ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ನಿಯೂ ಪಾರಿವಾಳವೂ...

Last Updated 17 ಜೂನ್ 2017, 19:30 IST
ಅಕ್ಷರ ಗಾತ್ರ

‘ಅಮ್ಮ, ಅಪ್ಪಾ... ಇಬ್ಬರೂ ಟಾಟಾ ಮಾಡಿ ಆಫೀಸಿಗೆ ಹೊರಟ್ರು. ನಂಗ ಅಳು ಬಂದಿತ್ತು. ಆದ್ರ ಅಮ್ಮ  ಯಾವಾಗಲೂ ಹೇಳ್ತಾಳ... ಹೋಗೂಮುಂದ ನಾ ಅತ್ಗೊಂತ ಇದ್ರ, ಅಪ್ಪಂದು, ಅಮ್ಮಂದು ಕೆಲಸಾನೇ ಮುಂದ ಸಾಗೂದಿಲ್ಲಂತ... ಮತ್ತ ಬರಾಕ ತಡಾ ಆಗ್ತತದಂತ... ಅದಕ್ಕೇ ನನ್ನ ಕೊರಳುಬ್ಬಿ ಬಂದ್ರೂ ನಾನು ನಕ್ಕೊಂತ ಟಾಟಾ ಹೇಳ್ತೀನಿ... ಯಾಕಂದ್ರ ಲಗೂನ ಕೆಲಸಾ ಮುಗಿಸಿ ಮತ್ತ ಮನೀಗಿ ಬರ್ತಾರಲ್ಲ ಅವರು... ಅದಕ್ಕೆ..

ಅವೊತ್ತು ಹಂಗೇ ಆತು... ಅಮ್ಮ, ಅಪ್ಪ ಹೋದ್ರು. ಹೋದಮ್ಯಾಲೆ ಅಳಬಹುದು... ನಾನು ಕಿಟಕಿಗೆ ಮುಖ ಆನಿಸಿ ಅಳ್ತಿದ್ದೆ. ಅವಾಗೇ ಆಕಾಶನಾಗ... ಒಬ್ಬಕ್ಕಿ ಏಂಜಲ್‌ ಹೊಂಟಿದ್ಲು. ಕಿನ್ನರಿ ಅನ್ನೂನು ಅಕೀಗೆ...  ಹಾರ್ಕೊಂತ ನಮ್ಮನಿ ಹತ್ರ ಬಂದ್ಲು.‘ ಯಾಕ ಅರ್ನಿ ಅಳಾಕತ್ತಿ ನೀನು’ ಅಂತ ಕೇಳಿದ್ಲು. ನಾನು ಅಪ್ಪ ಅಮ್ಮ ನಂಗ ಬಿಟ್ಟು ಹೋದ್ರು. ಅದಕ್ಕೇ ಅಂತ ನನ್ನ ಗಲ್ಲಾ ಉಬ್ಬಿಸಿ ಹೇಳಿದೆ.

ಅಕಿ ಹೇಳಿದ್ಲು ‘ನಾ ನಿಂಗ ಜಾದೂ ಮಂತ್ರ ಹೇಳ್ತೀನಿ, ನೀನು ಅಮ್ಮ, ಅಪ್ಪನ ಹತ್ರ ಹಾರಿ ಹೋಗಬಹುದು’ ಅಂದ್ಲು.

ಅಕಿ ನನ್ನ ಕಿವ್ಯಾಗ ಒಂದು ಜಾದೂ ಮಂತ್ರ ಹೇಳಿದ್ಲು. ಅದನ್ನ ಯಾರಿಗೂ ಹೇಳೂಹಂಗಿಲ್ಲ. ಹೇಳಿದ್ರ ಅದರ ಶಕ್ತಿನೇ ಹೋಗ್ತದಂತ!

ನಂಗ ಖುಷಿ ಆಯ್ತು. ಪಟ್ನೆ ಆ ಜಾದೂ ಮಂತ್ರ ಹೇಳಿದೆ... ಅರೆ, ಏನಿದು ಮಜಾ... ನಾನು ಪಾರಿವಾಳ ಆಗಿ ಬದಲಾಗಿದ್ದೆ. ನನ್ನು ಬಟ್ಟಿ ಅಲ್ಲೇ ಕಿಡಕಿ ಹತ್ರ ಬಿದ್ದಿದ್ವು. ಪಾರಿವಾಳ ಎಂದರ ಬಟ್ಟಿಹಾಕೋತ್ತದೇನು ಮತ್ತ..? ಹಂಗೆ ನಾನು ಹಾರಿ ಹಾರಿ ಅಪ್ಪನ ಆಫೀಸಿಗೆ ಹೋದೆ. ಅಪ್ಪನ ಆಫೀಸಿನ ಹೊರಗೆ ಎಷ್ಟು ಮರಗಳು! ಹಾರಿ ಮರದ ಮ್ಯಾಲೆ ಹೋಗಿ ಕುಂತೆ. ನಮ್ಮಪ್ಪ ಕುಂದ್ರೂ ಜಾಗದ ಹತ್ರ ಹೋದೆ.. ಅಪ್ಪಾ ಅಪ್ಪಾ ಅನ್ಬೇಕಿತ್ತು. ಆದ್ರ ಬಾಯಿ ತಗದ್ರ ಸಾಕು, ಗುಟರ್‌ಗುಂವ್‌ ಗುಟರ್‌ ಗುಂವ್‌ ಅನ್ನೂಹಂಗಾತು. ನಾನೂ ಕೊರಳು ಕೊಂಕಿಸಿ, ಕಣ್ಣು ಪಿಳುಕಿಸಿ ಕರದೇ ಕರದೆ. ಆದ್ರ ನಮ್ಮಪ್ಪಗೇನೂ ಲಕ್ಷ್ಯನೇ ಇರಲಿಲ್ಲ. ಅವರಿಗೂ ಅರ್ನಿ ಮನ್ಯಾಗ ಕಾಯ್ತಿರ್ತದ, ಲಗೂ ಕೆಲಸಾ ಮುಗಿಸಿದ್ರ ಸಾಕು ಅನ್ನುವ ಅವಸರ ಇತ್ತು.

ಅಲ್ಲಿಂದ ನಂಗೂ ಭಾಳ ಬ್ಯಾಸರಾತು... ಫುರ್‌ ಅಂತ ಅಮ್ಮನ ಆಫೀಸಿಗೆ ಹಾರಿ ಹೋದೆ. ಅಲ್ಲಿ ನಮ್ಮವ್ವ ನಂಗ ನೋಡ್ತಾಳ, ತಲಿ ಮ್ಯಾಲೆ ಕೈ ಆಡಸ್ತಾಳ. ನನ್ನ ಕಣ್ಣಾಗ ಕಣ್ಣಿಟ್ಟು ಮಾತಾಡ್ತಾಳ, ಗದ್ದ ತುಟಿ ಹಿಡದು ಮುದ್ದು ಮಾಡ್ತಾಳ ಅಂದ್ಕೊಂಡಿದ್ದೆ. ಅಲ್ಲಿ ಎಲ್ಲಾರೂ ತಮ್ಮುಂದಿನ ಕಂಪ್ಯೂಟರ್‌ನಾಗ ಕಣ್ನೆಟ್ಟು ಕುಂತಿದ್ರು. ನಮ್ಮಮ್ಮನೂ. ನಾನು ಅಕಿನ ಕಿಟಕಿ ಹತ್ರ ಹೋಗಿ ಕುಂತೆ.. ಒಂದಷ್ಟು ಹುಡಗ್ಯಾರು ಅಯ್ಯೋ ಮರಿ ಪಾರಿವಾಳ ಅಂತ ನನ್ನ ಕಡೆ ನೋಡ್ತಿದ್ರು. ಒಂದಿಬ್ಬರು ಮುಟ್ಟಾಕೂ ಬಂದ್ರು. ನಾ ಎಲ್ಲಿ ಸಿಗಬೇಕು ಅವರ ಕೈಗೆ... ಮತ್ತ ಪುರ್‌ ಅಂತ ಹಾರಿ ಹೋದೆ. ಮತ್ತ ಕಿಟಕಿ ಹತ್ರ ಬಂದು ಕುಂತೆ. ಅವರಿಗೆಲ್ಲ ನನ್ನ ಗರಿ ಮುಟ್ಟಬೇಕೂಂತ ಆಸೆ. ನಂಗ ನನ್ನಮ್ಮನ ಎದಿಗೊತ್ತಿ ಕೂಡಬೇಕು ಅಂತ ಆಸೆ. ಏನ್‌ ಮಾಡೂದು... ನಾನು ಗುಟರ್‌ಗುಂವ್‌ ಗುಟರ್‌ ಗುಂವ್‌ ಅಂದೆ. ಅಮ್ಮ ಒಮ್ಮೆ ದಿಟ್ಟಿಸಿ ನೋಡಿದ್ಲು. ಮರಿ ಹಕ್ಕಿ ಇದು ಅಂದ್ಲು. ನಂಗ ಕಣ್ಣಾಗ ನೀರೇ ಬಂದೂವು... ಅಕಿನ್ನ ಕಣ್ಣಾಗೂ ಬಂದಿರಬೇಕು. ಮತ್ತ ನನ್ನ ಕಡೆ ನೋಡಲಾರ್ದೆ ಕೆಲಸದ ಕಡೆಗೆ ಗಮನಕೊಟ್ಲು. ನಾನೂ ಸಂಜೀತನಾ ಅಲ್ಲೇ ಠಳಾಯಿಸಿದೆ. ಒಮ್ಮೆರೆ ನಮ್ಮಮ್ಮ ನನ್ನ ಮುಟ್ತಾಳ ಅಂದ್ಕೊಂಡಿದ್ದೆ. ಊಹೂಂ... ಅಂಥಾದ್ದೇನೂ ಆಗಲೇ ಇಲ್ಲ.
ಅಕಿ ಕೆಲಸಾ ಮುಗಿಸಿದ್ಲು, ತನ್ನ ಚೀಲಾ ಹೆಗಲಿಗೇರಿಸಿಕೊಂಡು ಅಪ್ಪನ ಆಫೀಸಿನ ಕಡೆಗೆ ಓಟ... ಕಾಲು ನೋವು ಅಂತಿದ್ದ ಅಮ್ಮನ ಕಾಲೀಗೆ ಅದೆಲ್ಲಿಂದ ಶಕ್ತಿ ಬರ್ತದ... ಮನೀಗೆ ಬರೂಮುಂದ... ಹಂಗ ಓಡುವೇಗದೊಳಗ ನಡೀತಿದ್ಲು. ಮನಸಿನಾಗ ಆಗಲೇ ಮನಿ ಮುಟ್ಟಿದ್ಲು ಅನಸ್ತದ.

ನಾನೂ ಅಕಿನ್ನ ಬೆನ್ಹತ್ತಿ ಹಾರಿ ಹೋದೆ. ಅಮ್ಮ ಬರೂತ್ಲೆ ಅಪ್ಪಾನೂ ಅವರ ಬುತ್ತಿಚೀಲ, ನೀರಿನ ಬಾಟ್ಲಿ ಎತ್ಕೊಂಡು ಬಂದ್ರು. ಇನ್ನ ನನ್ನ ರೆಕ್ಕಿಗೆ ಭಾಳಷ್ಟು ಶಕ್ತಿ ಕೊಡಬೇಕಿತ್ತು. ಅವರಿಗಿಂತ ಮೊದ್ಲು ಮನಿ ಸೇರಬೇಕಿತ್ತು. ಹಾರಿದೆ... ಹಾರಿದೆ... ಟೀವಿ ಟವರ್‌ ದೂರದಿಂದ ನೋಡ್ತಿದ್ದೆ. ಈಗ ಅದರ ಬಾಜೂಕೆ ಹಾರಿ ಹೋದ್ರೂ ನೋಡುವಷ್ಟು ಪುರುಸೊತ್ತು ನನಗಿರಲಿಲ್ಲ. ಮನೀಮುಟ್ಟಬೇಕು. ಮುಟ್ಟಾಕಬೇಕು. ಅದೊಂದೇ ಅವಸರ ನನ್ನ ಒಳಗ.

ಹಾರಿ... ಹಾರಿ ಹೋದೆ. ಅಬ್ಬಾ... ಮನೀಮುಟ್ಟಿದೆ. ಅಲ್ಲಿಂದ ಮತ್ತೊಂದು ಅಂಜಕಿ ಕಾಡ್ತಿತ್ತು. ಕಿನ್ನರಿ ಹೇಳಿದ ಮಂತ್ರ ಹೇಳಾಕ ಬರ್ತದೋ ಇಲ್ಲೋ... ಅದೂ ಗುಟರ್‌ಗುಂವ್‌ ಅಂದ್ಹಂಗ ಆದ್ರ ಮತ್ತ ಆ ದೇವ್ರಿಗೆ ತಿಳೀತದೋ ಇಲ್ಲೋ.. ನಾ ಮತ್ತ ಅರ್ನಿ ಆಗ್ತೀನೋ ಇಲ್ಲೋ ಅಂತ... ಹೆದ್ರಿಕಿನೂ ಆತು. ಅಳೂನೂ ಬಂತು. ನಮ್ಮಮ್ಮ ನಾ ಇರಲಾರ್ದೆ ಹೆಂಗಿರ್ತಾಳ? ನಮ್ಮಕ್ಕ ಏನು ಮಾಡ್ತಾಳ? ನಮ್ಮಪ್ಪ ಏನಂತಾನ? ಎಲ್ಲಿ ಹುಡಕ್ತಾನ... ನಾ ಅವರ ಕಣ್ಮುಂದೇ ಇದ್ರೂ ಅವರಿಗೆ ಗೊತ್ತಾಗೂದಿಲ್ಲ. ಮನ್ಯಾಗ ಪಾರಿವಾಳ ಬಂದದ, ಮನೀ ಹೊಲಸ ಮಾಡ್ತದ ಅಂತ ನಂಗ ಹೊರಗ ಹಾರಿಸಿದ್ರ ಏನು ಮಾಡಬೇಕು? ಅಬ್ಬಾ... ಇಂಥಾ ಅಂಜಕಿಯೊಳಗೆ ದೇವ್ರಿಗೆ ಕೈಮುಗದೆ.

ಜಾದೂ ಮಂತ್ರ ಹೇಳಿದೆ. ಅರೆ... ಏನು ಮಜಾ! ನಾನು ಅರ್ನಿಯಾಗಿದ್ದೆ. ನನ್ನ ಕಣ್ಣೀರು ಒರಸ್ಕೊಂಡು, ಮುಖಾ ಸ್ವಚ್ಛ ಮಾಡ್ಕೊಳ್ಳೂದ್ರಾಗ ಕಾಲಿಂಗ್‌ ಬೆಲ್‌ ಸದ್ದಾತು. ಅಮ್ಮ ಬಂದ್ಲು. ಅಮ್ಮಗ ಅಪ್ಗೊಂಡೆ. ಅಕೀನೂ ಭಾಳ ವರ್ಷದಿಂದ ಬಿಟ್ಟಿದ್ದೋರ್ ಹಂಗ ಜೋರಗೆ ಅಪ್ಗೊಂಡ್ಲು. ಅಪ್ಪ ಬಂದ್ರು. ಅವರ ಕಾಲೀಗೆ ಜೋತುಬಿದ್ದೆ. ಅವರು ನನ್ನ ಎತ್ಗೊಂಡೇ ಒಳಗ ಹೋದ್ರು. ನಾನು ಮನಸಿನಾಗ ನನಗ ನೆನಪಿದ್ದ ಮಂತ್ರ ಮರತೇ ಹೋಗ್ಲಿ ಅನ್ಕೊಂಡೆ. ಅಪ್ಪ, ಅಮ್ಮ ಅರ್ನಿನ್ನ ಪ್ರೀತಿ ಮಾಡ್ತಾರ. ಪಾರಿವಾಳಕ್ಕ ಅಲ್ಲ. ಅದಕ್ಕೇ ಅವತ್ತಿನಿಂದ ನಾನು ಪಾರಿವಾಳ ಆಗಲೇ ಇಲ್ಲ. ಅಮ್ಮ ರಾತ್ರಿ ಮಕ್ಕೊಳ್ಳೂಮುಂದ ಅವರ ಆಫೀಸಿಗೆ ಬಂದ ಮರಿ ಪಾರಿವಾಳದ ಕತಿ ಹೇಳ್ತಿದ್ಲು. ನಾನು ನಕ್ಕೊಂತ ಗುಟರ್‌ಗುಂವ್‌ ಅಂದೆ!

**
ಕತೆ: ಅರ್ನಿ, ನಿರೂಪಣೆ: ಅಮ್ಮ ರಶ್ಮಿ. ಎಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT