ಉತ್ತರ ಕನ್ನಡದಲ್ಲಿ ಮುಂಗಾರಿನ ಆರ್ಭಟ

7
ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿತ; ಅಪಾಯದಿಂದ ಪ್ರಯಾಣಿಕರು ಪಾರು

ಉತ್ತರ ಕನ್ನಡದಲ್ಲಿ ಮುಂಗಾರಿನ ಆರ್ಭಟ

Published:
Updated:
ಉತ್ತರ ಕನ್ನಡದಲ್ಲಿ ಮುಂಗಾರಿನ ಆರ್ಭಟ

ಹುಬ್ಬಳ್ಳಿ: ಉತ್ತರಕನ್ನಡ, ಗದಗ, ಬಾಗಲಕೋಟೆ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಶನಿವಾರ ಉತ್ತಮ ಮಳೆಯಾಗಿದೆ.

ಕಾರವಾರ, ಭಟ್ಕಳ, ಕುಮಟಾದಲ್ಲಿ ಬಿಟ್ಟು ಬಿಟ್ಟು ಮಳೆಯಾಗಿದೆ. ಅಂಕೋಲಾ, ಮುಂಡಗೋಡ, ಹಳಿಯಾಳ, ಸಿದ್ದಾಪುರದಲ್ಲಿ ಸಾಧಾರಣ ಮಳೆ ಸುರಿದಿದೆ.  ಶನಿವಾರ ಬೆಳಿಗ್ಗೆ ಕುಮಟಾ ತಾಲ್ಲೂಕಿನ ಬರ್ಗಿ ಗ್ರಾಮ ಸಮೀಪದ ರಾಷ್ಟ್ರೀಯ ಹೆದ್ದಾರಿ–66 ಅಂಚಿನ ಗುಡ್ಡ ಕುಸಿದಿದ್ದು, ಯಾವುದೇ ಹಾನಿ ಸಂಭವಿಸಿಲ್ಲ.

ಈ ಭಾಗದಲ್ಲಿ ಚತುಷ್ಪಥ ಕಾಮಗಾರಿ ನಿರ್ವಹಿಸುತ್ತಿರುವ ಐಆರ್‌ಬಿ ಕಂಪೆನಿಯ ಸಿಬ್ಬಂದಿ ತೆರವು ಕಾರ್ಯ ನಡೆಸಿದರು. ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಕಾರೊಂದರ ಮೇಲೆ ಕಾರವಾರ ತಾಲ್ಲೂಕಿನ ಸದಾಶಿವಗಡ ಗುಡ್ಡದ ತುದಿಯಿಂದ ಕಲ್ಲೊಂದು ಬಿದ್ದಿದ್ದರಿಂದ ಕಾರಿನ ಮೇಲ್ಭಾಗ ಜಖಂಗೊಂಡಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು ಅಪಾಯದಿಂದ ಪಾರಾಗಿದ್ದಾರೆ.

ಗದುಗಿನಲ್ಲಿ ಮಧ್ಯಾಹ್ನ ಒಂದೂವರೆ ತಾಸು ಧಾರಾಕಾರ ಮಳೆಯಾಗಿದೆ.  ಹಲವಾರು ಮನೆಗಳಿಗೆ ನೀರು ನುಗ್ಗಿದ್ದು, ವಡ್ಡರಗೇರಿಯಲ್ಲಿ ಮೂರು ಮಣ್ಣಿನ ಮನೆಗಳ ಗೋಡೆ ಕುಸಿದು ಹಾನಿಯಾಗಿದೆ. 

ಬಾಗಲಕೋಟೆ ಜಿಲ್ಲೆಯ ಇಳಕಲ್‌, ಅಮೀನಗಡ, ಸಾವಳಗಿ ಹಾಗೂ ಹುನಗುಂದಲ್ಲಿ ಬಿರುಸಿನ ಮಳೆಯಾಗಿದೆ. ಸಾವಳಗಿಯಲ್ಲಿ ಎರಡು ಮನೆಗಳಿಗೆ ಹಾನಿಯಾಗಿದೆ. ಬಾಗಲಕೋಟೆ ನಗರ ಹಾಗೂ ಬಾದಾಮಿಯಲ್ಲಿ ಸಾಧಾರಣ ಮಳೆಯಾಗಿದೆ.

ಬಳ್ಳಾರಿ ಜಿಲ್ಲೆಯ ಬಳ್ಳಾರಿ, ಕೂಡ್ಲಿಗಿ, ಹಾಗೂ ಹೂವಿನಹಡಗಲಿಯಲ್ಲಿ ಉತ್ತಮ ಮಳೆಯಾಗಿದ್ದು, ಹೊಸಪೇಟೆಯಲ್ಲಿ ಎರಡು ತಾಸು ರಭಸದ ಮಳೆಯಾಗಿದೆ.

ಜೋರು ಮಳೆ (ಮಡಿಕೇರಿ): ನಗರದಲ್ಲಿ ಶನಿವಾರ ಮಧ್ಯಾಹ್ನ ಒಂದು ಗಂಟೆ ಧಾರಾಕಾರ ಮಳೆ ಸುರಿಯಿತು. ಭಾಗಮಂಡಲ, ತಲಕಾವೇರಿ, ನಾಪೋಕ್ಲು, ಬ್ರಹ್ಮಗಿರಿ ವ್ಯಾಪ್ತಿಯಲ್ಲಿ ತುಂತುರು ಮಳೆ ಮುಂದುವರಿದಿದೆ.

***

ಅಂಕೋಲಾ,  ಶಿರಾಲಿಯಲ್ಲಿ ಹೆಚ್ಚು ಮಳೆ

ಬೆಂಗಳೂರು:
ಶನಿವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ರಾಜ್ಯದ ಕರಾವಳಿಯಲ್ಲಿ ಹೆಚ್ಚಿನ ಮಳೆಯಾಗಿದ್ದು, ದಕ್ಷಿಣ ಮತ್ತು ಉತ್ತರ ಒಳನಾಡಿನ ಕೆಲವು ಪ್ರದೇಶಗಳಲ್ಲಿ  ಮಳೆಯಾಗಿದೆ.

ಶಿರಾಲಿ, ಅಂಕೋಲಾದಲ್ಲಿ ತಲಾ 6 ಸೆಂ.ಮೀ., ಕೋಟ, ಗೇರುಸೊಪ್ಪ, ಕುಮಟಾದಲ್ಲಿ ತಲಾ 5, ಮೂಡುಬಿದಿರೆ, ಬಂಟ್ವಾಳ, ಬೆಳ್ತಂಗಡಿ, ಮಂಕಿ, ಕಾರವಾರ, ಭೀಮರಾಯನಗುಡಿ, ಆಗುಂಬೆಯಲ್ಲಿ ತಲಾ 4, ಧರ್ಮಸ್ಥಳ, ಪುತ್ತೂರು, ಸಿದ್ದಾಪುರ, ಹೊನ್ನಾವರ, ಯಲ್ಲಾಪುರ, ಕೊಟ್ಟಿಗೆ

ಹಾರದಲ್ಲಿ ತಲಾ 3ಸೆಂ.ಮೀ. ಮಳೆಯಾಗಿದೆ.

ಹವಾಮಾನ ಮುನ್ಸೂಚನೆ: ಮುಂದಿನ 48 ಗಂಟೆಗಳಲ್ಲಿ ರಾಜ್ಯದ ಬಹುತೇಕ ಪ್ರದೇಶಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry