ಉಗ್ರಪ್ಪ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪತ್ರ

7
ಸಭಾಪತಿ ಪದಚ್ಯುತಿಗೆ ವಿಫಲ ತಂತ್ರ l ಪಕ್ಷದ ಆಂತರಿಕ ಸಭೆಯಲ್ಲಿ ಚರ್ಚೆ– ಪರಮೇಶ್ವರ್‌

ಉಗ್ರಪ್ಪ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪತ್ರ

Published:
Updated:
ಉಗ್ರಪ್ಪ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪತ್ರ

ಬೆಂಗಳೂರು: ವಿಧಾನ ಪರಿಷತ್‌ ಸಭಾಪತಿ ಡಿ.ಎಚ್‌. ಶಂಕರಮೂರ್ತಿ ವಿರುದ್ಧ  ಅವಿಶ್ವಾಸ ನಿರ್ಣಯದ ಗೆಲುವಿಗೆ ಸರಿಯಾದ ಕಾರ್ಯತಂತ್ರ ರೂಪಿಸಲು ವಿಫಲರಾದ ವಿ.ಎಸ್‌. ಉಗ್ರಪ್ಪ ಸೇರಿದಂತೆ ಏಳು ಸದಸ್ಯರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್‌ ಅವರಿಗೆ  ಕಾಂಗ್ರೆಸ್‌ನ 12 ಶಾಸಕರು ಪತ್ರ ಬರೆದಿದ್ದಾರೆ.

ಶಂಕರಮೂರ್ತಿ ಅವರನ್ನು ಪದಚ್ಯುತಿಗೊಳಿಸುವ ತಂತ್ರ ರೂಪಿಸುವ ವಿಷಯದಲ್ಲಿ ಪಕ್ಷ ಮತ್ತು ರಾಜ್ಯ ಸರ್ಕಾರಕ್ಕೆ ತೀವ್ರ ಮುಖಭಂಗ ಆಗಿದೆ. ಈ ಹಿನ್ನಡೆಯನ್ನು ಪಕ್ಷ ಗಂಭೀರವಾಗಿ ಪರಿಗಣಿಸಬೇಕು ಎಂದು ಶಾಸಕರಾದ ಕೆ.ಎನ್‌. ರಾಜಣ್ಣ, ಎಸ್‌.ಟಿ. ಸೋಮಶೇಖರ್‌, ಮುನಿರತ್ನ, ಶಿವಮೂರ್ತಿ ನಾಯ್ಕ ಸೇರಿ 12 ಶಾಸಕರು ಕೋರಿದ್ದಾರೆ.

ಸೂಕ್ತ ರೀತಿಯಲ್ಲಿ ಸಮಾಲೋಚನೆ ನಡೆಸಿ, ಕಾರ್ಯತಂತ್ರ ಅಂತಿಮಗೊಳಿಸದೆ ಶಂಕರಮೂರ್ತಿ ಪದಚ್ಯುತಿಗೆ ಅವಿಶ್ವಾಸ ನಿರ್ಣಯ ಮಂಡಿಸಿದ್ದಾರೆ ಎಂದೂ ಈ ಪತ್ರದಲ್ಲಿ ಶಾಸಕರು ಆರೋಪಿಸಿದ್ದಾರೆ.

ಈ ಕುರಿತು ಮಾಧ್ಯಮ ಪ್ರತಿನಿಧಿಗಳ ಜೊತೆ ಶನಿವಾರ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್‌, ‘ಸಭಾಪತಿ ವಿರುದ್ಧ ಮಂಡಿಸಿದ ಅವಿಶ್ವಾಸ ನಿರ್ಣಯದಲ್ಲಿ ಪಕ್ಷಕ್ಕೆ ಉಂಟಾದ ಸೋಲು ಮತ್ತು ಉಗ್ರಪ್ಪ ವಿರುದ್ಧ ಶಾಸಕರು ನೀಡಿದ ದೂರಿನ ಕುರಿತು ಆಂತರಿಕವಾಗಿ ಚರ್ಚೆ ನಡೆಸುತ್ತೇವೆ.  ಮುಖ್ಯಮಂತ್ರಿ ಜೊತೆಯೂ ಈ ಕುರಿತು ಮಾತನಾಡುತ್ತೇನೆ. ಸದ್ಯ ಏನೂ ಮಾಡಲು ಸಾಧ್ಯ ಇಲ್ಲ’ ಎಂದರು.

‘ಪಕ್ಷಕ್ಕೆ ಹಿನ್ನಡೆ ಆಗಿರುವುದು ನಿಜ. ಈ ಬಗ್ಗೆ ಶಾಸಕರು ಅಸಮಾಧಾನ ಹೇಳಿಕೊಂಡಿದ್ದಾರೆ. ಶಾಸಕರ ಭಾವನೆಗಳನ್ನು ಅರ್ಥ ಮಾಡಿಕೊಂಡು ಮುಂದೆ ಹೀಗಾಗದಂತೆ ನೋಡಿಕೊಳ್ಳುವ ಬಗ್ಗೆಯೂ ಚರ್ಚೆ ನಡೆಸುತ್ತೇವೆ’ ಎಂದರು.

‘ಬಿಜೆಪಿ ಜೊತೆ ಜೆಡಿಎಸ್ ಕೈಜೋಡಿಸಿದ್ದು ನಮಗೆ ಸೋಲು ಉಂಟಾಗಲು ಕಾರಣ. ಆದರೆ, ಹೀಗಾಗುತ್ತದೆ ಎಂದು ಅಂದುಕೊಂಡಿರಲಿಲ್ಲ. ನಾನು ದೇವೇಗೌಡರ ಜೊತೆ ಚರ್ಚಿಸಿದಾಗ, ಅವರು ಬೆಂಬಲಿಸುವ ಭರವಸೆ ನೀಡಿದ್ದರು’ ಎಂದೂ ಪರಮೇಶ್ವರ್ ಹೇಳಿದರು.

ಸಾಂಸ್ಥಿಕ ಚುನಾವಣೆ ಮುಂದೂಡಿಕೆ: 2018ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆ ಬಳಿಕ ಪಕ್ಷದ ಸಾಂಸ್ಥಿಕ ಚುನಾವಣೆ ನಡೆಸಲು ಕಾಂಗ್ರೆಸ್‌ ಪಕ್ಷ ನಿರ್ಧರಿಸಿದೆ.

‘ಸಾಂಸ್ಥಿಕ ಚುನಾವಣೆ ನಡೆಸುವ ಕುರಿತು ಹೈಕಮಾಂಡ್ ನಿರ್ಧರಿಸಿತ್ತು. ಆದರೆ, ಮುಂದೆ ಸಾರ್ವತ್ರಿಕ ಚುನಾವಣೆ ಇರುವುದರಿಂದ ಸಾಂಸ್ಥಿಕ ಚುನಾವಣೆ ಮುಂದೂಡುವಂತೆ ಹೈಕಮಾಂಡ್‌ಗೆ ಮನವಿ ಮಾಡಿದ್ದೆವು’ ಎಂದು ಪರಮೇಶ್ವರ್‌ ಹೇಳಿದರು.

‘ಚುನಾವಣೆ ಉಸ್ತುವಾರಿ ಓ. ಪಲ್ಲಂ ರಾಜು, ಪನಬಾಕಂ ಲಕ್ಷ್ಮಿ ನನ್ನನ್ನು ಶನಿವಾರ ಭೇಟಿಯಾಗಿ ಈ ಕುರಿತು ಮಾತನಾಡಿದ್ದಾರೆ. ಪಕ್ಷ ಸಂಘಟನೆ ಮತ್ತು ವಿಧಾನಸಭೆ ಚುನಾವಣೆ ವಿಚಾರವಾಗಿಯೂ ಚರ್ಚೆ ನಡೆಸಿದ್ದೇವೆ’ ಎಂದೂ ಅವರು ತಿಳಿಸಿದರು.

ವೇಣುಗೋಪಾಲ್‌ 29ರಂದು ರಾಜ್ಯಕ್ಕೆ: ಇದೇ 29ರಂದು  ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಅವರು ನಗರಕ್ಕೆ ಬರಲಿದ್ದಾರೆ. ಅಂದು ಕೂಡಲಸಂಗಮದಲ್ಲಿ ನಡೆಯಲಿರುವ ಪಕ್ಷದ ಕಾರ್ಯಕ್ರಮದಲ್ಲಿ ಎಸ್‌.ಆರ್‌. ಪಾಟೀಲ ಅವರು ಕಾರ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry