ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೊಟ್ಟ ಮಾತಿಗೆ ತಪ್ಪಿದ ಸರ್ಕಾರ’

Last Updated 17 ಜೂನ್ 2017, 19:30 IST
ಅಕ್ಷರ ಗಾತ್ರ

ಖಾಸಗಿ ಆಸ್ಪತ್ರೆಗಳಲ್ಲಿ ವಿಧಿಸುತ್ತಿರುವ ದುಬಾರಿ ಶುಲ್ಕ ನಿಯಂತ್ರಿಸಲು ಮುಂದಾಗಿರುವ ರಾಜ್ಯ ಸರ್ಕಾರ  ‘ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ಮಸೂದೆ–2017’ನ್ನು ವಿಧಾನಸಭೆಯಲ್ಲಿ ಮಂಡಿಸಿದೆ. ಮಸೂದೆಯ ಬಗ್ಗೆ ರಾಜ್ಯದ ಖಾಸಗಿ ಆಸ್ಪತ್ರೆಗಳ ವೈದ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ  ಭಾರಿ ಪ್ರತಿಭಟನೆಯನ್ನೂ ಮಾಡಿದರು. ಸರ್ಕಾರ ಸರ್ವಾಧಿಕಾರಿಯಂತೆ ವರ್ತಿಸುತ್ತಿರುವುದು ಮಾತ್ರವಲ್ಲದೆ, ವೈದ್ಯರನ್ನು ಕಳ್ಳರಂತೆ ನೋಡುತ್ತಿದೆ ಎಂದು ವಾಗ್ದಾಳಿಯನ್ನೂ ನಡೆಸಿದರು.

ಮಸೂದೆ ಕುರಿತು ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ಶಾಖೆಯ ಅಧ್ಯಕ್ಷ ಡಾ. ರಾಜಶೇಖರ ಎಸ್‌. ಬಳ್ಳಾರಿ ಅವರು ‘ಪ್ರಜಾವಾಣಿ’ ಜೊತೆ ಮಾತನಾಡಿದ್ದಾರೆ.

* ಕರ್ನಾಟಕ ಖಾಸಗಿ ವೈದ್ಯಕೀಯ ಮಸೂದೆ ಬಗ್ಗೆ ವೈದ್ಯರ  ಆಕ್ರೋಶ ಏಕೆ? ಪ್ರಾಮಾಣಿಕ ಮತ್ತು ಮಾನವೀಯತೆಯಿಂದ ಕಾರ್ಯ ನಿರ್ವಹಿಸುವ ಖಾಸಗಿ ಆಸ್ಪತ್ರೆಗಳು ಭಯಪಡುವ ಅಗತ್ಯ ಇದೆಯೇ?

ಭಯ ಪಡುವ ಪ್ರಶ್ನೆ ಅಲ್ಲ. ಈ ಮಸೂದೆ ಅಂಗೀಕಾರಗೊಂಡು ಕಾಯ್ದೆ ಜಾರಿಗೆ ಬಂದರೆ, ವೈದ್ಯರು ಮತ್ತು ಆಸ್ಪತ್ರೆಗಳ ಮೇಲೆ  ಕಿರುಕುಳ, ಬ್ಲ್ಯಾಕ್‌ಮೇಲ್‌ ಶುರು ಆಗುತ್ತವೆ. ಈಗಾಗಲೇ ಪ್ರತಿನಿತ್ಯ ಒಂದಲ್ಲ ಒಂದು ಕಡೆ  ವೈದ್ಯರು, ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್‌ ಹೋಮ್‌ಗಳ ಮೇಲೆ ದಾಳಿ ನಡೆಯುತ್ತಿದೆ. ಹೊಸ ಕಾಯ್ದೆ ವೈದ್ಯ ಸಮುದಾಯವನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡುವುದರಲ್ಲಿ ಸಂದೇಹವೇ ಇಲ್ಲ. ವೈದ್ಯರ ಪ್ರಾಣದ ಜತೆ ಚೆಲ್ಲಾಟ ಆಡುವ ಪರಿಸ್ಥಿತಿ ನಿರ್ಮಾಣ ಮಾಡಲು ಸರ್ಕಾರ ಹೊರಟಿದೆ. ಈ ಕಾರಣಕ್ಕೆ ವೈದ್ಯ ಸಮುದಾಯ ವ್ಯಾಪಕ ಆಕ್ರೋಶ ವ್ಯಕ್ತಪಡಿಸುತ್ತಿದೆ.

* ಇಲ್ಲಿಯ ತನಕ ರೋಗಿಗಳ ಕುಂದುಕೊರತೆ ಆಲಿಸುವುದಕ್ಕೆ ಸೂಕ್ತ ವ್ಯವಸ್ಥೆ  ಅಥವಾ ವೇದಿಕೆ ಇರಲಿಲ್ಲ. ರೋಗಿಗಳಿಗೆ ಅನ್ಯಾಯ ಆದ ಸಂದರ್ಭದಲ್ಲೂ ಕೇಳುವವರು ಇರಲಿಲ್ಲ. ಕುಂದುಕೊರತೆ ಆಲಿಸುವುದಕ್ಕೆ ಸಮಿತಿ ರಚನೆ ಮಾಡುವುದರಲ್ಲಿ ತಪ್ಪೇನಿದೆ?

ಕುಂದುಕೊರತೆ ಆಲಿಸುವುದಕ್ಕೆಂದೇ ಸಾಕಷ್ಟು ಖಾಸಗಿ ಆಸ್ಪತ್ರೆಗಳಲ್ಲಿ ಹೆಲ್ಪ್‌ ಡೆಸ್ಕ್‌ಗಳು ಇವೆ. ಅಲ್ಲಿ ಕುಂದುಕೊರತೆಗಳನ್ನು ಹೇಳಿಕೊಳ್ಳಬಹುದು. ನೇರವಾಗಿ ವೈದ್ಯರೊಂದಿಗೆ ಚರ್ಚಿಸಿ ತಮ್ಮ ಸಮಸ್ಯೆಗಳನ್ನು ಪರಿಹರಿಸುವುದಕ್ಕೆ ಅವಕಾಶವಿದೆ. ಅದೇ ರೀತಿ ನಡೆಯುತ್ತಿದೆ.

ಸಮಿತಿ ರಚಿಸುವ ಸರ್ಕಾರದ  ಪ್ರಯತ್ನದ ಹಿಂದೆ ಇನ್‌ಸ್ಪೆಕ್ಟರ್ ರಾಜ್‌ ವ್ಯವಸ್ಥೆ ತರುವ ಉದ್ದೇಶ ಇದೆ. ವೈದ್ಯರು ಮತ್ತು ಆಸ್ಪತ್ರೆಯ ವ್ಯವಸ್ಥಾಪಕರು ರೋಗಿಗಳಿಗೆ ವೈದ್ಯಕೀಯ ನೆರವು ನೀಡುವುದರ ಬದಲಿಗೆ ದೂರುಗಳ ಹಿಂದೆಯೇ ಓಡಾಡಬೇಕಾದ ಸ್ಥಿತಿ ಸೃಷ್ಟಿಯಾಗುವ ಆತಂಕ ಇದೆ.  ಕೆಲವು ವ್ಯಕ್ತಿಗಳು ದುರುದ್ದೇಶ ಅಥವಾ ದ್ವೇಷದಿಂದ ದೂರು ನೀಡಲೂಬಹುದು. ಇದರಿಂದ  ರೋಗಿಗಳು ಮತ್ತು ವೈದ್ಯರ ಸಂಬಂಧ ಕೆಡುತ್ತದೆ. ಪರಸ್ಪರ ಅಪನಂಬಿಕೆಗೆ ಕಾರಣವಾಗುತ್ತದೆ.

* ಕೆಲವು ಆಸ್ಪತ್ರೆಗಳಲ್ಲಿ ಬೇಕಾಬಿಟ್ಟಿ ಹಣ ವಸೂಲಿ ಮಾಡುತ್ತಾರೆ ಎನ್ನುವ ಆರೋಪ ಇದೆ. ಯಾವ ಚಿಕಿತ್ಸೆಗೆ ಎಷ್ಟು ದರ ಆಗುತ್ತದೆ ಎಂಬ ತಿಳಿವಳಿಕೆ ರೋಗಿಗಳಿಗೆ ಇರುವುದಿಲ್ಲ. ಆಸ್ಪತ್ರೆಗಳು ಕೇಳಿದಷ್ಟು ಹಣವನ್ನು ನೀಡಲೇಬೇಕು. ಈ ವ್ಯವಹಾರದಲ್ಲಿ ಪಾರದರ್ಶಕತೆ ಇದೆ ಎಂದು ಅನ್ನಿಸುತ್ತದೆಯೆ? ಸರ್ಕಾರ ಚಿಕಿತ್ಸೆಗೆ ದರ ನಿಗದಿ ಮಾಡಿದರೆ ತಪ್ಪೇನು?

ಈ ಆರೋಪ ಸರಿಯಲ್ಲ.  ಸರ್ಕಾರ ದರ ನಿಗದಿ ಮಾಡುವ ಪ್ರಸ್ತಾಪ ಸಮಂಜಸವೂ ಅಲ್ಲ. ಸಣ್ಣ ಅಥವಾ ದೊಡ್ಡ ಖಾಸಗಿ ಆಸ್ಪತ್ರೆಗಳ ನಡುವೆ ವ್ಯತ್ಯಾಸವಿರುತ್ತದೆ. ಪ್ರತಿಯೊಂದು ಆಸ್ಪತ್ರೆಯಲ್ಲಿ  ನೀಡುವ ಸೌಲಭ್ಯಗಳು, ಆರೈಕೆಯ  ಗುಣಮಟ್ಟವನ್ನು ಆಧರಿಸಿ ದರ ನಿಗದಿ ಮಾಡಲಾಗುತ್ತದೆ. ದೊಡ್ಡ ಆಸ್ಪತ್ರೆಗಳಲ್ಲಿ ಸಿಬ್ಬಂದಿ, ನಿರ್ವಹಣಾ ಖರ್ಚು–ವೆಚ್ಚ ಹೆಚ್ಚು. ಆದ್ದರಿಂದ ಎಲ್ಲವನ್ನೂ ಒಂದೇ ತಕ್ಕಡಿಯಲ್ಲಿ ಇಟ್ಟು ತೂಗುವ ಕ್ರಮ ಸರಿಯಲ್ಲ. ಅಷ್ಟಕ್ಕೂ ಬಹುಪಾಲು ಎಲ್ಲ ಆಸ್ಪತ್ರೆಗಳೂ ನ್ಯಾಯೋಚಿತ ದರವನ್ನೇ ನಿಗದಿ ಮಾಡಿವೆ. ರೋಗಿಗಳಿಗೆ ತೊಂದರೆ ಆಗದಂತೆ ನೋಡಿಕೊಳ್ಳುತ್ತಿವೆ.

ಬಡವರು ಮತ್ತು ಶ್ರೀಮಂತರು ಎಂಬ ತಾರತಮ್ಯ ಮಾಡುವುದಿಲ್ಲ. ಹಣವಿಲ್ಲದವರಿಗೆ ಉಚಿತ ಚಿಕಿತ್ಸೆ, ಶಸ್ತ್ರಚಿಕಿತ್ಸೆ, ಆರೈಕೆಯ ವ್ಯವಸ್ಥೆ  ಮಾಡಲಾಗುತ್ತಿದೆ.
ಚಿಕಿತ್ಸೆಗೆ ದರ ನಿಗದಿ ಮಾಡುವ ಕ್ರಮ  ದೇಶದಲ್ಲಿ ಎಲ್ಲೂ ಇಲ್ಲ. ಒಂದು ಕೆಟ್ಟ ಪರಂಪರೆಗೆ ನಾಂದಿ ಹಾಡುವುದು ಸರಿಯಲ್ಲ. ಇದೇ ಮಾನದಂಡವನ್ನು ಇತರೆ ಕ್ಷೇತ್ರಗಳಿಗೆ ಏಕೆ  ಅನ್ವಯಿಸುವುದಿಲ್ಲ. ಚಾರ್ಟೆಡ್‌ ಅಕೌಂಟೆಂಟ್‌ಗಳು, ವಕೀಲರು, ಗುತ್ತಿಗೆದಾರರು, ಎಂಜಿನಿಯರುಗಳು ಗ್ರಾಹಕರಿಂದ ಇಂತಿಷ್ಟೇ ಶುಲ್ಕ ವಸೂಲಿ ಮಾಡಬೇಕು ಎಂದು ಸರ್ಕಾರ ದರ ಪಟ್ಟಿ ನಿಗದಿ ಮಾಡುತ್ತದೆಯೇ? ಅದೂ ಕೂಡ ಸಾರ್ವಜನಿಕ ಸೇವೆಯ ಒಂದು ಭಾಗವಲ್ಲವೆ? ಪ್ರತಿಯೊಂದು ಜೀವವೂ ಅಮೂಲ್ಯ. ಅದನ್ನು ಉಳಿಸಲೇಬೇಕು ಎಂಬ ಸದಾಶಯ ಇಟ್ಟುಕೊಂಡೇ ವೈದ್ಯರು ಕಾರ್ಯ ನಿರ್ವಹಿಸುತ್ತಾರೆ. ದರ ನಿಗದಿ ಮಾಡುವ ಅಧಿಕಾರ ವೈದ್ಯರಿಗೇ ಇರಬೇಕು.

ವೈದ್ಯರು 24X7 ಸೇವೆ ಸಲ್ಲಿಸುತ್ತಾರೆ. ರೋಗಿಗಳ ಆರೋಗ್ಯದ ಬಗ್ಗೆ ಗಮನಹರಿಸುವ ವೈದ್ಯರು ತಮ್ಮ ಆರೋಗ್ಯದ ಕಡೆ ಗಮನಹರಿಸುವುದೇ ಕಡಿಮೆ. ಒಂದು ಅಧ್ಯಯನದ ಪ್ರಕಾರ, ವೈದ್ಯರು ಮಾನಸಿಕ ಮತ್ತು ದೈಹಿಕ ಒತ್ತಡಗಳಿಗೆ ಒಳಗಾಗುತ್ತಾರೆ. ರಾಜಕಾರಣಿಗಳು ಮತ್ತು ಅಧಿಕಾರಿಗಳಿಗೆ ಈ ಸೂಕ್ಷ್ಮತೆಯ ಅರಿವಿಲ್ಲ.  ದೊಡ್ಡ– ದೊಡ್ಡ ಆಸ್ಪತ್ರೆ ಕಟ್ಟಿದ್ದಾರೆ. ಹಣ ಗಳಿಸುತ್ತಾರೆ. ನಮ್ಮ ಅಂಕೆಯಲ್ಲಿ ಇಟ್ಟುಕೊಳ್ಳೋಣ. ದೂರು ಬಂದರೆ ಹಿಡಿದು ಜೈಲಿಗೆ ಹಾಕೋಣ ಎಂಬ ಮನಸ್ಥಿತಿ ಇದ್ದಂತಿದೆ.

ಕಾಯ್ದೆ  ಉಲ್ಲಂಘಿಸಿದರೆ ದಂಡ ಮತ್ತು ಜೈಲು ಶಿಕ್ಷೆ ವಿಧಿಸುವ ಪ್ರಸ್ತಾಪ ಅತ್ಯಂತ ಕಠೋರ. ನ್ಯಾಯಮೂರ್ತಿ ವಿಕ್ರಮಜಿತ್‌ ಸೇನ್‌ ಅವರ ಸಮಿತಿ ಸಭೆ ನಡೆಸಿದಾಗ, ತಪ್ಪು ಮಾಡಿದವರಿಗೆ ದಂಡ ಹಾಕಿ. ಜೈಲು ಶಿಕ್ಷೆಯ ಸೇರಿಸುವುದು ಬೇಡ ಎಂದು ಸ್ವತಃ ನ್ಯಾಯಮೂರ್ತಿಯವರೇ ಹೇಳಿದ್ದರು. ಸರ್ಕಾರವೂ ಒಪ್ಪಿಕೊಂಡಿತ್ತು. ಆದರೆ, ಸರ್ಕಾರ ಕೊಟ್ಟ ಮಾತಿಗೆ ತಪ್ಪಿ ಜೈಲು ಶಿಕ್ಷೆಯನ್ನು ಮಸೂದೆಯಲ್ಲಿ ಸೇರಿಸಿದೆ.

* ರೋಗಿಗಳಿಗೆ  ಚಿಕಿತ್ಸೆ, ಪ್ಯಾಕೇಜು ಮತ್ತು ಉಪಕರಣಗಳ ಬೆಲೆಯ ಕುರಿತು ಮೊದಲೇ ತಿಳಿಸಬೇಕು ಎನ್ನುವುದರಲ್ಲಿ ತಪ್ಪೇನು?

ಆಸ್ಪತ್ರೆಯ ದರ, ಚಿಕಿತ್ಸೆ ಮತ್ತು ಸಾಧನಗಳಿಗೆ ಆಗುವ ವೆಚ್ಚದ ಮಾಹಿತಿಯನ್ನು ಮೊದಲೇ ರೋಗಿಗಳಿಗೆ ತಿಳಿಸುವ ಪರಿಪಾಠವಿದೆ. ಪ್ಯಾಕೇಜ್‌ ಚಾರ್ಜ್‌ಗಳು, ತಪಾಸಣೆ, ಹಾಸಿಗೆ ಚಾರ್ಜು, ಶಸ್ತ್ರ ಚಿಕಿತ್ಸೆ ಕೊಠಡಿ ಪ್ರಕ್ರಿಯೆ, ತೀವ್ರ ನಿಗಾ ರಕ್ಷಣೆ, ವೆಂಟಿಲೇಷನ್‌, ಇಂಪ್ಲಾಂಟ್ಸ್‌ಗಳ ಬಗ್ಗೆ ರೋಗಿಯ ಸಂಬಂಧಿಕರಿಗೆ ಮಾಹಿತಿಯನ್ನು ನೀಡುತ್ತೇವೆ.

* ತಪ್ಪು ಮಾಡುವ ಆಸ್ಪತ್ರೆಗಳು ಮತ್ತು ವೈದ್ಯರು ಸಬೂಬು ನೀಡಿ ಜಾರಿಕೊಳ್ಳುವುದೇ ಹೆಚ್ಚು. ಇದಕ್ಕೆ ಅವಕಾಶ ನೀಡಬೇಕಾ. ವೈದ್ಯ ಸಮುದಾಯ ಸಾರ್ವಜನಿಕರ ಮನಸ್ಸನ್ನು ಏಕೆ ಅರ್ಥ ಮಾಡಿಕೊಳ್ಳುವುದಿಲ್ಲ?

ವೈದ್ಯ ಸಮುದಾಯದಲ್ಲಿ ಯಾರಾದರೂ ತಪ್ಪು ಮಾಡಿದ್ದರೆ  ಶಿಕ್ಷಿಸಲು ಈಗಾಗಲೇ ಸಾಕಷ್ಟು ಕಾನೂನುಗಳು  ಇವೆ. ಪೊಲೀಸ್‌, ನ್ಯಾಯಾಲಯವೂ ಇದೆ. ಭಾರತೀಯ ವೈದ್ಯಕೀಯ ಪರಿಷತ್ತು ಮತ್ತು ಕರ್ನಾಟಕ ವೈದ್ಯಕೀಯ ಪರಿಷತ್ತುಗಳಿವೆ. ಸಾರ್ವಜನಿಕರು ಇವುಗಳ ಮುಂದೆ ಅಹವಾಲು ಸಲ್ಲಿಸಲು ಅವಕಾಶ ಇದೆ. ಆದರೆ,  ಮಸೂದೆಯಲ್ಲಿ ಇರುವ ಅಂಶಗಳು ಸಾರ್ವಜನಿಕರನ್ನು  ವೈದ್ಯ ಸಮುದಾಯದ ಮೇಲೆ ಎತ್ತಿಕಟ್ಟುವಂತಿದೆ.

* ಕ್ಯಾನ್ಸರ್‌ ಸೇರಿದಂತೆ ಕೆಲವು ಗಂಭೀರ ಕಾಯಿಲೆಗಳ ಚಿಕಿತ್ಸಾ ವೆಚ್ಚಕ್ಕೆ ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದವರು ಮನೆ–ಮಠ ಮಾರಿಕೊಳ್ಳಬೇಕಾದ ಸ್ಥಿತಿ ಇದೆ. ರೋಗಿಯನ್ನು ಉಳಿಸಿಕೊಳ್ಳಬೇಕು ಎಂದರೆ ಮನೆ–ಮಠ ಕಳೆದುಕೊಳ್ಳಬೇಕು. ಮನೆ–ಮಠ ಬೇಕು ಎಂದರೆ, ರೋಗಿಯನ್ನು ಕಳೆದುಕೊಳ್ಳಬೇಕಾದ ಸ್ಥಿತಿ ಇದೆಯಲ್ಲ?

ಕ್ಯಾನ್ಸರ್‌ ಸೇರಿದಂತೆ ಹಲವು ಗಂಭೀರ ಕಾಯಿಲೆಗಳಿಗೆ ಚಿಕಿತ್ಸಾ ವೆಚ್ಚ ಅಧಿಕ ಇರುವುದು ನಿಜ. ಚಿಕಿತ್ಸೆಯ ಉಪಕರಣ, ಔಷಧ, ಸಾಧನ–ಸಲಕರಣೆ ಎಲ್ಲವೂ ದುಬಾರಿ ಇರುವುದರಿಂದ ವೆಚ್ಚ ಹೆಚ್ಚಾಗಿದೆ. ಆದರೆ, ರೋಗಿಗಳ ಹೊರೆ ತಗ್ಗಿಸಲು ಹಣಕಾಸು ನೆರವು ನೀಡುವ ಯೋಜನೆಗಳಿವೆ. ಆರ್ಥಿಕವಾಗಿ ಶಕ್ತಿ ಇಲ್ಲದವರಿಗೆ ಪ್ರಧಾನಮಂತ್ರಿ ಮತ್ತು ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಹಣಕಾಸು ನೆರವು ನೀಡಲಾಗುತ್ತದೆ. ಕೆಲವು ದೊಡ್ಡ ಖಾಸಗಿ ಆಸ್ಪತ್ರೆಗಳಲ್ಲಿ ನಗದುರಹಿತ ಸೇವೆಯನ್ನು ಕಡು ಬಡವರಿಗೆ ನೀಡಲಾಗುತ್ತದೆ. ದಾನಿಗಳು ನೆರವು ನೀಡುತ್ತಿದ್ದಾರೆ.

* ಕಾಯ್ದೆಯ ಹಿಂದೆ ಏನೋ ಹುನ್ನಾರ ಅಡಗಿದೆ ಎಂದು ನಿಮ್ಮ ಪದಾಧಿಕಾರಿಗಳಲ್ಲಿ ಕೆಲವರು ಹೇಳುತ್ತಿದ್ದಾರಲ್ಲ,  ಏನದು ಹುನ್ನಾರ?

ಯಾಕೆ ಇವೆಲ್ಲ (ಮಸೂದೆ) ಮಾಡುತ್ತಿದ್ದಾರೆ ಎಂಬುದು ನನಗೆ ಅರ್ಥವಾಗುತ್ತಿಲ್ಲ.  ಮಸೂದೆಯ ಕರಡು ಅಂತಿಮಗೊಳಿಸುವುದಕ್ಕೆ ಮೊದಲು ಎಲ್ಲರೂ ಕುಳಿತು ಚರ್ಚಿಸಿದ್ದೆವು. ನ್ಯಾಯಮೂರ್ತಿ ವಿಕ್ರಮ್‌ಜಿತ್‌ ಸೇನ್‌ ಅವರು ನಾಲ್ಕು ಸಭೆಗಳನ್ನು ನಡೆಸಿದ್ದರು. ಕೊನೆಯ ಸಭೆಯಲ್ಲಿ ಈ ಮಸೂದೆ ವ್ಯಾಪ್ತಿಗೆ ಸರ್ಕಾರಿ ಆಸ್ಪತ್ರೆಗಳನ್ನೂ ತರುತ್ತೇವೆ.

ಶುಲ್ಕ ನಿಗದಿ ಅಂಶವನ್ನು ಸೇರಿಸುವುದಿಲ್ಲ ಮತ್ತು ದೂರು ಸಮಿತಿ ರಚಿಸುವುದಿಲ್ಲ ಎಂದು ಆರೋಗ್ಯ ಸಚಿವರು ಮಾತು ಕೊಟ್ಟಿದ್ದರು. ಆ ಬಳಿಕ ಮಾಧ್ಯಮಗೋಷ್ಠಿ ನಡೆಸಿ ವಿವರವನ್ನೂ ನೀಡಿದ್ದೆವು.  ಆದರೆ, ಸದನದಲ್ಲಿ ಮಂಡಿಸಿದ ಮಸೂದೆಯ ಅಂಶಗಳು  ನಿಜಕ್ಕೂ ಆಘಾತ ಉಂಟು ಮಾಡಿದೆ. ಒಟ್ಟಿನಲ್ಲಿ ಹೇಳುವುದಾದರೆ, ನಂಬಿಕೆಗೆ ಭಂಗ ಬಂದಿದೆ. ನಮಗೆ ಸರ್ಕಾರದ ಬಗ್ಗೆ ಬೇಸರವಿಲ್ಲ, ಆದರೆ, ಮಸೂದೆ ಬಗ್ಗೆ ಆಕ್ರೋಶವಿದೆ.

* ರೋಗಿಯ ಸನ್ನದು ಮತ್ತು ಖಾಸಗಿ ವೈದ್ಯ ಸಂಸ್ಥೆಗಳ ಸನ್ನದು ಬಗ್ಗೆ ನಿಮ್ಮ ತಕರಾರು ಏನು?

ತಮಾಷೆಯ ಸಂಗತಿ ಎಂದರೆ, ರೋಗಿಯ ಜಾತಿ, ಧರ್ಮ, ಲಿಂಗ, ಸಾಮಾಜಿಕ, ಆರ್ಥಿಕ ಸ್ಥಾನಮಾನದ ಆಧಾರದಲ್ಲಿ ತಾರತಮ್ಯ ಮಾಡಬಾರದು ಎಂದು ರೋಗಿಯ ಸನ್ನದು ಹೇಳುತ್ತದೆ. ಯಾವುದೇ ವೈದ್ಯರೂ ಈ ರೀತಿ ತಾರತಮ್ಯ ಮಾಡುವುದಿಲ್ಲ. ವೈದ್ಯರು ರೋಗಿಯೊಂದಿಗೆ ಸರಿಯಾಗಿ ಮಾತನಾಡದಿದ್ದರೆ, ಕೇಳಿಸಿಕೊಳ್ಳದೇ ಇದ್ದರೆ, ಗಡಿಬಿಡಿ ಮಾಡಿದರೆ ರೋಗಿ ದೂರು ಕೊಡಬಹುದು.

ಆ ಬಗ್ಗೆ ತನಿಖೆ ಮಾಡಬೇಕು ಎಂಬ ಅಂಶವೂ ಸನ್ನದುವಿನಲ್ಲಿದೆ. ಇದಕ್ಕಿಂತ ಅಪದ್ಧ ಮತ್ತು ಬಾಲಿಶ ಚಿಂತನೆ ಬೇರೊಂದು ಇಲ್ಲ.  ವೈದ್ಯ ತನ್ನೊಂದಿಗೆ ಮಾತನಾಡಿಲ್ಲ, ಗಡಿಬಿಡ ಮಾಡಿದ ಎಂದು ಪ್ರತಿಯೊಬ್ಬ ರೋಗಿಯೂ ದೂರು ಕೊಡಲಾರಂಭಿಸಿದರೆ ಏನಾಗಬಹುದು ಊಹಿಸಿ. ದಿನನಿತ್ಯದ ಕೆಲಸ ಬಿಟ್ಟು ವೈದ್ಯರು ತಮ್ಮ ಸಮಯವನ್ನು ಇದಕ್ಕೇ ಮೀಸಲಿಡಬೇಕಾಗುತ್ತದೆ. ನಮ್ಮನ್ನು ಅಪರಾಧಿಗಳಂತೆ, ಕಳ್ಳರಂತೆ ನೋಡಬೇಡಿ. ವೃತ್ತಿಯ ಘನತೆ, ಗೌರವ ಕಾಪಾಡಿ.

* ಈ ಮಸೂದೆಯಲ್ಲಿ ಇರುವ ಒಳ್ಳೆಯ ಅಂಶಗಳೇನು?

ಮಸೂದೆಯ ಒಂದಷ್ಟು ಅಂಶಗಳ ಬಗ್ಗೆ  ನಮ್ಮ ತಕರಾರಿಲ್ಲ. ಎಲ್ಲ ವೈದ್ಯರೂ ನೋಂದಣಿ ಮಾಡಿಸಿಕೊಳ್ಳಲು ಪ್ರಾಧಿಕಾರ ಸ್ಥಾಪಿಸಲಿ.   ಆಸ್ಪತ್ರೆಯಲ್ಲಿ  ಮೃತಪಟ್ಟ ವ್ಯಕ್ತಿಯ ಶರೀರವನ್ನು ಮನೆಗೆ ಕೊಂಡೊಯ್ಯುವ ಸಂದರ್ಭದಲ್ಲಿ  ಬಾಕಿ ಮೊತ್ತ ಪಾವತಿಗೆ ಆಸ್ಪತ್ರೆಗಳು ಒತ್ತಾಯಿಸಬಾರದು; ನಂತರ ಅದನ್ನು ಸಂಗ್ರಹಿಸಬಹುದು ಎಂಬ ಅಂಶದಲ್ಲಿ ತಪ್ಪು ಇಲ್ಲ. ಕೆಲವು ಆಸ್ಪತ್ರೆಗಳು ಅಮಾನವೀಯವಾಗಿ ನಡೆದುಕೊಳ್ಳುತ್ತಿರುವುದು ನಿಜ. ಇಂತಹ ಸಂದರ್ಭಗಳಲ್ಲಿ ಮಾನವೀಯತೆಯಿಂದ ವರ್ತಿಸುವುದನ್ನು ಆಸ್ಪತ್ರೆಗಳೂ ರೂಢಿಸಿಕೊಳ್ಳಬೇಕು.

* ಮುಂದೇನು ಮಾಡಬೇಕು ಎಂದುಕೊಂಡಿದ್ದೀರಿ?
ಇನ್ನೂ ಕಾಲ ಮಿಂಚಿಲ್ಲ. ಮಸೂದೆ ಅಂಗೀಕಾರಕ್ಕೆ ಮೊದಲು ಚರ್ಚೆ ಮಾಡಿ,  ವಿವಾದಾತ್ಮಕ ಮತ್ತು ವೈದ್ಯ ವೃತ್ತಿಗೆ ಮಾರಕವಾಗಿರುವ ಅಂಶಗಳನ್ನು ಕೈಬಿಡಬೇಕು. ಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವರನ್ನು ಭೇಟಿ ಮಾಡಿ ಕರಾಳ ಕಾಯ್ದೆಯನ್ನು ಜಾರಿಗೆ ತರಬೇಡಿ ಎಂದು ಮನವಿ ಮಾಡಿದ್ದೇವೆ. ಅಷ್ಟಕ್ಕೂ ಬಗ್ಗದಿದ್ದರೆ, ನ್ಯಾಯಾಲಯದ ಮೆಟ್ಟಿಲು ಹತ್ತುವುದೂ ಸೇರಿದಂತೆ ನಮ್ಮ ಮುಂದೆ ಹಲವು ಆಯ್ಕೆಗಳಿವೆ.
ಚಿತ್ರಗಳು: ಬನೇಶ ಕುಲಕರ್ಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT