ಕಿಷ್ಕಿಂಧೆ ರಸ್ತೆಗಳೂ, ಸಂಚಾರ ದಟ್ಟಣೆಯೂ

7
ಅನ್ನಭಾಗ್ಯ ಬೇಡ, ಸುರಕ್ಷಾ ಭಾಗ್ಯ ನೀಡಿ: ಜನಸ್ಪಂದನದಲ್ಲಿ ಅಳಲು ತೋಡಿಕೊಂಡ ನಾಗರಿಕರು

ಕಿಷ್ಕಿಂಧೆ ರಸ್ತೆಗಳೂ, ಸಂಚಾರ ದಟ್ಟಣೆಯೂ

Published:
Updated:
ಕಿಷ್ಕಿಂಧೆ ರಸ್ತೆಗಳೂ, ಸಂಚಾರ ದಟ್ಟಣೆಯೂ

ಬೆಂಗಳೂರು: ‘ಕಿಷ್ಕಿಂಧೆಯಂತಿರುವ ರಸ್ತೆಗಳ ಎರಡೂ ಬದಿಗಳಲ್ಲಿ ವಾಹನಗಳನ್ನು ನಿಲುಗಡೆ ಮಾಡುತ್ತಾರೆ. ಇದರಿಂದ ಮನೆಯಲ್ಲಿ ನಿಲ್ಲಿಸಿರುವ ವಾಹನಗಳನ್ನು ತೆಗೆಯಲು ಸಾಧ್ಯವಾಗುವುದಿಲ್ಲ.‘ಬೀದಿ ಬದಿ ವ್ಯಾಪಾರಿಗಳ ಒತ್ತುವರಿಯಿಂದ ಪಾದಚಾರಿಗಳು ಓಡಾಡಲು ಕಷ್ಟವಾಗುತ್ತಿದೆ. ವಸತಿ ಪ್ರದೇಶಗಳಲ್ಲಿ ಕೊರಿಯರ್‌ ಕಚೇರಿಗಳನ್ನು ತೆರೆದಿದ್ದು, ಸರಕು ಸಾಗಣೆ ವಾಹನಗಳು ವೇಗವಾಗಿ ಸಂಚರಿಸುತ್ತವೆ. ಅಲ್ಲದೆ, 14–16 ವರ್ಷದವರು ಮಕ್ಕಳು ಬೈಕ್‌ ವ್ಹೀಲಿಂಗ್‌ ಮಾಡುತ್ತಾರೆ. ಇದರಿಂದ ಹಿರಿಯ ನಾಗರಿಕರು, ಮಕ್ಕಳು ಜೀವ ಭಯದಲ್ಲಿ ಓಡಾಡುವಂತಾಗಿದೆ.ಶಿವಾಜಿನಗರ ಕ್ಷೇತ್ರ ವ್ಯಾಪ್ತಿಯ ವಾರ್ಡ್‌ಗಳ ಕುಂದುಕೊರತೆಗಳಿಗೆ ಪರಿಹಾರ ಕಂಡುಕೊಳ್ಳಲು ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕೆಗಳ ಆಶ್ರಯದಲ್ಲಿ ನಗರದ ಗುರುನಾನಕ್‌ ಭವನದಲ್ಲಿ ಶನಿವಾರ ಆಯೋಜಿಸಿದ್ದ ‘ಜನಸ್ಪಂದನ– ಸಿಟಿಜನ್ಸ್‌ ಫಾರ್‌ ಚೇಂಜ್‌’ ಕಾರ್ಯಕ್ರಮದಲ್ಲಿ ನಾಗರಿಕರು ಪ್ರಸ್ತಾಪಿಸಿದ ಪ್ರಮುಖ ಸಮಸ್ಯೆಗಳಿವು.ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿದ ಸ್ಥಳೀಯ ಶಾಸಕರೂ ಆಗಿರುವ ಸಚಿವ ರೋಷನ್‌ ಬೇಗ್‌ ಹಾಗೂ ಕ್ಷೇತ್ರದ ಐದು ವಾರ್ಡ್‌ಗಳ ಬಿಬಿಎಂಪಿ ಸದಸ್ಯರು ಈ ಸಮಸ್ಯೆಗಳನ್ನು ಕಾಲಮಿತಿಯೊಳಗೆ ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.‘ಸಂಪಂಗಿರಾಮನಗರ ವಸತಿ ಪ್ರದೇಶವಾಗಿದ್ದರೂ ಕೊರಿಯರ್‌ ಕಚೇರಿಗಳನ್ನು ತೆರೆಯಲಾಗಿದೆ. ದೊಡ್ಡ ಲಾರಿಗಳು ಈ ಭಾಗದಲ್ಲಿ ಓಡಾಡುತ್ತವೆ. ರಾತ್ರಿ 10 ಗಂಟೆಯಾದರೂ ವಾಹನಗಳ ಆರ್ಭಟ ನಿಲ್ಲುವುದಿಲ್ಲ. ಇದರಿಂದ ಬಡಾವಣೆಯಲ್ಲಿ ಓಡಾಡಲು ಕಷ್ಟವಾಗಿದೆ. ಈ ಬಗ್ಗೆ ಸಂಚಾರ ಪೊಲೀಸರಿಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ’ ಎಂದು  ಗಣೇಶ್‌ ಬಾಬು ದೂರಿದರು.ಇದಕ್ಕೆ ದನಿಗೂಡಿಸಿದ ಮತ್ತೊಬ್ಬ ನಿವಾಸಿ ಜಿ.ಶ್ರೀನಿವಾಸ್‌, ‘ಕೊರಿಯರ್‌ ವಾಹನಗಳಿಂದ ನಮ್ಮ ನೆಮ್ಮದಿ ಹಾಳಾಗಿದೆ. ನಮಗೆ ಅನ್ನಭಾಗ್ಯಕ್ಕಿಂತ ಸುರಕ್ಷಾ ಭಾಗ್ಯ ನೀಡಿ’ ಎಂದು ಮನವಿ ಮಾಡಿದರು.‘ವಸತಿ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆ ನಡೆಸುತ್ತಿರುವವರಿಗೆ ನೋಟಿಸ್‌ ನೀಡುತ್ತಿದ್ದೇವೆ. ಕೊರಿಯರ್‌ ಸಂಸ್ಥೆಗಳಿಗೂ ನೋಟಿಸ್‌ ನೀಡಿ, ಕ್ರಮ ಕೈಗೊಳ್ಳುತ್ತೇವೆ’ ಎಂದು ಜಂಟಿ ಆಯುಕ್ತ (ಆರೋಗ್ಯ) ಸರ್ಫರಾಜ್‌ ಖಾನ್‌ ತಿಳಿಸಿದರು.‘ಇಬ್ರಾಹಿಂಸಾಬ್‌ ಸ್ಟ್ರೀಟ್‌ನಲ್ಲಿರುವ ರಸ್ತೆಯನ್ನು ಬೀದಿಬದಿ ವ್ಯಾಪಾರಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಇದರಿಂದ ಓಡಾಡಲು ಕಷ್ಟ ಆಗುತ್ತಿದೆ. ಅದೇ ರೀತಿ ಕಮರ್ಷಿಯಲ್‌ ಸ್ಟ್ರೀಟ್‌ನಲ್ಲಿ ಕಾರುಗಳನ್ನು ಅಡ್ಡಾದಿಡ್ಡಿಯಾಗಿ ನಿಲುಗಡೆ ಮಾಡಲಾಗುತ್ತಿದೆ. ದ್ವಿಚಕ್ರ ವಾಹನಗಳ ನಿಲುಗಡೆಗೆ ಅವಕಾಶ ಸಿಗುತ್ತಿಲ್ಲ. ಸಂಚಾರ ದಟ್ಟಣೆ ಹೆಚ್ಚಾಗಿದೆ’ ಎಂದು ರಾಮಕೃಷ್ಣ ಹೇಳಿದರು.ಎಇಇ ಜಯಸಿಂಹ ಮಾತನಾಡಿ, ‘ಕಮರ್ಷಿಯಲ್‌ ಸ್ಟ್ರೀಟ್‌ನಲ್ಲಿ ರಸ್ತೆ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಸೋಮವಾರ ನಡೆಸಲಿದ್ದೇವೆ. ಕಾರು ನಿಲುಗಡೆ ಸಮಸ್ಯೆ ಕುರಿತು ಸಂಚಾರ ಪೊಲೀಸರಿಗೆ ಪತ್ರ ಬರೆಯುತ್ತೇನೆ’ ಎಂದರು.ಜಯಮಹಲ್‌ ವಾರ್ಡ್‌ನ ಕರುಣಾಮೂರ್ತಿ, ‘ಕಮಲಾಬಾಯಿ ಶಾಲೆ ಬಳಿ ಸಿಗ್ನಲ್‌ ವ್ಯವಸ್ಥೆ ಸರಿಯಿಲ್ಲ. ಶಾಲಾ ಮಕ್ಕಳು ರಸ್ತೆ ದಾಟಲು ಪಡಿಪಾಟಲು ಅನುಭವಿಸಬೇಕಿದೆ’ ಎಂದರು.ಇದಕ್ಕೆ ದನಿಗೂಡಿಸಿದ ಶಾಲೆಯ  ಶಿಕ್ಷಕಿ ನಳಿನಿ, ‘ಶಾಲೆ ಬಳಿ  ಹಂಪ್‌ಗಳನ್ನು ಹಾಕಿಸಬೇಕು. 8 ವರ್ಷಗಳಿಂದ ಕೆಟ್ಟುನಿಂತಿರುವ ಸಿಗ್ನಲ್‌ ದೀಪಗಳನ್ನು ಸರಿಪಡಿಸಬೇಕು’ ಎಂದು ಒತ್ತಾಯಿಸಿದರು.ಇದಕ್ಕೆ ಉತ್ತರಿಸಿದ ಪಾಲಿಕೆ ಸದಸ್ಯ ಎಂ.ಕೆ.ಗುಣಶೇಖರ್‌, ‘ಕಮಲಾಬಾಯಿ ಶಾಲೆ ಬಳಿ ಸಂಚಾರ ಪೊಲೀಸರನ್ನು ನಿಯೋಜಿಸಬೇಕು ಎಂದು ಪೊಲೀಸ್‌ ಇಲಾಖೆಗೆ ಪತ್ರ ಬರೆದಿದ್ದೇನೆ. ಸಿಬ್ಬಂದಿ ಕೊರತೆ ಇದೆ. ಸಂಚಾರ ದಟ್ಟಣೆ ಅವಧಿಯಲ್ಲಿ ಪೊಲೀಸರನ್ನು ನಿಯೋಜಿಸುತ್ತೇವೆ ಎಂದು ಭರವಸೆ ನೀಡಿದ್ದರು’ ಎಂದು ತಿಳಿಸಿದರು.‘ನಿಮ್ಮ ಮಕ್ಕಳಿಗೆ ಹೀಗಾದರೆ’:

‘ಸಿಬ್ಬಂದಿ ಕೊರತೆ ನೆಪ ಹೇಳಿ ನುಣುಚಿಕೊಳ್ಳಬಾರದು. ಈ ವಿಷಯದಲ್ಲಿ ಸಂಚಾರ ಪೊಲೀಸರು ಎಚ್ಚರಿಕೆ ವಹಿಸಬೇಕು. ನಿಮ್ಮ ಮಕ್ಕಳಿಗೆ ಹೀಗಾದರೆ ಏನು ಮಾಡುತ್ತೀರಿ. ಮಕ್ಕಳನ್ನು ಶಾಲೆಗೆ ಕಳುಹಿಸುವಾಗ ಪೋಷಕರಿಗೆ ಎಷ್ಟು ಭಯವಾಗುತ್ತದೆ. ಕಮಲಾಬಾಯಿ ಶಾಲೆಯ ಬಳಿ ಬೆಳಿಗ್ಗೆ, ಮಧ್ಯಾಹ್ನ ಹಾಗೂ ಸಂಜೆ ಸಂಚಾರ ಪೊಲೀಸರನ್ನು ನಿಯೋಜಿಸಬೇಕು’ ಎಂದು ರೋಷನ್‌ ಬೇಗ್‌ ಸೂಚನೆ ನೀಡಿದರು.‘ಶಿವಾಜಿನಗರ ಕ್ಷೇತ್ರದಲ್ಲಿ ಪಾರ್ಕಿಂಗ್‌ ಸಮಸ್ಯೆ ಇದೆ. ಇದು ಹಳೇ ಬೆಂಗಳೂರಿನ ಪ್ರದೇಶ. ಆಗ ಜನಸಂಖ್ಯೆ ಹಾಗೂ ವಾಹನಗಳ ಸಂಖ್ಯೆ ಕಡಿಮೆ ಇತ್ತು. ಈಗ ಅವುಗಳ ಸಂಖ್ಯೆ ಹೆಚ್ಚಾಗಿದೆ. ವಿದೇಶಗಳಲ್ಲಿ ಉಚಿತ ಪಾರ್ಕಿಂಗ್‌ ವ್ಯವಸ್ಥೆ ಇಲ್ಲ. ನಮ್ಮಲ್ಲಿ ಎಲ್ಲವೂ ಉಚಿತ. ನಮ್ಮ ಜನರಿಗೆ ಸಂಚಾರ ನಿಯಮಗಳ ಬಗ್ಗೆ ಅರಿವಿಲ್ಲ. ಅಂಗಡಿ ಮಾಲೀಕರು ಒಂದೆರಡು ಕಾರುಗಳನ್ನು ರಸ್ತೆ ಮಧ್ಯದಲ್ಲೇ ನಿಲ್ಲಿಸಿರುತ್ತಾರೆ. ಇದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ’ ಎಂದರು.‘ಕ್ಷೇತ್ರದಲ್ಲಿ ದೋಬಿ ಘಾಟ್‌ ಇತ್ತು. ಅದನ್ನು ಮುಚ್ಚಿ, ಬಹುಮಹಡಿ ಪಾರ್ಕಿಂಗ್‌ ಕಟ್ಟಡ ನಿರ್ಮಿಸಲು ಮುಂದಾಗಿದ್ದೆವು. ಆದರೆ, ಇದು ನಮ್ಮ ಜಾಗ, ಇಲ್ಲಿ ಯಾವುದೇ ಕಟ್ಟಡ ನಿರ್ಮಿಸಬಾರದು ಎಂದು ರಕ್ಷಣಾ ಇಲಾಖೆಯವರು ತಂತಿ ಬೇಲಿ ಹಾಕಿದರು. ಅಲ್ಲಿ ಕಟ್ಟಡ ನಿರ್ಮಾಣವಾಗಿದ್ದಿದ್ದರೆ ಪಾರ್ಕಿಂಗ್‌ ಸಮಸ್ಯೆ ಸ್ವಲ್ಪಮಟ್ಟಿಗೆ ನಿವಾರಣೆ ಆಗುತ್ತಿತ್ತು’ ಎಂದು ಹೇಳಿದರು.

ಅಜಯ್‌ ಕೃಷ್ಣ ಯಾದವ್‌ ಅವರು ಮಾಧವನಗರ ವೃತ್ತ, ಎಸ್‌.ರವೀಂದ್ರ ಅವರು ಒಪಿಎಚ್‌ ರಸ್ತೆ, ಸೆಪ್ಪಿಂಗ್ ರಸ್ತೆಯಲ್ಲಿ ಬೀದಿಬದಿ ವ್ಯಾಪಾರಿಗಳ ಹಾವಳಿ ಬಗ್ಗೆ ಗಮನ ಸೆಳೆದರು. ಹೊಯ್ಸಳ ವಾಹನದವರು  ಕ್ರಮ ಕೈಗೊಳ್ಳುವುದನ್ನು ಬಿಟ್ಟು ಮಾಮೂಲಿ ವಸೂಲಿ ಮಾಡುತ್ತಾರೆ ಎಂದೂ ದೂರಿದರು. ಈ ಸಮಸ್ಯೆಗಳನ್ನು ಬಗೆಹರಿಸುವುದಾಗಿ ರೋಷನ್‌ ಬೇಗ್‌ ತಿಳಿಸಿದರು.ಪಾಲಿಕೆ ಸದಸ್ಯೆ ಬದಲು ಪತಿಯಿಂದ ಉತ್ತರ!

ರಾಮಸ್ವಾಮಿಪಾಳ್ಯದ ಪಾಲಿಕೆ ಸದಸ್ಯೆ ನೇತ್ರಾವತಿ ಕೃಷ್ಣೇಗೌಡ ಅವರು ಕಾರ್ಯಕ್ರಮದಲ್ಲಿ ಇದ್ದರೂ ಆ ವಾರ್ಡ್‌ಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಅವರ ಪತಿ ಕೃಷ್ಣೇಗೌಡ ಉತ್ತರಿಸಿದರು. ಪತ್ನಿಯ ಹೆಸರಿನಲ್ಲಿಯೇ ಅವರು ಪರಿಚಯ ಮಾಡಿಕೊಂಡರು.ಸ್ಕೈವಾಕ್‌ ಮಾಫಿಯಾ

‘ನಗರದಲ್ಲಿ ಅಗತ್ಯ ಇಲ್ಲದ ಕಡೆಗಳಲ್ಲಿ ಸ್ಕೈವಾಕ್‌ಗಳನ್ನು ನಿರ್ಮಿಸಲಾಗಿದೆ. ಇದು ಜಾಹೀರಾತುದಾರರ ಮಾಫಿಯಾ. ಸೊಫಿಯಾ ಶಾಲೆಯ ಬಳಿ ಯಾರೋ ಸ್ಕೈವಾಕ್‌ ನಿರ್ಮಿಸಿದ್ದಾರೆ. ಅದನ್ನು ಯಾರೂ ಬಳಸುವುದಿಲ್ಲ. ಲಿಫ್ಟ್‌ ಮತ್ತು ಎಸ್ಕಲೇಟರ್‌ ಸೌಲಭ್ಯವಿಲ್ಲದೆ ಸ್ಕೈವಾಕ್‌ಗಳನ್ನು ನಿರ್ಮಿಸಬಾರದು’ ಎಂದು ರೋಷನ್ ಬೇಗ್‌ ತಿಳಿಸಿದರು.‘ಪೊಲೀಸ್‌ ಭದ್ರತೆ ಕಲ್ಪಿಸಿ’

‘ಜಯಮಹಲ್‌ ಎಕ್ಸ್‌ಟೆನ್ಷನ್‌ನಲ್ಲಿ  ಯುವಕ–ಯುವತಿಯರು ಮನೆಗಳ ಮುಂದೆ ಬೈಕ್‌, ಕಾರುಗಳನ್ನು ನಿಲ್ಲಿಸಿಕೊಂಡು ಅಸಭ್ಯವಾಗಿ ವರ್ತಿಸುತ್ತಾರೆ. ರಸ್ತೆಯಲ್ಲಿ ಗಂಟೆಗಟ್ಟಲೇ ಓಡಾಡುತ್ತಾ ಕಾಲ ಕಳೆಯುತ್ತಾರೆ.  ಕೆಲವರು ಕಾರು ನಿಲ್ಲಿಸಿ ಅದರ ಮೇಲೆ ಹೊದಿಕೆ ಹಾಕುತ್ತಾರೆ. ಬಳಿಕ ಅವರು ಕಾರಿನ ಒಳಗೆ ಸೇರಿಕೊಳ್ಳುತ್ತಾರೆ’ ಎಂದು ಬೌರಿಂಗ್‌ ಆಸ್ಪತ್ರೆಯ ವೈದ್ಯೆ ಡಾ.ಪೂರ್ಣಿಮಾ ದೂರಿದರು.

‘ಈ ಬಗ್ಗೆ ಜೆ.ಸಿ.ನಗರ ಪೊಲೀಸರಿಗೆ ದೂರು ನೀಡಿದ್ದೆ. ಆದರೆ, ಪೊಲೀಸರು ನನ್ನ ವಿವರಗಳನ್ನು ಆರೋಪಿಗಳಿಗೆ ನೀಡಿದ್ದರು. ಅವರು ಮನೆ ಬಳಿ ಬಂದು ಧಮ್ಕಿ ಹಾಕಿದ್ದರು’ ಎಂದು ಅಳಲು ತೋಡಿಕೊಂಡರು.ಇದಕ್ಕೆ ಪ್ರತಿಕ್ರಿಯಿಸಿದ ರೋಷನ್‌ ಬೇಗ್‌, ‘ಗಸ್ತು ತಿರುಗುವಂತೆ ಪೊಲೀಸರಿಗೆ ಸೂಚಿಸುತ್ತೇನೆ. ಆದರೆ, ಪ್ರೇಮಿಗಳು ಉದ್ಯಾನದಲ್ಲಿ ತಿರುಗಾಡುವುದಕ್ಕೆ ಕಡಿವಾಣ ಹಾಕಲು ಸಾಧ್ಯವಿಲ್ಲ. ಓದುವ ಸಂದರ್ಭದಲ್ಲಿ ನಾನೂ ಉದ್ಯಾನಗಳಿಗೆ ಹೋಗುತ್ತಿದ್ದೆ’ ಎಂದು ಹೇಳಿದರು.ಉತ್ಕೃಷ್ಟವಾದ ಸಂಚಾರ ಜಾಲ ವ್ಯವಸ್ಥೆ

‘ಶಿವಾಜಿನಗರದಲ್ಲಿ ಉತ್ತಮ ರಸ್ತೆ, ವಿಸ್ತಾರವಾದ ಪಾದಚಾರಿ ಮಾರ್ಗ, ಕ್ರೀಡಾಂಗಣ, ಉದ್ಯಾನ ಒಳಗೊಂಡ ಸುಂದರ ಸಂಚಾರ ಜಾಲ ರೂಪಿಸಲು ಯೋಜಿಸಲಾಗಿದೆ. ಜನಾಗ್ರಹ ಸಂಘಟನೆ ₹1.40 ಕೋಟಿ ವೆಚ್ಚದಲ್ಲಿ ಸಮಗ್ರ ಯೋಜನಾ ವರದಿ ಸಿದ್ಧಪಡಿಸಿದೆ. ಸಚಿವ ಸಂಪುಟದ ಎದುರು ಈ ಪ್ರಸ್ತಾವ ಇಡಲಾಗಿದೆ’ ಎಂದು ರೋಷನ್‌ ಬೇಗ್‌ ಹೇಳಿದರು.ಗುರುನಾನಕ್‌ ಭವನದ ದೀರ್ಘಕಾಲದ ಗುತ್ತಿಗೆಗೆ ಮನವಿ

‘ಗುರುನಾನಕ್‌ ಭವನದಲ್ಲಿ ಆಸನ ಹಾಗೂ ದೀಪದ ವ್ಯವಸ್ಥೆ, ಫ್ಯಾನ್‌ಗಳು ಸರಿಯಿಲ್ಲ. ಇದರ ಬಾಡಿಗೆ, ನಿರ್ವಹಣೆಗೆ ತಿಂಗಳಿಗೆ ₹1.75 ಲಕ್ಷ ಖರ್ಚು ಮಾಡುತ್ತಿದ್ದೇವೆ. ಭವನವನ್ನು ನವೀಕರಿಸಲು ಕೇಂದ್ರ ಸರ್ಕಾರ ₹2.5 ಕೋಟಿ ನೀಡಲು ಸಿದ್ಧವಿದೆ. ದೀರ್ಘಕಾಲದವರೆಗೆ ಗುತ್ತಿಗೆಗೆ ನೀಡಿದರೆ ಇದನ್ನು ನಾವು ಅಭಿವೃದ್ಧಿಪಡಿಸುತ್ತೇವೆ’ ಎಂದು ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರು ಕೇಂದ್ರದ ನಿರ್ದೇಶಕ ಸಿ.ಬಸವಲಿಂಗಯ್ಯ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ರೋಷನ್‌ ಬೇಗ್‌, ‘ಭವನ ನವೀಕರಣ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುತ್ತೇನೆ’ ಎಂದು ತಿಳಿಸಿದರು.‘ಲೋಕಾಯಕ್ತಕ್ಕೆ ದೂರು ಕೊಡಿ’

‘ನಮ್ಮ ಭಾಗದಲ್ಲಿ ಸಣ್ಣಪುಟ್ಟ ಕೆಲಸಗಳೂ ಆಗಿಲ್ಲ. ಆದರೆ, 2015–16ರಲ್ಲಿ ಅಭಿವೃದ್ಧಿ ಕೆಲಸ ಆಗಿದೆ ಎಂದು  ಗುತ್ತಿಗೆದಾರ ಗಲಗಲಿ ವೆಂಕಟೇಶ್‌ ₹2 ಕೋಟಿ ಹಣ ಪಡೆದಿದ್ದಾರೆ. ಬೀದಿದೀಪಗಳ ವೆಚ್ಚ ₹49.50 ಲಕ್ಷ ತೋರಿಸಿದ್ದಾರೆ. ಅವರು ಯಾರು ಎಂಬುದೇ ನಮಗೆ ಗೊತ್ತಿಲ್ಲ’ ಎಂದು ಹಲಸೂರು ಕೆರೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಪುರುಷೋತ್ತಮ್‌ ದೂರಿದರು.

ಇದಕ್ಕೆ ಉತ್ತರಿಸಿದ ರೋಷನ್‌ ಬೇಗ್, ‘ಅಲ್ಲಿ ಮೋಸ ಆಗಿರುವುದು ಮೇಲುನೋಟಕ್ಕೆ ತಿಳಿಯುತ್ತಿದೆ. ಈ ಬಗ್ಗೆ ಜನರೇ ಲೋಕಾಯುಕ್ತಕ್ಕೆ ದೂರು ನೀಡಬೇಕು. ಸರ್ಕಾರದ ಕೆಲಸಗಳ ಮೇಲೆ ಜನರು ನಿಗಾ ಇಟ್ಟರೆ ಉತ್ತಮ ಕೆಲಸಗಳು ಆಗುತ್ತವೆ. ಇಂತಹ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು’ ಎಂದು ಹೇಳಿದರು.ಮತ್ತೊಂದು ಸರ್ಕಾರಿ ವೈದ್ಯಕೀಯ ಕಾಲೇಜು

‘ಬೌರಿಂಗ್‌ ಆಸ್ಪತ್ರೆ ಆವರಣದಲ್ಲಿ ₹172 ಕೋಟಿ ವೆಚ್ಚದಲ್ಲಿ ವೈದ್ಯಕೀಯ ಕಾಲೇಜು ನಿರ್ಮಾಣ ಮಾಡಲಾಗುತ್ತದೆ. 12 ಅಂತಸ್ತಿನ ಕಟ್ಟಡ ಇದಾಗಿದ್ದು, 200 ವೈದ್ಯರು ಇರಲಿದ್ದಾರೆ. ಅಲ್ಲದೆ, ನಾರಾಯಣ ಹೃದಯಾಲಯದ ಸಹಯೋಗದಲ್ಲಿ ₹18 ಕೋಟಿ ವೆಚ್ಚದಲ್ಲಿ ‘ಬಿಬಿಎಂಪಿ  ಎನ್‌ಎಚ್‌’ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲಾಗುತ್ತಿದೆ. ನಾರಾಯಣ ಹೃದಯಾಲಯದ ಅಧ್ಯಕ್ಷ ದೇವಿಶೆಟ್ಟಿ ₹25 ಕೋಟಿ ವೆಚ್ಚದ ಉಪಕರಣಗಳನ್ನು ಈ ಆಸ್ಪತ್ರೆಗೆ ನೀಡುತ್ತಿದ್ದಾರೆ’ ಎಂದು ರೋಷನ್‌ ಬೇಗ್‌ ತಿಳಿಸಿದರು.ಪಟಾಫಟ್‌ ಪ್ರಶ್ನೆ– ಪಟಪಟನೆ ಉತ್ತರ


ಪಿ. ರಮೇಶ್‌, ಹಲಸೂರು: ಕುಡಿಯುವ ನೀರಿನ ಜತೆಗೆ ಒಳಚರಂಡಿ ನೀರು ಸೇರುತ್ತಿದೆ. ಒಳಚರಂಡಿ ಕಟ್ಟಿಕೊಂಡು ಕೊಳಚೆ ನೀರು ರಸ್ತೆ ಮೇಲೆ ಹರಿಯುತ್ತದೆ. ಈ ಬಗ್ಗೆ ಅಧಿಕಾರಿಗಳಿಗೆ, ಪಾಲಿಕೆ ಸದಸ್ಯರಿಗೆ ದೂರು ನೀಡಿದ್ದೇನೆ. ಆದರೆ, ಯಾವುದೇ ಪ್ರಯೋಜನ ಆಗಿಲ್ಲ.

ಕಾಂತ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ (ತ್ಯಾಜ್ಯ ನೀರು ನಿರ್ವಹಣೆ): ಒಳಚರಂಡಿ ದುರಸ್ತಿಗೆ ಈಗಾಗಲೇ ಟೆಂಡರ್‌ ಆಗಿದೆ. ಶೀಘ್ರದಲ್ಲಿ ಆ ಸಮಸ್ಯೆ ಬಗೆಹರಿಸುತ್ತೇನೆ.‌

*ವಿದ್ಯಾ, ವಸಂತನಗರ: ಪ್ರತಿ ವರ್ಷವೂ ಸರಿಯಾಗಿ ಆಸ್ತಿ ತೆರಿಗೆಕಟ್ಟುತ್ತಿದ್ದೇನೆ. ಆದರೆ, ಈ ವರ್ಷ ನಾನು ಕಟ್ಟಿದ ತೆರಿಗೆಗೆ ಮತ್ತೊಬ್ಬರ ಹೆಸರಿನ ರಶೀದಿ ನೀಡಿದ್ದಾರೆ. ಇದನ್ನು ಸರಿಪಡಿಸಿ ಎಂದು ಬಿಬಿಎಂಪಿ ಕಚೇರಿಗೆ ದಿನಗಟ್ಟಲೆ ಅಲೆದಿದ್ದೇನೆ. ಇನ್ನೂ ಸಮಸ್ಯೆ ಬಗೆಹರಿದಿಲ್ಲ.

ಲಕ್ಷ್ಮಿದೇವಿ, ಉಪ ಆಯುಕ್ತೆ, ಕಂದಾಯ ವಿಭಾಗ: ಆನ್‌ಲೈನ್‌ ಮೂಲಕ ಆಸ್ತಿ ತೆರಿಗೆ ಪಾವತಿಸುವ ತಂತ್ರಾಂಶದಲ್ಲಿ ತೊಂದರೆ ಉಂಟಾಗಿತ್ತು. ಹೆಸರು ಬದಲಾವಣೆಗಾಗಿ ತಂತ್ರಾಂಶ ಅಭಿವೃದ್ಧಿಪಡಿಸಿದ ಎನ್‌ಐಸಿಗೆ ಕಳುಹಿಸಿದ್ದೇವೆ. ಶೀಘ್ರದಲ್ಲೇ ಸರಿಹೋಗಲಿದೆ.

*ದುರೇಶ್ವರಾ, ಭಾರತಿನಗರ: ನಮ್ಮ ಮನೆಯ ಬಳಿಯೇ ಕಸದ ತೊಟ್ಟಿ ಇಟ್ಟಿದ್ದಾರೆ. ಇದನ್ನು ತೆರವು ಮಾಡುವಂತೆ ಅನೇಕ ಬಾರಿ ಕೋರಿದ್ದೇನೆ.  ಎಲ್ಲರೂ ಇಲ್ಲಿಗೆ ಕಸ ತಂದು ಸುರಿಯುತ್ತಾರೆ. ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಿಸುತ್ತಿದ್ದೇವೆ.

ಸರ್ಫರಾಜ್‌ ಖಾನ್‌, ಜಂಟಿ ಆಯುಕ್ತ: ಕಸದ ತೊಟ್ಟಿಯನ್ನು ತೆರವುಗೊಳಿಸುತ್ತೇವೆ. ಸೋಮವಾರವೇ ನಮ್ಮ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಲಿದ್ದಾರೆ.

*ಮಹೇಂದ್ರನಾಥ್‌, ವಸಂತನಗರ: ರೈಲ್ವೆ ಸಮಾನಾಂತರ ರಸ್ತೆಯನ್ನು ಪದೇಪದೇ ಅಗೆದು ಡಾಂಬರು ಹಾಕುತ್ತಿರುವುದರಿಂದ ರಸ್ತೆ ಎತ್ತರಗೊಂಡಿದೆ. ನಾನು ಅಲ್ಲಿ ಮನೆ ಕಟ್ಟಿದಾಗ ರಸ್ತೆಗೆ ಸಮವಾಗಿತ್ತು. ಆದರೆ, ಈಗ ತಗ್ಗಿನಲ್ಲಿ ಇರುವಂತೆ ಆಗಿದೆ. ಇದರಿಂದ ಮಳೆ ನೀರು ಮನೆಯೊಳಗೆ ನುಗ್ಗುತ್ತದೆ.

ಸಂಪತ್‌ ಕುಮಾರ್‌, ಪಾಲಿಕೆ ಸದಸ್ಯ: ಜಲಮಂಡಳಿಯವರು ಪೈಪ್‌ಲೈನ್‌ ಅಳವಡಿಸಲು ರಸ್ತೆ ಅಗೆದಿದ್ದಾರೆ. ನಗರೋತ್ಥಾನ ಯೋಜನೆಯಲ್ಲಿ ಈ ರಸ್ತೆ ಅಭಿವೃದ್ಧಿಗೆ ಹಣ ಮೀಸಲಿಡಲಾಗಿದೆ. ಶೀಘ್ರ ಕಾಮಗಾರಿ ಪ್ರಾರಂಭವಾಗುತ್ತದೆ.

*

ಆರ್‌. ಆನಂದ್‌, ವಸಂತನಗರ: ಈ ಭಾಗದಲ್ಲಿ ನಿರ್ಮಿಸಲಾಗಿರುವ ಬಿಬಿಎಂಪಿ ವಾಣಿಜ್ಯ ಕಟ್ಟಡದಲ್ಲಿ ಶೌಚಾಲಯ ವ್ಯವಸ್ಥೆ ಇಲ್ಲ. ಇದರಿಂದ ಅಲ್ಲಿನ ವ್ಯಾಪಾರಿಗಳು ರಸ್ತೆಯಲ್ಲೇ ಮೂತ್ರ ವಿಸರ್ಜನೆ ಮಾಡುತ್ತಾರೆ. ವಸಂತನಗರ 6ನೇ ಅಡ್ಡರಸ್ತೆ ಅಭಿವೃದ್ಧಿ ಮಾಡಲಾಗಿದೆ ಎಂದು ₹88 ಲಕ್ಷದ ಬಿಲ್‌ ನೀಡಿದ್ದಾರೆ. ಆದರೆ, ಯಾವುದೇ ರೀತಿಯ ಕೆಲಸ ಇಲ್ಲಿ ನಡೆದಿಲ್ಲ. ಅಲ್ಲಿ ನಡೆದಿರುವ ಅಕ್ರಮದ ಬಗ್ಗೆ ಪರಿಶೀಲಿಸಬೇಕು.

ಸಂಪತ್‌ ಕುಮಾರ್‌, ಪಾಲಿಕೆ ಸದಸ್ಯ: ರಾಜ್ಯ ವಿಶೇಷ ಅನುದಾನದಡಿ (ಎಸ್‌ಎಫ್‌ಸಿ) ₹49 ಲಕ್ಷ ಬಿಡುಗಡೆಯಾಗಿದ್ದು, ಶೀಘ್ರ ಅಲ್ಲಿ ಶೌಚಾಲಯ ನಿರ್ಮಿಸುತ್ತೇವೆ. ಅಲ್ಲದೆ 6ನೇ ಅಡ್ಡರಸ್ತೆಯಲ್ಲಿ ರಸ್ತೆ ಪೂರ್ತಿ ಹದಗೆಟ್ಟಿದ್ದು, ಅದನ್ನು ಸಂಪೂರ್ಣ ದುರಸ್ತಿ ಮಾಡುತ್ತೇವೆ. ರಸ್ತೆ ಕಾಮಗಾರಿಯಲ್ಲಿ ಅಕ್ರಮ ಆಗಿರುವ ಬಗ್ಗೆ ಈಗಾಗಲೇ ನಾನು ಆಯುಕ್ತರಿಗೆ ಪತ್ರ ಬರೆದಿದ್ದೇನೆ. ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲು ಜಂಟಿ ಆಯುಕ್ತರಿಗೂ ಕೇಳಿಕೊಳ್ಳುತ್ತೇನೆ.

*

ಅನುಪಮಾ, ಹಲಸೂರು: ನಮ್ಮ ಬಡಾವಣೆಯಲ್ಲಿ ಬೀದಿ ದೀಪಗಳು ಸರಿಯಾಗಿಲ್ಲ. ಹಲಸೂರು ಕೆರೆಯನ್ನು ಅಭಿವೃದ್ಧಿ ಪಡಿಸಿ ನಡಿಗೆದಾರರಿಗೆ ಅವಕಾಶ ಕಲ್ಪಿಸಬೇಕು.

ರೋಷನ್‌ ಬೇಗ್‌, ಸಚಿವ: ಪ್ರೆಸ್ಟೀಜ್‌ ಗ್ರೂಪ್‌ನವರು ₹100 ಕೋಟಿ ವೆಚ್ಚದಲ್ಲಿ ಹಲಸೂರು ಕೆರೆಯನ್ನು ಅಭಿವೃದ್ಧಿ ಪಡಿಸಲು ಮುಂದೆ ಬಂದಿದ್ದಾರೆ. ಈಗಾಗಲೇ ಒಳಚರಂಡಿ ಪೈಪ್‌ಗಳು ಎಲ್ಲೆಲ್ಲಿ ಇವೆ ಎಂಬ ಬಗ್ಗೆ ಸಮೀಕ್ಷೆ ನಡೆಸಿ, ವರದಿ ಸಿದ್ಧಪಡಿಸಿದ್ದೇವೆ. ನಿರ್ವಹಣೆಯ ಹೊಣೆಯನ್ನೂ ಅವರಿಗೆ ವಹಿಸಿದ್ದೇವೆ. ಈಗಾಗಲೇ ಸುಸಜ್ಜಿತವಾದ ಈಜುಕೊಳ ಅಲ್ಲಿ ನಿರ್ಮಾಣವಾಗಿದೆ. ಇದು ಸುಂದರ ಕೆರೆಯಾಗಿ ಪರಿವರ್ತನೆ ಆಗಲಿದೆ.

*

ಜ್ಯೋತಿ, ರಾಮಸ್ವಾಮಿಪಾಳ್ಯ: ಎಂ.ಕೆ.ಗಾರ್ಡನ್‌ನಲ್ಲಿ ರಸ್ತೆಯ ನಡುವೆಯೇ ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಅವು ಹಳೇ ಮನೆಗಳಾಗಿದ್ದು, ಯಾವಾಗ ಬೀಳುತ್ತವೋ ಎನ್ನುವ ಭಯದಲ್ಲೇ ಓಡಾಡುತ್ತಿದ್ದೇವೆ. ಮಕ್ಕಳನ್ನು ಹೊರಗೆ ಕಳುಹಿಸಲು ಭಯವಾಗುತ್ತದೆ.

ಕೃಷ್ಣೇಗೌಡ (ಪಾಲಿಕೆ ಸದಸ್ಯೆ ನೇತ್ರಾವತಿ ಪತಿ): ರಸ್ತೆ ತುಂಬಾ ಕಿರಿದಾಗಿದೆ ಎಂಬ ಬಗ್ಗೆ ಪರಿಶೀಲಿಸಿದ್ದೇವೆ. ₹5 ಕೋಟಿ ಅನುದಾನದಲ್ಲಿ ರಸ್ತೆ ವಿಸ್ತರಣೆ ಮತ್ತು ಕುಡಿಯುವ ನೀರಿನ ಘಟಕವನ್ನು ಅಲ್ಲಿ ನಿರ್ಮಾಣ ಮಾಡುತ್ತೇವೆ.

*

ಬಲಜಿತ್‌ ಸಿಂಗ್‌, ವಸಂತನಗರ: ನಮ್ಮ ಬಡಾವಣೆಯಲ್ಲಿರುವ ಗುರುದ್ವಾರದಲ್ಲಿ ವಾಹನ ನಿಲುಗಡೆ ಸಮಸ್ಯೆ ಇದೆ. ಅಲ್ಲಿನ ರಸ್ತೆಯೂ ಹದಗೆಟ್ಟಿದೆ. ಗುರುದ್ವಾರದ ಹಿಂದಿರುವ ನಾಲೆಯಿಂದ ದುರ್ವಾಸನೆ ಬರುತ್ತದೆ. ಮಳೆ ಬಂದರೆ ಅಲ್ಲಿ ಇರಲು ಸಾಧ್ಯವಾಗುವುದೇ ಇಲ್ಲ.

ಸರ್ಫರಾಜ್‌ ಖಾನ್‌, ಜಂಟಿ ಆಯುಕ್ತ: ಸಂಚಾರ ಪೊಲೀಸರೊಂದಿಗೆ ಮಾತುಕತೆ ನಡೆಸಿ ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ.

*

ನಾಗರಾಜ್‌, ರಾಮಸ್ವಾಮಿಪಾಳ್ಯ: ಬಡಾವಣೆಯಲ್ಲಿ ಶೌಚಾಲಯದ ವ್ಯವಸ್ಥೆ ಸರಿಯಾಗಿಲ್ಲ. ಹೊಯ್ಸಳದವರು ಸರಿಯಾಗಿ ಗಸ್ತು ತಿರುಗುವುದಿಲ್ಲ. ವಿದ್ಯಾರ್ಥಿಗಳು ರಸ್ತೆಗಳಲ್ಲೇ ಮಾದಕ ವಸ್ತುಗಳನ್ನು ಸೇವಿಸುತ್ತಾರೆ.

ಕೃಷ್ಣೇಗೌಡ: ನಮ್ಮ ವಾರ್ಡ್‌ಗೆ ಪ್ರತ್ಯೇಕ ಜಟ್ಟಿಂಗ್‌ ಮತ್ತು ಸಕ್ಕಿಂಗ್‌ ಯಂತ್ರವನ್ನು ನೀಡುವಂತೆ ಜಲಮಂಡಳಿಗೆ ಕೋರಿದ್ದೇವೆ. ಶೌಚಾಲಯ ಸಮಸ್ಯೆ ಬಗೆಹರಿಸುತ್ತೇವೆ.

*

ನರಸಿಂಹಮೂರ್ತಿ, ಸಂಪಂಗಿರಾಮನಗರ: ವುಡ್‌ಲ್ಯಾಂಡ್‌ ಹೋಟೆಲ್‌ನವರು ತೊಟ್ಟಿ ನಿರ್ಮಿಸಿ ಅದರಲ್ಲಿ ಹಸಿಕಸವನ್ನು ಹಾಕುತ್ತಿದ್ದಾರೆ. 3–4 ದಿನಗಳಾದರೂ ಕಸವನ್ನು ತೆರವು ಮಾಡುವುದಿಲ್ಲ. ಕೊಳೆತ ವಾಸನೆ ಬರುತ್ತದೆ. ಸೊಳ್ಳೆ ಕಾಟವೂ ಹೆಚ್ಚಿದೆ. ಸೊಳ್ಳೆ ಪರದೆ ಒಳಗೆ ಕೂತು ಊಟ ಮಾಡಬೇಕಾದ ಪರಿಸ್ಥಿತಿ ಇದೆ.

ವಸಂತ್‌ ಕುಮಾರ್‌, ಪಾಲಿಕೆ ಸದಸ್ಯ: ಪ್ರತಿದಿನ ಕಸವನ್ನು ತೆರವು ಮಾಡುವಂತೆ ಹೋಟೆಲ್‌ ಮಾಲೀಕರಿಗೆ ಸೂಚಿಸುತ್ತೇನೆ.

*

ಕಿಶೋರ್‌ ಸಿಂಗ್‌, ವಸಂತನಗರ: ಮೌಂಟ್‌ ಕಾರ್ಮೆಲ್‌ ಕಾಲೇಜಿಗೆ ಆಟದ ಮೈದಾನವನ್ನು ಲೀಸ್‌ಗೆ ನೀಡಿದ್ದು, ಸಾರ್ವಜನಿಕ ಬಳಕೆಗೆ ಬಿಟ್ಟುಕೊಡುತ್ತಿಲ್ಲ. ಕಾಲೇಜಿನವರು ಬಿಡಿಎಗೆ ₹1 ಬಾಡಿಗೆ ಪಾವತಿಸುತ್ತಿದ್ದಾರೆ. ಆದರೆ, ಬೇರೆಯವರಿಗೆ ₹10,000ಕ್ಕೆ ಬಾಡಿಗೆಗೆ ನೀಡುತ್ತಿದ್ದಾರೆ.

ಸಂಪತ್‌ ಕುಮಾರ್‌, ಪಾಲಿಕೆ ಸದಸ್ಯ: ಈ ಪ್ರಕರಣ ನ್ಯಾಯಾಲಯದಲ್ಲಿದೆ. ಇದರ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ.ಶಾಸಕರ ಪ್ರಮುಖ ಭರವಸೆ

* ನೀರಿನ ಟ್ಯಾಂಕರ್‌ ಮಾಫಿಯ ತಡೆಗಟ್ಟಲು ಕ್ರಮಕೈಗೊಳ್ಳುತ್ತೇನೆ

* ಅಗತ್ಯ ಇರುವ ಕಡೆ ಸ್ಕೈವಾಕ್‌ ನಿರ್ಮಾಣ ಮಾಡಲಾಗುತ್ತದೆ

* ಶಿವಾಜಿನಗರದಲ್ಲಿ ಸುಂದರ ಸಂಚಾರ ಜಾಲ ನಿರ್ಮಾಣ

* ಹಲಸೂರು ಕೆರೆಯನ್ನು ಸಂಪೂರ್ಣ ಅಭಿವೃದ್ಧಿಗೊಳಿಸಿ, ಸುಂದರ ಕೆರೆಯನ್ನಾಗಿ ಮಾಡಲಾಗುತ್ತದೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry