ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಂಟಿಸಿಯಲ್ಲಿ ಸ್ಮಾರ್ಟ್ ಯುಗ ಆರಂಭ

ಮೊದಲ ಹಂತದಲ್ಲಿ ನಾಲ್ಕು ಲಕ್ಷ ಶಾಲಾ–ಕಾಲೇಜು ವಿದ್ಯಾರ್ಥಿಗಳಿಗೆ ಸ್ಮಾರ್ಟ್‌ಕಾರ್ಡ್‌ಗಳ ವಿತರಣೆ
Last Updated 17 ಜೂನ್ 2017, 19:33 IST
ಅಕ್ಷರ ಗಾತ್ರ

ಬೆಂಗಳೂರು: ಬಿಎಂಟಿಸಿಯ ಸ್ಮಾರ್ಟ್ ಕಾರ್ಡ್, ನಾಲ್ಕು ಮಾದರಿಯ 150 ಬಸ್‌ಗಳು ಹಾಗೂ ಕೆಂಪೇಗೌಡ ಬಸ್ ನಿಲ್ದಾಣದ ನವೀಕೃತ ಮೇಲ್ಸೇತುವೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಲೋಕಾರ್ಪಣೆ ಮಾಡಿದರು.

‘ನಾಲ್ಕು ಲಕ್ಷ ಶಾಲಾ–ಕಾಲೇಜು ವಿದ್ಯಾರ್ಥಿಗಳಿಗೆ ಮೊದಲ ಹಂತದಲ್ಲಿ ಸ್ಮಾರ್ಟ್‌ಕಾರ್ಡ್‌ಗಳನ್ನು ವಿತರಿಸುವ ವ್ಯವಸ್ಥೆ ಮಾಡಲಾಗಿದೆ. ನವೆಂಬರ್ ಅಂತ್ಯದೊಳಗೆ ಇತರ ಪ್ರಯಾಣಿಕರಿಗೂ ಸ್ಮಾರ್ಟ್‌ ಕಾರ್ಡ್‌ ವಿತರಿಸಲಾಗುತ್ತದೆ. ಈ ವ್ಯವಸ್ಥೆಯಿಂದ ನಿರ್ವಾಹಕರ ಕೆಲಸದ ಒತ್ತಡ ಕಡಿಮೆ ಆಗುತ್ತದೆ’ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಏಕ್‌ರೂಪ್‌ ಕೌರ್‌ ಹೇಳಿದರು.

ಸ್ಮಾರ್ಟ್ ಕಾರ್ಡ್  ವಾರ್ಷಿಕ ನಿರ್ವಹಣೆಗೆ ಶುಲ್ಕವಾಗಿ ₹ 25 ಪಾವತಿಸಬೇಕಾಗುತ್ತದೆ. ಕನಿಷ್ಠ ₹ 5ರಿಂದ   ಗರಿಷ್ಠ ₹10 ಸಾವಿರವರೆಗೂ ರಿಚಾರ್ಜ್ ಮಾಡಿಸಬಹುದು. ಇದೇ ವೇಳೆ ಪ್ರೀಮಿಯಂ ಸೆಗ್ಮೆಂಟ್ ಎಸ್ ಬಸ್ (ಜೆಎನ್‌ನರ್ಮ್–2), ಟಾಟಾ ಬಿಎಸ್–4, ಐಷರ್ ಬಿಎಸ್–4, ಟಾಟಾ ಮಿಡಿ (ಜೆಎನ್‌ನರ್ಮ್–2) ಮಾದರಿಯ ಬಸ್‌ಗಳಿಗೆ ಚಾಲನೆ ಸಿಕ್ಕಿತು.

ಪ್ರಯಾಣಿಕರ ಕೊರತೆಯಾಗದು: ‘ನಗರದಲ್ಲಿ ಸಂಚಾರ ದಟ್ಟಣೆ ಕಡಿವಾಣಕ್ಕೆ ಮೆಟ್ರೊ ಪರಿಹಾರವಾಗಿದೆ. ಇದರಿಂದ ಬಸ್‌ಗಳಲ್ಲಿ ಪ್ರಯಾಣಿಕರ  ಸಂಖ್ಯೆ ಕಡಿಮೆಯಾಗಿ ಬಿಎಂಟಿಸಿ ನಷ್ಟ ಹೊಂದುವುದಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ  ಮಾತನಾಡಿ, ‘ಬಜೆಟ್‌ನಲ್ಲಿ ಘೋಷಣೆ ಮಾಡಿದಂತೆ ಸರ್ಕಾರವೇ 1,500 ಬಸ್‌ಗಳನ್ನು ಖರೀದಿಸಿ ಬಿಎಂಟಿಸಿಗೆ ಹಸ್ತಾಂತರಿಸಿದೆ’ ಎಂದರು.

‘ಇನ್ನೊಂದು ವರ್ಷದಲ್ಲಿ 1,500 ಬಸ್‌ಗಳನ್ನು ಖರೀದಿಸುವ ಗುರಿಯಿದೆ. ಸಂಸ್ಥೆಯಲ್ಲಿ ಸಂಪನ್ಮೂಲದ ಕೊರತೆ ಇದೆ. ಹಾಗಾಗಿ ಖಾಸಗಿಯವರಿಂದ ಸಾಲ ಪಡೆದು ಬಸ್‌ಗಳನ್ನು ಖರೀದಿಸಲಾಗುತ್ತದೆ’ ಎಂದು ಹೇಳಿದರು.

ಟಿಕೆಟ್ ದರ ಇಳಿಸಲು ಮನವಿ: ‘ನಮ್ಮಲ್ಲಿ ಬಸ್ ಪ್ರಯಾಣ ದರ ಹೆಚ್ಚು ಇದೆ. ದರ ಕಡಿಮೆಯಾದರೆ, ಸಾರಿಗೆ  ನಿಗಮಗಳ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದೆ. ಈ ಬಗ್ಗೆ ಕೂಡಲೇ ಕ್ರಮ ವಹಿಸಬೇಕು’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿದರು.

‘ಮೆಜೆಸ್ಟಿಕ್ ಮುಖ್ಯರಸ್ತೆಯು ಹದಗೆಟ್ಟಿದ್ದು, ಈ ರಸ್ತೆಗೆ ಕಾಂಕ್ರೀಟ್ ಹಾಕಿ ವೈಟ್‌ ಟಾಪಿಂಗ್‌ ಮಾಡಬೇಕು’ ಎಂದು ಆಗ್ರಹಿಸಿದರು.  ‘ಪ್ರಯಾಣ ದರ ಇಳಿಕೆ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ’ ಎಂದು  ಮುಖ್ಯಮಂತ್ರಿ ಭರವಸೆ ನೀಡಿದರು.  ‘ಕಾಂಕ್ರೀಟ್ ಹಾಕಿಸಲು ಕ್ರಮ ತೆಗೆದುಕೊಳ್ಳಿ’ ಎಂದು ಬೆಂಗಳೂರು ಅಭಿವೃದ್ಧಿ ಸಚಿವ  ಕೆ.ಜೆ.ಜಾರ್ಜ್ ಅವರಿಗೆ ಸೂಚಿಸಿದರು.

ಎಲ್ಲರಿಗೂ ಉಚಿತವಾಗಿ ವಿದ್ಯಾರ್ಥಿ ಪಾಸ್ ವಿತರಿಸಿ: ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೂ ಉಚಿತವಾಗಿ ಬಸ್‌  ಪಾಸ್‌ಗಳನ್ನು ವಿತರಿಸಬೇಕು ಎಂದು ಸಭೆಯಲ್ಲಿದ್ದ ವ್ಯಕ್ತಿಯೊಬ್ಬರು ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದರು.

ಇದಕ್ಕೆ ಅವರು, ‘ಈ ಪಾಸ್‌ಗಳಿಗೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಹಣ ನೀಡಲಾಗುತ್ತದೆ. ನಿಮ್ಮ ಸಲಹೆಯನ್ನು ಗಮನದಲ್ಲಿಟ್ಟುಕೊಳ್ಳುತ್ತೇವೆ. ಕೂತ್ಕೊಳ್ಳಿ’ ಎಂದರು.

ಕಾರ್ಡ್ ವಿಶೇಷತೆ
* ಸ್ಮಾರ್ಟ್ ಕಾರ್ಡ್ ಬಳಸಿ ಟಿಕೆಟ್ ಪಡೆಯಬಹುದು
* ದೈನಿಕ, ತಿಂಗಳ ಹಾಗೂ ವಿದ್ಯಾರ್ಥಿ ಪಾಸ್‌ಗಳಾಗಿ ಬಳಸಬಹುದು
*   ನಗದು ಹಾಗೂ ಚಿಲ್ಲರೆ ಸಮಸ್ಯೆಗೆ ಕಡಿವಾಣ

* ಎಟಿಎಂ ಕಾರ್ಡ್‌ಗಳಂತೆಯೇ ವಾಣಿಜ್ಯ ಬಳಕೆಗೂ ಅವಕಾಶ (ಆಟೊ, ಕಾರು ಪ್ರಯಾಣ, ಹೋಟೆಲ್, ಮಾಲ್ ಹಾಗೂ ಆನ್‌ಲೈನ್ ಶಾಪಿಂಗ್)
* ಇ–ಪರ್ಸ್ ಆಗಿಯೂ ಬಳಸಬಹುದು
* ಟಿಕೆಟ್ ಹಣ ದುರ್ಬಳಕೆಗೆ ಕಡಿವಾಣ

* ನಗದುರಹಿತ ಸುಲಲಿತ ವ್ಯವಹಾರಕ್ಕೆ ಅನುವು
* ಸ್ವಯಂಚಾಲಿತ ಹಾಗೂ ಸುರಕ್ಷಿತ ಟಿಕೆಟ್ ವಿತರಣೆ
* ಸಾರ್ವಜನಿಕ ಸಾರಿಗೆ ಬಸ್‌ಗಳಿಗೆ ಪ್ರಯಾಣಿಕರ ಆಕರ್ಷಣೆ

ಮೇಲ್ಸೇತುವೆ ವಿವರ
* 400 ಮೀಟರ್ ಉದ್ದ
* 6 ಮೀಟರ್ ಅಗಲ
* ಎಲ್‌ಇಡಿ ದ್ವೀಪಗಳ ವ್ಯವಸ್ಥೆ
*  8 ಮೆಟ್ಟಿಲುಗಳು
* ಎಲ್‌ಇಡಿ ದ್ವೀಪಗಳ ವ್ಯವಸ್ಥೆ
* ₹ 3.75 ಕೋಟಿ ನಿರ್ಮಾಣದ ವೆಚ್ಚ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT