ಬೋಧಕರ ಕೊರತೆ ನಡುವೆ ಕಾಲೇಜು ಆರಂಭ

7

ಬೋಧಕರ ಕೊರತೆ ನಡುವೆ ಕಾಲೇಜು ಆರಂಭ

Published:
Updated:
ಬೋಧಕರ ಕೊರತೆ ನಡುವೆ ಕಾಲೇಜು ಆರಂಭ

ಹೊಸದುರ್ಗ: ಕಾಯಂ ಉಪನ್ಯಾಸಕರ ಕೊರತೆ ನಡುವೆ ಪಟ್ಟಣದ ಎಡೆತೊರೆ ಸದ್ದಿವಾಲ್‌ ಲಿಂಗಯ್ಯ ಸರ್ಕಾರಿ ಪಿಯು ಕಾಲೇಜಿನಲ್ಲಿ 2017–18ನೇ ಸಾಲಿನ ತರಗತಿಗಳು ಆರಂಭವಾಗಿವೆ. ಪ್ರಥಮ ಹಾಗೂ ದ್ವಿತೀಯ ಪಿಯುನ ವಾಣಿಜ್ಯಶಾಸ್ತ್ರ ವಿಭಾಗದಲ್ಲಿ ಕಲಿಯುತ್ತಿರುವ 500 ವಿದ್ಯಾರ್ಥಿಗಳಿಗೆ ಬೋಧಿಸಲು ಒಬ್ಬರೂ ಕಾಯಂ ಉಪನ್ಯಾಸಕರಿಲ್ಲ.

ಐದು ವರ್ಷದಿಂದ ಇಂತಹ ಸಮಸ್ಯೆ ಎದುರಿಸುತ್ತಿದ್ದರೂ ವಿದ್ಯಾರ್ಥಿಗಳ ಹಿತ ಕಾಪಾಡಲು ಸರ್ಕಾರ ಕಾಯಂ ಉಪನ್ಯಾಸಕರ ನೇಮಕಾತಿಗೆ ಮುಂದಾಗದಿರುವುದು ನೋವಿನ ಸಂಗತಿ ಎಂದು ಪೋಷಕರು, ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.

1972ರಲ್ಲಿ ಸ್ಥಾಪನೆಯಾದ ಈ ಕಾಲೇಜಿನಲ್ಲಿ ಬಹುತೇಕ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಇಲ್ಲಿ ಅಧ್ಯಯನ ಮಾಡಿದ ಹಲವರು ಉನ್ನತ ಹುದ್ದೆಗಳಲ್ಲಿದ್ದಾರೆ. ಒಂದು ಕಾಲದಲ್ಲಿ ಜಿಲ್ಲೆಗೆ ಪ್ರತಿಷ್ಠಿತವಾಗಿದ್ದ ಕಾಲೇಜು ಕಾಯಂ ಉಪನ್ಯಾಸಕರಿಲ್ಲದೆ ಸೊರಗುತ್ತಿದೆ.

ಇಲ್ಲಿನ ಪ್ರಾಂಶುಪಾಲ ಮತ್ತು ಸಿಬ್ಬಂದಿ ಪರಿಶ್ರಮದಿಂದ ಪ್ರತಿ ವರ್ಷ ಕಾಲೇಜು ಉತ್ತಮ ಫಲಿತಾಂಶ ಪಡೆಯುತ್ತಿದೆ. ಈ ಬಾರಿ ಸುಸಜ್ಜಿತವಾದ ಗ್ರಂಥಾಲಯ, ಎಸ್‌ಸಿ ಹಾಗೂ ಎಸ್‌ಟಿ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ ಹಾಗೂ ವಿಶೇಷ ತರಗತಿ ಸೌಲಭ್ಯ ಕಲ್ಪಿಸಲಾಗಿದೆ. ಇಂತಹ ಕಾಲೇಜಿಗೆ ಕಾಯಂ ಉಪನ್ಯಾಸಕರನ್ನು ನೇಮಕ ಮಾಡಿದಲ್ಲಿ ವಿದ್ಯಾರ್ಥಿಗಳ ಹೆಚ್ಚು ಸಾಧನೆಗೆ ನೆರವಾಗುತ್ತದೆ. ಇದರಿಂದ ಬಡವಿದ್ಯಾರ್ಥಿಗಳು ಲಕ್ಷಾಂತರ ರೂಪಾಯಿ ಶುಲ್ಕ ಪಾವತಿಸಿ  ಖಾಸಗಿ ಕಾಲೇಜುಗಳಿಗೆ  ಸೇರುವ ಹೊರೆ ತಪ್ಪುತ್ತದೆ ಎನ್ನುತ್ತಾರೆ ಪೋಷಕರು.

ಹೆಚ್ಚುವರಿ ಸಿಬ್ಬಂದಿ ಬೇಕಿದೆ: ಮಂಜೂರಾಗಿರುವ ಹುದ್ದೆಗಳನ್ನು ಹೊರತುಪಡಿಸಿ ಇನ್ನೂ ಇತಿಹಾಸ, ಅರ್ಥಶಾಸ್ತ್ರ, ಕನ್ನಡ, ಇಂಗ್ಲಿಷ್‌, ವ್ಯವಹಾರ ಅಧ್ಯಯನ ಬೋಧನೆಗೆ ಹೆಚ್ಚುವರಿಯಾಗಿ ಐದು ಮಂದಿ ಉಪನ್ಯಾಸಕರು ಹಾಗೂ ಪ್ರಥಮ ದರ್ಜೆ ಸಹಾಯಕ, ದ್ವಿತೀಯ ದರ್ಜೆ ಸಹಾಯಕ, ‘ಡಿ’ ಗ್ರೂಪ್‌, ಬೆರಳಚ್ಚುಗೆ ತಲಾ ಒಬ್ಬರು ಹೆಚ್ಚುವರಿ ಸಿಬ್ಬಂದಿ ಬೇಕಿದೆ. 

ಇನ್ನೂ 150 ವಿದ್ಯಾರ್ಥಿಗಳ ನಿರೀಕ್ಷೆ

ಕಲಾ, ವಿಜ್ಞಾನ ಹಾಗೂ ವಾಣಿಜ್ಯಶಾಸ್ತ್ರ ಸೇರಿ ಕಾಲೇಜಿನಲ್ಲಿ ಮೂರು ವಿಭಾಗಗಳಿವೆ. 2017–18ನೇ ಸಾಲಿನ ಪ್ರಥಮ ಪಿಯು ಕಲಾ ವಿಭಾಗಕ್ಕೆ 145, ವಾಣಿಜ್ಯಶಾಸ್ತ್ರಕ್ಕೆ 262 ಹಾಗೂ ವಿಜ್ಞಾನ ವಿಭಾಗಕ್ಕೆ 196 ಸೇರಿದಂತೆ ಒಟ್ಟು 603 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಜೂನ್‌ 20ರ ವರೆಗೆ ಪ್ರವೇಶಾತಿಗೆ ಅವಕಾಶವಿದ್ದು ಇನ್ನೂ 150 ವಿದ್ಯಾರ್ಥಿಗಳು ಪ್ರವೇಶ ಪಡೆಯುವ ನಿರೀಕ್ಷೆ ಇದೆ. ದ್ವಿತೀಯ ಪಿಯು ಕಲಾ ವಿಭಾಗದಲ್ಲಿ 90, ವಿಜ್ಞಾನ 186 ಹಾಗೂ ವಾಣಿಜ್ಯಶಾಸ್ತ್ರದಲ್ಲಿ 210 ವಿದ್ಯಾರ್ಥಿಗಳು ಸೇರಿ 486 ವಿದ್ಯಾರ್ಥಿಗಳಿದ್ದಾರೆ.

ಮಂಜೂರಾದರೂ ಬರುತ್ತಿಲ್ಲ

ಪ್ರಥಮ ಹಾಗೂ ದ್ವಿತೀಯ ಪಿಯು ಸೇರಿ ಒಟ್ಟು 1,200 ವಿದ್ಯಾರ್ಥಿಗಳಿದ್ದಾರೆ. ಇಷ್ಟು ವಿದ್ಯಾರ್ಥಿಗಳಿಗೆ ಇಂಗ್ಲಿಷ್‌ ಬೋಧನೆಗೆ ಇರುವುದು ಒಬ್ಬರೇ ಉಪನ್ಯಾಸಕರು. ಜೀವಶಾಸ್ತ್ರಕ್ಕೆ ಮಂಜೂರಾಗಿದ್ದ ಉಪನ್ಯಾಸಕರು ಕೂಡಾ ಬಂದಿಲ್ಲ. ಇನ್ನೂ ರಸಾಯನಶಾಸ್ತ್ರ ಬೋಧಿಸುತ್ತಿದ್ದ ಉಪನ್ಯಾಸಕರು ಬಿ.ಇಡಿ ತರಬೇತಿ ಪಡೆಯಲು ಹೋಗಿದ್ದಾರೆ. ಇವರು ಎರಡು ವರ್ಷ ಕಾಲೇಜಿಗೆ ಬರುವುದಿಲ್ಲ.

ವಿದ್ಯಾರ್ಥಿಗಳ ಸಂಖ್ಯೆ

603 ಪ್ರಥಮ ಪಿಯು  ವಿದ್ಯಾರ್ಥಿಗಳು

16  ಕಾಯಂ ಉಪನ್ಯಾಸಕರು ಇದ್ದಾರೆ. ಕಾಲೇಜು ಅಭಿವೃದ್ಧಿ ನಿಧಿಯಿಂದ ವೇತನ ಕೊಟ್ಟು ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಾಗಿದೆ  ಎಚ್‌.ಮಲ್ಲಪ್ಪ,     ಪ್ರಾಂಶುಪಾಲರು

486 ದ್ವಿತೀಯ ಪಿಯುನಲ್ಲಿ  ವಿದ್ಯಾರ್ಥಿಗಳ ಸಂಖ್ಯೆ 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry