ಮಾಯಾ ಸರೋವರ

7

ಮಾಯಾ ಸರೋವರ

Published:
Updated:
ಮಾಯಾ ಸರೋವರ

ನಿದ್ದೆ ಎಚ್ಚರವ ಮೀಟಿ ದಾಟಿ

ಗಾಢ ಸುಷುಪ್ತಿಯ ಕೊಳ್ಳ

ಇಳಿದಿಳಿದು ಹೋದಂತೆ ಆಳ

ಕರೆಯುತಿದೆ ಯಾವುದೋ ಕೊಳಲು

ಸುರತ ಸುಖಕೆಳೆಸುತಿದೆ

ಸಾವಿನಾಚೆಗೂ ಜಿಗಿದು

ಸಾವಿರ ಸಾವಿರ ಜೀವಗಳ

ಒಮ್ಮೆಲೇ ಗರ್ಭದಲಿ ಚಿಗುರಿಸುವ

ಅದಮ್ಯ ವಾಂಛೆ

ಕುದುರೆಗಳ ಖುರಪುಟ... ಹೇಶಾರವ

ವಿರಹದ ವೀಣಾಸ್ವನ... ಸುಖದ ಚೀತ್ಕಾರ

ಮಂತ್ರದಂಡ ಆಡಿಸಿದಂತೆ

ನಡೆಯುತಿರುವೆ ನಿನ್ನ ಹಿಂದೆಯೇ

ಕನಸಲ್ಲಿ ನಡೆಯುವಂತೆ.

ಏಯ್ ನಿಲ್ಲು....

ಬೆನ್ನು ಮಾತ್ರ ತೋರುತ್ತಿದೆ

ನಿನ್ನ ಮುಖ ಕಾಣಬೇಕಿದೆ ನಾನು

ಪರ್ವತ ಕಣಿವೆ ನದಿ ಕಾಡು

ಅನೂಹ್ಯ ತಿರುವುಗಳ ಜಾಡು

ಮೇಲೆ ನಕ್ಷತ್ರ ಹೊದಿಕೆ

ಒಳಗೆ ನಿಗೂಢ ಕತ್ತಲು

ಅಲ್ಲಲ್ಲಿ ಹಸಿರುಟ್ಟ ತೋಟ

ಮಾನಸ ಸರೋವರದಲ್ಲಿ

ತೇಲುವ ಧವಳ ಹಂಸ

ಕತ್ತಲಲ್ಲಿ ನೀನು

ಅಂಗಿಬಿಚ್ಚೆಸೆದ ಸದ್ದು

ಬೆತ್ತಲಾಗು ಬಾ ಎನುವ ಪಿಸುದನಿಗೆ

ಒಳಗೆಲ್ಲ ಹರಿದ ಝುಳುಝುಳು ನದಿ

ಎಲ್ಲಿ ಬಂದಿರುವೆ ನಾನು ಎಂದು ಹಲುಬುವ

ನನ್ನ ತುಟಿಯಲ್ಲಿ ನಿನ್ನ ನಗು

ನೀ ಹೇಳಿದ ಅಸಂಖ್ಯ ಕತೆಗಳ ಗುಂಗು

ಬಟ್ಟೆಬಿಚ್ಚಿದಂತೆ ಜನುಮಗಳ

ದುಃಖಸೇತುಗಳು ಲಟಲಟ ಮುರಿದು

ಯಾವುದೋ ರಾಗ ದಳಬಿಚ್ಚಿ

ಅರಳಿದ್ದೊಂದೇ ಗೊತ್ತು

ಮುಂದೆಲ್ಲ ನೀ ಹೇಳಿದಂತೆ

ನಾ ಮಾಡಿದೆನೊ

ನಾ ಹೇಳಿದಂತೆ ನೀ ಕೇಳಿದೆಯೋ

ಅಥವಾ......

ನೋಟ ಮಾಟಗಳಳಿದು

ಬರಿ ಹಂಸೆಯಾಗಿ ತೇಲಿದೆನೊ

ಎಚ್ಚರಾದಾಗ ನಿನ್ನ ಕಾಣೆ

ತಿಳಿಯಾದ ಸರೋವರದಲೀಗ ಅಲೆಗಳಿಲ್ಲ

ತಿರುಗಿ ಹೋಗಲು ತಿಳಿಯುತ್ತಿಲ್ಲ

ಬಂದದ್ದು ಹೆಜ್ಜೆ ಮೂಡದ ಹಾದಿ

ಮುಖವಿಲ್ಲದ ನಿನ್ನ ದನಿಗಳ ನಿನದಕ್ಕೆ

ಕಂಪಿಸುತ್ತಿದೆ ಒಡಲ ಒಂಟಿ ಹಂಸೆ

ನಿಂತಿರುವೆ ಇಲ್ಲೇ

ನಿನ್ನ ರೂಹು ಅರಸುತ್ತ

ತೀರದ ದಾಹಗಳ ಕನವರಿಕೆಯಲ್ಲೇ.

ಕನಸಾಗಿರಲಿಕ್ಕಿಲ್ಲ ನೀನು

ಎಂದು ಭ್ರಮೆಯಾಗುತಿದೆ

ಮಾಯಾ ಸರೋವರದಲಿ ಕ್ರೀಡಿಸಿ

ಬಿಚ್ಚೆಸೆದ ಅಂಗಿ ತೇಲುತಿದೆ ಇಲ್ಲಿಯೇ

ಸರಿದು ಹೋಗಿರಬಹುದು ಯಾವುದೋ

ನಿಗೂಢ ತಿರುವುಗಳಲಿ ನೀ ಬೆತ್ತಲಾಗಿ

ತೀರದಲೇ ನಿಂತಿರುವೆ ನಾ ಬಯಲಾಗಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry