ಭಾರತ–ಪಾಕಿಸ್ತಾನ ಫೈನಲ್‌ ಪೈಪೋಟಿಗೆ ವೇದಿಕೆ ಸಜ್ಜು

7
ಬ್ಯಾಟಿಂಗ್‌ನಲ್ಲಿ ಭಾರತ ಬಲಿಷ್ಠ; ಬೌಲಿಂಗ್‌ನಲ್ಲಿ ಉಭಯ ತಂಡಗಳಲ್ಲಿ ಸಮಬಲ

ಭಾರತ–ಪಾಕಿಸ್ತಾನ ಫೈನಲ್‌ ಪೈಪೋಟಿಗೆ ವೇದಿಕೆ ಸಜ್ಜು

Published:
Updated:
ಭಾರತ–ಪಾಕಿಸ್ತಾನ ಫೈನಲ್‌ ಪೈಪೋಟಿಗೆ ವೇದಿಕೆ ಸಜ್ಜು

ಲಂಡನ್‌: ರೋಮಾಂಚಕ ಹಣಾಹಣಿಗೆ ವೇದಿಕೆ ಸಜ್ಜುಗೊಂಡಿದೆ. ಕ್ರಿಕೆಟ್‌ ಅಭಿಮಾನಿಗಳ ನಿರೀಕ್ಷೆ ಗರಿಗೆದರಿದೆ. ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್ ಟೂರ್ನಿಯ ಭಾರತ–ಪಾಕಿಸ್ತಾನ ನಡುವಿನ ಫೈನಲ್ ಪಂದ್ಯ ಭಾನುವಾರ ಇಲ್ಲಿನ ಕೆನಿಂಗ್ಟನ್ ಓವಲ್‌ನಲ್ಲಿ ನಡೆಯಲಿದೆ.ಎಲ್ಲ ವಿಭಾಗಗಳಲ್ಲೂ ಬಲಿಷ್ಠವಾಗಿರುವ ಉಭಯ ತಂಡಗಳ ಹಣಾಹಣಿಯ ಫಲಿತಾಂಶಕ್ಕಾಗಿ ಕ್ರಿಕೆಟ್‌ ಜಗತ್ತು ಕಾತರಗೊಂಡಿದೆ. ಹಾಲಿ ಚಾಂಪಿಯನ್ ಭಾರತ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಶ್ರಮಿಸಿದರೆ, ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಮೊದಲ ಬಾರಿ ಪ್ರಶಸ್ತಿ ಸುತ್ತು ಪ್ರವೇಶಿಸಿರುವ ಪಾಕಿಸ್ತಾನ ಚೊಚ್ಚಲ ಅವಕಾಶವನ್ನು ಸ್ಮರಣೀಯವಾಗಿಸಲು ಪ್ರಯತ್ನಿಸಲಿದೆ.ಪ್ರಮುಖ ಟೂರ್ನಿಗಳಲ್ಲಿ ಸಾಂಪ್ರದಾಯಿಕ ಎದುರಾಳಿಗಳಿಗೆ ಜಯ ಬಿಟ್ಟುಕೊಡದ ಭಾರತಕ್ಕೆ ಇದು ಪ್ರತಿಷ್ಠೆಯ ಪಂದ್ಯ. ಪರಿಸ್ಥಿತಿಗೆ ಒಗ್ಗಿಕೊಂಡು ಆಡುವ ಸಾಮರ್ಥ್ಯ ಹೊಂದಿರುವ ಪಾಕಿಸ್ತಾನಕ್ಕೆ ಈ ಪಂದ್ಯ ಭಾರತದ ವಿರುದ್ಧ ಸೇಡು ತೀರಿಸಿಕೊಳ್ಳುವ ಅವಕಾಶ. ಟೂರ್ನಿಯಲ್ಲಿ ಇಲ್ಲಿಯ ವರೆಗೆ ಭಾರತ ಉತ್ತಮ ಸಾಧನೆ ಮಾಡಿದೆ. ಹೀಗಾಗಿ ವಿರಾಟ್ ಕೊಹ್ಲಿ ಪಡೆ ಭರವಸೆಯಲ್ಲೇ ಭಾನುವಾರ ಅಂಗಳಕ್ಕೆ ಇಳಿಯಲಿದೆ.‘ಪಾಕ್‌ ವಿರುದ್ಧದ ಪಂದ್ಯಕ್ಕಾಗಿ ವಿಶೇಷ ತಯಾರಿಯನ್ನೇನೂ ಮಾಡಿಕೊಂಡಿಲ್ಲ’ ಎಂದು ಹೇಳುವ ಮೂಲಕ ಕೊಹ್ಲಿ ಭಾರತ ತಂಡದ ನಿಲುವನ್ನು ಸೂಚ್ಯವಾಗಿ ಬಹಿರಂಗ ಮಾಡಿದ್ದಾರೆ. ತಂಡದ ಬಲಾಬಲವನ್ನು ವಿಶ್ಲೇಷಿಸಿದರೆ ಪಾಕಿಸ್ತಾನಕ್ಕಿಂತ ಭಾರತ ಒಂದು ಹೆಜ್ಜೆ ಮುಂದೆಯೇ ಇದೆ. ಆದರೆ ಸರ್ಫರಾಜ್ ಅಹಮ್ಮದ್ ಬಳಗವನ್ನು ಲಘುವಾಗಿ ಪರಿಗಣಿಸುವಂತಿಲ್ಲ.ಶಿಖರ್ ಧವನ್‌ ಮತ್ತು ರೋಹಿತ್ ಶರ್ಮಾ ಅವರ ಆರಂಭದ ಜೊತೆಯಾಟಕ್ಕೆ ಪಾಕಿಸ್ತಾನದ ಅಜರ್ ಅಲಿ ಮತ್ತು ಫಕರ್‌ ಜಮನ್‌  ಅವರ ಆಟ ಸಾಟಿಯಾಗಲಾರದು. ಭಾರತದ ಆರಂಭಿಕ ಜೋಡಿ ಈ ಟೂರ್ನಿಯ ನಾಲ್ಕು ಪಂದ್ಯಗಳಲ್ಲಿ ಒಟ್ಟು 384 ರನ್‌ ಕಲೆ ಹಾಕಿದ್ದರೆ ಪಾಕಿಸ್ತಾನದ ಆರಂಭಿಕ ಜೋಡಿ ಗಳಿಸಿರುವುದು 332 ರನ್‌ (ಮೊದಲ ಪಂದ್ಯದಲ್ಲಿ ಅಜರ್ ಜೊತೆ ಅಹಮ್ಮದ್ ಶೆಹಜಾದ್‌ ಇನಿಂಗ್ಸ್ ಆರಂಭಿಸಿದ್ದರು). ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಇಳಿಯುವ ವಿರಾಟ್ ಕೊಹ್ಲಿಗೂ ಪಾಕಿಸ್ತಾನದ ಬಾಬರ್ ಆಜಮ್‌ಗೂ ವ್ಯತ್ಯಾಸವಿದೆ.ಪಾಕಿಸ್ತಾನ ತಂಡದಲ್ಲಿ ಅನುಭವಿಗಳು ಇದ್ದರೂ ಹೊಸಬರ ಸಂಕ್ಯೆ ಹೆಚ್ಚು ಇದೆ. ಅವರು ಫೈನಲ್‌ನ ಒತ್ತಡ ಮೆಟ್ಟಿ ನಿಲ್ಲಬೇಕಾಗಿದೆ. ಶಿಖರ್ ಧವನ್‌ ಈ ಬಾರಿ ಟೂರ್ನಿಯಲ್ಲಿ ಒಟ್ಟು 317 ರನ್‌ ಗಳಿಸಿದ್ದು ರೋಹಿತ್ ಶರ್ಮಾ ಅವರ ಒಟ್ಟು ಮೊತ್ತವೂ ತ್ರಿಶತಕ (304) ದಾಟಿದೆ. ಕೊಹ್ಲಿ 253 ರನ್‌ ಗಳಿಸಿದ್ದಾರೆ.ಮಹೇಂದ್ರ ಸಿಂಗ್ ದೋನಿ, ಕೇದಾರ್ ಜಾದವ್‌, ಹಾರ್ದಿಕ್ ಪಾಂಡ್ಯ ಮುಂತಾದವರನ್ನು ಒಳಗೊಂಡ ಮಧ್ಯಮ ಕ್ರಮಾಂಕವೂ ಬಲಿಷ್ಠವಾಗಿದೆ. ಭಾರತ ಎಲ್ಲ ಪಂದ್ಯಗಳಲ್ಲೂ ಉತ್ತಮ ಆರಂಭ ಕಂಡ ಕಾರಣ ಮಧ್ಯಮ ಕ್ರಮಾಂಕಕ್ಕೆ ಹೆಚ್ಚು ಬ್ಯಾಟಿಂಗ್ ಮಾಡಲು ಅವಕಾಶ ಸಿಗಲಿಲ್ಲ.ಬೌಲಿಂಗ್‌ನಲ್ಲಿ ಸಮಬಲ: ಬೌಲಿಂಗ್‌ನಲ್ಲಿ ಪಾಕಿಸ್ತಾನ ಬಲಿಷ್ಠವಾಗಿದೆ. ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್‌ ಕಬಳಿಸಿದ ಮಹಮ್ಮದ್ ಅಮೀರ್‌, ಹಸನ್ ಅಲಿ, ಜುನೈದ್ ಖಾನ್‌, ರುಮನ್‌ ರಯೀಸ್ ಅವರನ್ನು ಒಳಗೊಂಡ ವೇಗದ ಬೌಲರ್‌ಗಳು ಎಂಥ ಬ್ಯಾಟ್ಸ್‌ಮನ್‌ಗಳಿಗೂ ಸವಾಲೊಡ್ಡಬಲ್ಲರು.ಆದರೆ ಭಾರತವೂ ಪ್ರಬಲ ದಾಳಿ ಸಂಘಟಿಸಬಲ್ಲ ಬೌಲಿಂಗ್ ಪಡೆಯನ್ನು ಹೊಂದಿದೆ. ಶ್ರೀಲಂಕಾ ವಿರುದ್ಧದ ಪಂದ್ಯವನ್ನು ಬಿಟ್ಟರೆ ಉಳಿದ ಎಲ್ಲ ಪಂದ್ಯಗಳಲ್ಲೂ ಇದು ಸಾಬೀತಾಗಿದೆ. ಭುವನೇಶ್ವರ್ ಕುಮಾರ್‌ ಮತ್ತು ಜಸ್‌ಪ್ರೀತ್ ಬೂಮ್ರಾ ಅವರು ಅತ್ಯುತ್ತಮ ವೇಗದ ದಾಳಿ ಸಂಘಟಿಸಬಲ್ಲರು. ಅಂತಿಮ ಓವರ್‌ಗಳಲ್ಲಿ ಫುಲ್‌ ಲೆಂಗ್ತ್‌ ಮತ್ತು ಯಾರ್ಕರ್ ಲೆಂಗ್ತ್‌ ಎಸೆತಗಳನ್ನು ಹಾಕುವ ಕಲೆಯನ್ನು ಕರಗತ ಮಾಡಿಕೊಡಿರುವ ಭಾರತದ ವೇಗಿಗಳು ಯಾವುದೇ ತಂಡದ ಕೆಳ ಕ್ರಮಾಂಕಕ್ಕೆ ಪೆಟ್ಟು ನೀಡುವ ಸಾಮರ್ಥ್ಯ ಹೊಂದಿದ್ದಾರೆ.ಆಲ್‌ರೌಂಡ್ ಆಟ ಆಡಬಲ್ಲ ರವೀಂದ್ರ ಜಡೇಜ, ಪ್ರತಿಭಾವಂತರಾದ ಕೇದಾರ್ ಜಾದವ್‌ ಮತ್ತು ಹಾರ್ದಿಕ್ ಪಾಂಡ್ಯ ಮುಂತಾದವರು ಕೂಡ ಭಾರತದ ಭರವಸೆ ಎನಿಸಿದ್ದಾರೆ.ವಿಶ್ವಕಪ್‌ ಸೇರಿದಂತೆ ಐಸಿಸಿ ಟೂರ್ನಿಗಳಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಇಲ್ಲಿಯ ವರೆಗೆ ಉತ್ತಮ ದಾಖಲೆ ಹೊಂದಿದೆ. ಐಸಿಸಿ ಟೂರ್ನಿಗಳ ಒಟ್ಟು 15 ಪಂದ್ಯಗಳಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿದ್ದು 13ರಲ್ಲಿ ಭಾರತ ಜಯ ಸಾಧಿಸಿದೆ. ಇದು ವಿರಾಟ್ ಕೊಹ್ಲಿ ಬಳಗದ ಆತ್ಮವಿಶ್ವಾಸಕ್ಕೆ ಹೊಸ ಶಕ್ತಿ ತುಂಬಿದೆ.ತಂಡಗಳು ಇಂತಿವೆ

ಭಾರತ:
ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್‌, ರೋಹಿತ್ ಶರ್ಮಾ, ಯುವರಾಜ್ ಸಿಂಗ್‌, ಎಂ.ಎಸ್‌.ದೋನಿ (ವಿಕೆಟ್ ಕೀಪರ್‌), ಕೇದಾರ್ ಜಾಧವ್‌, ಹಾರ್ದಿಕ್‌ ಪಾಂಡ್ಯ, ರವಿಚಂದ್ರನ್ ಅಶ್ವಿನ್‌, ರವೀಂದ್ರ ಜಡೇಜ, ಜಸ್‌ಪ್ರೀತ್‌ ಬೂಮ್ರಾ, ಭುವನೇಶ್ವರ್‌ ಕುಮಾರ್‌, ದಿನೇಶ್‌ ಕಾರ್ತಿಕ್‌, ಮಹಮ್ಮದ್ ಶಮಿ, ಅಜಿಂಕ್ಯ ರಹಾನೆ, ಉಮೇಶ್ ಯಾದವ್‌.ಪಾಕಿಸ್ತಾನ: ಸರ್ಫರಾಜ್ ಅಹಮ್ಮದ್‌ (ನಾಯಕ), ಅಹಮ್ಮದ್‌ ಶಹಜಾದ್‌, ಅಜರ್‌ ಅಲಿ, ಬಾಬರ್ ಆಜಮ್‌, ಮಹಮ್ಮದ್ ಹಫೀಜ್‌, ಶೊಯೆಬ್‌ ಮಲಿಕ್‌, ಹಸನ್ ಅಲಿ, ಮಹಮ್ಮದ್ ಅಮೀರ್‌, ರುಮನ್‌ ರಯೀಸ್‌, ಜುನೈದ್ ಖಾನ್‌, ಐಮದ್ ವಾಸಿಮ್‌, ಫಾಹಿಮ್ ಅಶ್ರಫ್‌, ಶಾದಬ್ ಖಾನ್‌, ಫಕರ್ ಜಮನ್‌, ಹ್ಯಾರಿಸ್ ಸೊಹೈಲ್‌.ಪಂದ್ಯ ಆರಂಭ: ಸಂಜೆ 3 (ಭಾರತೀಯ ಕಾಲಮಾನ)ಪಾಕಿಸ್ತಾನಕ್ಕೆ ಸುವರ್ಣಾವಕಾಶ: ಇಮ್ರಾನ್ ಖಾನ್‌

ಕರಾಚಿ (ಪಿಟಿಐ):
ಐಸಿಸಿ ಟೂರ್ನಿಗಳಲ್ಲಿ ಅನುಭವಿಸಿದ ಸೋಲಿನ ಸರಪಳಿಯಿಂದ ಹೊರಬರಲು ಚಾಂಪಿಯನ್ಸ್ ಟ್ರೋಫಿ ಫೈನಲ್‌ ಪಂದ್ಯ ಪಾಕಿಸ್ತಾನಕ್ಕೆ ಸುವರ್ಣ ಅವಕಾಶ ಎಂದು ಪಾಕಿಸ್ತಾನ ತಂಡದ ಮಾಜಿ ನಾಯಕ ಇಮ್ರಾನ್ ಖಾನ್‌ ಹೇಳಿದರು. ಸ್ಥಳೀಯ ಟಿವಿ ಚಾನೆಲ್ ಒಂದರ ಜೊತೆ ಮಾತನಾಡಿದ ಅವರು ‘ಟೂರ್ನಿಯ ಮೊದಲ ಪಂದ್ಯದಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಸೋಲುಂಡ ವಿಧಾನ ಬೇಸರ ತರಿಸುವಂತಿತ್ತು. ಫೈನಲ್‌ನಲ್ಲಿ ಜಯ ಸಾಧಿಸಿ ಈ ನೋವನ್ನು ಮರೆಸಬೇಕು’ ಎಂದು ಆಶಿಸಿದರು.

‘ಟಾಸ್‌ ಗೆದ್ದರೆ ಭಾರತಕ್ಕೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ನೀಡಬಾರದು. ಭಾರತದ ಬ್ಯಾಟಿಂಗ್ ಬಳಗ ಬಲಿಷ್ಠವಾಗಿದೆ. ಅವರು ಬೃಹತ್‌ ಮೊತ್ತ ಕಲೆ ಹಾಕಿದರೆ ಪಾಕಿಸ್ತಾನದ ಮೇಲೆ ಒತ್ತಡ ಉಂಟಾಗಲಿದೆ’ ಎಂದು ಅವರು ನಾಯಕ ಸರ್ಫರಾಜ್ ಅಹಮ್ಮದ್‌ ಅವರಿಗೆ ಎಚ್ಚರಿಕೆ ನೀಡಿದರು.ಕ್ರಿಕೆಟ್‌, ಹಾಕಿ: ಭಾರತ–ಪಾಕ್‌ ಹಣಾಹಣಿ

ಲಂಡನ್‌ (ಪಿಟಿಐ):
ಕ್ರೀಡಾ ಪ್ರಿಯರಿಗೆ ಈ ಭಾನುವಾರ ರೋಚಕ ವಾಗಲಿದೆ. ಒಂದೆಡೆ ಭಾರತ ಮತ್ತು ಪಾಕಿಸ್ತಾನ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್‌ನಲ್ಲಿ ಮುಖಾಮುಖಿಯಾಗಲಿದ್ದು ಮತ್ತೊಂದೆಡೆ ವಿಶ್ವ ಹಾಕಿ ಲೀಗ್‌ನ ಮಹತ್ವದ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ಸೆಣಸಲಿವೆ. ಎರಡೂ ಪಂದ್ಯಗಳು ಲಂಡನ್‌ನಲ್ಲೇ ನಡೆಯಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry