ಹಳಗನ್ನಡದ ವಸ್ತುನಿಷ್ಠ ಅಧ್ಯಯನ

7

ಹಳಗನ್ನಡದ ವಸ್ತುನಿಷ್ಠ ಅಧ್ಯಯನ

Published:
Updated:
ಹಳಗನ್ನಡದ ವಸ್ತುನಿಷ್ಠ ಅಧ್ಯಯನ

ಭಾಷೆಯ ಬಗ್ಗೆ ಭಾವುಕವಾಗಿ ಯೋಚಿಸುವಷ್ಟೇ ಗಂಭೀರವಾಗಿ ಅದರ ಪ್ರಾಯೋಗಿಕ ಸವಾಲುಗಳ ಬಗ್ಗೆ ಯೋಚಿಸಿ ಕಾರ್ಯಪ್ರವೃತ್ತರಾಗಲೇಬೇಕಾದ ತುರ್ತು ಇಂದಿನದು. ಸತ್ತ, ಸಾಯುತ್ತಿರುವ, ಸಾಯಬಹುದಾದ ಭಾಷೆಗಳ ಪಟ್ಟಿಗಳ ನಡುವಿರುವ ವೈರುಧ್ಯಗಳು ಸೃಷ್ಟಿಸುತ್ತಿರುವ ಗೊಂದಲಗಳು ಒಂದು ಕಡೆಯಾದರೆ, ಭಾಷೆಯನ್ನು ರಾಜಕೀಯ ದಾಳ ಆಗಿ ಹೂಡಿ ಬಳಸುತ್ತಿರುವ ಆತಂಕ ಮತ್ತೊಂದು ಕಡೆ. ಆದರೆ, ಈ ಎರಡನ್ನೂ ಮೀರಿದ ಪರಮ ವಾಸ್ತವವೊಂದು ನಮ್ಮನ್ನು ಕಂಗಾಲುಗೊಳಿಸುತ್ತಿದೆ. ದೇಶಭಾಷೆಗಳು ಎದುರಿಸುತ್ತಿರುವ ವಿಲಕ್ಷಣವಾದ ಸವಾಲುಗಳನ್ನು ಎದುರಿಸಲು ಈ ಭಾಷೆಗಳು ತಮ್ಮದೇ ಆದ ಕಾರ್ಯಸೂಚಿಯನ್ನು, ಪರಿಹಾರದ ಮಾರ್ಗಗಳನ್ನು ಕಂಡುಕೊಳ್ಳುವುದು ಅಗತ್ಯವಾಗಿದೆ. ಅವುಗಳಲ್ಲಿ ಅತ್ಯಂತ ಮಹತ್ವದ್ದೆಂದರೆ, ಭಾಷೆಯೊಂದು ತನ್ನ ಹಿನ್ನೋಟದ ಮೂಲಕ ಮುನ್ನೋಟಕ್ಕೆ ಸಜ್ಜುಗೊಳಿಸಿಕೊಳ್ಳುವುದು.

ಕಳೆದ ವಾರ ಬಿಡುಗಡೆಯಾದ, ಷ. ಶೆಟ್ಟರ್ ಅವರು ಸಂಪಾದಿಸಿರುವ ‘ಹಳಗನ್ನಡ -ಭಾಷೆ, ಭಾಷಾವಿಕಾಸ, ಭಾಷಾ ಬಾಂಧವ್ಯ’ ಇಂಥ ಸಮಕಾಲೀನ ತುರ್ತನ್ನು ಈಡೇರಿಸಬಲ್ಲ ಶಕ್ತಿಯ ಕೃತಿಯಾಗಿದೆ. ಅಪಾರ ಶ್ರಮ ಮತ್ತು ಬದ್ಧತೆಯನ್ನು ಬೇಡುವ ಕೃತಿಯೊಂದನ್ನು ಶೆಟ್ಟರ್ ಅವರು ಇಳಿವಯಸ್ಸಿನಲ್ಲಿಯೂ ಸಂಪಾದಿಸಲು, ರೂಪಿಸಲು ಸಾಧ್ಯವಾಗಿದೆ ಎನ್ನುವುದು ಅವರನ್ನು ಕುರಿತ ನಮ್ಮ ಗೌರವವನ್ನು ಸಕಾರಣವಾಗಿ ಹೆಚ್ಚಿಸುತ್ತದೆ.

ಇದೊಂದು ಶಾಸ್ತ್ರೀಯ ಗ್ರಂಥ ಎಂದು ಗುರುತಿಸುವುದೇ ಈ ಕೃತಿಯ ಪ್ರಸ್ತುತತೆ ಮತ್ತು ವ್ಯಾಪ್ತಿಯನ್ನು ಕುಗ್ಗಿಸಿಬಿಡುತ್ತದೆ. ಜಗತ್ತಿನ ಪ್ರಾಚೀನ ಭಾಷೆಗಳಲ್ಲಿ, ಸಮೃದ್ಧ ಭಾಷೆಗಳಲ್ಲಿ ಒಂದಾದ ಕನ್ನಡ ಭಾಷೆಯು ಬೆಳೆದು ಬಂದ ಪ್ರಕ್ರಿಯೆಯನ್ನು, ಇತರ ಭಾಷೆಗಳ ಜೊತೆಗಿನ ಕೊಡು ಕೊಳ್ಳುವಿಕೆಯಲ್ಲಿ, ತನ್ನದೇ ಸ್ವಂತಿಕೆಯನ್ನು ಕಂಡುಕೊಳ್ಳುವಲ್ಲಿ ಅದು ನಡೆಸಿದ ಪ್ರಯತ್ನಗಳನ್ನು, ಭಾಷೆಗಳ ನಡುವೆ ಇರುವ ಜೀವಂತವಾದ, ಸೃಷ್ಟಿಶೀಲವಾದ ಸಂಬಂಧಗಳನ್ನು, ಅವು ಮೂಲತಃ ಸೌಹಾರ್ದದ ಸಂಬಂಧಗಳೇ ಆಗಿರುವ ಆರೋಗ್ಯಕರ ಲಕ್ಷಣವೊಂದನ್ನು... ಈ ಎಲ್ಲದರ ಜೊತೆಗೇ ಪ್ರಭುತ್ವವು ಭಾಷೆಯ ಮೇಲೆ ಅಧಿಕಾರ ಸ್ಥಾಪಿಸುವ ಪ್ರಯತ್ನಗಳ ಸೋಲು, ಗೆಲುವುಗಳನ್ನು ಗುರುತಿಸುವ ಪ್ರಯತ್ನವನ್ನು, ಧರ್ಮ ಮತ್ತು ಭಾಷೆಗಳ ನಡುವಿನ ಸಂಬಂಧವು ಒಂದು ಭಾಷೆಯ ಸ್ವರೂಪ ಮತ್ತು ಚಲನೆಯನ್ನೇ ನಿರ್ಧರಿಸುವಷ್ಟು ಪ್ರಭಾವಶಾಲಿಯಾಗಿರುವುದನ್ನು... ಇಷ್ಟಿದ್ದೂ ಒಂದು ಭಾಷೆಯ ಅಪ್ಪಟ ಕಾವ್ಯಗಳು ಒಂದು ಭಾಷೆಯ ನಿಜವಾದ ಹೆಗ್ಗಳಿಕೆಗಳಾಗುವ ಅದ್ಭುತವನ್ನು... ಹೀಗೆ ಈ ಮಹತ್ವದ ಕೃತಿಗೆ ಅನೇಕ ನಿರ್ಣಾಯಕ ಮಜಲುಗಳಿವೆ. ಇನ್ನೂ ಮುಖ್ಯವಾದ ಮಾತೆಂದರೆ ಈ ಎಲ್ಲವನ್ನೂ ಕನ್ನಡದ ಘನ ವಿದ್ವಾಂಸರು ಈ ಕೃತಿಯಲ್ಲಿ ಕನ್ನಡದ ಶಾಸನಗಳನ್ನು ಆಧರಿಸಿ ಚರ್ಚಿಸುತ್ತಾರೆ ಎನ್ನುವುದು.

ಈ ಕೃತಿಯನ್ನು ಶಾಸ್ತ್ರ ಗ್ರಂಥ ಎಂದು ಮಾತ್ರ ಗುರುತಿಸಬಾರದು ಎನ್ನುವ ನನ್ನ ವಾದಕ್ಕೆ ಇರುವ ಪ್ರಬಲ ಸಮರ್ಥನೆ ಎಂದರೆ, ಈ ಕೃತಿಗಿರುವ ಸ್ಪಷ್ಟವಾದ ಚೌಕಟ್ಟು ಮತ್ತು ಈ ಕೃತಿಯನ್ನು ಸಂಯೋಜಿಸಿರುವ ಕ್ರಮ. ಪ್ರಸ್ತಾವನೆಯೂ ಸೇರಿದಂತೆ ಈ ಕೃತಿ ಕನ್ನಡ ಭಾಷೆಯ ದಾರಿಯನ್ನು, ಅದರ ಹೊರಳು ಘಟ್ಟಗಳನ್ನು, ಪ್ರಭಾವ ಮತ್ತು ಸ್ವಂತಿಕೆಗಳ ನೆಲೆಗಳನ್ನು ಗುರಿಯಿಟ್ಟು ಚರ್ಚಿಸುತ್ತದೆ. ಹೀಗಾಗಿ ಕನ್ನಡ ಭಾಷೆ ಮತ್ತು ಸಾಹಿತ್ಯದ ಗಂಭೀರ ವಿದ್ಯಾರ್ಥಿಗಳಲ್ಲದೆ, ಸಾಮಾನ್ಯರೂ ಓದಬಹುದಾದ ನೆಲೆಯೂ ಇದಕ್ಕೆ ದಕ್ಕಿದೆ. ಪದವೊಂದರ ವ್ಯುತ್ಪತ್ತಿ, ಅದರ ಅನ್ಯಭಾಷಿಕ ಮೂಲ, ಅದು ಕನ್ನಡದಲ್ಲಿ ಪಡೆದ ರೂಪಾಂತರ ಮತ್ತು ಅರ್ಥಾಂತರಗಳ ತಾಂತ್ರಿಕ ಚರ್ಚೆ ಸಾಮಾನ್ಯರಿಗೆ ಮೀರಿದ್ದಾಗಿರಬಹುದು. ಆದರೆ, ಖಂಡಿತವಾಗಿಯೂ ಯಾರಿಗಾದರೂ ಒಂದು ಭಾಷೆ ನಡೆದು ಬಂದ ದಾರಿಯ ಹೆಜ್ಜೆಗುರುತುಗಳನ್ನು ಅರ್ಥ ಮಾಡಿಕೊಳ್ಳುವುದು ಸಾಧ್ಯವಾಗುತ್ತದೆ ಎನ್ನುವುದೇ ಈ ಕೃತಿಯ ಹೆಚ್ಚುಗಾರಿಕೆಯಾಗಿದೆ.

ಸಮಕಾಲೀನ ಸಂದರ್ಭಗಳಲ್ಲಿ ಕನ್ನಡದಂತಹ ಪ್ರಮುಖ ಭಾಷೆ ಕೂಡ ಎದುರಿಸುತ್ತಿರುವ ಸವಾಲೆಂದರೆ, ತನ್ನನ್ನು ಪ್ರಸ್ತುತಗೊಳಿಸಿಕೊಳ್ಳುವ ಮತ್ತು ಸಮಕಾಲೀನಗೊಳಿಸಿಕೊಳ್ಳುವ ಸಂಗತಿಯದ್ದು. ಕನ್ನಡ ಭಾಷೆ ಅಗತ್ಯವೇನೂ ಅಲ್ಲದ ಜಾಗತಿಕ ಸನ್ನಿವೇಶವೊಂದರಲ್ಲಿರುವ, ಅದನ್ನು ಸಹಜವೆಂದು ಒಪ್ಪಿಕೊಳ್ಳುವ ದ್ವಂದ್ವದಲ್ಲಿರುವ ಕನ್ನಡಿಗರಿಗೆ, ಅದರ ಘನ ಪರಂಪರೆ ಮತ್ತು ಬೆಳೆದು ಬಂದ ದಾರಿಯ ಪರಿಚಯ ಆ ಭಾಷೆಯನ್ನು ಕುರಿತ ನಿಲುವನ್ನೇ ಬದಲಿಸಬಹುದಾದ ಸಾಧ್ಯತೆಯು ಇಂದು ಒಂದು  ಪರಿಹಾರವೂ ಹೌದೆಂದು ನಾವು ತಿಳಿದಿರುವ ಸಂದರ್ಭದಲ್ಲಿ ಈ ಪಠ್ಯ ಆ ಕೆಲಸವನ್ನು ಸಮರ್ಥವಾಗಿ ಮಾಡುತ್ತದೆ. ಪ್ರಾಕೃತ ಮತ್ತು ಸಂಸ್ಕೃತದ ಪ್ರಭಾವ, ಅವುಗಳ ಮೇಲಾಟ, ಅವುಗಳನ್ನು ಕುರಿತ ಋಣಭಾರವನ್ನು ಕನ್ನಡ ಹೇಗೆ ನಿಧಾನವಾಗಿ ಬಾಂಧವ್ಯವಾಗಿ ಮತ್ತು ಕನ್ನಡವೆನ್ನುವ ಸ್ವತಂತ್ರ, ಶಕ್ತ ಭಾಷೆಯಾಗಿ ರೂಪುಗೊಳ್ಳುವ ವ್ಯಕ್ತಿತ್ವದ ಹುಡುಕಾಟವೂ ಆಯಿತೆನ್ನುವುದನ್ನು ಇಲ್ಲಿನ ಸಂಶೋಧನಾ ಬರಹಗಳು ಸ್ಥಾಪಿಸುತ್ತಾ ಹೋಗುತ್ತವೆ. ಪ್ರಸ್ತಾವನೆಯಲ್ಲಿಯೇ ಶೆಟ್ಟರ್ ಅವರು ಈ ತನಕದ ಕನ್ನಡ ಭಾಷಾ ಸಂಶೋಧನೆಯ ಘಟ್ಟಗಳನ್ನು ಗುರುತಿಸುವುದರ ಮೂಲಕ ಈ ಕೃತಿ ಹೇಗೆ ಅದರ ಮುಂದುವರಿಕೆಯೆನ್ನುವುದನ್ನು ಸ್ಪಷ್ಟಪಡಿಸುತ್ತಾರೆ. ಜನಾಂಗ, ಪ್ರದೇಶ, ಕಾವ್ಯಗಳು. ಭಾಷೆ, ಭಾಷಿಕ ವ್ಯಾಸಂಗದ ಮೂಲಕ ಸಾಗಿ ಬಂದ ಕನ್ನಡ ಭಾಷೆಯ ಅಧ್ಯಯನ ಇಲ್ಲಿ ಶಾಸನಗಳನ್ನಾಧರಿಸಿರುವುದರ ಔಚಿತ್ಯವನ್ನು ಪ್ರತಿಪಾದಿಸುತ್ತಾರೆ. ಮಾತ್ರವಲ್ಲ ಈ ತನಕ ಇದರಲ್ಲಿ ತೊಡಗಿಕೊಂಡ ವಿದ್ವಾಂಸರು, ಅವರ ಆಸಕ್ತಿಯ ಕ್ಷೇತ್ರಗಳನ್ನೂ ಸೂಚಿಸುತ್ತಾರೆ.

ಎಂ.ಬಿ. ನೇಗಿನಹಾಳ, ಕೆ. ಕುಶಾಲಪ್ಪಗೌಡ, ಟಿ.ವಿ. ವೆಂಕಟಾಚಲ ಶಾಸ್ತ್ರಿ. ಹಂಪನಾ, ಆರ್‍ವಿಯಸ್ ಸುಂದರಂ, ಎಚ್.ಎಸ್. ಗೋಪಾಲರಾವ್, ಜಿ.ವಿ. ಮೊದಲಾದ ಕನ್ನಡದ ಹಿರಿಯ ಸಂಶೋಧಕರ ಬರವಣಿಗೆಗಳ ಜೊತೆ ಸ್ವತಃ ಶೆಟ್ಟರ್ ಅವರ ಸಂಶೋಧನಾ ಲೇಖನಗಳೂ ಇಲ್ಲಿವೆ. ಪ್ರಾಕೃತ ಮತ್ತು ಸಂಸ್ಕೃತ ಭಾಷೆಗಳ ಒಡನಾಟದ ಜೊತೆಗೇ ಹಳಗನ್ನಡದ ಶಾಸನಗಳ ಅಲಂಕಾರ, ಛಂದಸ್ಸು, ಅವುಗಳ ಭಾವ ಸಂಪತ್ತು, ಪ್ರಾರ್ಥನೆ ಮತ್ತು ಶಾಪೋಕ್ತಿಗಳ ಅಧ್ಯಯನವೂ ಸೇರಿದಂತೆ ಕನ್ನಡ ಭಾಷೆಯನ್ನು ಕಟ್ಟಿದ ಇನ್ನಿತರ ಸಂಗತಿಗಳನ್ನೂ ಈ ಕೃತಿ ದೀರ್ಘವಾದ ವಸ್ತುನಿಷ್ಠವಾದ ಅಧ್ಯಯನಕ್ಕೆ ಒಳಗು ಮಾಡುತ್ತದೆ. ಕಪ್ಪೆ ಅರಭಟ್ಟನ ಶಾಸನದ ಒಂದೂವರೆ ಶತಮಾನದ ಓದು ಎನ್ನುವ ಲೇಖನ ಆ ಶಾಸನದ ಒಂದೊಂದು ಪದವನ್ನೂ, ಅದರ ಮೂಲವನ್ನೂ, ಈ ತನಕ ಅದರ ಮೇಲೆ ಬಂದಿರುವ ಸಂಶೋಧನೆಗಳ ವಿವರವಾದ ಕಾಲಾನುಕ್ರಮದ ಚರ್ಚೆಯನ್ನೂ ಮಾಡುತ್ತದೆ.

ಸರಳವಾಗಿ ಹೇಳುವುದಾದರೆ ಈ ಕೃತಿ ಕನ್ನಡವನ್ನು ಕುರಿತ ನಮ್ಮ ಅರಿವನ್ನು ಹೆಚ್ಚಿಸುತ್ತಲೇ ನಮ್ಮ ಜವಾಬ್ದಾರಿಯ ಅರಿವನ್ನೂ ಅಷ್ಟೇ ಸ್ಪಷ್ಟವಾಗಿ ತೋರಿಸಿಕೊಡುತ್ತದೆ. ಪ್ರಾಕೃತವನ್ನು ಮೊದಲ ಬರಹದ ಭಾಷೆಯಾಗಿ, ಬ್ರಾಹ್ಮಿಯನ್ನು ಮೊದಲ ಲಿಪಿಯಾಗಿ ಹೊಂದಿದ್ದ ಕನ್ನಡ ಭಾಷೆ ಈ ತನಕ ಬೆಳೆದು ಬಂದ ಹೆಜ್ಜೆಗುರುತುಗಳು ಈ ಕೃತಿಯನ್ನು ಓದುವಾಗ ಸ್ಪಷ್ಟವಾಗುತ್ತಾ ಹೋಗುತ್ತವೆ. ಸರಿ ಸುಮಾರು 2200 ಶಾಸನಗಳ ಅಧ್ಯಯನದ ನೆರವಿನಿಂದ ಈ ಪಠ್ಯ ರೂಪುಗೊಂಡಿದೆ ಎಂದು ಸಂಪಾದಕರು ತಿಳಿಸುತ್ತಾರೆ. ಇಲ್ಲಿನ ಲೇಖನಗಳನ್ನು ಓದುತ್ತಿದ್ದರೆ, ನಮ್ಮ ವಿದ್ವತ್ ಪರಂಪರೆಯ ಬಗ್ಗೆ ಅಪಾರವಾದ ಗೌರವ ಮೂಡುತ್ತದೆ, ಅದೆಂಥ ತಪೋನಿಷ್ಠೆಯಲ್ಲಿ ಇವರೆಲ್ಲ ತಮ್ಮಿಡೀ ಜೀವಮಾನವನ್ನು ತಮ್ಮ ಭಾಷೆ ಮತ್ತು ಸಾಹಿತ್ಯವನ್ನು ಕುರಿತ ಸಂಶೋಧನೆಗೆ ಮುಡಿಪಿಟ್ಟಿದ್ದಾರೆ, ಯಾವ ಲೌಕಿಕ ನಿರೀಕ್ಷೆಗಳು, ಲಾಭಗಳಿಲ್ಲದೆ ತಮ್ಮನ್ನು ಇದರಲ್ಲಿ ತೊಡಗಿಸಿಕೊಂಡಿದ್ದಾರೆ ಎನ್ನುವುದರ ಅರಿವೂ ಇಂದಿನ ತಲೆಮಾರಿಗೆ ತೀರಾ ಅಗತ್ಯ. ಹಿರಿಯರು ಕಟ್ಟಿದ ಈ ಅರಿವಿನ ಮನೆಯನ್ನು ಉಳಿಸಿಕೊಂಡು ಹೋಗುವ ನೈತಿಕ ಜವಾಬ್ದಾರಿಯನ್ನೂ ಈ ಪಠ್ಯ ಸೂಚಿಸುತ್ತದೆ. ಕನ್ನಡ ಭಾಷೆಯೂ ಸೇರಿದಂತೆ ಹಲವು ಕನ್ನಡಗಳ ಕನ್ನಡ ಜಗತ್ತನ್ನು ಪರಿಚಯಿಸುವ, ಈ ಜಗತ್ತನ್ನು ಕುರಿತ ನಮ್ಮ ಅಭಿಮಾನ ಮತ್ತು ಪ್ರೀತಿಯನ್ನು ಕೃತಜ್ಞತೆಯಾಗಿ ಪರಿವರ್ತಿಸುತ್ತದೆ ಈ ಕೃತಿ ಸಂಪಾದಕರಾದ ಷ. ಶೆಟ್ಟರ್ ಮತ್ತು ಇತರ ಎಲ್ಲಾ ವಿದ್ವಾಂಸರಿಗೂ ಕನ್ನಡಿಗರು ಕೃತಜ್ಞರಾಗಿರಬೇಕು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry