ದೆಹಲಿ ಮೆಟ್ರೊದಷ್ಟು ಅಗ್ಗವಲ್ಲ ‘ನಮ್ಮ ಮೆಟ್ರೊ’

7
ನಗರದ ನಾಲ್ಕು ದಿಕ್ಕಿಗೂ ಮೆಟ್ರೊ ವಿಸ್ತರಣೆಯ ಸಡಗರಕ್ಕೆ ಪ್ರಯಾಣ ದರ ಹೆಚ್ಚಳದ ಬರೆ l ಟಿಕೆಟ್ ದರ ಶೇ 10ರಷ್ಟು ಏರಿಕೆ

ದೆಹಲಿ ಮೆಟ್ರೊದಷ್ಟು ಅಗ್ಗವಲ್ಲ ‘ನಮ್ಮ ಮೆಟ್ರೊ’

Published:
Updated:
ದೆಹಲಿ ಮೆಟ್ರೊದಷ್ಟು ಅಗ್ಗವಲ್ಲ ‘ನಮ್ಮ ಮೆಟ್ರೊ’

ಬೆಂಗಳೂರು: ‘ನಮ್ಮ ಮೆಟ್ರೊ’ ಯೋಜನೆಯ ಮೊದಲ ಹಂತ ಪೂರ್ಣಗೊಂಡು, ನಗರದ ಕೇಂದ್ರ ಪ್ರದೇಶವಾದ ಮೆಜೆಸ್ಟಿಕ್‌ನಿಂದ  ನಾಲ್ಕೂ ದಿಕ್ಕುಗಳಿಗೂ ಪ್ರಯಾಣಿಸುವ ಅವಕಾಶ ಸಿಕ್ಕಿದ ಖುಷಿಯನ್ನು ಅನುಭವಿಸಲು ಜನತೆ ಸಜ್ಜಾಗಿದ್ದಾರೆ.

ಈ ನಡುವೆ, ಪ್ರಯಾಣ ದರದಲ್ಲಿ  ಶೇಕಡಾ 10ರಷ್ಟು (ಸರಾಸರಿ) ಹೆಚ್ಚಳ ಮಾಡುವ ಮೂಲಕ ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ಈ ಸಡಗರಕ್ಕೆ ಬರೆ ಎಳೆದಿದೆ.

ಅತಿ ದೂರದ ನಿಲ್ದಾಣಕ್ಕೆ ಇರುವ ಪ್ರಯಾಣ ದರವನ್ನು ಆಧರಿಸಿ ಲೆಕ್ಕಾಚಾರ ಹಾಕಿದರೆ, ಪ್ರತಿ ಕಿ.ಮೀ.ಗೆ ಇಲ್ಲಿ ₹2.5 ದರ ಇದೆ (ಪರಿಷ್ಕೃತ ದರ).

ಮೆಟ್ರೊ ಸೇವೆಗೆ ಅತಿ ಕಡಿಮೆ ದರ ಇರುವುದು ದೆಹಲಿಯಲ್ಲಿ. ಇಲ್ಲಿ ಪ್ರತಿ ಕಿ.ಮೀ. ಪ್ರಯಾಣಕ್ಕೆ  ಸರಾಸರಿ  83 ಪೈಸೆ ಮಾತ್ರ ಖರ್ಚಾಗುತ್ತದೆ. ಕೇಂದ್ರ ಸರ್ಕಾರ ಹಾಗೂ ದೆಹಲಿ ಸರ್ಕಾರ ಜಂಟಿಯಾಗಿ ಇಲ್ಲಿ ಸೇವೆ ಒದಗಿಸುತ್ತಿದೆ. ದೆಹಲಿ ಹೊರತುಪಡಿಸಿದರೆ, ಕಡಿಮೆ ದರ ಇರುವುದು ಕೊಲ್ಕತ್ತದಲ್ಲಿ. ಇಲ್ಲಿ ಪ್ರತಿ ಕಿ.ಮೀ ಪ್ರಯಾಣಕ್ಕೆ ಸರಾಸರಿ 92 ಪೈಸೆ ತಗಲುತ್ತದೆ. ಇದನ್ನು ನಿರ್ವಹಿಸುತ್ತಿರುವುದು ರೈಲ್ವೆ ಇಲಾಖೆ.

ಜೈಪುರದಲ್ಲಿ ರಾಜ್ಯ ಸರ್ಕಾರವೇ ಮೆಟ್ರೊ ಸೇವೆ ಒದಗಿಸುತ್ತಿದ್ದು, ಇಲ್ಲಿ ಪ್ರತಿ ಕಿ.ಮೀ ಪ್ರಯಾಣಕ್ಕೆ ₹ 1.56 ತಗಲುತ್ತದೆ.

ಗುರುಗ್ರಾಮ, ಮುಂಬೈ, ಚೆನ್ನೈ ನಗರಗಳ ಬಳಿಕ ಗರಿಷ್ಠ ಪ್ರಯಾಣ ದರವನ್ನು ಹೊಂದಿರುವ ಮೆಟ್ರೊ  ನಮ್ಮ ನಗರದ್ದು. ಗುರುಗ್ರಾಮದಲ್ಲಿ ಮೆಟ್ರೊ ಪ್ರಯಾಣಕ್ಕೆ ಗರಿಷ್ಠ  (ಪ್ರತಿ ಕಿ.ಮೀ ಪಯಣಕ್ಕೆ ₹ 3.84) ದರ ಪಾವತಿಸಬೇಕಿದೆ.

ಮುಂಬೈ ಹಾಗೂ ಚೆನ್ನೈನಲ್ಲಿ ಪ್ರತಿ ಕಿ.ಮೀ ಪ್ರಯಾಣಕ್ಕೆ ಸರಾಸರಿ ₹ 3.50 ದರ ಇದೆ. ಶನಿವಾರ ಲೋಕಾರ್ಪಣೆಗೊಂಡ ಕೊಚ್ಚಿ ಮೆಟ್ರೊದಲ್ಲಿ ಸರಾಸರಿ ₹ 3.03 ದರ ಇದೆ.   ಮುಂಬೈ ಹಾಗೂ ಗುರುಗ್ರಾಮಗಳಲ್ಲಿ ಮೆಟ್ರೊ ಸೇವೆಯನ್ನು  ಖಾಸಗಿ ಸಂಸ್ಥೆಗಳು ಒದಗಿಸುತ್ತಿವೆ.ಮೆಟ್ರೊ ಸಿಬ್ಬಂದಿ ಯಶಸ್ಸಿನ ಚಿಹ್ನೆ ತೋರಿಸುವ ಮೂಲಕ ಖುಷಿಪಟ್ಟರು

ಗಡಿಬಿಡಿಯ ನಿರ್ಧಾರ: ‘ಮೆಟ್ರೊ ಕಾರ್ಯಾಚರಣೆಯಿಂದ ನಷ್ಟ ಅನುಭವಿಸುತ್ತಿರುವುದರಿಂದ ಪ್ರಯಾಣ ದರ ಹೆಚ್ಚಳ ಮಾಡುವುದಾಗಿ ಬಿಎಂಆರ್‌ಸಿಎಲ್‌ ಹೇಳಬಹುದು. ಆದರೆ, ಮೊದಲ ಹಂತ ಪೂರ್ಣಗೊಂಡ ತಕ್ಷಣವೇ ದರ ಹೆಚ್ಚಳ ಮಾಡಬೇಕಾಗಿರಲಿಲ್ಲ. ಎರಡು ತಿಂಗಳು ಕಾದು, ಪ್ರಯಾಣಿಕರ ಪ್ರತಿಕ್ರಿಯೆ ನೋಡಿಕೊಂಡು  ನಿರ್ಧಾರಕ್ಕೆ ಬರಬಹುದಿತ್ತು. ನನ್ನ ಪ್ರಕಾರ ಇದು ಗಡಿಬಿಡಿಯ ನಿರ್ಧಾರ’ ಎನ್ನುತ್ತಾರೆ ಪ್ರಜಾ ಸಂಘಟನೆಯ ಸಂಜೀವ ದ್ಯಾಮಣ್ಣವರ್‌.

‘ಪ್ರಯಾಣಿಕರ ದಟ್ಟಣೆ ಹೆಚ್ಚು ಇರುವ ಅವಧಿಯಲ್ಲಿ ನಮ್ಮ ಮೆಟ್ರೊ ಪ್ರಯಾಣ ಹಿತಕರವಾಗಿಲ್ಲ. ಎರಡು ರೈಲುಗಳ ನಡುವಿನ ಅಂತರ ತಗ್ಗಿಸಿದರೂ ದಟ್ಟಣೆ ಹಾಗೆಯೇ ಮುಂದುವರಿಯುತ್ತಿದೆ.  ಆಗ ಬೋಗಿ ಒಳಗೆ ಕಾಲು ಇಡಲೂ ಜಾಗ ಇರುವುದಿಲ್ಲ.  ಮೊದಲ ಹಂತ ಪೂರ್ಣಗೊಂಡ ಬಳಿಕ  ಈ ಸಮಸ್ಯೆ ಮತ್ತಷ್ಟು ಹೆಚ್ಚಲಿದೆ. ಇಂತಹ ಸಮಸ್ಯೆ ಬಗೆಹರಿಸುವ ಮುನ್ನವೇ ದರ ಹೆಚ್ಚಳ ಮಾಡಿದ್ದು ಸರಿ ಎನಿಸದು’ ಎಂದರು.

‘ವಾಣಿಜ್ಯ ಚಟುವಟಿಕೆಯ ಮೂಲಕ ಆರ್ಥಿಕ ಸಂಪನ್ಮೂಲ ಕ್ರೋಡೀಕರಿಸುವ ನಿಟ್ಟಿನಲ್ಲಿ  ನಿಗಮದ ಪ್ರಯತ್ನ ಏನೂ ಸಾಲದು. ಇದರಿಂದ ಪ್ರಯಾಣಿಕರ ಮೇಲಿನ ಹೊರೆ ತಗ್ಗಿಸಬಹುದಿತ್ತು’ ಎಂದು ಅವರು ಅಭಿಪ್ರಾಯಪಟ್ಟರು.

‘ಎಲ್ಲ ನಿಲ್ದಾಣಗಳಲ್ಲಿ ವಾಹನ ನಿಲುಗಡೆ ಸೌಲಭ್ಯ ಒದಗಿಸಿಲ್ಲ. ಪಾರ್ಕಿಂಗ್‌ ವ್ಯವಸ್ಥೆ ಇರುವಲ್ಲಿ ಅದಕ್ಕೆ ದುಬಾರಿ ದರ ನಿಗದಿಪಡಿಸಲಾಗಿದೆ. (ಕಾರಿಗೆ ದಿನಕ್ಕೆ ₹ 60, ದ್ವಿಚಕ್ರ ವಾಹನಕ್ಕೆ ದಿನಕ್ಕೆ ₹ 30).  ಮೆಟ್ರೊ ನಿಲ್ದಾಣಗಳ ಬಳಿ ಅನೇಕ ಕಡೆ ಪಾದಚಾರಿಗಳು ರಸ್ತೆ ದಾಟಲೂ ಸೂಕ್ತ ವ್ಯವಸ್ಥೆ ಇಲ್ಲ. ಇವೆಲ್ಲ ಅಂಶಗಳತ್ತಲೂ ನಿಗಮ ಮೊದಲು ಗಮನಹರಿಸಬೇಕು’ ಎಂದರು.

***

***

***

***

ಕನಿಷ್ಠ ಪ್ರಯಾಣ ದರ ಯಥಾಸ್ಥಿತಿ 

ಕನಿಷ್ಠ ಪ್ರಯಾಣ ದರವನ್ನು ಯಥಾಸ್ಥಿತಿಯಲ್ಲಿ (₹ 10) ಉಳಿಸಿಕೊಳ್ಳಲಾಗಿದೆ. ಮೊದಲ ನಿಲ್ದಾಣಕ್ಕೆ ಈ ಹಿಂದೆ ₹13 ದರವಿತ್ತು. ಅದೀಗ  ₹15ಕ್ಕೆ ಏರಿಕೆ ಆಗಿದೆ.  ಮೂರನೇ ನಿಲ್ದಾಣಕ್ಕೆ ಈ ಹಿಂದಿನ ದರಕ್ಕಿಂತ ( (₹ 14)) ₹ 1 ಹೆಚ್ಚು ಪಾವತಿಸಬೇಕಾಗುತ್ತದೆ.

***

ಚಿಕ್ಕಪೇಟೆ ನಿಲ್ದಾಣದಲ್ಲಿ ಮೊದಲ ದಿನವೇ ಅವಘಡ

ಯಲಚೇನಹಳ್ಳಿ– ಸಂಪಿಗೆ ರಸ್ತೆಯಲ್ಲಿ ಮೆಟ್ರೊ ಸಂಚಾರ ಆರಂಭವಾದ  ದಿನವೇ ಚಿಕ್ಕಪೇಟೆ ನಿಲ್ದಾಣದಲ್ಲಿ ಮೊದಲ ಅವಘಡವೂ ನಡೆದಿದೆ.

ಎಂಜಿನಿಯರ್ ಒಬ್ಬರು ಪರಿಶೀಲನೆ ನಡೆಸುತ್ತಿದ್ದಾಗ ಎಸ್ಕಲೇಟರ್‌ಗಳು ಏಕಾಏಕಿ ಚಲಿಸಿದ್ದರಿಂದ ಅವರ ಬಲಗಾಲಿಗೆ ಗಂಭೀರ ಗಾಯಗಳಾಗಿವೆ.

ಜಾನ್ಸನ್‌ ಎಸ್ಕಲೇಟರ್‌ ಕಂಪೆನಿಯ  ಅಳಗಪ್ಪನ್‌ ಗಾಯಗೊಂಡವರು.

ಅವರಿಗೆ ವಿಕ್ಟೋರಿಯಾ  ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಆರೈಕೆಗೆ ಸೇಂಟ್‌ ಜಾನ್ಸ್‌ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ನಾರಾಯಣ ಹೃದಯಾಲಯದ ಆಸ್ಪತ್ರೆಗೆ ದಾಖಲಿಸಲಾಯಿತು.

‘ರಕ್ತನಾಳಗಳು ಹಾನಿಗೊಳಗಾಗಿರುವುದರಿಂದ ದೇಹದ ಬಲಗಾಲಿಗೆ ರಕ್ತ ಸಂಚಾರಕ್ಕೆ ಧಕ್ಕೆ ಉಂಟಾಗಿತ್ತು. ಅವರ ಕಾಲನ್ನು ಉಳಿಸಿಕೊಳ್ಳಬೇಕಿದ್ದರೆ ತಕ್ಷಣ ಶಸ್ತ್ರಚಿಕಿತ್ಸೆಯ ಅಗತ್ಯ ಇತ್ತು’ ಎಂದು ಸೇಂಟ್‌ ಜಾನ್ಸ್‌ ಆಸ್ಪತ್ರೆಯ ತಜ್ಞ ವೈದ್ಯ ಸಂಜೀವ್್ ಲೆವಿನ್‌ ತಿಳಿಸಿದ್ದಾರೆ.  

‘ಚಿಕ್ಕಪೇಟೆ ನಿಲ್ದಾಣದಲ್ಲಿ ಎಸ್ಕಲೇಟರ್‌ಗಳ ಅಂತಿಮ ಹಂತದ ತಪಾಸಣೆ ವೇಳೆ ಈ ಘಟನೆ ಸಂಭವಿಸಿದೆ. ಆಗ ಸ್ಥಳದಲ್ಲಿ ಇನ್ನೂ ಇಬ್ಬರು ಸಿಬ್ಬಂದಿ ಇದ್ದರು. ಅವರು ಸುರಕ್ಷಿತವಾಗಿದ್ದಾರೆ’ ಎಂದು ಬಿಎಂಆರ್‌ಸಿಎಲ್‌ ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry