ಆಸ್ಪತ್ರೆಯಲ್ಲಿ ಬಯೋಮೆಟ್ರಿಕ್‌, ಸಿಸಿಟಿವಿ ಕ್ಯಾಮೆರಾ

7

ಆಸ್ಪತ್ರೆಯಲ್ಲಿ ಬಯೋಮೆಟ್ರಿಕ್‌, ಸಿಸಿಟಿವಿ ಕ್ಯಾಮೆರಾ

Published:
Updated:
ಆಸ್ಪತ್ರೆಯಲ್ಲಿ ಬಯೋಮೆಟ್ರಿಕ್‌, ಸಿಸಿಟಿವಿ ಕ್ಯಾಮೆರಾ

ಕಲಬುರ್ಗಿ: ವೈದ್ಯರು ಕರ್ತವ್ಯಕ್ಕೆ ಸಮರ್ಪಕವಾಗಿ ಹಾಜರಾಗದ ಬಗ್ಗೆ ದೂರುಗಳು ಕೇಳಿ ಬರುತ್ತಿರುವ ಕಾರಣ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಆಸ್ಪತ್ರೆ ಮತ್ತು ಆರೋಗ್ಯ ಕೇಂದ್ರಗಳಲ್ಲಿ ಬಯೋಮೆಟ್ರಿಕ್‌ ವ್ಯವಸ್ಥೆ ಜಾರಿಗೊಳಿಸುವ ಮತ್ತು ಸಿಸಿ ಟಿವಿ ಕ್ಯಾಮೆರಾ ಅಳವಡಿಸಲು ನಿರ್ಧರಿಸಿದೆ.

ಈಗಾಗಲೇ ಬಯೋಮೆಟ್ರಿಕ್‌ ವ್ಯವಸ್ಥೆ ಜಾರಿಗೊಳಿಸುವ ಮತ್ತು ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಪ್ರಕ್ರಿಯೆ ಆರಂಭಗೊಂಡಿದ್ದು, ಜೂನ್ ಅಂತ್ಯದ ವೇಳೆಗೆ ಪೂರ್ಣಗೊಳ್ಳುವ

ಸಾಧ್ಯತೆಯಿದೆ. ಜುಲೈ ಮೊದಲನೇ ವಾರದಿಂದಲೇ ನೂತನ ವ್ಯವಸ್ಥೆ ಜಾರಿಗೊಳಿಸುವ ಗುರಿ ಹೊಂದಿರುವ ಇಲಾಖೆಯು ಅಂತಿಮ ಹಂತದ ಕಾರ್ಯದಲ್ಲಿದೆ.

ನಗರ ಮತ್ತು ಗ್ರಾಮೀಣ ಪ್ರದೇಶದ ಆಸ್ಪತ್ರೆ, ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಪರಿಸ್ಥಿತಿ ಸುಧಾರಿಸುವ ನಿಟ್ಟಿನಲ್ಲಿ ಇಲಾಖೆಯು ನೂತನ ಕ್ರಮ ಕೈಗೊಂಡಿದೆ. ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಕಾರ್ಯನಿರ್ವಹಣೆ ಮೇಲೆ ನಿಗಾ ವಹಿಸಲು ಸುಲಭವಾಗಲಿದೆ ಎಂಬ ಉದ್ದೇಶವೂ ಇದೆ.

ಸೌಕರ್ಯಗಳ ಕೊರತೆಯಿರುವ ಗ್ರಾಮೀಣ ಪ್ರದೇಶದ ರೋಗಿಗಳಿಗೆ ಹಲವು ಸಂದರ್ಭಗಳಲ್ಲಿ ಸಕಾಲಕ್ಕೆ ಚಿಕಿತ್ಸೆ ದೊರೆಯುವುದಿಲ್ಲ, ವೈದ್ಯರು ಲಭ್ಯ ಇರುವುದಿಲ್ಲ ಅಥವಾ ಬೇರೆ

ಸಮಸ್ಯೆ ಕಾಡುತ್ತದೆ. ಇವೆಲ್ಲವನ್ನೂ ಪರಿಶೀಲಿಸಲು ಮತ್ತು ತಕ್ಷಣದ ಮಾಹಿತಿ ಪಡೆಯಲು ಪ್ರಯೋಜನವಾಗಲಿದೆ ಎಂಬ ಆಶಾಭಾವ ಇಲಾಖೆ ಹೊಂದಿದೆ.

‘ವೈದ್ಯರು ಸಕಾಲಕ್ಕೆ ಕರ್ತವ್ಯಕ್ಕೆ ಹಾಜರಾಗದ ಮತ್ತು ಇತರ ಸಮಸ್ಯೆಗಳ ಕುರಿತ ದೂರುಗಳ ನಿವಾರಣೆಗೆ ನೂತನ ಪದ್ಧತಿ ಉಪಯುಕ್ತ ಆಗುತ್ತದೆ. ಆಸ್ಪತ್ರೆ ಮತ್ತು ಆರೋಗ್ಯ ಕೇಂದ್ರಗಳಲ್ಲಿ ಯಾರು, ಎಷ್ಟು ಗಂಟೆಗೆ ಹಾಜರಾದರು ಎಂಬುದು ಸೇರಿದಂತೆ ಇತರೆ ಮಾಹಿತಿ ಸಿಗುತ್ತದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶಿವರಾಜ ಸಜ್ಜನಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಇಲಾಖೆ ಕಚೇರಿ, ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆ, ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ನೂತನ ಪದ್ಧತಿ ಜಾರಿಯಾಗಲಿದೆ. ಗ್ರಾಮೀಣ, ಪಟ್ಟಣ ಪ್ರದೇಶವಲ್ಲದೇ ನಗರ ಪ್ರದೇಶದ ವೈದ್ಯರ ಮತ್ತು ವೈದ್ಯಕೀಯ ಸಿಬ್ಬಂದಿ ಕರ್ತವ್ಯ ನಿರ್ವಹಣೆ ಬಗ್ಗೆ ಮಾಹಿತಿ ಸಿಗುತ್ತದೆ’ ಎಂದು ಅವರು ವಿವರಿಸಿದರು.

ವೈದ್ಯರ ಕರ್ತವ್ಯಲೋಪಕ್ಕೆ ಕಾರಣ?

‘ಬಹುತೇಕ ವೈದ್ಯರ ಮನೆಗಳು ಕಲಬುರ್ಗಿ ಅಥವಾ ನಗರಪ್ರದೇಶದಲ್ಲಿದ್ದು, ಅವರು ಆಸ್ಪತ್ರೆ, ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಕಾಲಕ್ಕೆ ಕರ್ತವ್ಯಕ್ಕೆ ಹಾಜರಾಗುವ ಸಾಧ್ಯತೆ ಕಡಿಮೆ. ಇದರಿಂದ ರೋಗಿಗಳಿಗೆ ಚಿಕಿತ್ಸೆ ದೊರೆಯುವುದು ವಿಳಂಬವಾಗುತ್ತದೆ’ ಎಂದು ಆರೋಗ್ಯ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.

‘ಗ್ರಾಮೀಣ ಪ್ರದೇಶದಲ್ಲಿ ಕಾರ್ಯನಿರ್ವಹಿಸಲು ಕೆಲ ವೈದ್ಯರಿಗೆ ನಿರಾಸಕ್ತಿಯಿದ್ದರೆ, ಸೂಕ್ತ ವಸತಿ ವ್ಯವಸ್ಥೆಯಿಲ್ಲ ಎಂದು ಕೆಲವರು ಹೇಳುತ್ತಾರೆ. ಕುಟುಂಬ ಮತ್ತು ಇತರ ಕಾರಣಗಳಿಂದ ನಗರಪ್ರದೇಶದಲ್ಲೇ ಉಳಿಯಲು ಬಯಸುತ್ತಾರೆ. ಸೌಕರ್ಯಗಳ ಕೊರತೆ ನೆಪವೊಡ್ಡಿ ಕೆಲವರು ಸಮರ್ಪಕವಾಗಿ ಕರ್ತವ್ಯಕ್ಕೆ ಹಾಜರಾಗುವುದಿಲ್ಲ’ ಎಂದು ಹೇಳಿದರು.

‘ಗ್ರಾಮೀಣ ಪ್ರದೇಶದಲ್ಲಿ ತಮ್ಮ ಮೇಲೆ ಯಾರೂ ನಿಗಾ ವಹಿಸುವುದಿಲ್ಲ ಮತ್ತು ಅಂತಹ ತುರ್ತಾದ ಕೆಲಸವೂ ಇರುವುದಿಲ್ಲ ಎಂಬ ಭಾವನೆ ಕೆಲ ವೈದ್ಯರಿಗೆ ಇರುತ್ತದೆ. ಇವೆಲ್ಲದರ ಪರಿಣಾಮ ರೋಗಿಗಳು ಉತ್ತಮ ಚಿಕಿತ್ಸೆಯಿಂದ ವಂಚಿತರಾಗುತ್ತಾರೆ’ ಎಂದು ಅವರು ವಿವರಿಸಿದರು.

ಆಸ್ಪತ್ರೆಗಳ ವಿವರ

6 ತಾಲ್ಲೂಕು ಆಸ್ಪತ್ರೆಗಳು

84 ಪ್ರಾಥಮಿಕ ಆರೋಗ್ಯ ಕೇಂದ್ರ

16 ಸಮುದಾಯ ಆರೋಗ್ಯ ಕೇಂದ್ರ

* * 

ಆಸ್ಪತ್ರೆ ಮತ್ತು ಆರೋಗ್ಯ ಕೇಂದ್ರಗಳಲ್ಲಿ ಬಯೋಮೆಟ್ರಿಕ್‌  ವ್ಯವಸ್ಥೆ ಮತ್ತು ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಪ್ರಯೋಜನಕಾರಿ ಆಗಲಿದೆ

ಡಾ. ಶಿವರಾಜ ಸಜ್ಜನಶೆಟ್ಟಿ

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry