ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಿರ ಮಹಿಳೆಯರಿಗೆ ಉದ್ಯೋಗ

ಕೊಚ್ಚಿ ಮೆಟ್ರೊ ಮೊದಲ ಹಂತ ಪೂರ್ಣ; ಪ್ರಧಾನಿಯಿಂದ ಲೋಕಾರ್ಪಣೆ
Last Updated 17 ಜೂನ್ 2017, 19:30 IST
ಅಕ್ಷರ ಗಾತ್ರ

ತಿರುವನಂತಪುರ: ಹೆಚ್ಚಿನ ಸಂಖ್ಯೆಯ ಮಹಿಳೆಯರಿಗೆ ಮತ್ತು ತೃತೀಯ ಲಿಂಗಿಗಳಿಗೆ ಉದ್ಯೋಗ ನೀಡಿರುವ ಕೊಚ್ಚಿ ಮೆಟ್ರೊ ನಿಗಮವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಶಂಸಿದರು.

ಪಲರವಿವಟ್ಟಂ ನಿಲ್ದಾಣದಿಂದ ಅಲವು ನಿಲ್ದಾಣದವರೆಗೆ ಮೆಟ್ರೊ ರೈಲಿನಲ್ಲಿ ಪ್ರಯಾಣ ಮಾಡಿ ಕೊಚ್ಚಿ ಮೆಟ್ರೊ ಯೋಜನೆಯ ಮೊದಲ ಹಂತವನ್ನು ದೇಶಕ್ಕೆ ಅರ್ಪಿಸಿ ಮಾತನಾಡಿದ ಅವರು,  ‘23 ತೃತೀಯ ಲಿಂಗಿಗಳೂ ಸೇರಿದಂತೆ ಒಂದು ಸಾವಿರ ಮಹಿಳೆಯರಿಗೆ ಉದ್ಯೋಗ ನೀಡಿರುವುದು ಉತ್ತಮ ಕೆಲಸ ಎಂದರು.

ಜನ ಕೇಂದ್ರೀಕೃತ ಯೋಜನೆಗಳನ್ನು ರೂಪಿಸುವ ಮೂಲಕ ನಗರ ಭಾವೃದ್ಧಿ ಯಲ್ಲಿ ಅಮೂಲಾಗ್ರ ಬದಲಾವಣೆ ತರಬೇಕು ಎಂದು ಸಲಹೆ ಮಾಡಿದರು.
ದೇಶದ ಮೂಲ ಸೌಕರ್ಯ ಅಭಿವೃದ್ಧಿಗೆ ತಮ್ಮ ಸರ್ಕಾರ ಆದ್ಯತೆ ನೀಡಿದೆ, ಪ್ರಗತಿ ಸಭೆಯಲ್ಲಿ ಸುಮಾರು ಎಂಟು ಲಕ್ಷ ಕೋಟಿ ರೂಪಾಯಿಗಳ 175 ಯೋಜನೆಗಳನ್ನು ವೈಯಕ್ತಿಕವಾಗಿ ಪರಾಮರ್ಶಿಸಿ ಅಡೆತಡೆಗಳನ್ನು ನಿವಾರಣೆ ಮಾಡಿದ್ದೇನೆ ಎಂದು ಪ್ರಧಾನಿ ತಿಳಿಸಿದರು.

ಸಕ್ರಿಯ ಆಡಳಿತ ಮತ್ತು ಸಕಾಲದಲ್ಲಿ ಯೋಜನೆಗಳ ಅನುಷ್ಠಾನ ಉದ್ದೇಶದ ‘ಪ್ರಗತಿ’ ಸಭೆಯ ಮೂಲಕ ಪ್ರತಿಯೊಂದು ಯೋಜನೆಯ ಪ್ರಗತಿಯನ್ನು ನಿಯ ಮಿತವಾಗಿ ಪರಿಶೀಲಿಸಲಾಗುತ್ತದೆ ಎಂದು ಹೇಳಿದರು.

ಮುಂದಿನ ಪೀಳಿಗೆ ಅಗತ್ಯವಾದ ಮೂಲಸೌಕರ್ಯ, ಸಾರಿಗೆ ಮತ್ತು ಡಿಜಿಟಲ್ ವ್ಯವಸ್ಥೆ ಜಾರಿಯ ಬಗ್ಗೆ ನಮ್ಮ ಸರ್ಕಾರ ಗಮನ ಹರಿಸಿದೆ ಎಂದು ತಿಳಿಸಿದರು.
ಮಲೆಯಾಳಿಯಲ್ಲಿ ಭಾಷಣ ಆರಂಭಿಸಿದ ಪ್ರಧಾನಿ, ಈ ಕಾರ್ಯಕ್ರಮದಲ್ಲಿ  ಭಾಗಿಯಾಗಿರುವುದಕ್ಕೆ ಸಂತೋಷವಾಗಿದೆ ಎಂದರು.

ದೇಶದ 50 ನಗರಗಳು ಮೆಟ್ರೊ ಯೋಜನೆ ಜಾರಿಗೆ ಸಜ್ಞಾಗಿದ್ದು, ನಗರ ಸಾರಿಗೆ ಯೋಜನೆಯ ಮೂಲ ಸೌಕರ್ಯದಲ್ಲಿ ಬಂಡವಾಳ ಹೂಡಲು ವಿದೇಶಿ ಕಂಪೆನಿಗಳಿಗೆ ಆಹ್ವಾನ ನೀಡಲಾಗಿದೆ ಎಂದರು.

2016ರಲ್ಲಿ ಕೊಚ್ಚಿ ನಗರವನ್ನು ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ಈ ನಗರ ಇನ್ನಷ್ಟು ಅಭಿವೃದ್ಧಿ ಹೊಂದುತ್ತದೆ ಎಂಬ ಭರವಸೆ ತಮಗಿದೆ ಎಂದು ಮೋದಿ ತಿಳಿಸಿದರು.

ಅರಬ್ಬಿ ಸಮುದ್ರದ ರಾಣಿ ಆಗಿರುವ ಕೊಚ್ಚಿ ನಗರವು ಒಂದು ಕಾಲದಲ್ಲಿ ಸಂಬಾರ ಪದಾರ್ಥಗಳ ಪ್ರಮುಖ ವ್ಯಾಪಾರ ತಾಣವಾಗಿತ್ತು. ಇವತ್ತು ಈ ನಗರವು ಕೇರಳದ ವಾಣಿಜ್ಯ ರಾಜಧಾನಿ ಆಗಿದೆ ಎಂದು ಹೇಳಿದರು.

ಕೊಚ್ಚಿ ಮೆಟ್ರೊ ರೈಲು ಯೋಜನೆಯು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಮ ಪಾಲಿನ ಜಂಟಿ ಯೋಜನೆಯಾಗಿದ್ದು, ಕೇಂದ್ರ ಸರ್ಕಾರ ಇದುವರೆಗೆ ಈ ಯೋಜನೆಗೆ ಎರಡು ಸಾವಿರ ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ ಎಂದು ಹೇಳಿದರು.

‘ಮೇಕ್‌ ಇನ್ ಇಂಟಿಯಾ’ ಯೋಜನೆಯಡಿ ಚೆನ್ನೈ ಬಳಿ ಅಲ್‌ಸ್ಟೊಮ್ ಕಂಪೆನಿಯು ಕೊಚ್ಚಿ ಮೆಟ್ರೊ ರೈಲಿನ ಬೋಗಿಗಳನ್ನು ನಿರ್ಮಿಸಿವೆ ಎಂದು ಪ್ರಧಾನಿ ತಿಳಿಸಿದರು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು 2012ರಲ್ಲಿ  ಮೆಟ್ರೊ ಯೋಜನೆಗೆ ಶಿಲಾನ್ಯಾಸ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT