ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮುದಾಯ ಪ್ರಜ್ಞೆ ಮೆರೆವ ಕರಿಮಾಯಿ

Last Updated 17 ಜೂನ್ 2017, 19:30 IST
ಅಕ್ಷರ ಗಾತ್ರ

ಇದೀಗ ಚಂದ್ರಶೇಖರ ಕಂಬಾರರ ‘ಕರಿಮಾಯಿ’ ಕಾದಂಬರಿಯ ಇಂಗ್ಲಿಷ್ ಅನುವಾದ ಪ್ರಕಟವಾಗಿದೆ. ಅಪ್ಪಟ ದೇಸಿ ಪ್ರತಿಭೆಯಾದ ಕಂಬಾರರ ಕೃತಿಯನ್ನು ಅನುವಾದ ಮಾಡುವುದು ಸುಲಭವಲ್ಲ. ಏಕೆಂದರೆ ಕಂಬಾರರು ತಮ್ಮ ಕಾದಂಬರಿಯಲ್ಲಿ ಕಟ್ಟಿಕೊಡುವ ಲೋಕ ನಮಗೆ ಪರಿಚಿತವಾದ ಆಧುನಿಕ ಕಾದಂಬರಿ ಪ್ರಕಾರ ಕಟ್ಟಿಕೊಡುವ ಸಾಮಾಜಿಕ ಚರಿತ್ರೆಯಲ್ಲ. ನಮ್ಮ ಚರಿತ್ರೆಯ ಪರಿಕಲ್ಪನೆಯಲ್ಲಿಯೇ ಜನಪದರ ನೆನಪುಗಳ ನಾಶವಿದೆ. ವಸಾಹತುಶಾಹಿಯ ಪರಿಣಾಮದ ದುರಂತವೆಂದರೆ ನಮ್ಮ ಜನಪದರ ನಂಬಿಕೆಗಳ ಜಗತ್ತಿನ, ಆ ಮೂಲಕ ಅವರ ಬದುಕಿನ ಜೀವಶಕ್ತಿ ಹಾಗೂ ಚೆಲುವಿನ ನಾಶ. ಆದರೆ, ಕಂಬಾರರ ಲೋಕವೆಂದರೆ ನಮ್ಮ ಜನಪದರ ಸಮಷ್ಟಿ ಸ್ಮೃತಿಸಂಚಯ. ಅಲ್ಲಿ ಅವರ ಪುರಾಣ, ಆಚರಣೆ, ನಂಬಿಕೆ ಎಲ್ಲವೂ ಇದೆ. ಆಧುನಿಕ ಶಿಕ್ಷಣ ಕಂಬಾರರ ಪ್ರಜ್ಞೆಯನ್ನು ತನ್ನ ಪರಿಸರದಿಂದ ಬೇರ್ಪಡಿಸಲಿಲ್ಲ. ಬದಲಾಗಿ ಅದನ್ನು ಸಮಕಾಲೀನ ಸಂದರ್ಭದಲ್ಲಿಟ್ಟು ನೋಡುವ ಅರಿವನ್ನು ತಂದುಕೊಟ್ಟಿತು.

   ನಮ್ಮ ಪರಂಪರೆಯನ್ನು ಸಾರಾಸಗಟಾಗಿ ಒಪ್ಪಿ ವೈಭವಿಸುವ ಅಥವಾ ಇಡಿಯಾಗಿ ತಿರಸ್ಕರಿಸಿ ಹಳಿಯುವ ಛಿದ್ರನೋಟ ಕಂಬಾರರದ್ದಲ್ಲ. ಅವರದು ಅಖಂಡ ದರ್ಶನ. ಹೀಗಾಗಿಯೇ, ಅವರ ಕಾದಂಬರಿಯ ಜಗತ್ತು ಸಾಮಾಜಿಕ ಚರಿತ್ರೆಯ ಕಥನವಲ್ಲ. ನರಮನುಷ್ಯರಾದಿಯಾಗಿ ದೇವರು, ದೆವ್ವ, ರಾಕ್ಷಸ, ಇರುವೆ ಮೊದಲಾಗಿ ಆನೆ ಕಡೆಯಾಗಿ ಎಲ್ಲ ಸಮಸ್ತ ಜೀವರಾಶಿಗಳಿಗೂ ಅಲ್ಲಿ ಆಸರೆಯಿದೆ. ಕ್ಷಿತಿಜದಾಚೆಗೂ ಇಲ್ಲಿಯ ಜನರ ನಂಟಿದೆ. ಬೌದ್ಧಿಕ ವಿಶ್ಲೇಷಣೆಗೆ ಸಿಗದ ನಂಬಿಕೆಗಳ ಜಗತ್ತಿದು. ಹೀಗಾಗಿಯೇ ಕರಿಮಾಯಿ ಆಧುನಿಕ ಕೂಸಾದ, ರೂಢಿಯ ರೀತಿಯ ಕಾದಂಬರಿಯಲ್ಲ, ಅದೊಂದು ಆಧುನಿಕ ಪುರಾಣ. ಪುರಾಣವನ್ನು ಅನುವಾದ ಮಾಡುವುದು ಸುಲಭವಲ್ಲ. ಕೃಷ್ಣ ಮನವಳ್ಳಿ ಅವರಿಗೆ ಇದರ ಅರಿವಿದೆ. ಕಾದಂಬರಿಯ ವಿವರಗಳನ್ನು ಅನುವಾದ ಮಾಡಿಬಿಡಬಹುದು. ಆದರೆ, ಆ ವಿವರಗಳು ಕಟ್ಟಿಕೊಡುವ ಅನುಭವವನ್ನು? ಕಂಬಾರರಿಗೆ ಮಿಥ್ ಕಲ್ಪನೆಯಲ್ಲ ವಾಸ್ತವ. ಆದರೆ, ಆಧುನಿಕ ಇಂಗ್ಲಿಷ್ ಭಾಷೆಗೆ ಮಿಥ್ ಕುತೂಹಲದ ಸಂಗತಿ ಅಥವಾ ತಿಳಿವಳಿಕೆಯ ಮಾಹಿತಿ. ಕಂಬಾರರ ಕಾದಂಬರಿ ಜಗತ್ತಿನಲ್ಲಿ ಸಾಮಾಜಿಕ ವಾಸ್ತವ ಹಾಗೂ ಪುರಾಣ ಜಗತ್ತು ಸಹಬಾಳ್ವೆ ನಡೆಸುತ್ತವೆ. ಇದನ್ನು ನಮ್ಮ ಕಾಲದ ಆಧುನಿಕ  ಇಂಗ್ಲಿಷಿನಲ್ಲಿ ಹಿಡಿಯುವುದು  ಹೇಗೆ? ಇದು ಅನುವಾದದ ಸವಾಲು. ಈ ಸವಾಲನ್ನು ಕೃಷ್ಣ ಮನವಳ್ಳಿ ಸಮರ್ಥವಾಗಿ ಎದುರಿಸಿದ್ದಾರೆ. ತಾವು ಅನುವಾದಕ್ಕೆ ಆರಿಸಿಕೊಂಡಿರುವ ಕಂಬಾರರ ಕನ್ನಡ ಕಾದಂಬರಿಯ ಜಗತ್ತು, ಅನುವಾದ ಮಾಡುತ್ತಿರುವ ಆಧುನಿಕ ಇಂಗ್ಲಿಷ್ ಭಾಷೆಯ ಸ್ವರೂಪ ಇವೆರಡರ ಅರಿವೂ ಮನವಳ್ಳಿ ಅವರಿಗಿದೆ. ಹೀಗಾಗಿಯೇ ಇದು ಕೇವಲ ಭಾಷಾಂತರ ವಾಗದೆ, ಮರುಸೃಷ್ಟಿಯಾಗಿದೆ. ಅವರಿಗೆ ನಮ್ಮ ಅಭಿನಂದನೆ ಸಲ್ಲಬೇಕು.

ಇಂತಹ ಅನುವಾದಗಳಿಗೆ ನಮ್ಮ ಕಾಲದಲ್ಲಿ ಎರಡು ರೀತಿಯಲ್ಲಿ ಸಾಂಸ್ಕೃತಿಕ ಮಹತ್ವವಿದೆ. ಕೆಲವು ದಶಕಗಳ ಹಿಂದೆಯೇ ಐ.ಎ. ರಿಚರ್ಡ್ಸ್ ಎಚ್ಚರಿಸಿದಂತೆ ಇದು ವಾಣಿಜ್ಯ ಸಂಸ್ಕೃತಿಯ ಯುಗ. ಜಾಗತಿಕ ಸಾಂಸ್ಕೃತಿಕ ಲೋಕದಲ್ಲಿ ಚಲಾವಣೆಯಲ್ಲಿರುವ ಭಾರತೀಯ ಇಂಗ್ಲಿಷ್ ಲೇಖಕರನ್ನು ಗಮನಿಸಿ. ಎಷ್ಟು ತೂರಿದರೂ ಈ ನೆಲದ ಸತ್ವದ ಗಟ್ಟಿ ಕಾಳುಗಳೇ ಕಾಣಿಸುವುದಿಲ್ಲ. ಸೊರಗುತ್ತಿರುವ ಜಾಗತಿಕ ಸಾಹಿತ್ಯ ಪರಿಸರದಲ್ಲಿ ಪರ್ಯಾಯ ಸಾಧ್ಯತೆಗಳನ್ನು ತೋರಿಸಬಲ್ಲಂಥ ಭಾರತದ ನಿಜಪ್ರತಿಭೆಗಳು ದೇಸಿ ನೆಲೆಯಲ್ಲಿ ಕಾಣಿಸುತ್ತವೆಯೇ ಹೊರತು ಸರಕು ಸಂಸ್ಕೃತಿಯಲ್ಲಲ್ಲ. ಎ.ಕೆ. ರಾಮಾನುಜನ್ ಅವರು ವಚನಗಳನ್ನು ಅನುವಾದ ಮಾಡಿದ್ದು ನೆನಪಾಗುತ್ತಿದೆ. ವಿನಾಶದ ಹಾದಿ ಹಿಡಿದಿರುವ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಾವು ಸಾಮಾನ್ಯರೆಂದು ತಿಳಿಯುವ ಮನುಷ್ಯರಿಗೆ ಅಪಾಯಗಳಿಂದ ಪಾರಾಗಬಲ್ಲ ಉಪಾಯಗಳು ತಿಳಿದಿವೆ ಎಂದು ನಂಬಿ ಬರೆಯುವ ಕಂಬಾರರು ಸ್ಥಳೀಯ ಸತ್ವದ ಬಾಳುವ ಶಕ್ತಿಯನ್ನು ಗುರ್ತಿಸಿ ಬರೆಯುತ್ತಿರುವ ದಾರ್ಶನಿಕ ಲೇಖಕ. ಗ್ರಹಿಕೆಯ ಸ್ವರೂಪದಲ್ಲಿ ಅಚಿಬೆ, ಷೋಯೆಂಕರನ್ನು, ಬರವಣಿಗೆಯ ಕ್ರಮದಲ್ಲಿ ಮಾರ್ಕೆಸ್‌ನನ್ನು ನೆನಪಿಸುವ ಕಂಬಾರರ ‘ಕರಿಮಾಯಿ’ಯ ಅನುವಾದ ಜಾಗತಿಕ ನೆಲೆಯಲ್ಲಿ ಸಮಕಾಲೀನ ಬಿಕ್ಕಟ್ಟುಗಳನ್ನು ಎದುರಿಸುವ ಸಾಧ್ಯತೆಗಳ ಚರ್ಚೆಗೆ ಅನುವು ಮಾಡಿಕೊಡಬಲ್ಲುದು.

ಮತ್ತೊಂದು– ಈ ಅನುವಾದದ ಮೂಲಕ ಭಾರತೀಯ ಇತರ ಭಾಷೆಗಳಿಗೂ ಕಂಬಾರರು ತಲುಪುವಂತಾಗಬೇಕು. ಕನ್ನಡದಿಂದಲೇ ಇತರ ಪ್ರಾದೇಶಿಕ ಭಾಷೆಗಳಿಗೆ ಕಂಬಾರರನ್ನು ನೇರವಾಗಿ ಅನುವಾದ ಮಾಡುವುದು ಸುಲಭ ಹಾಗೂ ಹೆಚ್ಚು ಸಮರ್ಪಕವೆಂಬುದನ್ನು ಬಲ್ಲೆ.  ಆದರೆ, ಆ ಅನುಕೂಲ ನಮ್ಮಲ್ಲಿ ಇಲ್ಲ. ನಾವು, ಭಾರತೀಯರು ಪರಸ್ಪರ ಸಂವಾದಿಸಲು ಇನ್ನೂ ಇಂಗ್ಲಿಷನ್ನೇ ಅವಲಂಬಿಸಿದ್ದೇವೆ. ಕೃಷ್ಣ ಮನವಳ್ಳಿಯವರ ಈ ಇಂಗ್ಲಿಷ್ ಅನುವಾದದ ಮೂಲಕ ‘ಕರಿಮಾಯಿ’ ಭಾರತೀಯ ಇತರ ಭಾಷೆಗಳಿಗೂ ತಲುಪುವಂತಾದರೆ ಭಾರತೀಯ ಮನಸ್ಸು ಹೊಸ ದಿಕ್ಕಿನಲ್ಲಿ ಯೋಚಿಸಲು ಸಾಧ್ಯವಾಗಬಹುದು.

ನನ್ನ ಮಾತುಗಳನ್ನು ಒಂದು ಉದಾಹರಣೆಯ ಮೂಲಕ ವಿವರಿಸಬಹುದು: ಕಂಬಾರರನ್ನು ದಾರ್ಶನಿಕ ಲೇಖಕ ಎಂದೆ. ಕರಿಮಾಯಿ ಪ್ರಕಟವಾದದ್ದು ಕಳೆದ ಶತಮಾನದ ಎಪ್ಪತ್ತರ ದಶಕದಲ್ಲಿ. ಆಗಲೇ ಕಂಬಾರರು ಇವತ್ತಿನ ಸ್ಮಾರ್ಟ್ ಸಿಟಿಯ ಪ್ರಗತಿಯ ಪರಿಕಲ್ಪನೆಯನ್ನು ಪ್ರಶ್ನಿಸಿದ್ದರು. ಶಿವಾಪುರ ಕಂಬಾರರ ಸಮಗ್ರ ಸಾಹಿತ್ಯದ ಕೇಂದ್ರ ಪ್ರತೀಕ. ‘ಹೇಳತೇನ ಕೇಳ’ದಿಂದ ‘ಶಿವನ ಡಂಗುರ’ದವರೆಗೆ ಶಿವಾಪುರ ಬೇರೆ ಬೇರೆ ನೆಲೆಗಳಲ್ಲಿ ಚಿತ್ರಿತವಾಗುತ್ತಲೇ ಬಂದಿದೆ. ಕಂಬಾರರ ಶಿವಾಪುರವೆಂದರೆ ಅದು ಕೇವಲ ಒಂದು ಹಳ್ಳಿ ಮಾತ್ರವಲ್ಲ, ಪುರಾಣ-ಚರಿತ್ರೆ-ಕನಸುಗಳ ಸಂಗಮ. ಶಿವಾಪುರ ಸಮೃದ್ಧ ಸೃಜನಶೀಲತೆಯ ಸಂಕೇತ. ಕರಿಮಾಯಿ ಕಾದಂಬರಿಯಲ್ಲಿ ಇಂತಹ ಶಿವಾಪುರಕ್ಕೆ ಬೆಳಗಾವಿ ಆಗುವ ಹಂಬಲ. ಬೆಳಗಾವಿ ಎಂದರೆ ಅವರ ‘ಶಿಖರ ಸೂರ್ಯ’ ಕಾದಂಬರಿಯಲ್ಲಿ ಬರುವ ಕನಕಪುರಿ. ಇದು ಭೋಗಸಂಸ್ಕೃತಿಯ ನೆಲೆ. ನಿಯಂತ್ರಣಾತೀತ ಮಾರುಕಟ್ಟೆ ಆಧಾರಿತ ಅಭಿವೃದ್ಧಿ ಪಥ, ಬಲಿಷ್ಠ ಹಾಗೂ ಕೇಂದ್ರೀಕೃತ ಪ್ರಭುತ್ವ, ಪ್ರಕೃತಿಯ ಜೊತೆಗೆ ಶೋಷಣಾತ್ಮಕ ಸಂಬಂಧ ಮಾತ್ರ ಉಳ್ಳ ವಿಜ್ಞಾನ ಮತ್ತು ತಂತ್ರಜ್ಞಾನ, ಆತ್ಮನಿಷೇಧವೇ ಇರದ ಭೋಗ ಇವುಗಳ ಪ್ರತೀಕ. ‘ಕರಿಮಾಯಿ’ ಕಾದಂಬರಿಯಲ್ಲಿ ಬರುವ ವಿದ್ಯಾವಂತ ಗುಡಸೀಕರನಿಗೆ ತನ್ನ ಶಿವಾಪುರವನ್ನು ಬೆಳಗಾವಿ ಮಾಡುವ ಅಪೇಕ್ಷೆ. ಅವನ ಅಪೇಕ್ಷೆ ಪ್ರಾಮಾಣಿಕವಾದದ್ದು. ಬದಲಾವಣೆ ಪ್ರಗತಿಯ ಸೂಚಕವೂ ಹೌದು. ಹೀಗಾಗಿ ಶಿವಾಪುರದ ಹಿರಿಯರೂ ಇದಕ್ಕೆ ಸಮ್ಮತಿಸಿ ಆತನಿಗೆ ಮುಂದಾಳತ್ವದ ಜವಾಬ್ದಾರಿ ವಹಿಸುತ್ತಾರೆ. ಆದರೆ, ಆದ ಪ್ರಗತಿಯಾದರೂ ಎಂಥದು? ಇದೇ ಕರಿಮಾಯಿ ಕಾದಂಬರಿಯ ವಸ್ತು.

ಭೌತಿಕ ಸವಲತ್ತುಗಳ ಮೂಲಕ ಭೋಗ ಸಂಸ್ಕೃತಿಯನ್ನು ಬೆಳೆಸುವುದೇ ಪ್ರಗತಿ ಎನ್ನುವ ಸರಳ ಪರಿಕಲ್ಪನೆಗೆ ಕಂಬಾರರ ಚಿಂತನೆ ಪ್ರತಿಗಾಮಿ ಅನ್ನಿಸಬಹುದು. ಆದರೆ, ಇದು ಮನುಕುಲದ ವಿಕಾಸದ ಪರಿಪಕ್ವ ಚಿಂತನೆಯ ಪರಿಕಲ್ಪನೆಯಲ್ಲ. ಇಂತಹ ಪ್ರಗತಿ ವಿಕಾಸವಲ್ಲ, ಮನುಕುಲದ ವಿನಾಶ. ಶಿವಾಪುರ ನಿಜ ಸಂಬಂಧಗಳ ಗಟ್ಟಿನೆಲ. ಇಲ್ಲಿ ತಪ್ಪುಗಳು ನಡೆಯುವುದಿಲ್ಲವೆಂದಲ್ಲ. ಆದರೆ ತಪ್ಪು ಮಾಡಿದವರಿಗೂ ತಿದ್ದಿಕೊಂಡು ಬದುಕುವ ಅವಕಾಶವಿದೆ. ಸಮಸ್ತ ಜೀವರಾಶಿಗಳನ್ನೂ ಸಲಹುವ ತಾಯಿಯ ಕರುಣೆಯಿದೆ. ಆದರೆ ಬೆಳಗಾವಿ ಸ್ಪರ್ಧಾ ಜಗತ್ತಿನ ಕಣ. ಅದು ಆಳುವ, ಆಳಿಸಿಕೊಳ್ಳುವ ಜಗತ್ತು. ಒಬ್ಬರೊಬ್ಬರನ್ನೊಬ್ಬರು ಹಣಿಯುತ್ತಲೇ ಬಾಳಬೇಕಾದ ಸ್ಥಿತಿ. ಸಲಹುವ ಗುಣಕ್ಕೆ ಬದಲು ಸಂಹರಿಸುವ ಹಂಬಲವುಳ್ಳಂಥದು. ಹೀಗಾಗಿ ಲಾರೆನ್ಸ್ ಹೇಳುವಂತೆ ಶಿವಾಪುರ ಬೆಳಗಾವಿಯಾಗುವುದೆಂದರೆ ಕೇವಲ ಭೌತಿಕ ಬದಲಾವಣೆಯಲ್ಲ, ಒಂದು ಜೀವನ ವಿಧಾನ ನಾಶವಾಗಿ ಮತ್ತೊಂದು ನೆಲೆಯೂರುವುದು. ಇದರಿಂದ ನಾವು ಪಡೆಯುವುದೇನು? ಕಳೆದುಕೊಳ್ಳುವದೇನು? ಅನೇಕ ಹಳ್ಳಿಗಳನ್ನು ನುಂಗಿ ಬೆಳೆಯುತ್ತಿರುವ ಬೆಂಗಳೂರಿನ ಬೆಳವಣಿಗೆ ಪ್ರಗತಿಯೇ? ಹಾಗೆ ನೋಡಿದರೆ ಕರಿಮಾಯಿಯ ಗುಡಸೀಕರ ಬಯಸಿದ್ದೂ ಈ ಬಗೆಯ ಬದಲಾವಣೆಯನ್ನಲ್ಲ. ತನ್ನೊಬ್ಬನ ಅಧಿಕಾರದಾಹಕ್ಕಾಗಿ ಇಡೀ ಹಳ್ಳಿಯ ಪುರಾಣವನ್ನು ಬಲಿಕೊಡುವುದು ಅವನಿಗೂ ಬೇಕಿರಲಿಲ್ಲ. ಪುರಾಣವೆಂದರೆ ಒಂದು ಸಮುದಾಯದ ಬದುಕಿಗೆ ಶಕ್ತಿಯನ್ನೂ ಚೆಲುವನ್ನೂ ನೀಡುವ ಜೀವದ್ರವ್ಯ.

ಕರಿಮಾಯಿ ಕಾದಂಬರಿಯ ಕಡೆಯಲ್ಲಿ ದೇವತೆಯ ಬಂಗಾರದ ಮುಖವನ್ನು ನಗರದಿಂದ ಬಂದಿದ್ದ ಬಸವರಾಜ ಆಭರಣಗಳ ಜೊತೆ ತೆಗೆದುಕೊಂಡು ಗಿರಿಜೆಯೊಂದಿಗೆ ಪರಾರಿಯಾಗುತ್ತಾನೆ. ತಾಯಿಯ ಮುಖದ ಈ ನಷ್ಟ ಕೇವಲ ಬಂಗಾರದ ನಷ್ಟವಲ್ಲ, ಒಂದು  ಸಮುದಾಯದ ಜೀವನ ವಿಧಾನಕ್ಕೆ ಅರ್ಥ ನೀಡಿದ್ದ, ಚೆಲುವು ನೀಡಿದ್ದ ಮಿಥ್‌ನ ನಾಶ. ನಮ್ಮ ಕಾಲದ ಕಾರ್ಪೊರೇಟ್ ಜಗತ್ತು ನಮ್ಮ ಜೀವನದ ಗಟ್ಟಿ ಸಂಬಂಧವನ್ನು, ಅದರಿಂದಾಗಿಯೇ ಬದುಕು ಪಡೆದುಕೊಳ್ಳುವ ಅರ್ಥವಂತಿಕೆಯನ್ನು, ಚೆಲುವನ್ನು ಕಸಿದುಕೊಳ್ಳುತ್ತಿದೆಯೇ? ಅಭಿವೃದ್ಧಿಯ ಹೆಸರಿನಲ್ಲಿ ಈ ನೆಲದ ಅಂತಸಃತ್ವವನ್ನೇ ನಾಶ ಮಾಡುತ್ತಿದ್ದೇವೆಯೇ?

ಈ ಎಲ್ಲ ಚಿಂತನೆಗೆ ನಮ್ಮನ್ನು ಹಚ್ಚುತ್ತಾರೆಂದೇ ಕಂಬಾರರು ವಿಶಿಷ್ಟ, ಮಾತ್ರವಲ್ಲ, ನಮ್ಮ ಕಾಲದ ಅತ್ಯಂತ ಮಹತ್ವದ ಲೇಖಕ. ವ್ಯಕ್ತಿಕೇಂದ್ರಿತ ಚಿಂತನೆಯ ಸಮಕಾಲೀನ ಪಾಶ್ಚಾತ್ಯ ಲೇಖಕರಿಗಿಂತಲೂ ಅವರು ಭಿನ್ನ. ಕಂಬಾರರು ಸಮುದಾಯದೊಂದಿಗೆ ಸಂವಾದ ನಡೆಸುವ ಅಪ್ಪಟ ಭಾರತೀಯ ಲೇಖಕ. ಅವರ ಕಥನಕ್ರಮದ ಸ್ವರೂಪದಲ್ಲಿಯೇ ಸಮುದಾಯವನ್ನು ಒಳಗೊಳ್ಳುವ ಸಂವಿಧಾನವಿದೆ. ನಮ್ಮ ಜನಪದರ ಶಕ್ತಿಯಿರುವುದೇ ಸಮುದಾಯ ಸಂಸ್ಕೃತಿಯಲ್ಲಿ.
ಜಾಗತಿಕ ನೆಲೆಯಲ್ಲಿ ಅರ್ಥಪೂರ್ಣ ಚರ್ಚೆಗೆ ‘ಕರಿಮಾಯಿ’ಯ ಇಂಗ್ಲಿಷ್ ಆವೃತ್ತಿ ಅವಕಾಶ ಕಲ್ಪಿಸಲಿ ಎಂದು ಆಶಿಸೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT