ತಿದ್ದುಪಡಿ ವಿಧೇಯಕ ಕೈಬಿಡಲು ಒತ್ತಾಯ

7

ತಿದ್ದುಪಡಿ ವಿಧೇಯಕ ಕೈಬಿಡಲು ಒತ್ತಾಯ

Published:
Updated:
ತಿದ್ದುಪಡಿ ವಿಧೇಯಕ ಕೈಬಿಡಲು ಒತ್ತಾಯ

ದೊಡ್ಡಬಳ್ಳಾಪುರ: ವಿಧಾನ ಮಂಡಲದಲ್ಲಿ ಮಂಡಿಸಲಾಗಿರುವ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ವಿಧೇಯಕವನ್ನು ಕೈಬಿಡಬೇಕೆಂದು ಒತ್ತಾಯಿಸಿ ಶುಕ್ರವಾರ ಭಾರತೀಯ ವೈದ್ಯಕೀಯ ಸಂಘ ಕರೆ ನೀಡಿದ್ದ ರಾಜ್ಯವ್ಯಾಪಿ ಮುಷ್ಕರಕ್ಕೆ ಬೆಂಬಲಿಸಿ ಭಾರತೀಯ ವೈದ್ಯಕೀಯ ಸಂಘ ದೊಡ್ಡಬಳ್ಳಾಪುರ ಘಟಕದ ನೇತೃತ್ವದಲ್ಲಿ ವೈದ್ಯರು ಮುಷ್ಕರ ನಡೆಸಿದರು.

ನಗರದ ಭಾರತೀಯ ವೈದ್ಯಕೀಯ ಸಂಘದ ಆವರಣದಲ್ಲಿ ರಾಜ್ಯ ಸರ್ಕಾರದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಭಾರತೀಯ ವೈದ್ಯಕೀಯ ಸಂಘದ ತಾಲ್ಲೂಕು ಅಧ್ಯಕ್ಷ ಡಾ.ಎಚ್.ಜಿ.ವಿಜಯಕುಮಾರ್, ಸರ್ಕಾರಿ ಆಸ್ಪತ್ರೆಗಳಲ್ಲಿನ ಅವ್ಯವಸ್ಥೆಯನ್ನು ಸರಿಪಡಿಸಲಾಗದ ಸರ್ಕಾರ ಖಾಸಗಿ ಆಸ್ಪತ್ರೆಗಳ ವೈದ್ಯರ ಮೇಲೆ ಅರ್ಥವಿಲ್ಲದ ಕಾನೂನುಗಳನ್ನು ರೂಪಿಸುತ್ತಿದೆ ಎಂದರು.

ಕರ್ನಾಟಕ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ಕಾಯಿದೆಗೆ ತಿದ್ದಪಡಿ ತರಲು ರಾಜ್ಯ ಸರ್ಕಾರ ಮುಂದಾಗಿದೆ. ಅದಕ್ಕಾಗಿ ಜಸ್ಟಿಸ್ ವಿಕ್ರಂಜಿತ್ ಸೇನ್ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಸಮಿತಿಯು ಸಲ್ಲಿಸಿದ್ದ ವರದಿಯಲ್ಲಿ ಸರ್ಕಾರಿ ಆಸ್ಪತ್ರೆಗಳನ್ನೂ ಕಾಯಿದೆಯಲ್ಲಿ ತರಬೇಕೆಂದೂ, ಪ್ರತ್ಯೇಕ ನಿಯಂತ್ರಣ ಸಮಿತಿಗಳನ್ನು ರಚಿಸುವ ಅಗತ್ಯವಿಲ್ಲ ಎಂದು ಹೇಳಲಾಗಿತ್ತು. ಆದರೆ ಈಗ ಸಿದ್ದಪಡಿಸಿರುವ ವಿಧೇಯಕವು ಅದಕ್ಕೆ ಸಂಪೂರ್ಣವಾಗಿ ತದ್ವಿರುದ್ಧವಾಗಿದೆ ಎಂದರು.

ಪ್ರತಿಭಟನೆಯಲ್ಲಿ ಮಾತನಾಡಿದ ತಾಲ್ಲೂಕು ಸಂಘದ ಗೌರವ ಅಧ್ಯಕ್ಷ ಡಾ. ಶ್ಯಾಮ್‌ಪ್ರಸಾದ್, ಯಾರೋ ಮಾಡುವ ಕೆಲಸಕ್ಕೆ ಮತ್ಯಾರೋ ನಷ್ಟ ಅನುಭವಿಸುವಂತಾಗಿದೆ. ಈ ವಿಧೇಯಕದ ಪ್ರಕಾರ ವೈದ್ಯರ ಬಳಿ ಕೆಲಸ ಮಾಡುವ ಕಾರ್ಮಿಕನ ಕೈತುಂಬ ಹಣ ಲಭ್ಯವಾಗುತ್ತದೆ. ರೋಗಿಗಳಿಗೂ ಉತ್ತಮ ಆರೋಗ್ಯ ಸೌಲಭ್ಯಗಳು ದೊರೆಯುತ್ತವೆ. ಆದರೆ ಚಿಕಿತ್ಸೆ ಒದಗಿಸುವ ವೈದ್ಯನ ಸ್ಥಿತಿ ಮಾತ್ರ ಅತ್ಯಂತ ಹೀನಾಯವಾಗಿರುತ್ತದೆ ಎಂದರು.

ಪ್ರತಿಭಟನೆಯಲ್ಲಿ ಭಾರತೀಯ ವೈದ್ಯಕೀಯ ಸಂಘದ ಕಾರ್ಯದರ್ಶಿ ಡಾ.ಶಿವಕುಮಾರ್, ಡಾ.ರಮೇಶ್, ಡಾ.ಜಗನ್ನಾದ್, ಡಾ.ಪಾರ್ಥಸಾರಥಿ, ಡಾ.ಭಾಸ್ಕರ್‌ರಾವ್, ಡಾ.ವೇಣುಗೋಪಾಲ್ ಮತ್ತಿತರರು ಇದ್ದರು.

* * 

ಸರ್ಕಾರಿ ಆಸ್ಪತ್ರೆಗಳ ವ್ಯವಸ್ಥೆ ಸರಿ ಮಾಡುವ ಕಡೆ ಗಮನ ನೀಡದ ಸರ್ಕಾರ ಸಂಪೂರ್ಣವಾಗಿ ಖಾಸಗಿ ಆಸ್ಪತ್ರೆಗಳನ್ನು ಹಿಡಿತಕ್ಕೆ ತರುವ ಕಾಯಿದೆಯನ್ನು ಜಾರಿಗೆ ತರಲು ಹೊರಟಿದೆ

ಡಾ. ಶ್ಯಾಮ್‌ಪ್ರಸಾದ್,

ಐಎಂಎನ  ತಾಲ್ಲೂಕು ಗೌರವಾಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry