ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭತ್ತದ ಸಸಿಮಡಿ ಸಿದ್ಧಪಡಿಸಲು ಅಡ್ಡಿ

Last Updated 18 ಜೂನ್ 2017, 5:19 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ಮಲೆನಾಡಿನಲ್ಲಿ ಈ ಬಾರಿಯೂ ಮಳೆಯ ಕೊರತೆ ಎಂಟಾಗಿರುವುದರಿಂದ ಭತ್ತದ ಸಸಿಮಡಿಗಳನ್ನು ಸಿದ್ಧಪಡಿಸಿಕೊಳ್ಳಲು ಮಕ್ಕಿಗದ್ದೆ (ಮಳೆಯಾಶ್ರಿತ) ರೈತರಿಗೆ ತೊಂದರೆಯಾಗಿದೆ. ಜೂನ್‌ ಆರಂಭದಲ್ಲಿ ಉತ್ತಮ ಮಳೆಯ ಭರವಸೆ ಮೂಡಿಸಿದ್ದ ಮುಂಗಾರು ನಂತರ ಕ್ಷೀಣಿಸಿದೆ. ನೀರಿನ ಸೌಲಭ್ಯ ಹೊಂದಿರುವ ರೈತರು ಮಾತ್ರ ನಿಗದಿತ ಸಮಯದಲ್ಲಿ ಭತ್ತದ ಸಸಿಮಡಿಗಳನ್ನು ಸಿದ್ಧಪಡಿಸಿ ಕೊಳ್ಳುತ್ತಿದ್ದಾರೆ. ಮಕ್ಕಿಗದ್ದೆ ರೈತರು ಆಗಸದತ್ತ ಮುಖ ಮಾಡುವಂತಾಗಿದೆ.

ಮಲೆನಾಡಿನ ರೈತರು ಜೂನ್‌ 20ರ ಹೊತ್ತಿಗೆ ಭತ್ತದ ಸಸಿಮಡಿಗಳನ್ನು ಸಿದ್ಧಪಡಿಸಿಕೊಂಡು ಜುಲೈ ಎರಡನೇ ವಾರದಲ್ಲಿ ನಾಟಿ ಕಾರ್ಯ ಆರಂಭಿಸುವುದು ವಾಡಿಕೆ. ಆದರೆ, ಈ ಬಾರಿ ಒಂದೆರಡು ದಿನಗಳಿಂದ ಮಳೆ ಕ್ಷೀಣಿಸಿದೆ.  ಮಳೆ ಆಧರಿಸಿ ಕೃಷಿ ಚಟುವಟಿಕೆ ನಡೆಸಬೇಕಾಗಿರುವುದರಿಂದ ಸಸಿನಾಟಿ ವಿಳಂಬವಾಗ ಬಹುದು ಎಂದು ರೈತರು ಅಭಿಪ್ರಾಯಪಡುತ್ತಾರೆ.

ಕಡಿಮೆಯಾದ ಭತ್ತದ ಪ್ರದೇಶ:  ತಾಲ್ಲೂಕಿನಲ್ಲಿ 13 ಸಾವಿರ ಹೆಕ್ಟೇರ್‌ ಭತ್ತ ಬೆಳೆಯುವ ಪ್ರದೇಶವಿದ್ದು, ಬಿತ್ತನೆ ಪ್ರಮಾಣ ಕಡಿಮೆಯಾಗಿದೆ. ಕೃಷಿ ಇಲಾಖೆಯಿಂದ ರೈತರು ಇದುವರೆಗೆ 7 ಕ್ವಿಂಟಲ್‌ ಬೀಜದ ಭತ್ತವನ್ನು ತೆಗೆದುಕೊಂಡು ಹೋಗಿದ್ದಾರೆ. 300 ಕ್ವಿಂಟಲ್‌ ಬೀಜದ ಭತ್ತವನ್ನು ತರಿಸಲಾಗಿದೆ. ಉತ್ತಮ ಮಳೆಗಾಗಿ ರೈತರು ಇನ್ನೂ ಒಂದೆರಡು ವಾರ ಕಾಯುತ್ತಾರೆ’ ಎಂದು ಕೃಷಿ ಅಧಿಕಾರಿ (ತಾಂತ್ರಿಕ) ಪ್ರವೀಣ್‌ ಮಾಹಿತಿ ನೀಡಿದ್ದಾರೆ.

2008ರಲ್ಲಿ ತಾಲ್ಲೂಕಿನಲ್ಲಿ 15 ಸಾವಿರ ಹೆಕ್ಟೇರ್‌ನಲ್ಲಿ ಭತ್ತ ಬೆಳೆಯಲಾಗುತ್ತಿತ್ತು. ಆದರೆ, 2016–17ರಲ್ಲಿ ಎರಡು ಸಾವಿರ ಹೆಕ್ಟೇರ್‌ ಪ್ರದೇಶ ಕಡಿಮೆಯಾಗಿದೆ. ಬಹುತೇಕ ಕಡೆ ಭತ್ತದ ಗದ್ದೆಗಳಲ್ಲಿ ಅಡಿಕೆ, ಶುಂಠಿ ಬೆಳೆಯಲಾಗುತ್ತಿದೆ. ಕೆಲವು ರೈತರು ಜಮೀನನ್ನು ಹಾಗೆಯೇ ಬಿಟ್ಟಿದ್ದಾರೆ.

ಈಗಾಗಲೇ ಐಇಟಿ ತುಂಗಾ, ಎಂಟಿಯು 1001, ಎಂಟಿಯು1010, ಜೆಜಿಎಲ್‌, ಅಭಿಲಾಷ್‌, ಇಂಟಾನ್‌, ಜಯಾ ಭತ್ತದ ತಳಿಗಳು ಲಭ್ಯವಿದೆ. ಮಲೆನಾಡಿನ ಮಳೆ ಹಾಗೂ ವಾತಾವರಣಕ್ಕೆ ಹೊಂದಿಕೆಯಾಗುವ ಭತ್ತದ ತಳಿಗಳನ್ನು ಬೆಳೆಯಲು ರೈತರಿಗೆ ಕೃಷಿ ಇಲಾಖೆ ಶಿಫಾರಸು ಮಾಡಿದೆ.

ಮಳೆ ಹೆಚ್ಚು ಬೀಳುವ ಆಗುಂಬೆ ಹೋಬಳಿ, ಮುತ್ತೂರು ಹೋಬಳಿ ಭಾಗದಲ್ಲಿ ದೀರ್ಘಾವಧಿ ತಳಿಗಳಾದ ಐಇಟಿ–13901(155 ದಿನಗಳ ಬೆಳೆ) ಅಭಿಲಾಷ್‌ (165 ದಿನಗಳ ಬೆಳೆ), ಇಂಟಾನ್‌ (165 ದಿನಗಳ ಬೆಳೆ) ಭತ್ತದ ತಳಿ ಬೆಳೆಯಲು ಸೂಚಿಸಲಾಗಿದೆ. ಮಕ್ಕಿಗದ್ದೆ ರೈತರಿಗೆ ಜೆಜಿಎಲ್‌(130 ದಿನಗಳ ಬೆಳೆ), ಎಂಟಿಯು (125 ದಿನಗಳು) ಅಲ್ಪಾವಧಿ ತಳಿಗಳಾದ ಜೆಜಿಎಲ್‌, ಎಂಟಿಯು 1010 ಹಾಗೂ ಜಯಾ (135 ದಿನಗಳು) ತಳಿಯನ್ನು ಮಧ್ಯಮವಾವಧಿ ಬೆಳೆ ಬೆಳೆಯಲು ಸಲಹೆ ನೀಡಲಾಗಿದೆ.

ಈ ಬಾರಿ ಮುಂಗಾರು ಶೇ 95ರಷ್ಟು ಸುರಿಯಲಿದೆ. ಜುಲೈ ತಿಂಗಳಲ್ಲಿ ಮಳೆ ಕೊರತೆಯಾಗಲಿದ್ದು, ಆಗಸ್ಟ್‌ನಲ್ಲಿ ಹೆಚ್ಚು ಬೀಳುವ ಸಾಧ್ಯತೆಯಿದೆ ಎಂಬ ಮಾಹಿತಿಯನ್ನು ಹವಾಮಾನ ಇಲಾಖೆ ನೀಡಿದೆ ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.

ಸಕಾಲಕ್ಕೆ ಮಳೆ ಆಗದಿದ್ದರೆ ಭತ್ತದ ಸಸಿ ನಾಟಿ ಮಾಡಲು ಸಾಧ್ಯವಾಗು ವುದಿಲ್ಲ. ಆಗ ಕಡಿಮೆ ನೀರನ್ನು ಬೇಡುವ ಮೆಕ್ಕೆಜೋಳದಂತಹ ಅಲ್ಪಾವಧಿ ಬೆಳೆ ಬೆಳೆಯಬೇಕಾದ ಅನಿವಾರ್ಯತೆ ಎದುರಾಗಬಹುದು ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

* * 

ಭತ್ತದ ಸಸಿಮಡಿ ಸಿದ್ಧಪಡಿಸಲು ನೀರಿನ ಕೊರತೆ ಇದೆ. ಮಳೆ ಬೀಳುವ ಪ್ರದೇಶ ಆಧರಿಸಿ ಬೀಜದ ಭತ್ತ ಪೂರೈಸಲಾಗುವುದು
– ಪ್ರವೀಣ್‌,
ಕೃಷಿ ಅಧಿಕಾರಿ (ತಾಂತ್ರಿಕ), ತೀರ್ಥಹಳ್ಳಿ


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT