ಭಾರತದ ವಿರುದ್ಧ ಸೋಲಿಗೆ ಮುಯ್ಯಿ ತೀರಿಸಲು ಇದು ಮಹತ್ವದ ಅವಕಾಶ: ಇಮ್ರಾನ್ ಖಾನ್

7

ಭಾರತದ ವಿರುದ್ಧ ಸೋಲಿಗೆ ಮುಯ್ಯಿ ತೀರಿಸಲು ಇದು ಮಹತ್ವದ ಅವಕಾಶ: ಇಮ್ರಾನ್ ಖಾನ್

Published:
Updated:
ಭಾರತದ ವಿರುದ್ಧ ಸೋಲಿಗೆ ಮುಯ್ಯಿ ತೀರಿಸಲು ಇದು ಮಹತ್ವದ ಅವಕಾಶ: ಇಮ್ರಾನ್ ಖಾನ್

ನವದೆಹಲಿ: ಪಾಕಿಸ್ತಾನ ಕ್ರಿಕೆಟ್‌ ತಂಡದ ಮಾಜಿ ನಾಯಕ ಇಮ್ರಾನ್‌ ಖಾನ್‌ ಅವರು ಭಾರತ ವಿರುದ್ಧದ ಮೊದಲ ಪಂದ್ಯದ ಸೋಲಿಗೆ ಮುಯ್ಯಿ ತೀರಿಸಿಕೊಳ್ಳಲು ಇದು ಮಹತ್ವದ ಅವಕಾಶ ಎಂದು ಹೇಳಿದ್ದಾರೆ.

ಜೂನ್‌ 4ರಂದು ನಡೆದಿದ್ದ ಚಾಂಪಿಯನ್ಸ್‌ ಟ್ರೋಫಿ ಪಂದ್ಯಾವಳಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನ 124ರನ್‌ಗಳ ಭಾರೀ ಅಂತರದಿಂದ ಭಾರತ ವಿರುದ್ಧ ಹೀನಾಯವಾಗಿ ಸೋಲು ಕಂಡಿತ್ತು. ಹಾಗಾಗಿ ಈ ಕುರಿತು ಮಾತನಾಡಿರುವ ಇಮ್ರಾನ್‌ ಖಾನ್‌ ಅವರು, ‘ಮೊದಲ ಪಂದ್ಯದ ಸೋಲು ಅವಮಾನಕರವಾಗಿತ್ತು. ನಾವು ನಮ್ಮ ತಂಡದ ಗೌರವವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಇದು ಮಹತ್ವದ ಅವಕಾಶವಾಗಿದೆ’ ಎಂದು ಅಭಿಪ್ರಾಯ ಪಟ್ಟಿದ್ದಾರೆ.

‘ಭಾರತದ ಆರಂಭಿಕ ಬ್ಯಾಟ್ಸ್‌ಮನ್‌ಗಳು ಅತ್ಯುತ್ತಮ ಲಯದಲ್ಲಿದ್ದಾರೆ. ಇದು ಪಾಕಿಸ್ತಾನ ತಂಡದ ಗೆಲುವಿನ ಆಸೆಗೆ ಅಡ್ಡಿಯಾಗಬಹುದು. ಜತೆಗೆ ಬ್ಯಾಟಿಂಗ್‌ ಕ್ರಮಾಂಕ ಬಲಿಷ್ಠವಾಗಿರುವುದರಿಂದ ಅತ್ಯುತ್ತಮ ಮೊತ್ತ ಕಲೆಹಾಕುವ ಶಕ್ತಿ ಸಹ ಆ ತಂಡಕ್ಕಿದೆ. ಹಾಗಾಗಿ ಅವರು ಯಾವಾಗಲು ಎದುರಾಳಿ ತಂಡದ ವಿರುದ್ಧ ಮೊದಲು ಬೌಲಿಂಗ್‌ ಆಯ್ದುಕೊಳ್ಳುವ ತಂತ್ರವನ್ನು ಅನುಸರಿಸುತ್ತಾರೆ’ ಎಂದಿರುವ ಇಮ್ರಾನ್‌ ‘ನಮ್ಮ ತಂಡ ಮೊದಲ ಪಂದ್ಯದಲ್ಲಿ ಮಾಡಿದ್ದ ತಪ್ಪುಗಳಿಂದ ಪಾಠ ಕಲಿಯಬೇಕಿದ್ದು, ಟಾಸ್‌ ಗೆದ್ದರೆ ಭಾರತವನ್ನು ಮೊದಲು ಬ್ಯಾಟಿಂಗ್‌ಗೆ ಇಳಿಸಬಾರದು’ ಎಂದು ಸಲಹೆ ನೀಡಿದ್ದಾರೆ.

ಭಾರತದ ಎದುರು ಮೊದಲ ಪಂದ್ಯ ಕೈಚೆಲ್ಲಿದ್ದ ತಂಡ ಮುಂದಿನ ಹಂತ ತಲುಪಲು ಕಠಿಣ ಸ್ಪರ್ಧೆ ಎದುರಿಸಿತ್ತು. ಎರಡು, ಮೂರನೇ ಪಂದ್ಯಗಳಲ್ಲಿ ಕ್ರಮವಾಗಿ ದಕ್ಷಿಣ ಆಫ್ರಿಕಾ ಹಾಗೂ ಶ್ರೀಲಂಕಾ ತಂಡಗಳನ್ನು ಮತ್ತು ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ ತಂಡವನ್ನು ಮಣಿಸಿ ಫೈನಲ್‌ ತಲುಪಿದೆ.

ಈ ಕುರಿತು ಮಾತನಾಡಿರುವ ಇಮ್ರಾನ್‌, ‘ಸದ್ಯ ನಮ್ಮ ತಂಡದಲ್ಲಿ ಹಸನ್‌ ಅಲಿ ಗಮನಾರ್ಹ ಪ್ರದರ್ಶನ ನೀಡುತ್ತಿದ್ದಾರೆ. ಸರ್ಫರಾಜ್ ಉತ್ತಮ ನಾಯಕನಾಗಿ ಹೊರಹೊಮ್ಮಿದ್ದು, ಅವರ ಆಟದಿಂದ ಪುಳಕಿತನಾಗಿದ್ದೇನೆ’ ಹರ್ಷ ವ್ಯಕ್ತಪಡಿಸಿದ್ದಾರೆ.

1992ರಲ್ಲಿ ಇಮ್ರಾನ್‌ ಖಾನ್‌ ನಾಯಕತ್ವದಲ್ಲಿ ಪಾಕಿಸ್ತಾನ ವಿಶ್ವಕಪ್‌ ಗೆದ್ದುಕೊಂಡಿತ್ತು. ‌ಇದೇ ಮೊದಲ ಬಾರಿಗೆ ಚಾಂಪಿಯನ್ಸ್‌ ಟ್ರೋಫಿಯ ಫೈನಲ್‌ಗೆ ಈ ತಂಡ ಪ್ರವೇಶ ಪಡೆದಿದ್ದು, ಭಾರತ ಎದುರು ಜೂನ್‌ 18ರಂದು ಫೈನಲ್‌ನಲ್ಲಿ ಪ್ರಶಸ್ತಿಗಾಗಿ ಸೆಣಸಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry