ಸೈಬರ್ ಯುಗದ 'ಸುಳ್ಳು ಸುದ್ದಿ' ಮತ್ತು ವಾಸ್ತವ ಸಂಗತಿ

7

ಸೈಬರ್ ಯುಗದ 'ಸುಳ್ಳು ಸುದ್ದಿ' ಮತ್ತು ವಾಸ್ತವ ಸಂಗತಿ

Published:
Updated:
ಸೈಬರ್ ಯುಗದ 'ಸುಳ್ಳು ಸುದ್ದಿ' ಮತ್ತು ವಾಸ್ತವ ಸಂಗತಿ

ಬೆಂಗಳೂರು: ಸಾಮಾಜಿಕ ತಾಣಗಳಲ್ಲಿ ಹರಿದಾಡುವ ಸುದ್ದಿಗಳೆಲ್ಲೂ ನಿಜವಾಗಿರುವುದಿಲ್ಲ. ಕೆಲವು ಸುದ್ದಿಗಳು ನಿಜವಾಗಿದ್ದರೆ ಇನ್ನು ಕೆಲವು ಸುಳ್ಳು ಸುದ್ದಿಗಳು, ಆದರೆ ಕೆಲವೊಂದು ಸುಳ್ಳು ಸುದ್ದಿಗಳು ಎಷ್ಟರ ಮಟ್ಟಿಗೆ ಪ್ರಚಾರ ಗಿಟ್ಟಿಸುತ್ತವೆ ಎಂದರೆ ಅವುಗಳಲ್ಲಿ ವಾಸ್ತವಾಂಶ ಎಷ್ಟಿದೆ ಎಂಬುದನ್ನು ಪತ್ತೆ ಹಚ್ಚುವ ಗೋಜಿಗೆ ಹೋಗದೆ ಯಾರೋ ಪ್ರಮುಖ ವ್ಯಕ್ತಿಗಳು ಶೇರ್ ಮಾಡಿದ್ದಾರೆ ಎಂಬ ಕಾರಣದಿಂದ ಅದು ನಿಜ ಸುದ್ದಿ ಎಂದೇ ನಂಬಿ ಬಿಡುವ ಜನರು ನಮ್ಮಲ್ಲಿದ್ದಾರೆ. ರಾಜಕೀಯ ಪಕ್ಷಗಳೋ ಅಥವಾ ಇನ್ಯಾವುದೋ ಮೂಲಗಳಿಂದ ಹರಿಯ ಬಿಟ್ಟ ವದಂತಿಯಿಂದ ಅನಾಹುತ ಸಂಭವಿಸಿರುವ ಘಟನೆಗಳೂ ಧಾರಾಳ ಇವೆ.

ಇತ್ತೀಚೆಗೆ ಸಾಮಾಜಿಕ ತಾಣಗಳಲ್ಲಿ ಹರಿದಾಡಿದ ಕೆಲವು ಸುಳ್ಳು ಸುದ್ದಿಗಳು ಹೀಗಿವೆಕೆಲವು ದಿನಗಳ ಹಿಂದೆಯಷ್ಟೇ ಪಾಕಿಸ್ತಾನ ಮತ್ತು ಬಾಂಗ್ಲಾದೇಶಕ್ಕೆ ಹೊಂದಿಕೊಂಡಿರುವ ಗಡಿಯಲ್ಲಿ ಅಕ್ರಮ ಸಾಗಣೆ ಮತ್ತು ಭಯೋತ್ಪಾದಕರ ನುಸುಳುವಿಕೆ ಮೇಲೆ ನಿಗಾ ಇಡಲು 647 ಕಿ.ಮೀ. ಗಡಿಯುದ್ದಕ್ಕೂ ಫ್ಲಡ್‌ಲೈಟ್ ಅಳವಡಿಸಲಾಗಿದೆ ಎಂದು ಗೃಹ ಸಚಿವಾಲಯ 2016–17ರ ವಾರ್ಷಿಕ ವರದಿಯಲ್ಲಿ ಚಿತ್ರವೊಂದನ್ನು ಪ್ರಕಟಿಸಿತ್ತು. ಆದರೆ ವರದಿಯಲ್ಲಿ ಬಳಕೆಯಾದ ಚಿತ್ರ ಸ್ಪೇನ್‌–ಮೊರಕ್ಕೊ ಗಡಿಯ ಚಿತ್ರವಾಗಿತ್ತು!

ಸ್ಪ್ಯಾನಿಷ್‌ ಛಾಯಾಗ್ರಾಹಕ ಜಾವೇರ್‌ ಮೊಯನೊ 2006ರಲ್ಲಿ ತೆಗೆದ ಸ್ಪೇನ್‌–ಮೊರಕ್ಕೊ ಗಡಿಯ ಚಿತ್ರವನ್ನು ಗೃಹ ಸಚಿವಾಲಯ ವಾರ್ಷಿಕ ವರದಿಯಲ್ಲಿ ಪ್ರಕಟಿಸಿದೆ ಎಂದು ಆಲ್ಟ್ ನ್ಯೂಸ್ ಸುದ್ದಿ ಮಾಡುವವರೆಗೆ ಎಲ್ಲರೂ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಗಡಿಯ ಫ್ಲಡ್‍ಲೈಟ್ ಚಿತ್ರ  ನಿಜ ಎಂದೇ ನಂಬಿದ್ದರು.

ಚಿತ್ರದ ಅಸಲಿತನ ಬಹಿರಂಗವಾಗುತ್ತಿದ್ದಂತೆ ತೀವ್ರ ಮುಜುಗರಕ್ಕೊಳಗಾಗಿರುವ ಗೃಹ ಸಚಿವಾಲಯ ಇದೀಗ  ಸಮಗ್ರ ತನಿಖೆಗೆ ಆದೇಶಿಸಿದೆ.

ಎನ್‍ಡಿಟಿವಿ ವಿರುದ್ಧ ಆಪಾದನೆ ಮಾಡಲು ಸಂಬಿತ್ ಪಾತ್ರಾ ನಕಲಿ ಟ್ವೀಟ್ ಶೇರ್ ಮಾಡಿದ್ದರು!

ನರೇಂದ್ರ ಮೋದಿ  ಅವರ ಮೇಕ್ ಇನ್ ಇಂಡಿಯಾ ಯೋಜನೆ ಫ್ಲಾಪ್ ಶೋ ಆಗಿತ್ತು ಎಂದು ಎನ್‍ಡಿಟಿವಿ ವರದಿಯಲ್ಲಿ ಹೇಳಿರುವುದಾಗಿ ದ ಟೈಮ್ಸ್ ಆಫ್ ಇಸ್ಲಾಮಾಬಾದ್ ಸುದ್ದಿಯೊಂದನ್ನು ಪ್ರಕಟಿಸಿತ್ತು. ದ ಟೈಮ್ಸ್ ಆಫ್ ಇಸ್ಲಾಮಾಬಾದ್ ಸುದ್ದಿಯನ್ನು ಟ್ವೀಟ್  ಮಾಡಿರುವ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಅವರು ಎನ್‍ಡಿಟಿವಿ ವಿರುದ್ಧ ಗುಡುಗಿದ್ದರು.

ಈ ಟ್ವೀಟ್‍ಗೆ ಪ್ರತಿಕ್ರಿಯಿಸಿದ ಎನ್‍ಡಿಟಿವಿ ನಾವು ಈ ರೀತಿಯ ಸುದ್ದಿ ಮಾಡಿಲ್ಲ ಎಂದು ಹೇಳಿತ್ತು. ಆನಂತರ ಟೈಮ್ಸ್ ಆಫ್ ಇಸ್ಲಾಮಾಬಾದ್ ತಮ್ಮ ಸುದ್ದಿಯಲ್ಲಿ ತಪ್ಪಾಗಿದೆ.  ಇಂಡಿಯನ್ ಎಕ್ಸ್ ಪ್ರೆಸ್  ಪತ್ರಿಕೆಯಲ್ಲಿ ಪಿ. ಚಿದಂಬರಂ ಅವರ ಲೇಖನ  ಎಂದು ಉಲ್ಲೇಖಿಸುವ ಬದಲು ಎನ್‍ಡಿಟಿವಿ ವರದಿ ಎಂದು ಬರೆದು ಪ್ರಮಾದವಾಗಿರುವುದಕ್ಕೆ ಕ್ಷಮೆ ಯಾಚಿಸಿತ್ತು.

ಬ್ರೆಟ್ ಲೀ ಹಿಂದೂ ಧರ್ಮಕ್ಕೆ ಮತಾಂತರಗೊಂಡಿಲ್ಲ

ಆಸ್ಟ್ರೇಲಿಯಾದ ಕ್ರಿಕೆಟರ್ ಬ್ರೆಟ್ ಲೀ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಬಿಜೆಪಿ ಇಂಡಿಯ ಫೇಸ್‍ಬುಕ್ ಪೇಜ್‍ನಲ್ಲಿ ಬ್ರೆಟ್ ಲೀ ಮತ್ತು ಅವರ ಪತ್ನಿ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ನೀವು ಅವರನ್ನು ಹಿಂದೂ ಧರ್ಮಕ್ಕೆ ಸ್ವಾಗತಿಸುತ್ತೀರಾ? ಎಂಬ ಅಡಿ ಬರಹ ನೀಡಿ ಬ್ರೆಟ್ ಲೀ ಮತ್ತು ಅವರ ಪತ್ನಿ ಹೂವಿನ ಹಾರ ಧರಿಸಿರುವ ಫೋಟೊವೊಂದನ್ನು ಅಪ್‍ಲೋಡ್ ಮಾಡಲಾಗಿತ್ತು.

ಬ್ರೆಟ್ ಲೀ ಹಿಂದೂ ಧರ್ಮಕ್ಕೆ ಮತಾಂತರಗೊಂಡಿಲ್ಲ. ನಿಜ ಸಂಗತಿ ಏನೆಂದರೆ ಸೇಂಟ್ ಜೂಡ್  ಚೈಲ್ಡ್ ಕೇರ್ ಸೆಂಟರ್‍ನಲ್ಲಿ  ಮ್ಯೂಸಿಕ್ ಥೆರಪಿ ಪ್ರಚಾರಕ್ಕಾಗಿ  ಬ್ರೆಟ್ ಲೀ ಮುಂಬೈಗೆ ಬಂದಿದ್ದರು. ಆ ವೇಳೆ ಅವರ ಪತ್ನಿ ಲನಾ ಆ್ಯಂಡ್ರಸನ್ ಜತೆ ಕ್ಲಿಕ್ ಮಾಡಿದ ಫೋಟೊ ಇದಾಗಿದೆ, ಈ ದಂಪತಿ ಹೂವಿನ ಹಾರ ಹಾಕಿಕೊಂಡಿರುವ ಇನ್‍ಸ್ಟಾಗ್ರಾಂನಲ್ಲಿ ಅಪ್‍ಲೋಡ್  ಆಗಿತ್ತು.

ಎ.ಆರ್. ರೆಹಮಾನ್ ಅವರು ಹೇಳಿಕೆ ನೀಡಿಲ್ಲ

ಗೋಹತ್ಯೆ ನಿಷೇಧ ಬಗ್ಗೆ ಸರ್ಕಾರದ ತೀರ್ಮಾನವನ್ನು ಸ್ವಾಗತಿಸುತ್ತೇನೆ ಎಂದು ಖ್ಯಾತ ಸಂಗೀತಗಾರ ಎ.ಆರ್, ರೆಹಮಾನ್ ಹೇಳಿದ್ದಾರೆ ಎಂಬ ಸುದ್ದಿಯನ್ನು ನಿರ್ಮಲಾ ಸೀತಾರಾಮನ್ ಕೂಡಾ ಟ್ವೀಟ್  ಮಾಡಿದ್ದರು. ಆದರೆ ರೆಹಮಾನ್ ಅವರು ಆ ರೀತಿ ಹೇಳಿಕೆ ನೀಡಲೇ ಇಲ್ಲ ಎಂಬ ಸತ್ಯ ಗೊತ್ತಾದ ಬಳಿಕ ಸೀತಾರಾಮನ್ ಕ್ಷಮೆ ಯಾಚಿಸಿದ್ದರು.

ಅಲಿಘಡ ಮುಸ್ಲಿಂ ವಿಶ್ವ ವಿದ್ಯಾನಿಲಯದಲ್ಲಿ ರಂಜಾನ್ ವ್ರತಾಚಾರಣೆ ವೇಳೆ ಮುಸ್ಲಿಮೇತರರಿಗೆ ಊಟವಿಲ್ಲ

ಅಲಿಘಡ ಮುಸ್ಲಿಂ ವಿಶ್ವ ವಿದ್ಯಾನಿಲಯದಲ್ಲಿ  (ಎಎಂಯು) ರಂಜಾನ್ ವ್ರತಾಚಾರಣೆ ವೇಳೆ ಮುಸ್ಲಿಮೇತರರಿಗೆ ಊಟವಿಲ್ಲ ಎಂದು ದೆಹಲಿ ಹೈಕೋರ್ಟ್ ವಕೀಲ ಪ್ರಶಾಂತ್ ಪಟೇಲ್ ಉಮ್ರಾವ್ ಟ್ವೀಟ್ ಮಾಡಿದ್ದರು. ಈ ಟ್ವೀಟ್ ಸಾಮಾಜಿಕ ತಾಣದಲ್ಲಿ ಸಿಕ್ಕಾಪಟ್ಟೆ ಶೇರ್ ಆಗಿದ್ದು, ರಂಜಾನ್ ವ್ರತಾಚರಣೆ ವೇಳೆ ಹಿಂದೂಗಳಿಗೆ ಆಹಾರ ನೀಡಲಾಗುವುದಿಲ್ಲ ಎಂಬ ವಿಷಯದ ಬಗ್ಗೆ ವ್ಯಾಪಕ ಚರ್ಚೆ ನಡೆದಿತ್ತು.
ಇದು ಕೇವಲ ವದಂತಿ. ಈ ಬಗ್ಗೆ ದ ಕ್ವಿಂಟ್ ಸುದ್ದಿ ಮಾಧ್ಯಮ ಎಎಂಯು ಅಧಿಕೃತರನ್ನು ಕೇಳಿದಾಗ ಅಂಥಾ ಸಂಪ್ರದಾಯಗಳೇನೂ ವಿಶ್ವ ವಿದ್ಯಾನಿಲಯದಲ್ಲಿ ಇಲ್ಲ, ಇಲ್ಲಿ ರಂಜಾನ್ ವ್ರತಾಚರಣೆ ವೇಳೆ ಹಿಂದೂಗಳಿಗೂ ಮುಸ್ಲಿಮರಿಗೂ ಊಟ ಸಿಗುತ್ತದೆ ಎಂದು ಹೇಳಿದ್ದರು.

ಗೋರ್ಖಾಲ್ಯಾಂಡ್ ಪ್ರತಿಭಟನೆಯಲ್ಲಿನ ದೃಶ್ಯ ಎಂದು ತೋರಿಸಿರುವ ಫೋಟೊ  ಕರ್ನಲ್ ಡಿ.ಕೆ ರೈ ಅವರದ್ದು, ರೈ ನಿಧನರಾಗಿ ಮೂರು ತಿಂಗಳಾಯ್ತು!

ಗೋರ್ಖಾಲ್ಯಾಂಡ್  ಎಂಬ ಪ್ರತ್ಯೇಕ ರಾಜ್ಯ ಬೇಕೆಂದು ಒತ್ತಾಯಿಸಿ  ಕಳೆದ ಒಂದು ವಾರದಿಂದ ಡಾರ್ಜಲಿಂಗ್‍ನಲ್ಲಿ ಪ್ರತಿಭಟನೆಗಳು ನಡೆದು ಬರುತ್ತಿವೆ,  ಈ ಪ್ರತಿಭಟನೆಯಲ್ಲಿ ಕರ್ನಲ್ ರೈ ಅವರ ಮೇಲೆ ಲಾಠಿ ಚಾರ್ಜ್ ಮಾಡಲಾಗಿದೆ ಎಂದು ಅಡಿಬರಹ ಬರೆದು  ರೈ ಅವರ ಫೋಟೊವೊಂದನ್ನು ದೆಹಲಿ ಹೈಕೋರ್ಟ್ ವಕೀಲ ಪ್ರಶಾಂತ್ ಪಟೇಲ್ ಉಮ್ರಾವ್ ಶೇರ್ ಮಾಡಿದ್ದರು. ಆ ಫೋಟೊದಲ್ಲಿ ರೈ ಅವರ ತಲೆಗೆ ತೀವ್ರ ಏಟು ಬಿದ್ದು ರಕ್ತದಿಂದ ಮುಳುಗಿರುವ ಫೋಟೋ ಆದಾಗಿತ್ತು.

2008ರಲ್ಲಿ ಗೋರ್ಖಾಲ್ಯಾಂಡ್ ಪ್ರತಿಭಟನೆ ವೇಳೆ ಪೊಲೀಸರು ರೈ ಮೇಲೆ ಹಲ್ಲೆ ನಡೆಸಿದ್ದರು. ಉಮ್ರಾವ್ ಅವರು ಇದೇ ಫೋಟೊವನ್ನು ಶೇರ್ ಮಾಡಿ. ಡಾರ್ಜಲಿಂಗ್‍ನಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಚಿತ್ರ ಇದು ಎಂದು ಹೇಳಿದ್ದರು. ವಿಷಯ ಏನಪ್ಪಾ ಎಂದರೆ ಇದೀಗ ನಡೆದು ಬರುತ್ತಿರುವ ಪ್ರತಿಭಟನೆಯಲ್ಲಿ ರೈ ಅವರು ಭಾಗವಹಿಸಿಲ್ಲ. ಮೂರು ತಿಂಗಳ ಹಿಂದೆಯೇ ಅವರು ನಿಧನರಾಗಿದ್ದಾರೆ ಎಂದು ದ ಕ್ವಿಂಟ್ ವರದಿ ಮಾಡಿದೆ. ಅಂದ ಹಾಗೆ ಮೂರು ತಿಂಗಳ ಹಿಂದೆ ನಿಧನರಾದ ವ್ಯಕ್ತಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರೇ? ಎಂದು ಉಮ್ರಾವ್ ಅವರಲ್ಲೇ ಕೇಳಬೇಕಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry