ಮೆಟ್ರೊ ವೆಚ್ಚ ಕೇಂದ್ರವೇ ಭರಿಸಲಿ

7
ಉದ್ಘಾಟನಾ ಸಮಾರಂಭದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ತಾಕೀತು

ಮೆಟ್ರೊ ವೆಚ್ಚ ಕೇಂದ್ರವೇ ಭರಿಸಲಿ

Published:
Updated:
ಮೆಟ್ರೊ ವೆಚ್ಚ ಕೇಂದ್ರವೇ ಭರಿಸಲಿ

ಬೆಂಗಳೂರು: ‘ನಮ್ಮ ಮೆಟ್ರೊ ಯೋಜನೆಯ ಎರಡನೇ ಹಂತದ ಕಾಮಗಾರಿಯ ವೆಚ್ಚ ₹ 26,000 ಕೋಟಿಯನ್ನು ಪೂರ್ಣವಾಗಿ ಕೇಂದ್ರ ಸರ್ಕಾರವೇ ಭರಿಸಬೇಕು’ ಎಂದು ರಾಜ್ಯಪಾಲ ವಜುಭಾಯಿ ವಾಲಾ ತಾಕೀತು ಮಾಡಿದರು.ನಗರದಲ್ಲಿ ಶನಿವಾರ ನಡೆದ ‘ನಮ್ಮ ಮೆಟ್ರೊ’ ಮೊದಲ ಹಂತದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಇದೇ ವೇಳೆ ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಅವರ ಹೆಸರನ್ನು ಉಲ್ಲೇಖಿಸಿ ಕೇಂದ್ರ ಸರ್ಕಾರದ ಕಿವಿ ಹಿಂಡಿದರು.‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಒಂದು ಮಾತನ್ನು ಹೇಳಲು ಮರೆತಿದ್ದಾರೆ. ಗುಜರಾತ್‌ನಲ್ಲಿ ಮೂರು ಬಾರಿ ಹಣಕಾಸು ಸಚಿವನಾಗಿ ಕಾರ್ಯ ನಿರ್ವಹಿಸಿದ ಅನುಭವದಿಂದ ಈ ಮಾತು ಹೇಳುತ್ತಿದ್ದೇನೆ’ ಎನ್ನುತ್ತಲ್ಲೇ, ಮೂಲ ಸೌಕರ್ಯ ಕಲ್ಪಿಸುವಲ್ಲಿ ಕೇಂದ್ರ ಸರ್ಕಾರದ ಕರ್ತವ್ಯವನ್ನು ಜ್ಞಾಪಿಸಿದರು.‘ಜನರ ಅಗತ್ಯಗಳನ್ನು ಪೂರೈಸುವುದು ರಾಜ್ಯದ ಕೆಲಸ. ಜನರಿಗೆ ಸೌಕರ್ಯ ಒದಗಿಸುವುದು ಏನಿದ್ದರೂ ಕೇಂದ್ರದ ಜವಾಬ್ದಾರಿ. ನಮ್ಮ ಮೆಟ್ರೊ ಯೋಜನೆಯ ಶೇಕಡಾ 50ರಷ್ಟು ವೆಚ್ಚವನ್ನು ಮಾತ್ರ ಕೇಂದ್ರ ಭರಿಸುತ್ತಿದೆ. ಇದರ ಶೇಕಡಾ 100 ವೆಚ್ಚವನ್ನೂ ಕೇಂದ್ರವೇ ಭರಿಸಬೇಕು. ಇದಕ್ಕೆ ನಿಮ್ಮ ಸಹಮತ ಇದೆಯಲ್ಲವೇ’ ಎಂದು ಸಭಿಕರನ್ನು ಕೇಳಿದರು.ಕೇಂದ್ರದ ವಿರುದ್ಧ ರಾಜ್ಯಪಾಲರು ಮಾಡಿದ ಟೀಕಾ ಪ್ರಹಾರದಿಂದ ಅರೆಕ್ಷಣ ಅವಾಕ್ಕಾದ ಸಭಿಕರು,  ಬಳಿಕ ಚಪ್ಪಾಳೆಯ ಸುರಿಮಳೆಗೈದರು.‘ಕೈಗಾರಿಕೆ ಹಾಗೂ ಸೇವಾ ಕ್ಷೇತ್ರಕ್ಕೆ ಬೆಂಗಳೂರಿನ ಕೊಡುಗೆ ಸಾಕಷ್ಟಿದೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಇನ್ಫೊಸಿಸ್‌, ವಿಪ್ರೊದಂತಹ ದಿಗ್ಗಜ ಕಂಪೆನಿಗಳು ಇಲ್ಲಿಯೇ ಕಾರ್ಯಾಚರಿಸುತ್ತಿವೆ. ವೈದ್ಯಕೀಯ  ಹಾಗೂ ಶಿಕ್ಷಣ ಕ್ಷೇತ್ರದಲ್ಲೂ ಈ ನಗರ ಹೆಸರುವಾಸಿ. ಇವು ಕೇಂದ್ರಕ್ಕೂ ಸಾಕಷ್ಟು ಲಾಭ ತಂದುಕೊಡುತ್ತಿವೆ’ ಎಂದು ನೆನಪಿಸಿದರು.‘ಬೆಂಗಳೂರಿನಲ್ಲಿ 60 ಲಕ್ಷ ವಾಹನಗಳಿವೆ. ಮೆಟ್ರೊದಿಂದಾಗಿ  ವಾಹನಗಳು ರಸ್ತೆಗಿಳಿಯುವ ಪ್ರಮಾಣ ಕಡಿಮೆಯಾದರೆ ಪೆಟ್ರೋಲ್‌ ಬಳಕೆ ಕಡಿಮೆ ಆಗಲಿದೆ. ಇದರಿಂದಲೂ ಕೇಂದ್ರಕ್ಕೆ ಪ್ರಯೋಜನವಾಗಲಿದೆ’ ಎಂದು ವಿವರಿಸಿದರು.‘ಕೃಷಿ ಹಾಗೂ ನೀರಿಗೆ ಸಂಬಂಧಿಸಿದ ಸಮಸ್ಯೆಗಳು ರಾಜ್ಯವನ್ನು ಕಾಡುತ್ತಿವೆ. ನಾಯ್ಡು ಅವರು ಈ ಬಾರಿ ರಾಜಸ್ತಾನದಿಂದ ರಾಜ್ಯಸಭೆಗೆ ಆಯ್ಕೆ ಆಗಿರಬಹುದು. ಆದರೆ, ಕರ್ನಾಟಕದ ಜನತೆ ಅವರನ್ನು ಮೂರು ಬಾರಿ ಆರಿಸಿ ಕಳುಹಿಸಿದ್ದಾರೆ. ಅವರ ಬಳಿ ಬೇಡಿಕೆ ಸಲ್ಲಿಸುವ ಹಕ್ಕು ರಾಜ್ಯದ ಜನತೆಗೆ ಇದೆ’ ಎಂದರು. ಹೊಸ ಮೆಟ್ರೊ ನೀತಿ: ‘ಕೇಂದ್ರ ಸರ್ಕಾರ ಹೊಸ ಮೆಟ್ರೊ ನೀತಿ ರೂಪಿಸುತ್ತಿದೆ.   ಮೆಟ್ರೊ ಯೋಜನೆಗಳಿಗೆ ಬಂಡವಾಳ ಕ್ರೋಡೀಕರಿಸಲು ವ್ಯಾಲ್ಯೂ ಕ್ಯಾಪ್ಚರ್ಡ್‌ ಫೈನಾನ್ಸ್‌ ಎಂಬ ವಿನೂತನ ವಿಧಾನವನ್ನು (ಮೂಲಸೌಕರ್ಯದಿಂದ  ಜಾಗದ ಮೌಲ್ಯ ಹೆಚ್ಚಳವಾಗುವುದನ್ನು ಆಧರಿಸಿ ಸಂಪನ್ಮೂಲ ಕ್ರೋಡೀಕರಿಸುವುದು) ಅನುಸರಿಸಲಾಗುತ್ತದೆ’ ಎಂದು ವೆಂಕಯ್ಯ ನಾಯ್ಡು ತಿಳಿಸಿದರು.‘ಎರಡನೇ ಹಂತದಲ್ಲಿ 72 ಕಿ.ಮೀ ಉದ್ದದ ಮೆಟ್ರೊ ಮಾರ್ಗ ಸೇರ್ಪಡೆಯಾಗಲಿದೆ. 2020ರ ಒಳಗೆ ಇದೂ ಪೂರ್ಣಗೊಳ್ಳುತ್ತದೆ.  ಬಳಿಕ ನಿತ್ಯ 15 ಲಕ್ಷಕ್ಕೂ ಹೆಚ್ಚು ಮಂದಿ ಮೆಟ್ರೊ ಬಳಸಲಿದ್ದಾರೆ’ ಎಂದು ಮುಖ್ಯಮಂತ್ರಿ ತಿಳಿಸಿದರು.‘ಆಧುನಿಕ ನಗರ ಯೋಜನೆ ಬೇಕು’

‘ಮಹಾನಗರಗಳಿಗೆ  ಸಾರಿಗೆ ಸೌಕರ್ಯ ಕಲ್ಪಿಸುವುದು  ಸವಾಲಿನ ವಿಷಯ. ಇದಕ್ಕೆ ಭಾರಿ ಬಂಡವಾಳ ಬೇಕಾಗುತ್ತದೆ.  ಈ ಸಮಸ್ಯೆ ನಿವಾರಿಸಲು ಆಧುನಿಕ ನಗರ ಯೋಜನೆ ರೂಪಿಸುವ ಅಗತ್ಯವಿದೆ. ಹೊಸ ತಂತ್ರಜ್ಞಾನ ಬಳಸಬೇಕಿದೆ’ ಎಂದು ರಾಷ್ಟ್ರಪತಿ ಪ್ರಣವ್‌ಮುಖರ್ಜಿ ಹೇಳಿದರು. ‘ಲಂಡನ್‌ನಲ್ಲಿ 1863ರಲ್ಲೇ ಮೆಟ್ರೊ ಆರಂಭಗೊಂಡಿತ್ತು. ಇದಕ್ಕೆ ಹೋಲಿಸಿದರೆ ಮೆಟ್ರೊ ಯೋಜನೆಗಳ ಅನುಷ್ಠಾನದಲ್ಲಿ ನಾವು ಹಿಂದಿದ್ದೇವೆ’ ಎಂದರು.

*

ಕನ್ನಡಿಗರು ಶ್ರಮಜೀವಿಗಳು, ಪ್ರಾಮಾಣಿಕರು ಹಾಗೂ ಬದ್ಧತೆಯುಳ್ಳವರು. ಉನ್ನತ ಮಟ್ಟದ ಬದುಕು ನಡೆಸಲು ಇಂತಹ ಉತ್ತಮ ಸೌಕರ್ಯ ಅವರಿಗೆ ಅರ್ಹವಾಗಿಯೇ ಸಿಗಬೇಕು.

ಪ್ರಣವ್‌ ಮುಖರ್ಜಿ,

ರಾಷ್ಟ್ರಪತಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry