆ ಮಾತ್ರ ಮೋಸ ಮಾಡಬೇಡಿ, ಆಯಿತಾ?’ ಅಂತನ್ನುತ್ತ ನನ್ನನ್ನು ಬಳಸಿ ಅಪ್ಪಿಕೊಂಡಳು. ‘ಈಗೇನಾಯಿತೂಂತ ಹೀಗೆಲ್ಲ ಆಡುತೀ, ಮಾತೀ...?’ ಎಂದು ರಮಿಸುವ ಹಾಗೆ, ಕೇಳಿದೆ. ‘ಏನೂ ಇಲ್ಲ ಬಿಡಿ... ಈಗ ನಿದ್ದೆ ಮಾಡಿ...’ ಅಂತಂದು, ನನ್ನನ್ನು ತಲೆದಡವುತ್ತ, ಹಣೆತಟ್ಟುತ್ತ,  ‘ನಾನೊಂದು ಹೇಳಲಾ, ಮುಖೇಶ್... ನಿಮಗೆ ಯಾರಾನಾ ಹೊಸಬಳ ಮೇಲೆ ಆಸಕ್ತಿ ಮೂಡಿದ್ದರೆ, ಧೈರ್ಯವಾಗಿ ಹೇಳಿ... ಆಯಿತಾ? ಮುಚ್ಚುಮರೆ ಮಾತ್ರ ಮಾಡಬೇಡಿ...’ ಅನ್ನುತ್ತ, ನನ್ನ ಕಿವಿಯೊಳಕ್ಕೇ ಬಿಕ್ಕಿದಳು. ಹೆಂಡತಿಯ ಸುಖಾಸುಮ್ಮನೆ ನಸನಸೆಯನ್ನು ರಮಿಸುವುದಾಯಿತಾದರೂ, ಮನಸ್ಸೆಲ್ಲ ಫೋನೊಳಕ್ಕೇ ನೆಟ್ಟುಕೊಂಡಿತ್ತು.

***

ಏಬಿ ಮಹಾಮಹಾಸತ್ಯಸಂಧ. ಭಾರೀಭಾರೀಸತ್ಯವಂತ. ಮಾತು ತಪ್ಪುವುದೇ ನಿಯತಿಯಂತಾಗಿರುವ, ಈ ಕೆಟ್ಟ ದಿಟ್ಟನೆ ಕಲಿಗಾಲದಲ್ಲೂ- ತಾನೊಬ್ಬನೆ ದಿಟದ ಆಸಾಮಿಯೆಂಬಂತೆ, ಸದಾ ಸರ್ವದಾ ಸತ್ಯವನ್ನಾಡುತ್ತಾನೆ. ಸತ್ಯವೇ ತನ್ನ ಧಾತುವೆಂತಲೂ ಬೀಗಿಕೊಳ್ಳುತ್ತಾನೆ. ‘ಟ್ರೂಥ್ ಶಲ್ ಪ್ರಿವೇಲ್, ಸರ್... ದಟ್ಸ್ ಮೈ ಯೂಎಸ್ಪೀ...’ ಎಂದು, ತನ್ನ ಸೊಟ್ಟ ಹಲ್ಲುಗಳ ನಡುವೆ, ಬಲು ಸತ್ಯವಾಗಿ ನಾಲಗೆಯಾಡಿಸಿಕೊಂಡು, ಎಂದೂ ಯಾರೆದುರೂ ತಾನುಮಾತುತಿರುಪೆನೆಂಬ ಹಮ್ಮಿನಿಂದ ಹೇಳುತ್ತಾನೆ. ‘ಸುಮ್ಮಸುಮ್ಮನೆ ಸುಳ್ಳಾಡೋಕೇನಿದೆ? ಎಂಥ ಸಂದರ್ಭದಲ್ಲೂ ಸುಳ್ಳಾಡೆನೆಂದು ಮುಗ್ಧಂಗೂ ಗೊತ್ತು... ಈ ಸಲುವಾಗೇ ನಮ್ಮಿಬ್ಬರ ಮಧ್ಯೆ ಆಗಾಗ ಕಿತ್ತುಕೊಳ್ಳುತ್ತೆ...’ ಅನ್ನುತ್ತ, ಸೊಟ್ಟಂಬಟ್ಟ ಹಲ್ಕಿರಿಯುತ್ತಲೂ, ಹೀಗೆ ನಗುವಾಗ ಮತ್ತೂ ಸೊಟ್ಟಗಾಗುವ ಹಲ್ಸಾಲು ತೋರದ ಹಾಗೆ ಬಾಯಿ ಬಿಗಿಯಿತ್ತಲೂ, ಮುಚ್ಚಿಯೂ ನಗು ನುಂಗದಾಗಿ ಉಳಿದುಮರಳಿ ಬಾಯ್ಬಿಚ್ಚಿ ಹಲ್ದೋರುತ್ತಲೂ- ಹೇಳುತ್ತಾನೆ.

ಏಬಿಯ ಮೇಲುದವಡೆಯ ಹಲ್ಸಾಲು ವಿಚಿತ್ರವಾಗಿದೆ.ಮೇಲ್ಸಾಲಿನಲ್ಲಿ ಮುಂದಿರುವ ನಡುವಿನೆಡದ್ದರಿಂದ ಎಡಗಿವಿವರೆಗೂ ಹಬ್ಬುವ ಅಷ್ಟೂ ಹಲ್ಲುಗಳು ವಕ್ರವಾಗಿವೆ. ಬಾಯೊಳಗಿರುವ ಉಳಿದವಕ್ಕೆ ಹೋಲಿಸಿದರೆ ಅವು ತುಸುವೇ ಹೆಚ್ಚು ಹಳದಿ. ಹಳದಿಯೆಂದರೆ ಹಳದಿಯೆಂತಲೂ ಅಲ್ಲ; ತುಸು ಬಿಳಿ ತಗ್ಗಿದ ಬಿಳಿ ಅಷ್ಟೆ. ಇನ್ನು, ಮೇಲ್ಸಾಲಿನಲ್ಲಿಯೇ, ಇತ್ತಲಿನ ಬಲಗಡೆಯವು- ನೇರವೂ ದಿಟ್ಟವೂ ಶುಚಿಶುಭ್ರವೂ ಅಂತನಿಸುತ್ತವೆ. ಅವನಿಗೆ ತನ್ನೀ ದಂತಪಂಕ್ತಿಯ ಕುರಿತೊನ್ನಮೂನೆ ‘ಕಾಂಪ್ಲೆಕ್ಸ್’ ಇದೆಯೇನೋ... ಎಂತಲೇ ಫೋಟೋಕೆ ಪೋಸು ಕೊಡುವಾಗ, ತನ್ನ ಬಲಮೋರೆಯನ್ನಷ್ಟೇ ಹೆಚ್ಚು ಕೆಮೆರಾಕ್ಕೊಡ್ಡುತ್ತಾನೆ. ಪಾಸ್ಪೋರ್ಟು, ಆಧಾರ್‍ಕಾರ್ಡು, ಲೈಸೆನ್ಸಿತ್ಯಾದಿ ಕಡ್ಡಾಯ ದಾಖಲೆಗಳಲ್ಲಿ ಮಾತ್ರ, ಅವನ ಮುಖ ಎದುರಾಗಿಯೂ ಪೂರ್ಣವಾಗಿಯೂ ತೋರಿರುತ್ತದೆ. ಉಳಿದವುಗಳಲ್ಲಿ ತನ್ನ ಎಡಮಗ್ಗುಲನ್ನು ಮಾಚಿ, ಅಥವಾ ಆಚೆ ಮಾಡಿದ್ದು, ಬಲಪಾರ್ಶ್ವವೇ ಮುಂದಾಗಿ ತೋರುತ್ತದೆ. ಫೇಸ್ಬುಕ್ಕಿನಲ್ಲಿರುವ ಪ್ರೊಫೈಲ್-ಪಿಕ್ಚರಂತೂ, ಅವನನ್ನು ಹಿಂದಿನಿಂದ ತನ್ನ ಬಲಕ್ಕೆ ಮೋರೆ ಹೊರಳಿಸಿರುವ ಹಾಗೆ ಚಿತ್ರಿಸುತ್ತದೆ. ಕರಿಗನ್ನಡಕ ತೊಟ್ಟಿದ್ದಾನೆ. ಕನ್ನಡಕವನ್ನು ಕಿವಿಯ ಮೇಲೂರಿಸುವ ಎಡಗಡೆಯ ಕರ್ರಂಕರಿ ಕಡ್ಡಿಯ ಮೇಲೆ, ಝೋಕಾದ ಅಕ್ಷರಗಳಲ್ಲಿ, ಅದರ ಬ್ರ್ಯಾಂಡಿನ ಹೆಸರಿದೆ... ಒನ್ನಮೂನೆ ಚೆನ್ನನಿಸುತ್ತಾನೆ.

ಏಬಿ, ಈ ದಿನಗಳಲ್ಲಿ, ನನ್ನ ಮಟ್ಟಿಗಿನ ಕುತೂಹಲದ ವಸ್ತುವಾಗಿದ್ದಾನೆ. ಇಷ್ಟಕ್ಕೂ, ಭೂಮ್ಯಾಕಾಶವೊಂದಾದರೂ ಸುಳ್ಳಾಡೆನೆನ್ನುವ ಬಲುಭೀಷಣ ಪರಿಭೂಷಣ ಪಣವೇನು ಸಾಮಾನ್ಯವೆ? ಎರಡು ಸಾವಿರದ ಹದಿನೇಳನೇ ಇಸವಿಯಲ್ಲಿ ನಂಬತಕ್ಕದ್ದೆ? ಮಾರುವ ಕೊಳ್ಳುವ ಕೊಂಡುಮಾರುವ ಉದ್ಯೋಗದಲ್ಲಿರುವವನಾವನೂ ಈ ಪಾಟಿ ನಿಜವನ್ನಾಡುವನೇ? ಅವನೊಳಗಿನ ವ್ಯಾಪಾರಸ್ಥು ಅವನನ್ನು ಹೀಗಿರಲು ಬಿಟ್ಟಾನೆ? ಸಂದೇಹವಾಗುತ್ತದೆ.

ಇಷ್ಟಿದ್ದೂ, ನನ್ನೆದುರಿಗೆ ಏಬಿ, ಬೇಕಾಬಿಟ್ಟಿ ನಿಜವನ್ನಾಡುವುದನ್ನು ಗಮನಿಸಿದ್ದೇನೆ. ‘ಅಯ್ಯಯ್ಯೋ... ಲೇಟಾಗಿ ಹೋಯಿತು, ಸರ್... ಟೈಮಿಗೆ ಸರಿಯಾಗಿ ಹೊರಟೆ. ಬೇಸ್ಮೆಂಟಿಗೆ ಬಂದು ಸ್ಕೂಟರ್ ಹತ್ತೋವಾಗ ಟಾಯ್ಲೆಟೊತ್ತರಿಸಿಕೊಂಡು ಬಂತು... ವಾಪಸು ಹೋದೆ!’  ಎಷ್ಟೋ ಸರ್ತಿ ಮುಲಾಜಿಲ್ಲದೆ ಹೇಳಿದ್ದಾನೆ! ತುರ್ತಾಗಿ ಮಾತನಾಡಲಿಕ್ಕಿದೆಯೆಂದು ಒಂದೇ ಸಮ ಫೋನು ಮಾಡಿ, ಅವನೆತ್ತದೆ ಬೇಸತ್ತಿರುವಾಗ, ‘ಸ್ಸಾರೀ ಸರ್... ಮನೇಲಿದ್ದೆ. ಸರ್ವೇ ಸಾಮಾನ್ಯ ಎಲ್ಲಿರುತೀನೋ ಅಲ್ಲೇ ಇದ್ದೆ... ವಿಲ್ ಕಾಲ್ಯು ಸೂನ್...’ ಎಂದು ಮೆಸೇಜು. ಏನಂತ ಎಂತಂತ ಅರ್ಥವಾಗದೆ ತಲೆಕೆಡಿಸಿಕೊಂಡರೆ, ‘ಅಯ್ಯೋ ಟಾಯ್ಲೆಟಿನಲ್ಲಿದ್ದೆ, ಸರ್... ಹಾಗೆ ಬರೆಯೋದು ಸರಿ ಅನಿಸಲಿಲ್ಲ...’ ಅಂತನ್ನುತ್ತಾನೆ! ‘ಮನೇಲಿರೋದು ಅಂದರೆ ಟಾಯ್ಲೆಟಿನಲ್ಲಿರೋದೂ ಅಂತಲೇ?’ ನಕ್ಕು ಕೇಳಿದರೆ, ‘ಅದು ಹಾಗೇನೇ! ನಿಜಕ್ಕಾದರೆ, ನಾನು ಮನೆಗೆ ಹೋಗೋದು ಅದೊಂದಕ್ಕೇನೇ!’ ಎಂದು ಮತ್ತೆ ನಗೆಯಾಡುತ್ತಾನೆ. ಅವನ ಹೆಂಡತಿ ಮುಗ್ಧಾಳೂ ಈ ಮಾತನ್ನು ಅನುಮೋದಿಸಿದ್ದಿದೆ.

ಇವೆಲ್ಲ ನಿಜವೇ ಇದ್ದರೂ ಆಡಬಹುದೆ? ಪರರೆದುರಾಡಬಲ್ಲ ಸಭ್ಯ ವಿಷಯವೆ? ಅಚ್ಚರಿಯಾಗುತ್ತದೆ. ‘ಏನೋ ಸರ್... ಸಾಮಾನ್ಯವಾಗಿ ನಾನೆಂದೂ ಸುಳ್ಳು ಹೇಳೋನಲ್ಲ... ಗುರುಸಮಾನರಾದ ನಿಮ್ಮೆದುರೇನು ಮುಚ್ಚುಮರೆ?’ ಏಬಿ ಹೇಳುತ್ತಾನೆ.  ‘ಸತ್ಯ ಅನ್ನೋದು ನನ್ನ ಸಾಫ್ಟ್ವೇರೊಳಗೆ ಬೆಸಕೊಂಡಿದೆ, ಸರ್... ಏನು ಮಾಡೋದು?’ ಎಂದು ನಗುತ್ತಾನೆ. ಆಗ ಅವನ ಅರ್ಧಮೋರೆಯು ನೆಟ್ಟಗೂ, ಉಳಿದರ್ಧವು ಸೊಟ್ಟಗೂ ತೋರಿಬಂದು, ಬಲು ಅಜೀಬನಿಸುತ್ತದೆ. ಒಂದೇ ಮುಖದಲ್ಲಿ ಎರಡು ವಿಪರೀತಗಳನ್ನಿಟ್ಟುಕೊಂಡಿರುವ ಈ ಮನುಷ್ಯನಾಡುವ ಸತ್ಯಕ್ಕೂ ಇನ್ನೊಂದು ಮಗ್ಗುಲಿರಲಿಕ್ಕಿಲ್ಲವೆ ಎಂದು ಶಂಕಿಸುವುದಾಗುತ್ತದೆ!

ಈ ಪರಿಯ ಸತ್ಯವಂತಿಕೆ ಕೆಲವೊಮ್ಮೆ ತಾರಕಕ್ಕೆ ಹೋಗಿದ್ದಿದೆ. ಮುಜುಗರಕ್ಕೀಡಾಗಿಸಿದ್ದಿದೆ. ಒಮ್ಮೆ ಯಾವುದೋ ಕಾರಣಕ್ಕೆ ತನ್ನ ಫೋನೇಕೆ ಸುಮಾರು ಹೊತ್ತು ಬ್ಯುಸಿಯಿತ್ತೆಂಬುದನ್ನು ಸಮಜಾಯಿಷಿಸಿಕೊಳ್ಳಲು- ‘ಸರ್... ಸ್ಸಾರೀ... ನನ್ನ ಹೆಂಡತಿ ಜೊತೆ ಮಾತಾಡುತಿದ್ದೆ... ಏನೋ ಲೇಡೀಸ್ ವಿಷಯ... ಅದನ್ನೆಲ್ಲ ನನಗೊಪ್ಪಿಸುತಿದ್ದಳು...’ ಅನ್ನುತ್ತ, ತನ್ನ ಹೆಂಡಿರ ಖಾಸಗೀ ಲೆಕ್ಕಗಳನ್ನು ಸಾದ್ಯಂತ ಸವಿವರ ಹೇಳತೊಡಗಿದ್ದ! ಇದೇನು ಅರಿವಿಲ್ಲದ ಮುಗ್ಧತೆಯೋ... ಇಲ್ಲಾ, ಸತ್ಯದಹಠ ತೊಟ್ಟ ಮುಟ್ಠಾಳತನವೋ?!!

***

ಏಬಿಯನ್ನು  ಇನಿಷಿಯಲುಗಳ ಮುಖೇನ ಕರೆಯತೊಡಗಿದ್ದು ಮಹತಿ. ಅವನದೇ ಹೆಸರಿನ ಹತ್ತಾರು ಮಂದಿಯಿದ್ದಾರೆಂಬ ಕಾರಣಕ್ಕೆ, ಅವನನ್ನು ‘ಅವನೇ’ ಆಗಿ ಗುರುತಿಸುವ ಮೇರೆಗೆ- ಹುಟ್ಟಿಕೊಂಡ ಹೆಸರಿದು. ಇನ್ನು ಅವನ ನಿಜವಾದ ಹೆಸರೇನೆಂಬ ಗೊಡವೆ ಇಲ್ಲಿ ಬೇಡ. ಅಕುಲ್ ಬಾಲಾಜಿಯಾದರೂ ಆದಾನು... ಅಮಿತಾಭ್ ಬಚ್ಚನಾದರೂ ಆದಾನೂ... ಹಾಗೇ, ಅಮಿತಾಭನ ಮಗನೂ!

ನನ್ನ ಆಫೀಸಿಗೆ ಕಂಪ್ಯೂಟರುಗಳನ್ನೊದಗಿಸುತ್ತ, ಅವುಗಳ ಮೇಲುಸ್ತುವಾರಿಯನ್ನೂ ಹೊತ್ತಿರುವ, ನನಗಿಂತ ಹದಿಮೂರು ವಯಸ್ಸಿಗೆ ಚಿಕ್ಕವನಾದ- ಏಬಿ, ನನಗೂ, ಮಹತಿಗೂ ಹೇಗೆ ಹತ್ತಿರವಾದನೆಂಬುದೇ ಒಂದು ಕತೆಯಾದೀತು. ಈಗ್ಗೆ ನಾಲ್ಕೈದು ವರ್ಷಗಳ ಹಿಂದೆ, ಕಂಪ್ಯೂಟರೆಂಬುದರ ತಲೆಬುಡ ಕೂಡ ಗೊತ್ತಿದ್ದಿರದ ಮಹತಿ- ಇದ್ದಕ್ಕಿದ್ದಂತೆ ಹೈಟೆಕ್-ಹೈಫೈ ಆಗಲು ಹಾತೊರೆದಾಗ, ಏಬಿ, ತಂತಾನೇ ಗುರು‘ಥರ’ವಾಗಿ ನಿಯುಕ್ತಗೊಂಡುಬಿಟ್ಟ! ತನ್ನ ಆಫೀಸಿನ ಕೆಲಸ ಮುಗಿಸಿ, ನಮ್ಮ ಏರಿಯಾದಲ್ಲೇ ನಾಲ್ಕೈದು ಕ್ರಾಸುಗಳಾಚೆಗಿರುವ ಮನೆ ಸೇರುವ ಮೊದಲು, ಇಲ್ಲಿ ಹೊಕ್ಕು ಹೋಗುವುದೆಂಬ ವಾಡಿಕೆಯ ದೆಸೆಯಿಂದ ಉಂಟಾದ ಅಕ್ವೇಂಟೆನ್ಸಿದು. ಪದೇಪದೇ ಒಬ್ಬನೊಡನೆ ಒಂದೆರಡು ತಾಸು ಕಳೆದರೆ, ಗುರುತಿಗೂ ಹೆಚ್ಚಾದ ಸ್ನೇಹವುಂಟಾಗುವುದು ಸಾಮಾನ್ಯವೇ ತಾನೆ? ಏಬಿಯೊಡನೆ ಆಗಿದ್ದಾದರೂ ಇದೇನೆ... ಮಹತಿಯಂತೂ ನನಗೂ ಹೆಚ್ಚಾಗಿ ಅವನನ್ನು ಹಚ್ಚಿಕೊಂಡಿರುವಳು. ಏಬಿ... ಯಾವಾಗ ಬರುತೀರಿ? ಏಬೀ- ಈ ಫೈಲೇಕೋ ಓಪನಾಗುತಿಲ್ಲ... ಮೊಬೈಲಲ್ಲೇನೋ ಡಾಕ್ಯುಮೆಂಟ್ ಸರಿಯಿಲ್ಲ... ಏಬಿ, ಇದೇನೋ ಪಾಸ್ವರ್ಡ್ ಕೇಳುತಾ ಇದೇರಿ... ಗೊತ್ತಾಗುತಿಲ್ಲ... ಹೀಗೆ ಹಗಲೆಲ್ಲ ಅವನನ್ನು ಸ್ಮರಿಸುವಳು. ಫೋನುಗೈದು ಪುಕ್ಕಟೆ ಸಲಹೆ ಕೇಳುವಳು. ಗ್ಯಾಡ್ಜೆಟು ಗ್ಯಾಡ್ಜೆಟಿಗೂ ಅವನಲ್ಲಿವಿಚಾರಿಸುವಳು. ಎಷ್ಟರ ಮಟ್ಟಿಗೆಂದರೆ, ಮನೆಯಲ್ಲೊಂದು ಟೀವಿ ಬದಲಾಯಿಸುವುದಿದ್ದರೂ ಆ ಕುರಿತು ಅವನ ಮಾತೇ ನಮಗೆ ಪರಮ! 

ಒಟ್ಟಾರೆ, ಏಬಿ, ದಿನದಿನವೂ ಸಂಜೆಯ ಬಳಿಕ ವರ್ತನೆಯೆಂಬಂತೆ ಒದಗಿಬಂದು, ಆಲ್ಮೋಸ್ಟ್ ಮನೆಯವನೇ ಆಗಿಬಿಟ್ಟ. ನಾವು ದಿನದಿನವೂ ಬಡಿಸಿದ್ದೇನು.. ಅವನು ಉಂಡಿದ್ದೇನು... ಹೊತ್ತಲ್ಲದ ಹೊತ್ತಿನಲ್ಲಿ ವಿಶೇಷವಾದ ತಿನಿಸು ಮಾಡಿದ್ದೇನು... ಮೂವರೂ ಕೂಡಿ ಹೊಡೆದಿದ್ದೇನು... ಸಾಲದೆಂದು, ಹತ್ತೂವರೆಯ ರಾತ್ರಿಯಲ್ಲಿ ಬೀದಿ ಸುತ್ತಲಿಕ್ಕೆಂದು ಹೊರಟಿದ್ದೇನು... ಬಾರಿಸ್ತಾದಲ್ಲಿ, ಕೆಫೆ ಕಾಫಿಡೇಯಲ್ಲಿ ಹೊತ್ತು ಮರೆತು ಕುಳಿತಿದ್ದೇನು... ಸರಿಹೊತ್ತಿನ ಗುಂಟ ಉಳಿದಿದ್ದೇನು... ನಕ್ಕಿದ್ದೇನು... ನಲಿದಿದ್ದೇನು... ಒಂದೇ ಎರಡೇ?

ಹೀಗೆ, ಈ ಏಬಿ, ವಾರಕ್ಕೆರಡು-ಮೂರು ಸರ್ತಿ ಮಹತಿಯ ಸಲುವಾಗಿ ಬರುವನಾದರೂ, ಅವಳು ಕಣ್ತೂಗುತ್ತಿದೆಯೆಂದು ಬೆಡ್ರೂಮು ಹೊಕ್ಕ ಮೇಲೂ ನನ್ನೊಡನೆ ಹರಟುತ್ತಲುಳಿಯುವನು. ಊಟದ ಮೇಜಿನಲ್ಲಿ ಕೆಲಹೊತ್ತು, ಹೊರಟೆ ಹೊರಟೆನ್ನುತ್ತಲೇ  ಗೇಟಿನಲ್ಲಿನ್ನಷ್ಟು, ಕಡೆಗೆ ಸ್ಕೂಟರಿನ ಬಳಿ ತುಸುಹೊತ್ತು... ಹೀಗೆ, ಮಹತಿ ಮಲಗಿದ ಮೇಲೂ ಒಂದೊಂದೂ ಕಾಲು ತಾಸು, ಒಡನಿರುವನು. ತನ್ನ ಕೆಲಸದ ಬಗ್ಗೆ, ಹೆಂಡತಿ ಮುಗ್ಧಾಳ ಬಗ್ಗೆ, ಎರಡೂವರೆ ವಯಸ್ಸಿನ ಮಗ ನಿಹಾನನ ಬಗ್ಗೆ... ನನಗೊಲ್ಲದೆಯೂ ಎತ್ತಾಡುವನು. ಹೀಗಿರುವ ನಡುವೆ ಮುಗ್ಧಾಳ ಫೋನು ಬರುವುದು. ಕೂಡಲೆ ಸೈಲೆಂಟಾಗಿಸಿ ಸುಮ್ಮನಾಗುವನು. ‘ಯಾಕಯ್ಯಾ ದೊರೆ... ಹೆಂಡತಿ ಫೋನೆತ್ತಬಾರದೇನಯ್ಯಾ?’ ಎಂದು ಕೇಳುವಾಗ, ‘ಇನ್ನೇನು ಮನೆಗೆ ಹೋಗುತೀನಲ್ಲ... ಹೋದ ಮೇಲೆ ಮಾತನಾಡುತೀನಿ...’ ಅಂತನ್ನುವನು.

‘ಏನಾದರೂ ಅರ್ಜೆಂಟಿದ್ದರೆ?’

‘ಅಂಥದ್ದೇನಿರುತ್ತೆ? ಇನ್ನೂ ಯಾಕೆ ಬಂದಿಲ್ಲ ಅಂತ ತನಿಖೆ ಶುರುವಾಗುತ್ತೆ ಅಷ್ಟೆ!’ ನಗುವನು. ‘ನಾನು ಯಾವತ್ತೂ ಸುಳ್ಳು ಹೇಳೋನಲ್ಲ, ಗುರುಗಳೇ...’ ಅಂತಂದು, ಎಂದಿನಷ್ಟೇ ದಿಟ್ಟವಾಗಿ ತನ್ನ ದಿಟದ ಬಗ್ಗೆ ಪುರಾಣ ಬಿಚ್ಚುವನು. ‘ನಾನು ಅವಳಿಗೆಂದೂ ಮೋಸ ಮಾಡಿಲ್ಲ... ಮಾಡೋದೂ ಇಲ್ಲ... ಆದರೂ ಅವಳಿಗೆ ನನ್ನ ಮೇಲೇನೋ ಗುಮಾನಿ...’ ಅಜೀಬನ್ನಿಸುವುದು.

***

ಈಚಿನೊಂದು ಸಂದರ್ಭದಲ್ಲಿ ಈ ಕುರಿತು ವಿಚಾರಿಸಿಕೊಂಡೆ. ಅವನ ಹೆಂಡತಿಯ ಬಗ್ಗೆ ತಿಳಿಯುವ ಉದ್ದೇಶದಿಂದಲ್ಲ; ಇನ್ನೊಬ್ಬರೆದುರು ಹೆಂಡತಿಯನ್ನು ಬಿಟ್ಟುಕೊಡೋದು ತಪ್ಪೆಂದು ತಿದ್ದುವ ಉದ್ದೇಶದಿಂದ. ಬೇಕಾದ್ದು ಬೇಡದ್ದನ್ನೆಲ್ಲ  ಒಪ್ಪಿಸಿದ. ಮಾತನ್ನು ಸೋಸಿ, ಸಾಣಿಸಿ ಆಡುವುದೆನ್ನುವ ವಿಚಾರವೇ ಮನುಷ್ಯನಲ್ಲಿಲ್ಲವಂತನ್ನಿಸಿತು!

‘ಇವಳು ನನಗೆ ಹೇಗೆ ಸಿಕ್ಕಿದಳು ಅಂತ ನಿಮಗೆ ಗೊತ್ತೇ ಇದೆಯಲ್ಲ, ಸರ್... ಅಸಲಿನಲ್ಲಿ ಮದುವೆಯಾಗೋ ಉಮೇದೇ ಇದ್ದಿಲ್ಲ ನನಗೆ. ತಾನೇ ಮೇಲೆ ಬಿದ್ದು ಕಟ್ಟಿಕೊಂಡಳು... ನಮಗಿನ್ನೂ ಜವಾಬ್ದಾರಿ ಬಂದಿಲ್ಲ, ಬೇಡವೇ ಬೇಡ ಕಣೇ -ಅಂತ ಗೋಗರೆದೆ... ಕೇಳಲಿಲ್ಲ. ತಾನೇ ಮೇಲೆ ಬಿದ್ದು ಮಗು ಮಾಡಿಕೊಂಡಳು... ಒಟ್ಟಿನಲ್ಲಿ ನನ್ನ ಬದುಕನ್ನೇ ಹೈರಾಣಾಗಿಸಿಬಿಟ್ಟಳು....

‘ಇಷ್ಟಾದ ಮೇಲೂ ನನ್ನನ್ನೇನು ಸುಮ್ಮನೆ ಬಿಡುತಾಳೆಯೇ? ಎಲ್ಲಿ ಹೋದೆ... ಎಲ್ಲಿ ಬಂದೆ... ಅನ್ನೋದನ್ನೆಲ್ಲ ಸದಾ ಒಪ್ಪಿಸುತಿರಬೇಕು... ನನಗೋ ಮನೆ ಬಿಟ್ಟರೆ ಆಫೀಸು, ಆಫೀಸು ಬಿಟ್ಟರೆ ಮನೆ... ಎರಡೂ ಕಡೆ ಇಲ್ಲ ಅಂದರೆ ನಿಮ್ಮ ಮನೆ ಅಷ್ಟೇನೇ, ಸರ್... ಇದು ಅವಳಿಗೆ ಗೊತ್ತು ಕೂಡ... ಆದರೂ ಕಾಡುತಾಳೆ. ಆಗಾಗ ಫೋನು ಮಾಡುತಿರು ಅನ್ನುತಾಳೆ... ಫೋನಾಗದಿದ್ದರೆ ಮೆಸೇಜು ಮಾಡು ಅನ್ನುತಾಳೆ... ಎಷ್ಟು ಕೆಲಸ ಇರುತ್ತೆ, ಸರ್... ನಿಮಗೇ ಗೊತ್ತಲ್ಲ...

‘ಮದುವೆಯಾದ ಮೊದಲ ಮೂರು ವರ್ಷ- ಬೇರೆ ಮನೆ ಮಾಡೂಂತ ತಲೆ ತಿಂದಳು, ಸರ್... ನಾನು ಜಪ್ಪಯ್ಯ ಅಂದರೂ ಒಪ್ಪಲಿಲ್ಲ... ಇರೋದಾದರೆ ನನ್ನ ಅಪ್ಪ-ಅಮ್ಮನ ಜೊತೆ ಇರು. ಇಲ್ಲಾ, ಡೈವೋರ್ಸ್ ಅಂತ ಕಟ್ಟುನಿಟ್ಟಾಗಿ ಹೇಳಿಬಿಟ್ಟೆ... ಆಮೇಲೆ ಮಗು ಮಾಡಿಕೊಳ್ಳೋಣ ಅಂತ ವರಾತ ಸುರುವಾಯಿತು... ಈಗ ಮಗ ದೊಡ್ಡೋನಾಗುತಿದ್ದಾನಲ್ಲ, ಇನ್ನೊಂದು ರಂಪ ಹಚ್ಚಿಕೊಂಡಿದ್ದಾಳೆ...

‘ಎಷ್ಟು ಸಲ ಹೇಳಿದೀನಿ... ಮುಗ್ಧಾ, ನಾನು ನಿನ್ನಪ್ಪನ ಹಾಗೆ ಇನ್ನೊಬ್ಬರ ಕೆಳಗೆ ಕೆಲಸಕ್ಕಿರೋನಲ್ಲ... ಸ್ವಂತ ಕೆಲಸ ಅಂತ... ತಿಳಕೊಳ್ಳೋದೇ ಇಲ್ಲ... ನಾನು ಸುಳ್ಳು ಹೇಳೋನಲ್ಲ ಅಂತ ಗೊತ್ತು, ಸರ್... ಆದರೂ ಸುಖಾಸುಮ್ಮನೆ ಫೋನು ಮಾಡಿ ಕಾಡುತಾಳೆ... ಎತ್ತಿದರೆ ತಾನೇ ಮಾತಾಗುತ್ತೇಂತ ನಾನು ಫೋನೇ ಎತ್ತಲ್ಲ... ಮನೆಗೆ ಹೋದ ಮೇಲೆ, ಅವಳಾಗೇ ವಿಷಯ ಎತ್ತಿದರೆ ಮಾತಾಡುತೀನಿ... ಇಲ್ಲದಿದ್ದರೆ, ಹೊದ್ದು ಮಲಗಿಬಿಡುತೀನಿ...’

‘ನನಗೂ ಏನೇನೆಲ್ಲ ಆಸೆ ಇದೆ, ಗೊತ್ತಾ, ಸರ್... ನಿಮ್ಮಂಥವರ ಜೊತೆ ಇರಬೇಕು... ನಿಮ್ಮಂಥೋರಿಂದ ಬದುಕು ಕಲಿತುಕೋ ಬೇಕು ಅಂತೆಲ್ಲ... ನಿಮಗೆ ತಾನೇ ಪುರುಸೊತ್ತೆಲ್ಲಿರುತ್ತೆ? ಭಾನುವಾರಗಳಂದು ಒಂದು ಹೆಜ್ಜೆ ಬಂದು ಕಂಡು ಹೋಗಬೇಕು ಅನಿಸುತ್ತೆ... ಇವಳು ಬಿಡೋದೇ ಇಲ್ಲ... ವಾರ ಪೂರ್ತಿ ನಿನ್ನ ಮಗನ್ನ ನೋಡಿಕೊಂಡಿರುತೀನಲ್ಲ, ಇವೊತ್ತು ನಿನ್ನ ಡ್ಯೂಟಿ ಅಂತ ಬೇಬಿ ಸಿಟ್ಟಿಂಗ್ ಮಾಡಿಸುತಾಳೆ!!

‘ಒಂದೊಂದು ಸಲ ಎಷ್ಟು ಸಿಟ್ಟು ಬರುತ್ತೆ, ಗೊತ್ತಾ, ಸರ್... ನನಗೇನು ಓದಿದೆಯಾ... ಅಥವಾ, ನಿಮ್ಮಗಳ ಹಾಗೆ ಡಿಗ್ರಿ ಇದೆಯಾ? ಕತ್ತೆ ದುಡಿತ ಬಿಟ್ಟರೆ ಇನ್ನೇನು ತಾನೇ ಇದೆ? ನಿಮ್ಮಂಥೋರ ಜೊತೆ ಇದ್ದರೆ ಬೌದ್ಧಿಕವಾಗಿ ಬೆಳೆಯಬಹುದು... ಇವಳ ಜೊತೆ ಇದ್ದರೆ ಬರೀ ವಾಟ್ಯಾ ಕಮ್ಯಾ ಗೋಯಾ -ಥರದ ಇಂಗ್ಲಿಷ್ ಆಗಿಬಿಡುತ್ತೆ ಅಷ್ಟೆ!

‘ಎಷ್ಟೋ ಸಲ ಇವಳನ್ನ ಬಿಟ್ಟುಬಿಡಬೇಕು ಅಂತನಿಸಿದೆ, ಸರ್... ಒಂದೊಂದು ಸಲ ಮಕ್ಕಳ ಥರ ರಚ್ಚೆ ಹಿಡಕೊಂಡಿರುತಾಳೆ. ಯಾರ ಜೊತೆನೂ ಮಾತಾಡಲ್ಲ... ರೂಮಿಂದ ಸೈತ ಹೊರಗೆ ಬರಲ್ಲ... ಆಗಿದ್ದಾಗಲಿ ಅಂತ ಬಿಟ್ಟುಹಾಕಿದರೆ, ಸಮಸ್ಯೆ ತೀರುತ್ತಲ್ಲ ಅಂತನಿಸುತ್ತೆ... ಆದರೆ ನನ್ನ ಮಗನ ಮುಖ ನೋಡಿಕೊಂಡು ಸುಮ್ಮನಿರೋದಾಗುತ್ತೆ...’

ಏಬಿ ಆಡುತ್ತಲೇ ಹೋದ. ಚಕಾರವೆತ್ತದುಳಿದೆ. ಹೀಗೇಕಂತ ಮುಂದೇನಂತ ಕುತೂಹಲಿಸಲಿಲ್ಲ. ಬೇಕಾಬಿಟ್ಟಿ ಹ್ಞಾಂಹ್ಞೂಂ ಅನ್ನಲಿಲ್ಲ. ಅವನು ಹೇಳಿದ್ದಕ್ಕೆ ಪ್ರತಿಕ್ರಿಯಿಸಿದೆನಾದರೆ, ವೃಥಾ ಮಾತಿಗೆ ಮಾತು ಬೆಳೆದು, ನಾನು ಹೇಳಿದ್ದನ್ನೊಂದು ಒಪೀನಿಯನೆಂಬಂತೆ, ಅವನು ತಿಳಿದುಕೊಳ್ಳುವುದೇತಕ್ಕೆ ಬೇಕು? ಅಲ್ಲದೆ, ಯಾವುದೇ ಸಂಸಾರದಲ್ಲಿ ಇವೆಲ್ಲವೂ ಸಾಮಾನ್ಯವೇ ತಾನೆ?  ಹಾಗಾಗಿ ಸುಮ್ಮನಿದ್ದೆ. ಅವನು ಆಡಿದ್ದಕ್ಕೆಲ್ಲ ಪುಂಗಿಯೆದುರಿನ ಕರಿನಾಗದ ಹಾಗೆ ತಲೆದೂಗುತ್ತಿದ್ದೆ. ಇಷ್ಟಿದ್ದೂ ಏಬಿ, ಸಮಯ ಸಿಕ್ಕಾಗಲೆಲ್ಲ, ಅದು-ಇದು ನೆಪ ಮಾಡಿಕೊಂಡು, ಸುಖಾಸುಮ್ಮನೆ, ಹೆಂಡತಿಯ ಬಗ್ಗೆ ಒಂದಲ್ಲೊಂದು ಚಾಡಿ ಹೇಳುತ್ತಲೇ ಇದ್ದ.

***

ಈ ಮಧ್ಯೆ ಮುಗ್ಧಾಳೆಂಥವಳೆನ್ನುವ ಪ್ರಾತ್ಯಕ್ಷಿಕೆಯೂ ನನಗೊದಗಿಬಂತು.

ಕಳೆದ ಭಾನುವಾರ, ನನ್ನ ಐಫೋನು ಕೈಕೊಟ್ಟಿದೆಯೆಂದೂ, ಅರ್ಜೆಂಟೆಂದೂ, ಅಂದೇ ಬಂದಿದ್ದಾದರೆ ಒಳಿತೆಂದೂ- ಏಬಿಯ ಕೈಫೋನಿನಲ್ಲೊಂದು ಮೆಸೇಜು ಬಿಟ್ಟಿದ್ದೆ. ಸಂಜೆ ನಾಲ್ಕರ ಸುಮಾರಿಗೆ ಬಂದ ಮಹಾಶಯ, ಬಂದ ಕೆಲಸ ಮುಗಿದ ಮೇಲೆಯೂ, ಸಂಜೆ ಏಳರವರೆಗೆ ನಮ್ಮಲ್ಲಿಯೇ ಉಳಿದ. ‘ನಿಹಾನನ ಡ್ಯೂಟಿ ತಪ್ಪಿದರೆ ನಿನ್ನ ಹೆಂಡತಿ ಮುನಿದಾಳು... ಜಸ್ಟ್ ಗೆಟ್ ಬ್ಯಾಕ್...’ ಎಂದು ಹೇಳಿ ಒಂದೆರಡು ಸರ್ತಿ ಎಚ್ಚರಿಸಿದೆ. ಪರವಾಗಿಲ್ಲ ಅಂತಂದ. ‘ಇಲ್ಲಿಂದ ಹೊರಟರೆ ಐದು ಮಿನಿಟಿನಲ್ಲಿ ಮನೇಲಿರಬಲ್ಲೆ... ದೊಡ್ಡ ವಿಷಯವಾ?’ ಅನ್ನುತ್ತ ಉಡಾಫೆಗೈದ. 

ಆರೂ ಮುಕ್ಕಾಲರ ಹೊತ್ತಿಗೆ, ಮುಗ್ಧಾಳ ಮೊದಲ ಫೋನು ಬಂತು. ಇವನು ಎಂದಿನಂತೆ ರಿಸೀವು ಮಾಡಲಿಲ್ಲ. ಮೊಬೈಲಿನಲ್ಲಿ ಅವಳ ಹೆಸರು ಮಿಣಿಕಿದ್ದೇ, ಕರೆ ಕಡಿದು ಸುಮ್ಮನಾದ. ‘ಐ ಥಿಂಕ್ ಏಬಿ, ಯು ಶುಡ್ ಗೆಟ್ ಗೋಇಂಗ್...’ ಅಂತಂದೆ. ಕೇಳಲಿಲ್ಲ. ‘ಅಟ್ಲೀಸ್ಟ್ ಫೋನು ತಗೊಳ್ಳಲಿಕ್ಕೇನು?’ ಎಂದು ಕೇಳಿದೆ. ಎಂದಿನಂತೆ ಅರೆಸೊಟ್ಟವಾಗಿಯೂ, ಅಷ್ಟೇ ಅರೆನೆಟ್ಟಗೂ ನಕ್ಕ. ಅಷ್ಟರಲ್ಲಿ ಫೋನು ಮರಳಿ ರಿಂಗಣಿಸಿತು. ನಾನೇ ರಿಸೀವುಗೈದು ಅವನ ಕಿವಿಯಲ್ಲೊಡ್ಡಿದೆ. ‘ಇನ್ನರ್ಧ ಗಂಟೆ... ಬಂದುಬಿಟ್ಟೆ, ಮುಗ್ಧಾ...’ ಅಂತಂದು ಮಾತು ಕಡಿದ. ಮರುಗಳಿಗೆಗೆಲ್ಲ ಮರಳಿ ಕರೆ. ಇವನು ಬೇಕೆಂದೇ ಫೋನೆತ್ತದೆ ಸುಮ್ಮನಿದ್ದ. ಅವಳು ಕರೆದೇ ಕರೆದಳು. ಇವನು ಸುಮ್ಮನೆ ಉಳಿದೇ ಉಳಿದ! ಈರ್ವರ ನಡುವೆ ಪಟ್ಟಾದ ಪೈಪೋಟಿ ಏರ್ಪಟ್ಟಿತ್ತು!! ಕಡೆಗೆ, ನಾನು ಗದರಿದೆನೆಂದು ಫೋನೆತ್ತಿಕೊಂಡು- ‘ನೀನೆಷ್ಟು ಸರ್ತಿಯಾದರೂ ಫೋನು ಮಾಡು... ನಾನಿಷ್ಟೇನೆ... ತಿಳಿತಾ?’ ಅಂತ ತಗ್ಗುದನಿಯಲ್ಲೇ ಒರಲಿದ. ‘ನಾನೆಲ್ಲಿದ್ದೀನೀಂತ ನಿನಗೆ ಗೊತ್ತು, ಮುಗ್ಧಾ... ಮೊದಲು ಫೋನಿಡು...’ ಆಜ್ಞಾಪಿಸಿದ. ಅವಳು ಸುಮ್ಮನಾಗಲಿಲ್ಲ. ‘ಮುಗ್ಧಾ... ಮುಗ್ಧಾ... ನಾನು ನಿನ್ನಲ್ಲೆಂದೂ ಸುಳ್ಳಾಡಲ್ಲ ಅನ್ನೋದು ನಿನಗೆ ಗೊತ್ತು... ನಾನು ಮುಖೇಶ್ ಸರ್ ಜೊತೇಲಿದೀನಿ...’ ಅಂತಾಗಿ ಮಾತು ಮುಂದುವರೆಯಿತು. ‘ಹೀಗೆ ಹಠ ಮಾಡಿದರೆ ಆಗಲ್ಲ, ಮುಗ್ಧಾ... ನಾನು ಯಾವಾಗ ಬರಬೇಕೂನ್ನೋದು ನನಗೆ ಬಿಟ್ಟಿದ್ದು... ವಿಲ್ ಕಮ್ ಸೂನ್... ಆದಷ್ಟು ಬೇಗ ಬರುತೀನಿ, ಮುಗ್ಧಾ... ಸ್ವಲ್ಪ ತಡಕೋ... ಆಯಿತಾ?’ ಎಂದು ರಮಿಸುವ ದನಿ ಮಾಡಿ ಹೇಳಿ, ಫೋನು ಕಡಿದ. ಮುಂದಿನ ಮೂರನೇ ಮಿನಿಟಿಗೆಲ್ಲ ಮತ್ತೆ ಕರೆದಳು. ‘ಹೇಳಿದೆನಲ್ಲ, ಸರ್... ಇವೊತ್ತೇನಾಗುತ್ತೋ ನಾನೂ ನೋಡೇಬಿಡುತೀನಿ... ಹೇಗೆ ದಬ್ಬಾಳಿಕೆ ಮಾಡುತಾಳೆ, ನೋಡಿ...’ ಅಂತಂದು, ಫೋನನ್ನು ಏರ್ಪ್ಲೇನ್ ಮೋಡಿಗೆ ಹಾಕಿ, ಕಿಸೆಗಿಳಿಸಿದ.

ಹಿಂದೆಯೇ ನನ್ನ ಮೊಬೈಲು ರಿಂಗಾಯಿತು. ಗಂಡ ಸಿಗುತ್ತಿಲ್ಲವೆಂಬ ಕಾರಣಕ್ಕೆ ನನ್ನನ್ನು ಕರೆಯುತ್ತಿದ್ದಳು!!

‘ಸರ್... ಬಿಟ್ಟುಬಿಡಿ... ರಿಸೀವ್ ಮಾಡಬೇಡಿ... ಇವೊತ್ತು ನಾನೊಂದು ಇತ್ಯರ್ಥ ಮಾಡಿಕೋತೀನಿ...’ ಅಂತಂದು ಸರಬರನೆ ಹೊರಟುಬಿಟ್ಟ.

ವಿಚಿತ್ರವೆನ್ನಿಸಿತು. ಮಾತು ತೋಚದೆ ಸುಮ್ಮನಾದೆ.

***

ಸರಿ... ಇವೊತ್ತಿನವರೆಗೆ ಏಬಿಯ ಅಡ್ರೆಸ್ಸಿರಲಿಲ್ಲ. ದಿನ ಬಿಟ್ಟು ದಿನಕ್ಕಾದರೂ ಮನೆ ಹೊಕ್ಕು ಹೋಗುತ್ತಿದ್ದವನು, ಆಗದಿದ್ದರೆ ಫೋನೋ ಮೆಸೇಜೋ ಮಾಡುತ್ತಿದ್ದವನು, ಏಕಾಏಕಿ ನಾಪತ್ತೆಯಾಗಿಬಿಟ್ಟ! ಅವೊತ್ತು ಅವಸವಸರವಾಗಿ ಮನೆಗೆ ಹೋದವನು ಸುಸೂತ್ರವಾದುದನ್ನೇ ಇತ್ಯರ್ಥಿಸಿಕೊಂಡು, ಹೆಂಡಿರೊಡನೆ ಸುಖವಾಗಿದ್ದಾನೆಂತಲೇ ಬಗೆದೆ. ಇಂದು ಬೆಳಿಗ್ಗೆ, ಏನೆತ್ತವೆಂತೊಂದು ಮೆಸೇಜು ಹಾಕೋಣವೆನಿಸಿದರೂ ಕೆಲಸದ ಒತ್ತಾಯವಿತ್ತಾಗಿ ತಡೆದೆ. ಸರಿ... ಬೇಗ ಮಲಗೋಣವೆಂದುಕೊಂಡು, ರೂಮಿನತ್ತ ಹೊರಳಿದ್ದೆನಷ್ಟೆ, ಗೇಟು ಸದ್ದಾಯಿತು. ಹತ್ತೂ ಕಾಲರ ಸುಮಾರು; ಇದ್ದಕ್ಕಿದ್ದಂತೆ ಅವತರಿಸಿದ್ದ!

‘ಏನೋ ಇತ್ಯರ್ಥ ಆಯಿತು, ಸರ್... ಇನ್ನು ಮೇಲಿಂದ ಹೀಗೆ ಮಾಡಲ್ಲ ಅಂತ ಭಾಷೆ ಕೊಟ್ಟಿದ್ದಾಳೆ... ಇಲ್ಲದಿದ್ದರೆ ಬಿಟ್ಟೇಬಿಟ್ಟೇನೂಂತ ಹೆದರಿಸಿದ್ದೆ ಗೊತ್ತಾ? ಉಪಾಯ ಫಲಿಸಿತು...’ ಅಂತಂದ.

‘ಏಬೀ... ನಾನು ಹೀಗನ್ನುತೀನೀಂತ ತಪ್ಪು ತಿಳೀಬೇಡ... ನನಗನಿಸುತ್ತೆ, ಶಿ ನೀಡ್ಸ್ ಯುವರ್ ಅಟೆನ್ಷನ್ ಅಷ್ಟೆ. ಹಾಗಾಗಿ, ಹೀಗೆಲ್ಲ ಮಾಡುತಾಳೆ. ಒಳಗೇನೋ ಇನ್ಸೆಕ್ಯುರಿಟಿ ಕಾಡುತಿದೆ... ಬಹುಶಃ ಆ ಕಾರಣಕ್ಕಿರಬೇಕು...’ ಏಬಿಯನ್ನು ತಿದ್ದಹವಣಿದೆ. ಅವನಿಗೆ ನನ್ನ ಮಾತು ಸೇರದಾದವು. ತಾನೇ ಸರಿಯೆನ್ನುವಂತೆ ಮೊಂಡುತನಗೈದ. ‘ಏನು ಗೊತ್ತಾ, ಏಬೀ... ನೀನು ಆಕೆಯ ಬಗ್ಗೆ, ನಿನ್ನ ಸಂಸಾರದ ಬಗ್ಗೆ- ಎಷ್ಟೆಲ್ಲ ಸಸಾರವಾಗಿ ಮಾತಾಡಿದ್ದೀಂತ ನಿನಗೆ ಗೊತ್ತಿಲ್ಲ. ಆಕೆ ನಿನ್ನನ್ನು ಕಾಡುತಿದ್ದಾಳೆ ಅಂದರೆ, ಅವಳಿಗೆ ನಿನ್ನ ಅವಶ್ಯಕತೆ ಇದೆ ಅನ್ನೋದು ನಿನಗೆ ಮೊದಲು ಅರ್ಥವಾಗಬೇಕು... ಇದೂನೂ ಪ್ರೀತಿ ಅನ್ನೋದರ ಇನ್ನೊಂದು ರೂಪ ಅಷ್ಟೇ...’ ಎಷ್ಟೇ ತಿಳಿಹೇಳಿದರೂ, ಏಬಿ ತಾನೇ ಸರಿಯೆನ್ನುವ ವಾದವಿರಿಸಿ, ತಾನೆಷ್ಟು ಸತ್ಯಸಂಧನೆಂದು ಬಗೆಯತೊಡಗಿದ. ‘ನಾನೇನು ಅವಳಿಗೆ ಮೋಸ ಮಾಡಿದ್ದೀನಾ? ನನಗೇನಾದರೂ ಬೇರೆ ಚಟಗಿಟ ಇದೆಯಾ? ಇನ್ನೇನಾದರೂ ವ್ಯವಹಾರ ಮಾಡುತಿದ್ದೀನಾ? ಸುಮ್ಮನಿರಿ, ಸರ್... ’ ಅನ್ನುತ್ತ ಸಮಜಾಯಿಷಿಗೆ ತೊಡಗಿದ. ‘ಏಬಿ... ಏಬಿ... ಎಲ್ಲಿ ನಾನೊಂದು ಪ್ರಶ್ನೆ ಕೇಳುತೀನಿ... ಇದಕ್ಕೆ ಉತ್ತರ ಕೊಡೋದೇನೂ ಬೇಡ... ಇದನ್ನ ನೀನು ನಿನಗೆ ನೀನೇ ಕೇಳಿಕೋ... ಏನು ಗೊತ್ತಾ? ನೀನು ನನ್ನೊಡನೆ ಹೆಚ್ಚು ಸಮಯ ಕಳೀತಿದ್ದೀ ಅನ್ನೋದು ಅವಳಲ್ಲಿ ಮತ್ಸರ ಹುಟ್ಟುಹಾಕುತಿದೆ... ಒಂದು ರೀತೀಲಿ ಇದು ಸವತಿಮತ್ಸರ ಇದ್ದ ಹಾಗೆ! ಜಗತ್ತಿನಲ್ಲಿ, ತನ್ನ ಗಂಡ ತನ್ನನ್ನು ಬಿಟ್ಟು ಇನ್ನಾರಿಗೂ ಸಲ್ಲಕೂಡದೆನ್ನೋ ಜಿದ್ದಿದು!’ ಹೀಗೆ ಹೇಳುವಾಗ, ಏಬಿ, ತುಸುವೇ ತಣ್ಣಗಾದ. ‘ನೀನು ಸುಳ್ಳಾಡಲ್ಲ ಅನ್ನೋದನ್ನೇ ದೊಡ್ದದು ಮಾಡಿ ಹೇಳುತೀಯಲ್ಲ, ಆಕೆಯೆದುರು ನಿನಗೆ ಅವಳ ಮೇಲೆ ಪ್ರೀತಿಯಿದೆ ಅಂತ ಯಾವತ್ತಾದರೂ ಬಾಯಿ ಬಿಚ್ಚಿ ಸತ್ಯವನ್ನಾಡಿದ್ದೀಯ? ಅಥವಾ, ಆಕೆಯ ಮೇಲೆ ನಿನಗೆ ನಿಜವಾಗಲೂ ಪ್ರೀತಿ ಇದೆಯಾ?’ಅಂತಂದಿದ್ದೇ ಏಬಿ ಅವಾಕ್ಕಾಗಿಬಿಟ್ಟ! ಕಣ್ಣುಗಳು ಪಸೆಯೂಡಿಕೊಂಡವು. ಏನನ್ನೋ ಹೇಳಲು ತಡವರಿಸಿದ. ತಡೆದೆ. ‘ಇದಕ್ಕೆ ಉತ್ತರ ನನಗೆ ಬೇಡ, ಏಬೀ... ನೀನು ಕಂಡುಕೋ, ಅಷ್ಟೆ... ಇನ್ನು ಮೇಲೆ ಯಾವೊತ್ತೂ ಬಿಟ್ಟುಬಿಡುತೀನಿ ಅನ್ನೋ ಅಸ್ತ್ರವನ್ನ ಪ್ರಯೋಗಿಸಬೇಡ ಅಷ್ಟೇ...’ ಅಂತಂದೆ.

ಅವಾಕ್ಕುಳಿಸಿಕೊಂಡೇ ಎದ್ದು ಹೊರಟ. ‘ನೀನು ಸುಳ್ಳಾಡುತಿಲ್ಲ ಹೌದು... ಆದರೆ ತಕ್ಕ ಸತ್ಯವನ್ನೂ ಆಡುತಿಲ್ಲ... ಮೊದಲು ಹೊರಡು. ಸತ್ಯವನ್ನು ಆಡು...’ ಅಂತಂದು ಬೀಳ್ಕೊಟ್ಟೆ.

ರೂಮು ಸೇರುವಾಗ ಮಹತಿ ಅರೆನಿದ್ದೆಯಲ್ಲಿದ್ದಳು.

***

‘ನಿಮಗೆ ಯಾರ ಮೇಲಾನ ಹೊಸ ಆಸಕ್ತಿ ಮೂಡಿದ್ದರೆ ಹೇಳಿ ಆಯಿತಾ...’ ಅಂತಂದ ಮಹತಿಯ ಕಳವಳಕ್ಕಿಂತ, ಮುಗ್ಧಾಳ ಮೆಸೇಜೇನಿರಬಹುದೆಂದು, ಮನಸ್ಸು, ಸುಮಾರು ಡೋಲಾಯಿಸಿತ್ತು. ಎಷ್ಟೋ ಹೊತ್ತು ಸುಮ್ಮಗಿದ್ದು, ಮೆಲ್ಲಗೆ ದಿಂಬಿನಡಿಯಿಂದ ಮೊಬೈಲೆತ್ತಿಕೊಂಡು, ಕಳ್ಳನೆ ಹಾಗೆ ಟಾಯ್ಲೆಟು ಹೊಕ್ಕೆ. ಓದಿದೆ.

ಎದೆ ಧಸಕ್ಕನೆ ಕುಸಿಯಿತು! ಗುಂಡಿಗೆಯು ಕರುಳಿಗಿದುಬಿಟ್ಟರೇನು ಗತಿ?!

‘ಲೋ... ನಿನ್ನ ಪ್ರಾಬ್ಲೆಮ್ಮಾದರೂ ಏನೋ?! ನನ್ನ ಮತ್ತು ನನ್ನ ಗಂಡನ ನಡುವಿನ ಸಮಸ್ಯೆಗೆ ನೀನೇ ಕಾರಣ ಅಂತ ಗೊತ್ತಿದ್ದರೂ, ಅವನಿಂದ ನೀನೇಕೆ ದೂರ ಹೋಗುತಿಲ್ಲ? ಅವನನ್ನೇಕೆ ದಿನವೂ ಕರೆಸಿಕೊಂಡು ನಡುರಾತ್ರಿಯವರೆಗೂ ಕೂರಿಸಿಕೊಂಡಿರುತೀಯಾ? ಅವನಿಗೂ ನಿನ್ನಂತೆ ಸಂಸಾರವಿದೆ, ಹೆಂಡತಿಯಿದ್ದಾಳೆ, ಮಗು ಇದೆ... ಅನ್ನೋ ಪರಿವೆ ಬೇಡ? ಯಾಕೆ ನೀನು ನಮ್ಮಿಬ್ಬರ ನಡುವೊಂದು ಗೋಡೆಯಂತೆ ಎದ್ದು ನಿಂತಿದ್ದೀಯಾ? ಜಸ್ಟ್ ಸ್ಟಾಪಿಟ್‌್, ಬಾಸ್ಟರ್ಡ್... ಸ್ಟಾಪಿಟ್ಟ್... ಸ್ಟಾಪ್ ಬೀಇಂಗ್ ಎ ವಾಲ್ ಬಿಟ್ವೀನ್ ಅಸ್...’

ಸತ್ಯವೇ ಸೋತಂತನ್ನಿಸಿತು. ಮೆಸೇಜನ್ನು ಮತ್ತೆ ಮತ್ತೆ ಓದಿದೆ. ಅದೇಹೊತ್ತಿಗೆ ಏಬಿಯಿಂದಲೂ ಒಂದು ಮೆಸೇಜು ಬಂತು!

‘ಸರ್... ಕ್ಷಮೆಯಿರಲಿ... ಇನ್ನು ಮುಂದೆಂದೂ ನಾನು ನಿಮ್ಮಲ್ಲಿಗೆ ಬರೋದಿಲ್ಲ...ನಿಮ್ಮ ಸಲುವಾಗಿ ನನಗೆ ಮುಗ್ಧಾಳನ್ನ ಕಳಕೊಳ್ಳೋಕಾಗಲ್ಲ!!’

ಮಾತು ತೋಚದ ನಡುವೆ ಯಾವುದು ಸೊಟ್ಟ, ಯಾವುದು ನೆಟ್ಟಗೆನ್ನುವ ಪರೋಕ್ಷವೊಂದೂ ಮೂಡಿ ದೊಡ್ಡದಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry