‘ಶಾಲೆ ನಿರ್ವಹಣೆ ಸ್ಥಳೀಯ ಸಂಸ್ಥೆಗೆ’

7

‘ಶಾಲೆ ನಿರ್ವಹಣೆ ಸ್ಥಳೀಯ ಸಂಸ್ಥೆಗೆ’

Published:
Updated:
‘ಶಾಲೆ ನಿರ್ವಹಣೆ ಸ್ಥಳೀಯ ಸಂಸ್ಥೆಗೆ’

ಬಾಗಲಕೋಟೆ: ‘ಸರ್ಕಾರಿ ಶಾಲಾ ಕಟ್ಟಡಗಳ ದುರಸ್ತಿ ಹಾಗೂ ನಿರ್ವಹಣೆ ಜವಾಬ್ದಾರಿಯನ್ನು ಆಯಾ ಸ್ಥಳೀಯ ಸಂಸ್ಥೆಗಳಿಗೆ ವಹಿಸಲು ನಿರ್ಧರಿಸ

ಲಾಗಿದೆ. ಇದಕ್ಕಾಗಿ ಶಾಸಕರ ನಿಧಿಯ ಶೇ 30ರಷ್ಟು ಹಣವನ್ನು ಕಡ್ಡಾಯವಾಗಿ  ಬಳಕೆ ಮಾಡಿಕೊಳ್ಳಲು ನಿಯಮಾವಳಿ ರೂಪಿಸಲಾಗುತ್ತಿದೆ’ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್ ತಿಳಿಸಿದರು.ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸರ್ಕಾರಿ ಶಾಲೆಗಳ ಉಳಿವಿಗಾಗಿ ಖಾಸಗಿ ಶಾಲೆಗಳೊಂದಿಗೆ ಪೈಪೋಟಿ ಅನಿವಾರ್ಯವಾಗಿದೆ. ಹಾಗಾಗಿ ಶಿಕ್ಷಕರನ್ನು ಹೊಣೆಗಾರಿಕೆಯಿಂದ ಮುಕ್ತಗೊಳಿಸಿ ಪಠ್ಯ ಚಟುವಟಿಕೆಗಳಲ್ಲಿ ತೊಡಗಿಸಲಾಗುವುದು. ಆ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ ಶಾಲೆಗಳಲ್ಲಿ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಕಲ್ಪಿಸುವುದು ಸೇರಿದಂತೆ ನಿರ್ವಹಣೆ ಹೊಣೆಗಾರಿಕೆಯನ್ನು ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮೀಣ ಪ್ರದೇಶದಲ್ಲಿ ಗ್ರಾಮ ಪಂಚಾಯ್ತಿಗಳಿಗೆ ವಹಿಸಲಾಗುತ್ತಿದೆ’ ಎಂದರು.‘ಮುಂದಿನ ದಿನಗಳಲ್ಲಿ ಬಿಸಿಯೂಟದ ಹೊಣೆಯಿಂದಲೂ ಶಿಕ್ಷಕರನ್ನು ಮುಕ್ತಗೊಳಿಸುವ ಉದ್ದೇಶವಿದೆ’ ಎಂದು ಹೇಳಿದರು.

ಖಾಸಗಿ ಶಿಕ್ಷಣ ಸಂಸ್ಥೆಗಳೊಂದಿಗಿನ ಸ್ಪರ್ಧೆಯ ಅನಿವಾರ್ಯತೆಯನ್ನು ಮನದಟ್ಟು ಮಾಡಲು ಎಲ್ಲಾ ಶಿಕ್ಷಕರಿಗೂ ನಾನೇ ಖುದ್ದಾಗಿ ಪತ್ರ ಬರೆದಿದ್ದು, ಇದೇ ವಾರದಲ್ಲಿ ಆ ಪತ್ರ ಶಿಕ್ಷಕರಿಗೆ ತಲುಪಲಿದೆ. ಆರನೇ ತರಗತಿಯಿಂದ ವಿಷಯವಾರು ಶಿಕ್ಷಕರ ನೇಮಕ ಮಾಡಿ, 5 ಮತ್ತು 7ನೇ ತರಗತಿ ಮಕ್ಕಳ ಕಲಿಕಾ ಗುಣಮಟ್ಟ ಪರಿಶೀಲನೆಗೆ ಪರೀಕ್ಷೆ ನಡೆಸಲಾಗುವುದು. ಇಲಾಖೆಯಿಂದ ರೂಪಿಸಿರುವ 200 ಹೊಸ ಬೋಧನಾ ಮಾದರಿಗಳನ್ನು ಬಳಸಿ ಪಾಠ ಮಾಡಲು ಈ ವರ್ಷ 50 ಸಾವಿರ ಶಿಕ್ಷಕರಿಗೆ ತರಬೇತಿ ನೀಡಲಾಗುತ್ತಿದೆ’ ಎಂದರು.ಶಾಲಾಭಿವೃದ್ಧಿ ಸಮಿತಿಗಳ ಹೊಣೆಗಾರಿಕೆಯನ್ನೂ ಹೆಚ್ಚಿಸಿ ಅವುಗಳ ಬಲವರ್ಧನೆ ಮಾಡಲಾಗುವುದು. ಸರ್ಕಾರಿ ಶಾಲೆಗಳಲ್ಲಿ ಶೈಕ್ಷಣಿಕ ಗುಣಮಟ್ಟ ಕಾಪಾಡಿಕೊಳ್ಳಲು ಇರುವ ಅಡೆ–ತಡೆ ನಿವಾರಿಸಲಾಗುವುದು. ಶಾಲಾಭಿವೃದ್ಧಿ ಸಮಿತಿಗಳ ಲೆಕ್ಕಪತ್ರಗಳ ಪರಿಶೀಲನೆ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.ರಾಜ್ಯದ ನೆಲದಲ್ಲಿ ಸ್ಥಾಪನೆಯಾದ ಯಾವುದೇ  ಶಿಕ್ಷಣ ಸಂಸ್ಥೆ (ಪಠ್ಯಕ್ರಮ ಯಾವುದೇ ಇರಲಿ) ಇನ್ನು ಮುಂದೆ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಒಳಪಡಲಿವೆ. ಅಲ್ಲಿ ಕನ್ನಡವನ್ನು ಕಡ್ಡಾಯವಾಗಿ ಒಂದು ಭಾಷೆಯಾಗಿ ಕಲಿಸಬೇಕಿದೆ. ಆ ನಿಟ್ಟಿನಲ್ಲಿ ಕಾಯ್ದೆ ರೂಪಿಸಲಾಗಿದೆ. ಖಾಸಗಿ ಶಾಲೆಗಳಿಗೆ ಶುಲ್ಕ ನಿಗದಿ ಸೇರಿದಂತೆ ಪೋಷಕರಿಂದ ಬರುವ ದೂರು ಪರಿಶೀಲಿಸಲು ಆಯಾ ಜಿಲ್ಲಾಡಳಿತಗಳಿಗೆ ಅಧಿಕಾರ ನೀಡಲಾಗುತ್ತಿದೆ. ಈ ವಿಚಾರದಲ್ಲಿ ಜಿಲ್ಲಾಧಿಕಾರಿಗೆ ನೆರವಾಗಲು ಜಿಲ್ಲಾಮಟ್ಟದಲ್ಲಿ ದೂರು ಸ್ವೀಕರಣಾ ಕೋಶ ಇರಲಿದೆ ಎಂದರು. ಶಿಕ್ಷಕರ ನೇಮಕ : ಮುಂದಿನ ಮೂರು ವರ್ಷಗಳಲ್ಲಿ ಪ್ರಾಥಮಿಕ ಶಾಲೆಗಳಿಗೆ 18 ಸಾವಿರ ಶಿಕ್ಷಕರನ್ನು ನೇಮಿಸಿಕೊಳ್ಳಲಾಗುತ್ತಿದೆ. ಈ ವರ್ಷ 10 ಸಾವಿರ ಶಿಕ್ಷಕರ ನೇಮಕಾತಿಗೆ ಈಗಾಗಲೇ ಚಾಲನೆ ನೀಡಲಾಗಿದೆ. ಹಣಕಾಸು ಇಲಾಖೆಯ ಒಪ್ಪಿಗೆಯೂ ಸಿಕ್ಕಿದೆ. ಜುಲೈ ಅಂತ್ಯದ ವೇಳೆಗೆ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ತನ್ವೀರ್‌ ಸೇಠ್ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry