ಹದಗೆಟ್ಟ ಗೂಗಲ್‌ ರಸ್ತೆ: ಸಂಚಾರಕ್ಕೆ ಹರಸಾಹಸ

7

ಹದಗೆಟ್ಟ ಗೂಗಲ್‌ ರಸ್ತೆ: ಸಂಚಾರಕ್ಕೆ ಹರಸಾಹಸ

Published:
Updated:
ಹದಗೆಟ್ಟ ಗೂಗಲ್‌ ರಸ್ತೆ: ಸಂಚಾರಕ್ಕೆ ಹರಸಾಹಸ

ದೇವದುರ್ಗ: ಕಳೆದ ನಾಲ್ಕು ವರ್ಷಗಳ ಹಿಂದೆಯೇ ದೇವದುರ್ಗದಿಂದ ಗೂಗಲ್‌ ಗ್ರಾಮದವರೆಗೂ ಸುಮಾರು 28 ಕಿ.ಮೀ ದೂರದ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಆಪ್ನೆಡಿಕ್ಸ್‌ ಯೋಜನೆ ಅಡಿಯಲ್ಲಿ ಸರ್ಕಾರ ಅನುದಾನ ನೀಡಿದರೂ ಸ್ಥಳೀಯ ಲೋಕೋಪಯೋಗಿ ಇಲಾಖೆ ನಿರ್ಲಕ್ಷ್ಯದಿಂದಾಗಿ ಕಾಮಗಾರಿ ಅಪೂರ್ಣಗೊಂಡಿದ್ದು, ಸಂಚಾರಕ್ಕೆ ತೊಂದರೆ ಎದುರಾಗಿದೆ.

ಪಟ್ಟಣದ ಕೊಪ್ಪರ ಕ್ರಾಸ್‌ದಿಂದ ಯಮನಾಳ, ರಾಮನಾಳ, ಕೊಪ್ಪರ ಮಾರ್ಗವಾಗಿ ಗೂಗಲ್‌ ಗ್ರಾಮದವರೆಗೂ 28 ಕಿ.ಮೀ ರಸ್ತೆಯನ್ನು ಕರ್ನಾಟಕ ರಸ್ತೆ ಅಭಿವೃದ್ಧಿ ಯೋಜನೆಯ ಅಡಿಯಲ್ಲಿ ಸರ್ಕಾರ ₹ 30 ಕೋಟಿ ಯನ್ನು ಮಂಜೂರು ಮಾಡಿದ ನಂತರ ಕಾಮಗಾರಿ ಗುತ್ತಿಗೆ ಪಡೆದ ಸಂಸ್ಥೆ ಆರಂಭದಲ್ಲಿ ಸುಮಾರು 5ಕಿ.ಮೀವರೆಗೂ ಕಾಮಗಾರಿ ಮಾಡಿ ನಂತರ ಕಳೆದ ಮೂರು ವರ್ಷಗಳಿಂದ ಈವರೆಗೂ ಇತ್ತಕಡೆ ಸುಳಿದಿಲ್ಲ.

ಬಾಕಿ ಉಳಿದ ಕಾಮಗಾರಿ ಬಗ್ಗೆ ಸಂಬಂಧಿಸಿದ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಗಮನ ಹರಿಸಬೇಕಾಗಿದ್ದರೂ ಇದಕ್ಕೆ ನಿರ್ಲಕ್ಷ್ಯ ಕಂಡು ಬಂದ ಕಾರಣ ಈವರೆಗೂ ಕಾಮಗಾರಿ ನನೆಗುದಿಗೆ ಬೀಳಲು ಮುಖ್ಯ ಕಾರಣವಾಗಿದೆ. ಟೆಂಡರ್‌ ನಿಯಮದಂತೆ ಕಾಮಗಾರಿ ಕೈಗೆತ್ತಿಕೊಂಡು ಮುಗಿಸಬೇಕಾಗಿದ್ದ ಗುತ್ತಿಗೆದಾರರು ಮೂರು ವರ್ಷಗಳ ನಂತರ ಈಗ ಕಾಮಗಾರಿ ಪೂರ್ಣಗೊಳಿಸಲು ತಮ್ಮಿಂದ ಆಗಲ್ಲ ಎಂದು ಬರೆದುಕೊಟ್ಟಿರುವ ಬಗ್ಗೆ ಮೂಲಗಳು ತಿಳಿಸಿವೆ.

ಯಮನಾಳ ಗ್ರಾಮದಿಂದ ಗೂಗಲ್‌ ಗ್ರಾಮದವರೆಗೂ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ. ದ್ವಿಚಕ್ರವಾಹನ ಸಹ ಹೋಗದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಅನಿವಾರ್ಯವಾಗಿ ಈ ಮಾರ್ಗದ ಸುಮಾರು 20ಕ್ಕೂ ಹೆಚ್ಚು ಗ್ರಾಮಗಳ ಜನರು ಹದಗೆಟ್ಟ ರಸ್ತೆಯಲ್ಲಿಯೇ ಪ್ರತಿನಿತ್ಯ ಕಾಲ ಕಳೆಯಬೇಕಾಗಿದೆ ಎಂದು ಕೊಪ್ಪರ ಗ್ರಾಮದ ರಾಮಣ್ಣ ಆರೋಪಿಸಿದ್ದಾರೆ.

ಮಳೆಗಾಲ ಅರಂಭವಾಗಿದ್ದು, ರಸ್ತೆ ಉದ್ದಕ್ಕೂ ಗುಂಡಿಗಳು ಬಿದ್ದು ನೀರು ತುಂಬಿಕೊಂಡಿವೆ. ಜೀವ ಕೈಯಲ್ಲಿ ಹಿಡಿದುಕೊಂಡು ಹೋಗಬೇಕಾದ ಅನಿವಾರ್ಯತೆ ಬಂದಿದೆ. ಅಧಿಕಾರಿಗಳು ಸುಗಮ ಸಂಚಾರಕ್ಕೆ ಅನುಕೂಲ ಮಾಡಿಲ್ಲ ಎಂದು ಲಿಂಗನಗೌಡ ಯಾಟಗಲ್‌ ಆರೋಪಿಸಿದರು.

* * 

ಟೆಂಡರ್‌ ಪಡೆದ ಗುತ್ತಿಗೆದಾರ ಸಂಸ್ಥೆ ಟೆಂಡರ್ ಪ್ರಕಾರ ಕಾಮಗಾರಿ ಮುಗಿಸಿಲ್ಲ. ಈ ಕಾರಣದಿಂದ ಕಾಮಗಾರಿಯನ್ನು ಮತ್ತೆ ಟೆಂಡರ್ ಕರೆಯಲು ಸರ್ಕಾರಕ್ಕೆ ಕಳುಹಿಸಲಾಗಿದೆ.                                                   

ಬಸನಗೌಡ ಪಾಟೀಲ 

ಎಇಇ, ಲೋಕೋಪಯೋಗಿ ಇಲಾಖೆ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry