ಬಣ್ಣದ ಲೋಕದ ಸುಂದರಿಯ ‘ಬಲೆ’ಯಲ್ಲಿ...

7

ಬಣ್ಣದ ಲೋಕದ ಸುಂದರಿಯ ‘ಬಲೆ’ಯಲ್ಲಿ...

Published:
Updated:
ಬಣ್ಣದ ಲೋಕದ ಸುಂದರಿಯ ‘ಬಲೆ’ಯಲ್ಲಿ...

ಬೆಂಗಳೂರಿನ ಇಂದಿರಾ, ಒಂದೆರಡು ಸಿನಿಮಾಗಳಲ್ಲಿ ಹಾಗೂ ಕೆಲವು ಟಿ.ವಿ ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾಕೆ. ಅಷ್ಟೇನೂ ಪ್ರಸಿದ್ಧಿ ಹೊಂದಿರದಿದ್ದರೂ, ತಾನು ನಟಿ ಎಂಬ ಅಹಂ  ಮತ್ತು ಸೌಂದರ್ಯವತಿ ಎಂಬ ಜಂಭ ಇತ್ತು.

ಥಳುಕು–ಬಳುಕಿನ ವಯ್ಯಾರದ ಬದುಕೇ ಇಂದಿರಾಳ ಬಂಡವಾಳ. ಸಿನಿಮಾ ಬದುಕಿನ ಹಾಗೂ ಧಾರಾವಾಹಿಗಳಲ್ಲಿ ಬೇಡಿಕೆ ಕುಂದುತ್ತ ಬಂದಾಗ ವಯಸ್ಸು 30 ಮೀರಿತ್ತು. ಮನಸ್ಸು ವಿವಾಹಕ್ಕೆ ಹಾತೊರೆಯಿತು. ದೂರದ ಊರಿನ ಶ್ರೀಮಂತ ವ್ಯಾಪಾರಿ ವಾಸುದೇವ ಅವರೊಂದಿಗೆ ಈಕೆಯ ಮದುವೆಯಾಯಿತು. ವಾಸುದೇವ  ಅವರು, ಇಂದಿರಾ ನಿರೀಕ್ಷಿಸಿದಷ್ಟು ಸುಂದರವಾಗಿರಲಿಲ್ಲ. ಅದು ಇಂದಿರಾಳನ್ನು ಕಾಡುತ್ತಿತ್ತು. ಇನ್ನೊಂದೆಡೆ, ಇಂದಿರಾಳ ಸುತ್ತ ಹರಡಿದ್ದ ಗಾಸಿಪ್‌ಗಳು ವಾಸುದೇವ ಅವರ ಕಿವಿಗೂ ತಲುಪಿದ್ದವು. ಆದರೆ ಅವರು ಅದರ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳಲಿಲ್ಲ.

ಮದುವೆಯಾದ ಮೇಲೆ ನಟನೆಗೆ ಒಂದೆರಡು ಆಫರ್‌ಗಳು ಬಂದರೂ  ಇಂದಿರಾಗೆ ಹೋಗಲು ಆಗಲಿಲ್ಲ. ಆದರೆ ಮನಸ್ಸು ಬಣ್ಣದ ಲೋಕಕ್ಕಾಗಿ ಹಾತೊರೆಯುತ್ತಿತ್ತು. ಇದೇ ಕಾರಣದಿಂದ ಮದುವೆಯು ಬಂಧನ ಎನಿಸತೊಡಗಿತು. ಈ ಕೊರಗಿನ ನಡುವೆಯೇ ಆಕೆ ಗಂಡನ ಜೊತೆ ಬಹರೇನ್‌ನಲ್ಲಿ ಕೆಲ ವರ್ಷ ನೆಲೆಸಿದಳು. ಈ ಮಧ್ಯೆ, ಇಂದಿರಾ ಗರ್ಭಿಣಿಯಾದಳು. ಅಪ್ಪ- ಅಮ್ಮ ಇಲ್ಲದ ಕಾರಣ, ಬಾಣಂತನಕ್ಕೆ ಬೆಂಗಳೂರಿನಲ್ಲಿದ್ದ ಅಣ್ಣನ ಮನೆಗೆ ಹೋಗಲು ನಿರ್ಧರಿಸಿದಳು. ಪತಿಯೂ ಒಪ್ಪಿಗೆ ಕೊಟ್ಟರು. ಇಂದಿರಾಗೆ ಹೆಣ್ಣುಮಗು ಹುಟ್ಟಿತು.

ಕೇರಳಕ್ಕೆ ಬಂದು ನೆಲೆಸಲು ನಿರ್ಧರಿಸಿದ್ದ ವಾಸುದೇವ, ಅಲ್ಲಿಯೇ ಜಮೀನನ್ನು ಪಡೆದು ದೊಡ್ಡ ಬಂಗಲೆ ಕಟ್ಟಿಸುತ್ತಿದ್ದರು. ಇಂದಿರಾ ಬರುವುದರೊಳಗೆ ಆ ಬಂಗಲೆಯನ್ನು ಮುಗಿಸುವ ಯೋಚನೆ ಮಾಡಿದರು. ಐಷಾರಾಮಿ ಬಂಗಲೆ ತಯಾರಾಯಿತು.

ಇಂದಿರಾ ಮಗಳ ಜೊತೆ ಕೇರಳಕ್ಕೆ ಬಂದಳು. ಐಷಾರಾಮಿ ಎಂದ ಮೇಲೆ ಕೇಳಬೇಕೇ? ವಿಲಾಸಿ ಜೀವನ ನಡೆಸುವ ಎಲ್ಲಾ ಸೌಕರ್ಯಗಳೂ ಅಲ್ಲಿದ್ದವು. ಆದರೇನು ಬಂತು? ಹೇಳಿಕೇಳಿ ಅದು ಹಳ್ಳಿ. ಮಹಾನಗರದ ಬಣ್ಣದ ಲೋಕದಲ್ಲಿ ಮುಳುಗಿ ವಿಲಾಸಿ ಜೀವನಕ್ಕೆ ಮೊರೆ ಹೋಗಿದ್ದ ಆಕೆಗೆ ಹಳ್ಳಿಯ ಜೀವನ ಸಪ್ಪೆ ಎನಿಸತೊಡಗಿತು. ಮನೆಯಲ್ಲಿದ್ದ ವೈಭವ, ವಿಲಾಸಿ ವಸ್ತುಗಳು ನಗರದ ಬದುಕಿನ ನಿರಂತರ ಹಂಬಲದಲ್ಲಿ ಶೂನ್ಯ ಎನಿಸತೊಡಗಿದವು.

ಚಲನಚಿತ್ರಗಳಲ್ಲಿ ಅವಕಾಶ ಸಿಗುವುದು ಕಷ್ಟ ಎಂದು ಆಕೆಗೆ ಗೊತ್ತಿತ್ತು. ಆದರೆ ಟಿ.ವಿ.ಧಾರಾವಾಹಿಗಳಿಗೆ ಕೊರತೆ ಇಲ್ಲದ ಕಾರಣ ತನಗೆ ಪಾತ್ರ ಸಿಕ್ಕಿಯೇ ಸಿಗುತ್ತದೆ ಎನ್ನುವ ಧೈರ್ಯ ಇತ್ತು.  ಆದ್ದರಿಂದ ಹೇಗಾದರೂ ಬೆಂಗಳೂರು ಸೇರಿಕೊಳ್ಳಲು ಮನಸ್ಸು ಹಂಬಲಿಸಿತು. ದಿನೇ ದಿನೇ ಮನಸ್ಸು ಸಂಘರ್ಷಗಳ ತರಂಗಗಳನ್ನು ಸೃಷ್ಟಿಸುತ್ತಿತ್ತು. ಕುಟುಂಬ ಒಡೆಯುವುದು, ಅಕ್ರಮ ಸಂಬಂಧಕ್ಕೆ ಹೆಚ್ಚಿನ ಒತ್ತು ಕೊಡುವುದು, ಅತೀ ಎನಿಸುವಷ್ಟು ಹೆಣ್ಣಿನ ಕ್ರೌರ್ಯ ತೋರಿಸುವ ಧಾರಾವಾಹಿಗಳೇ ತುಂಬಿಹೋಗಿರುವ ಕಾರಣ, ಅದರಲ್ಲಿ ನಟಿಸಿದ್ದ ಇಂದಿರಾಳಿಗೆ ತನ್ನ ಸಂಸಾರವನ್ನು ಹಾಳು ಮಾಡಿಕೊಳ್ಳುವುದು ಹೆಚ್ಚು ಕಷ್ಟ ಇಲ್ಲ ಎನ್ನಿಸಿತು. ಒಟ್ಟಿನಲ್ಲಿ ಸಂಸಾರದ ‘ಬಂಧನ’ದಿಂದ ಹೇಗೆ ಬಿಡಿಸಿಕೊಳ್ಳುವುದು ಎಂದು ಯೋಚಿಸತೊಡಗಿದಳು.

ಇದು ಅವರ ದಾಂಪತ್ಯ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರಿತು. ದಂಪತಿ ಜಗಳವಾಡುವುದು ನಿತ್ಯದ ಮಾತಾಯಿತು. ಹೀಗೆಯೇ ವರ್ಷ ಗತಿಸಿತು.

ಅದೊಂದು ದಿನ ವಾಸುದೇವ ಅವರಿಗೆ ಕಪಾಟಿನಲ್ಲಿ  ಇಂದಿರಾ ಅವರ ಪಾಸ್‌ಪೋರ್ಟ್‌ ದೊರೆಯಿತು. ಅದನ್ನು ನೋಡಿದಾಗ ಅವರಿಗೆ ಆಘಾತವಾಯಿತು. ಏಕೆಂದರೆ ಬಾಣಂತನಕ್ಕೆ ಬೆಂಗಳೂರಿಗೆ ಹೋಗುತ್ತೇನೆ ಎಂದಿದ್ದ ಇಂದಿರಾ ಹೈದರಾಬಾದಿಗೆ ಹೋಗಿದ್ದಳು. 

ಆಕೆಯ ಬಗ್ಗೆ ಕೇಳಿದ್ದ ಗಾಸಿಪ್‌ಗೂ, ಹೈದರಾಬಾದ್‌ಗೂ ತಾಳೆ ಹಾಕಿದಾಗ ವಾಸುದೇವ ಅವರ ತಲೆಯಲ್ಲಿ ನೂರೆಂಟು ಯೋಚನೆಗಳು ಬಂದವು. ಮೊದಲೇ ಹದಗೆಟ್ಟಿದ್ದ ಕುಟುಂಬದಲ್ಲಿ ಈ ವಿಷಯ ಬಿರುಗಾಳಿ ಎಬ್ಬಿಸಿತು. ತನ್ನೆಲ್ಲಾ ಗುಟ್ಟು ರಟ್ಟಾಗುತ್ತಿದ್ದಂತೆಯೇ ಇಂದಿರಾ ಮನೆ ತೊರೆಯುವ ನಿರ್ಧಾರಕ್ಕೆ ಬಂದಳು.

ಕೆಲಸದ ನಿಮಿತ್ತ ಅದೊಂದು ದಿನ ವಾಸುದೇವ ಅವರಿಗೆ ಮುಂಬೈಗೆ ಹೋಗಬೇಕಾಗಿ ಬಂತು. ಬರಲು 2–3 ದಿನ ಆಗಬಹುದು ಎಂದು ಹೆಂಡತಿಗೆ ಹೇಳಿ ಹೋದರು. ರೋಗಿ ಬಯಸಿದ್ದೂ... ವೈದ್ಯ ಹೇಳಿದ್ದು... ಎನ್ನುವಂತೆ ಇಂದಿರಾ ಹಿಗ್ಗಿದಳು.

ವಾಸುದೇವ  ಹೆಂಡತಿಯ ಮೇಲೆ ಎಷ್ಟು ನಂಬಿಕೆ ಇಟ್ಟಿದ್ದರು ಎಂದರೆ ಆಕೆಯ ಹೆಸರಿನಲ್ಲಿ ಹಲವಾರು ಲಕ್ಷ ರೂಪಾಯಿಗಳನ್ನು ಬ್ಯಾಂಕಿನಲ್ಲಿ ಠೇವಣಿ ಇಟ್ಟಿದ್ದರು. ಇನ್ನೂ ಕೆಲವು ಬ್ಯಾಂಕಿನ ಲಾಕರ್‌ನಲ್ಲಿಟ್ಟ ಚಿನ್ನಾಭರಣಗಳು ಹಾಗೂ ಇನ್ನಷ್ಟು ನಗದು ಇಬ್ಬರ ‘ಜಂಟಿ ಖಾತೆ’ಯಲ್ಲಿ ಇದ್ದವು.

ಗಂಡ ಅತ್ತ ಹೋಗಿದ್ದೇ ತಡ, ಇಂದಿರಾ ಎಲ್ಲಾ ಬ್ಯಾಂಕ್‌ಗಳಿಂದಲೂ ನಗದು, ಚಿನ್ನಾಭರಣ ತೆಗೆದುಕೊಂಡಳು. ಇದಕ್ಕೆ ಅಣ್ಣ ರವಿಯೂ ನೆರವಾದ. ಅಪ್ಪನನ್ನು ಪ್ರೀತಿಸುತ್ತಿದ್ದ ಮಗಳು ಅಷ್ಟು ಸುಲಭದಲ್ಲಿ ಬರುವುದಿಲ್ಲ ಎಂದು ತಿಳಿದ ಇಂದಿರಾ, ತುರ್ತಾಗಿ ಬೆಂಗಳೂರಿಗೆ ಹೋಗಿ ಬರುವ ಎಂದು ಆಕೆಯನ್ನು ಪುಸಲಾಯಿಸಿ ಕರೆದೊಯ್ದಳು.

ಮನೆಗೆ ವಾಪಸಾದ ವಾಸುದೇವ ಅವರಿಗೆ ಆಘಾತ ಕಾದಿತ್ತು. ಹೆಂಡತಿ ಇಲ್ಲದಿದ್ದರೆ ಪರವಾಗಿಲ್ಲ. ಮುದ್ದಿನ ಮಗಳೂ ಇಲ್ಲದುದು ಅವರನ್ನು ಆತಂಕಕ್ಕೆ ಈಡು ಮಾಡಿತು.  ಮನೆಯಲ್ಲಿದ್ದ ನಗದು– ಒಡವೆ ಮಾತ್ರವಲ್ಲದೇ ಬ್ಯಾಂಕಿನಲ್ಲೂ ಎಲ್ಲವೂ ‘ಮಾಯ’ ಆಗಿದ್ದು ತಿಳಿಯಿತು. ಆಕೆಯ ಮೊಬೈಲ್‌ ಕೂಡ ಸ್ವಿಚ್‌ ಆಫ್‌ ಆಗಿತ್ತು. ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದರು.

ಅನೇಕ ದಿನಗಳವರೆಗೆ ಹೆಂಡತಿಯ ಸುದ್ದಿಯೇ ಇರದ ಕಾರಣ, ಮಗಳ ಸುಪರ್ದಿಗೆ ಕೋರಿ ಕೇರಳದ ಕೌಟುಂಬಿಕ ಕೋರ್ಟ್‌ನಲ್ಲಿ ಕೇಸು ದಾಖಲಿಸಿದರು ವಾಸುದೇವ. ಇನ್ನೊಂದೆಡೆ, ಇಂದಿರಾ ವಿಚ್ಛೇದನಕ್ಕೆ ಬೆಂಗಳೂರಿನ ಕೋರ್ಟ್‌ನಲ್ಲಿ ಕೇಸು ದಾಖಲಿಸಿದಳು. ಇಷ್ಟೇ ಅಲ್ಲದೆ, ಗಂಡನ ವಿರುದ್ಧ ‘ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ’ ಅಡಿಯೂ ದೂರು ದಾಖಲಿಸಿದಳು. ಎಲ್ಲಾ ತಪ್ಪನ್ನು ಗಂಡನ ಮೇಲೆ ಹಾಕಿ ಜೀವನಾಂಶಕ್ಕೆ ಕೋರಿ ಇನ್ನೊಂದು ಅರ್ಜಿ ಸಲ್ಲಿಸಿದಳು.

***

ಈಗ ತೆರೆದುಕೊಳ್ಳುವುದು ಎರಡನೆಯ ಅಧ್ಯಾಯ...

ಬೆಂಗಳೂರು ತಲುಪಿದ ಇಂದಿರಾಳಿಗೆ ಮಾಜಿ ಪ್ರಿಯಕರ ಸಂದೀಪನ ‘ಅಭಯ’ಸಿಕ್ಕಿತು. ಇಂದಿರಾ ಜೊತೆ ಸಂದೀಪನ ಓಡಾಟ ಹೆಚ್ಚಾಯಿತು.  ಹಾಗೆ ನೋಡುವುದಾದರೆ ಮದುವೆಯಾದ ಮೇಲೂ ಇಂದಿರಾಳ ತಲೆಯಲ್ಲಿ ನಟನೆಯನ್ನು ತುಂಬಿ ದಂಪತಿ ಮಧ್ಯೆ ಜಗಳ ತಂದಿಟ್ಟಿದ್ದೂ ಅವನೇ ಎಂದರೂ ತಪ್ಪಾಗಲಿಕ್ಕಿಲ್ಲ.

ಕೇರಳದ ಕೋರ್ಟ್‌ನಲ್ಲಿ ಗಂಡ ದಾಖಲು ಮಾಡಿದ್ದ ಮೊಕದ್ದಮೆಗಳ ವಿಚಾರಣೆಯನ್ನು ಬೆಂಗಳೂರಿಗೆ ವರ್ಗಾಯಿಸುವ ಸಂಬಂಧ ಸುಪ್ರೀಂ ಕೋರ್ಟ್‌ವರೆಗೂ ಹೋಗಿ ಬಂದ ಸಂದೀಪ. ಹೀಗೆ ಮಾಡಿದರೆ ಪ್ರತಿ ಸಲದ ವಿಚಾರಣೆಗೆ ವಾಸುದೇವ ಅವರು ಕೇರಳದ ಹಳ್ಳಿಯಿಂದ ಬೆಂಗಳೂರಿಗೆ ಬರುವಂತೆ ಮಾಡುವುದು, ಇದರಿಂದ ಅವರಿಗೆ ಚಿತ್ರಹಿಂಸೆ ನೀಡಿ ಖುಷಿ ಪಡುವುದು ಉದ್ದೇಶವಾಗಿತ್ತು. ಅದರಲ್ಲಿ ಇಂದಿರಾ ಮತ್ತು ಸಂದೀಪ ಯಶಸ್ವಿಯೂ ಆದರು!

ಇಂದಿರಾಳ ಅಣ್ಣ ರವಿಗೆ ಆಕೆಯ ಬಳಿ ಇದ್ದ ಲಕ್ಷಲಕ್ಷ ಹಣ ಮತ್ತು ಒಡವೆ ಮೇಲೆ ಹಾಗೂ ಅವಿಭಕ್ತ ಕುಟುಂಬದ ಅಪಾರ ಆಸ್ತಿಯ ಮೇಲೆ ಕಣ್ಣಿತ್ತು. ತಂಗಿಯ ಪರ ಇದ್ದಂತೆ ನಟಿಸಿ ಆಸ್ತಿಯನ್ನು ತಾವಿಬ್ಬರೇ ಹಂಚಿಕೊಳ್ಳುವಲ್ಲಿ ಸಫಲನಾದ. ಇದು ಇನ್ನೊಬ್ಬ ಅಣ್ಣ ಕೇಶವನಿಗೆ ಸಹ್ಯವಾಗಲಿಲ್ಲ. ರವಿ ಮತ್ತು ಇಂದಿರಾಳ ವಿರುದ್ಧ ಸಿವಿಲ್‌ ಕೋರ್ಟ್‌ನಲ್ಲಿ ಕೇಸು ಹಾಕಿದ. ಇದೆಲ್ಲಾ ಇಂದಿರಾಳದೇ ಕುತಂತ್ರ ಎನ್ನುವುದು ತಿಳಿದ ಆತ ಅವಳ ಮನೆಗೆ ಬಂದು ಜಗಳ ಆರಂಭಿಸಿದ. ಜಗಳ ಮಿತಿ ಮೀರಿದಾಗ ಇಂದಿರಾಳಿಗೆ ಚೆನ್ನಾಗಿ ಹೊಡೆದು ಹೋದ.

ಅಣ್ಣನ ಹೊಡೆತದಿಂದ ಅವಮಾನಗೊಂಡ ಇಂದಿರಾ, ಅವನಿಗೆ ಹೇಗಾದರೂ ಬುದ್ಧಿ ಕಲಿಸಬೇಕು ಎಂದುಕೊಂಡಳು. ತಡ ಮಾಡಲಿಲ್ಲ. ತನ್ನಲ್ಲಿರುವ ಹಣ, ರಾಜಕೀಯ ಸಂಪರ್ಕ ಎಲ್ಲವನ್ನೂ ಬಳಸಿಕೊಂಡಳು. ಚಾಕುವಿನಿಂದ ತಾನೇ ಇರಿದುಕೊಂಡು ಆಸ್ಪತ್ರೆಗೆ ದೌಡಾಯಿಸಿದಳು. ಪೊಲೀಸರನ್ನು ತನ್ನತ್ತ ಮಾಡಿಕೊಳ್ಳಲು ಇಂದಿರಾಗೆ ಹೆಚ್ಚು ಹೊತ್ತು ಬೇಕಾಗಲಿಲ್ಲ. ಕೇಶವನ ವಿರುದ್ಧ ‘ಕೊಲೆ ಯತ್ನ’ ಕೇಸು ದಾಖಲಿಸಿ ಬಂಧಿಸಲಾಯಿತು. ಅವನಿಗೆ ಜಾಮೀನು ಸಿಗಲು ಒಂದು ತಿಂಗಳಾಯಿತು.

ಈ ‘ಕೊಲೆ ಯತ್ನ’ದ ಪ್ರಕರಣ ಕೋರ್ಟ್‌ನಲ್ಲಿ ವಿಚಾರಣೆಗೆ ಬಂತು. ಪಬ್ಲಿಕ್‌ ಪ್ರಾಸಿಕ್ಯೂಟರ್‌ ಅವರು ಸುಂದರಿ, ಹಣವಂತೆ ಇಂದಿರಾ ಪರವಾಗಿ ಸಾಕಷ್ಟು ಮುತುವರ್ಜಿ ವಹಿಸಿದರು. ಪೊಲೀಸರ ಬಳಿ ಅಣ್ಣನ ವಿರುದ್ಧ ಇಂದಿರಾ ದೂರು ನೀಡುವ ಸಮಯದಲ್ಲಿ ಹೇಳಿರದ ವಿಷಯಗಳನ್ನೂ ಸೇರಿಸಿ ಪ್ರಾಸಿಕ್ಯೂಟರ್‌ ಅವರು ಕೋರ್ಟ್‌ನಲ್ಲಿ ವಾದ ಮಂಡಿಸಿದರು!

ಕೇಶವ ಅವರ ಪರವಾಗಿ ನಾನು ವಕಾಲತ್ತು ವಹಿಸಿದೆ. ನನ್ನ ಸರದಿ ಬಂದಾಗ ಇಂದಿರಾ ಅವರನ್ನು ಪಾಟಿ ಸವಾಲಿಗೆ ಒಳಪಡಿಸಿದೆ. ಅಣ್ಣನ ವಿರುದ್ಧ ಮಾತ್ರವಲ್ಲದೇ ಗಂಡನ ವಿರುದ್ಧವೂ ಆಕೆ ಮಾಡಿದ ‘ಕಿತಾಪತಿ’ಗಳನ್ನು ಅವರ ಬಾಯಿಯಿಂದಲೇ ನ್ಯಾಯಾಧೀಶರ ಗಮನಕ್ಕೆ ತರಲು ಸಾಕಷ್ಟು ಪ್ರಯತ್ನಪಟ್ಟೆ. ಪ್ರಶ್ನೆಯ ಸುರಿಮಳೆಯಲ್ಲಿ ಅವರನ್ನು ಸಿಲುಕಿಸಿ ಅಂತೂ ಅವರ ಬಾಯಿಯಿಂದಲೇ ಕೆಲವು ಸತ್ಯಾಂಶಗಳನ್ನು ಹೊರತರುವಲ್ಲಿ ಸಫಲನಾದೆ.

ಕೇಶವ ಅವರು ಹಲ್ಲೆ ಮಾಡಿದ್ದರು ಎಂಬುದಾಗಿ ಇಂದಿರಾ ಕೊಟ್ಟ ವೈದ್ಯಕೀಯ ವರದಿಯನ್ನು ಕೋರ್ಟ್‌ ಗಮನಕ್ಕೆ ತಂದೆ. ನಿಯಮದ ಪ್ರಕಾರ, ಇಂಥ ವರದಿಯನ್ನು ಸರ್ಕಾರಿ ಆಸ್ಪತ್ರೆಯ ವೈದ್ಯರು ನೀಡಬೇಕು. ಆದರೆ ಇಂದಿರಾ ಅಲ್ಲಿ ಎಡವಟ್ಟು ಮಾಡಿದ್ದಳು. ಖಾಸಗಿ ಆಸ್ಪತ್ರೆಯಿಂದ ವರದಿ ತಂದಿದ್ದಳು. ಅದಕ್ಕೆ ಮಾನ್ಯತೆ ಇಲ್ಲ ಎಂದೂ ನಾನು ವಾದಿಸಿದೆ.

‘ಕೊಲೆ ಯತ್ನ’ಕ್ಕೆ ಸಾಕ್ಷಿದಾರರು ಎಂದು ಸರ್ಕಾರದ ಪರ ವಕೀಲರು ಕರೆತಂದಿದ್ದ ಕೆಲವು ವ್ಯಕ್ತಿಗಳು ಘಟನೆಯ ಬಗ್ಗೆ ಸ್ಪಷ್ಟವಾಗಿ ನುಡಿಯಲು ಸಾಧ್ಯವಾಗಲಿಲ್ಲ. ಇದು ಕೂಡ ಕೋರ್ಟ್‌ನ ಅನುಮಾನಕ್ಕೆ  ಕಾರಣವಾಯಿತು. ಇದರಿಂದ ಕೇಶವ ನಿರಪರಾಧಿ ಎಂದು ಕೋರ್ಟ್‌ ಅಭಿಪ್ರಾಯ

ಪಟ್ಟಿತು. ಈ ಆದೇಶ ಹೊರಬರುತ್ತಲೇ ಕೇಶವನ ಹೆಂಡತಿ ಮತ್ತು ಮಕ್ಕಳು ನ್ಯಾಯಾಲಯದ ಆವರಣದಲ್ಲೇ ನನ್ನ ಕಾಲಿಗೆ ಬಿದ್ದರು. ಅಂತೂ ವಿಧಿಯಾಟದಿಂದ ಕೇಶವ ಪಾರಾಗಿದ್ದ.

***

ಇನ್ನೊಂದೆಡೆ, ಇಂದಿರಾ-ವಾಸುದೇವ ದಂಪತಿ ಪರಸ್ಪರ ದಾಖಲಿಸಿದ್ದ ಹತ್ತಾರು ಕೇಸುಗಳ ವಿಚಾರಣೆ ಸಂಬಂಧಿತ ಕೋರ್ಟ್‌ಗಳಲ್ಲಿ ಮುಂದುವರಿಯಿತು. ಗಂಡನಿಗೆ ಪಾಠ ಕಲಿಸಬೇಕೆಂದು ಸಾಕಷ್ಟು ಕುತಂತ್ರ ಬುದ್ಧಿ ಉಪಯೋಗಿಸಿದ್ದ ಇಂದಿರಾ, ತಾನು ಹೆಣೆದ ಬಲೆಯಲ್ಲಿಯೇ ಬಿದ್ದಳು. ಪ್ರತಿದಿನವೂ ಆ ಕೇಸು, ಈ ಕೇಸು ಎಂದು ಕೋರ್ಟ್‌ ಅಲೆಯಬೇಕಾಯಿತು. ಗಂಡನ ವಿರುದ್ಧ ಕೋರ್ಟ್‌ನಲ್ಲಿ ಸುಳ್ಳು ಹೇಳುವ ನಟನೆ ಮಾಡುವ ಪರಿಸ್ಥಿತಿ ಆಕೆಗಾದ ಕಾರಣ, ಇನ್ನು ಧಾರಾವಾಹಿಗಳಲ್ಲಿ ನಟಿಸಲು ವೇಳೆ ಎಲ್ಲಿಂದ ಬರಬೇಕು?

ಹೀಗೆ ಕೋರ್ಟ್‌ ಅಲೆದೂ ಅಲೆದೂ  ಆಕೆ ಸುಸ್ತಾಗಿ ಹೋದಳು. ತಾನು ಇಲ್ಲಿಯವರೆಗೆ ಮಾಡುತ್ತಾ ಬಂದ ಮೋಸದಾಟಗಳ ಬಗ್ಗೆ ಆಲೋಚನೆ ಬಂದು ಆತ್ಮಸಾಕ್ಷಿಗೆ ಇರಿದಂತಾಯಿತು. ಕೋರ್ಟ್‌ ಅಲೆದಾಟ ಸಾಕು ಎನಿಸಿ ಗಂಡನ ಜೊತೆ ಒಪ್ಪಂದ ಮಾಡಿಕೊಳ್ಳುವ ಯೋಚನೆ ಮಾಡಿದಳು. ಗಂಡನಿಗೇ ಉಪಕಾರ ಮಾಡುವ ರೀತಿಯಲ್ಲಿ ಒಪ್ಪಂದದ ಬಗ್ಗೆ ತನ್ನದೇ ಧಾಟಿಯಲ್ಲಿ ಹೇಳಿದಳು.

ಇನ್ನೊಂದೆಡೆ, ಅಮಾಯಕ ವಾಸುದೇವ ಅವರೂ ತಮ್ಮ ಊರಿನಿಂದ ಬೆಂಗಳೂರಿಗೆ ಪದೇ ಪದೇ ಪ್ರಯಾಣ ಬೆಳೆಸಿ ಬಸವಳಿದರು. ಥಳಕು ಬಳುಕಿನ ಹುಡುಗಿಯ ಸೌಂದರ್ಯಕ್ಕೆ ಮೋಸ ಹೋದದ್ದು ತಿಳಿಯುವ ಹೊತ್ತಿಗೆ ತುಂಬಾ ವಿಳಂಬ ಆಗಿತ್ತು. ಆದರೆ ಏನೂ ಮಾಡಲಾಗದ ಪರಿಸ್ಥಿತಿ ಅವರದ್ದು. ಹೆಂಡತಿ ಸುಸ್ತಾಗಿ ಹೋದದ್ದು ತಿಳಿಯದಷ್ಟು ಮೂರ್ಖರು ಅವರಾಗಿರಲಿಲ್ಲ. ಆದರೆ ಅದನ್ನು ತೋರ್ಪಡಿಸದೇ ಅವಳ ಜೊತೆ ಒಪ್ಪಂದ ಮಾಡಿಕೊಳ್ಳುವುದೇ ಲೇಸು ಎಂದುಕೊಂಡರು.

ಪರಸ್ಪರ ಒಪ್ಪಂದಕ್ಕೆ ಬಂದು, ತಾವು ಹಾಕಿರುವ ಎಲ್ಲಾ ಕೇಸುಗಳನ್ನೂ (ವಿಚ್ಛೇದನ ಪ್ರಕರಣ ಬಿಟ್ಟು) ಇಬ್ಬರೂ ವಾಪಸ್‌ ಪಡೆದರು.  ಇಬ್ಬರೂ ಕೋರ್ಟ್‌ ಅಲೆದಾಟದಿಂದ ಸದ್ಯ ನಿರಾಳರಾಗಿದ್ದಾರೆ. ವಿಚ್ಛೇದನ ಪ್ರಕರಣ ಇತ್ಯರ್ಥವಾಗಬೇಕಿದೆಯಷ್ಟೇ. ಕೊನೆಗೂ ತಾನು ಸಾಧಿಸಿದ್ದೇನು ಎಂದು ಇಂದಿರಾ ಪ್ರಶ್ನಿಸಿಕೊಳ್ಳುತ್ತಿದ್ದಾಳೆ...!

(ಹೆಸರು ಬದಲಾಯಿಸಲಾಗಿದೆ) ಲೇಖಕ ಹೈಕೋರ್ಟ್‌ ವಕೀಲ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry