ವಾಹನ ಕಂಪೆನಿಗಳಿಂದ ರಿಯಾಯ್ತಿ ಕೊಡುಗೆ

7
ಜಿಎಸ್‌ಟಿ ಜಾರಿಗೂ ಮುನ್ನ ಕ್ಲಿಯರೆನ್ಸ್‌ ಸೇಲ್‌ ಧಾವಂತ, ಗ್ರಾಹಕರನ್ನು ಸೆಳೆಯಲು ಮಾರುಕಟ್ಟೆ ತಂತ್ರ

ವಾಹನ ಕಂಪೆನಿಗಳಿಂದ ರಿಯಾಯ್ತಿ ಕೊಡುಗೆ

Published:
Updated:
ವಾಹನ ಕಂಪೆನಿಗಳಿಂದ ರಿಯಾಯ್ತಿ ಕೊಡುಗೆ

ಬೆಂಗಳೂರು: ಜುಲೈ1 ರಿಂದ ಜಿಎಸ್‌ಟಿ ಜಾರಿಗೆ ಬರಲಿರುವುದರಿಂದ ವಾಹನಗಳ ಬೆಲೆ ಅಗ್ಗವಾಗಲಿದೆ. ಹೀಗಾಗಿ ಗ್ರಾಹಕರು ಸದ್ಯಕ್ಕೆ ವಾಹನ ಖರೀದಿ ಅಥವಾ ಬುಕಿಂಗ್‌ ನಡೆಸುತ್ತಿಲ್ಲ. ಇದು ದೇಶಿ  ಬೈಕ್‌ ಮತ್ತು ಕಾರ್‌ ತಯಾರಿಕೆ ಉದ್ಯಮದ ನಿದ್ದೆಗೆಡಿಸಿದೆ.ಮುಂಗಡ ಬುಕಿಂಗ್‌ ಕಾಯ್ದುಕೊಳ್ಳಲು ಮತ್ತು ತಮ್ಮಲ್ಲಿ ಸಂಗ್ರಹವಿರುವ ವಾಹನಗಳನ್ನು ಮಾರಾಟ ಮಾಡಲು (ಕ್ಲಿಯರೆನ್ಸ್‌ ಸೇಲ್‌) ಕಂಪೆನಿಗಳು  ಗ್ರಾಹಕರಿಗೆ ಆಕರ್ಷಕ ರಿಯಾಯ್ತಿಗಳನ್ನು ಒಳಗೊಂಡ ಭಾರಿ ಕೊಡುಗೆಗಳನ್ನು ಘೋಷಿಸಿವೆ.ವಾಹನ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಮಾರುತಿ ಸುಜುಕಿ, ಹುಂಡೈ, ಹೋಂಡಾ, ನಿಸಾನ್‌, ಫೋರ್ಡ್‌ ಇಂಡಿಯಾ, ಮಹೀಂದ್ರಾ ಆ್ಯಂಡ್ ಮಹೀಂದ್ರಾ ಬಿಎಂಡಬ್ಲ್ಯು, ಮರ್ಸಿಡಿಸ್ ಬೆಂಜ್‌, ಜಾಗ್ವರ್‌ಲ್ಯಾಂಡ್‌ ರೋವರ್ ಮತ್ತು ಬಜಾಜ್‌ ಮೋಟಾರ್‌ ಸೈಕಲ್ಸ್‌ ಕಂಪೆನಿಗಳು ಜೂನ್‌ 30ರವರೆಗೆ ಆಯ್ದ ಮಾದರಿಗಳ ಮೇಲೆ ನಗದು ರಿಯಾಯ್ತಿ ಸೇರಿದಂತೆ ಅನೇಕ ಕೊಡುಗೆಗಳನ್ನು ನೀಡಲಾರಂಭಿಸಿವೆ.ಮುಖ್ಯವಾಗಿ ಸಣ್ಣ ಗಾತ್ರದ ಅಂದರೆ ₹2.5 ಲಕ್ಷದವರೆಗಿನ ಬೆಲೆಯ ವಾಹನಗಳಿಗೆ ಆಕರ್ಷಕ ರಿಯಾಯ್ತಿ ಪ್ರಕಟಿಸಿವೆ.‘ಕೊಡುಗೆ ಅವಧಿಯಲ್ಲಿ ರುವ ಎಕ್ಸ್‌ಷೋರೂಂ ಬೆಲೆ, ಜಿಎಸ್‌ಟಿ ಜಾರಿಯಾದ ನಂತರದ ಎಕ್ಸ್‌ ಷೋರೂಂ ಬೆಲೆಗಿಂತ ಹೆಚ್ಚಿದ್ದರೆ, ಹೆಚ್ಚುವರಿ ಮೊತ್ತವನ್ನು ಗ್ರಾಹಕರಿಗೆ ಹಿಂದಿರುಗಿಸಲಾಗುವುದು’ ಎಂದು ಹೋಂಡಾ ಕಾರ್ಸ್‌ ಇಂಡಿಯಾ ಕಂಪೆನಿ ಹೇಳಿಕೊಂಡಿದೆ.ಜಿಎಸ್‌ಟಿ ಬಂದ ನಂತರ ಸಿಗುವ ಲಾಭದಲ್ಲಿ ವ್ಯತ್ಯಾಸ ಆಗಲಿದೆ ಎನ್ನುವ ಕಾರಣಕ್ಕಾಗಿ ಕಂಪೆನಿಗಳು ತಮ್ಮಲ್ಲಿ ಸಂಗ್ರಹ ಇರುವ ವಾಹನಗಳಲ್ಲಿ ಆದಷ್ಟನ್ನು ಮಾರಾಟ ಮಾಡಲು ಈ ಕ್ರಮ ಕೈಗೊಂಡಿವೆ ಎಂದು ತಜ್ಞರು ಹೇಳಿದ್ದಾರೆ.ಮುಂಚೂಣಿಯಲ್ಲಿ ಬಜಾಜ್‌: ಮೋಟಾರ್‌ಸೈಕಲ್ಸ್‌ ವಿಭಾಗದಲ್ಲಿ ಬಜಾಜ್‌ ಆಟೊ ಕಂಪೆನಿ ಗ್ರಾಹಕರಿಗೆ ರಿಯಾಯಿತಿ ಕೊಡುಗೆ ನೀಡಿದೆ. ಜಿಎಸ್‌ಟಿ ಜಾರಿಯಾದ ನಂತರ ಅನ್ವಯವಾಗುವ ದರವನ್ನು ಈಗಲೇ ನೀಡುತ್ತಿದ್ದೇವೆ. ಗ್ರಾಹಕರು ಖರೀದಿಸುವ ವಾಹನ ಮತ್ತು ಕರ್ನಾಟಕದ ಮಾರುಕಟ್ಟೆ ಆಧರಿಸಿ ₹3,600ರವರೆಗೂ ಉಳಿತಾಯ ಮಾಡಬಹುದು ಎಂದು ಕಂಪೆನಿ ತಿಳಿಸಿದೆ.‘ಜಿಎಸ್‌ಟಿ ಜಾರಿಗೆ ಮುನ್ನವೇ ನಮ್ಮ ಗ್ರಾಹಕರಿಗೆ ಉಳಿತಾಯ ಮಾಡಿಕೊಡುವ ಉದ್ದೇಶದಿಂದ ಈ ಯೋಜನೆ ಪ್ರಕಟಿಸಿದ್ದೇವೆ. ಇಂತಹ ಯೋಜನೆ ಪ್ರಕಟಿಸಿದ ದೇಶದ ಮೊದಲ ಮತ್ತು ಏಕೈಕ ಮೋಟಾರ್‌ಸೈಕಲ್ ಕಂಪೆನಿ ಎಂದು ಹೇಳಿಕೊಳ್ಳುವುದಕ್ಕೆ ಹೆಮ್ಮೆ ಎನಿಸುತ್ತದೆ’ ಎಂದು ಬಜಾಜ್ ಆಟೊ ಕಂಪೆನಿಯ ಮೋಟರ್‌ ಸೈಕಲ್ ವ್ಯಾಪಾರ ವಿಭಾಗದ ಅಧ್ಯಕ್ಷ ಎರಿಕ್ ವಾಸ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.ಜಿಎಸ್‌ಟಿಯಲ್ಲೇ ವಾಹನ ಅಗ್ಗ

ಹೊಸ ತೆರಿಗೆ ವ್ಯವಸ್ಥೆಯಲ್ಲಿ ವಾಹನಗಳ ಮೇಲಿನ ತೆರಿಗೆ ದರ ಕಡಿಮೆ ಆಗಲಿದೆ. ಇದರಿಂದ ಬೆಲೆಯಲ್ಲಿಯೂ ಇಳಿಕೆಯಾಗಲಿದೆ ಎಂದು ಜಾಗತಿಕ  ಸಂಶೋಧನಾ ಸಂಸ್ಥೆ ಕ್ರಿಸಿಲ್‌ ವರದಿ ನೀಡಿದೆ. ಸದ್ಯ ಇರುವ ತೆರಿಗೆ ದರಕ್ಕೆ ಹೋಲಿಸಿದರೆ ಜಿಎಸ್‌ಟಿಯಲ್ಲಿ ಸಣ್ಣ ಕಾರುಗಳಿಂದ ಎಸ್‌ಯುವಿವರೆಗಿನ ವಾಹನಗಳ ತೆರಿಗೆ ಶೇ 1.2 ರಿಂದ ಶೇ 12.3ರ ವರೆಗೆ ಇಳಿಕೆಯಾಗಲಿದೆ ಎಂದು ಹೇಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry