ರಸ್ತೆ ದುರಸ್ತಿಗಾಗಿ 23ರಂದು ‘ಬೀದರ್ ಬಂದ್’

7

ರಸ್ತೆ ದುರಸ್ತಿಗಾಗಿ 23ರಂದು ‘ಬೀದರ್ ಬಂದ್’

Published:
Updated:
ರಸ್ತೆ ದುರಸ್ತಿಗಾಗಿ 23ರಂದು ‘ಬೀದರ್ ಬಂದ್’

ಬೀದರ್: ಒಳಚರಂಡಿ ಹಾಗೂ ನಿರಂತರ ಕುಡಿಯುವ ನೀರು ಪೂರೈಕೆ ಯೋಜನೆ ಕಾಮಗಾರಿಗಾಗಿ ನಗರದ ವಿವಿಧೆಡೆ ಅಗೆದ ರಸ್ತೆಗಳನ್ನು ದುರಸ್ತಿಪಡಿಸುವಂತೆ ಒತ್ತಾಯಿಸಿ ವಿವಿಧ ಸಂಘಟನೆಗಳು ಜಂಟಿಯಾಗಿ ಜೂನ್ 23 ರಂದು ಬೀದರ್ ಬಂದ್‌ಗೆ ಕರೆ ನೀಡಿವೆ. ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಬೀದರ್ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಬಿ.ಜಿ. ಶೆಟಕಾರ್ ಈ ಮಾಹಿತಿ ನೀಡಿದರು.

‘ಕರ್ನಾಟಕ ರಕ್ಷಣಾ ವೇದಿಕೆಯ ವಿವಿಧ ಬಣಗಳು, ರೈತ ಸಂಘಟನೆಗಳು, ಜನಪರ ಸಂಘಟನೆಗಳು, ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘಟನೆಗಳು, ಅಡತ್‌ ಅಂಗಡಿಗಳ ಮಾಲೀಕರ ಸಂಘ, ಹಮಾಲರ ಸಂಘ, ಲಾರಿ ಮಾಲೀಕರ ಸಂಘ, ಬಟ್ಟೆ ಅಂಗಡಿಗಳ ಮಾಲೀಕರ ಸಂಘ, ಕಾರ್ಮಿಕ ಸಂಘ, ಟೋಕರಿ ಕೋಳಿ ಸಂಘ, ಅಂಬಿಗರ ಚೌಡಯ್ಯ ಯುವ ಸೇನೆ ಮೊದಲಾದ ಸಂಘಟನೆ ಗಳು ಬಂದ್‌ನಲ್ಲಿ ಪಾಲ್ಗೊಳ್ಳಲಿವೆ’ ಎಂದು ತಿಳಿಸಿದರು.

‘ನಗರದಲ್ಲಿ ಉತ್ತಮವಾಗಿದ್ದ ರಸ್ತೆಗಳನ್ನು ಒಳಚರಂಡಿ ಕಾಮಗಾರಿ ಹೆಸರಲ್ಲಿ ಅಗೆದು ಹಾಳು ಮಾಡಲಾಗಿದೆ. ರಸ್ತೆಗಳನ್ನು ದುರಸ್ತಿಪಡಿಸುವಲ್ಲಿ ಜಿಲ್ಲಾಡಳಿತ, ನಗರಸಭೆ,   ಲೋಕೋಪಯೋಗಿ ಇಲಾಖೆ ಅಧಿಕಾರಿ ಗಳು ನಿರ್ಲಕ್ಷ್ಯ ತೋರುತ್ತಿದ್ದು,  ಸಾರ್ವಜನಿಕರು  ಸಮಸ್ಯೆ ಎದುರಿ ಸುವಂತಾಗಿದೆ’ ಎಂದು ದೂರಿದರು.

‘ನಗರದ ಹೃದಯ ಭಾಗದಲ್ಲಿರುವ ಮೋಹನ್ ಮಾರ್ಕೆಟ್, ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತ, ಓಲ್ಡ್‌ ಸಿಟಿ ಸೇರಿ ವಿವಿಧೆಡೆ ಅಗೆದ ರಸ್ತೆಗಳನ್ನು ಸರಿಪಡಿಸಿಲ್ಲ. ನಗರಸಭೆ ಎದುರಿನ ರಸ್ತೆಯೇ ದುಃಸ್ಥಿತಿಯಲ್ಲಿದ್ದರೂ ಸಂಬಂಧಪಟ್ಟವರು ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಆರೋಪಿಸಿದರು.

‘ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನಿತ್ಯ ನಗರದ ಹಾಳಾದ ರಸ್ತೆಗಳಲ್ಲೇ ಓಡಾಡಿದರೂ ಅವುಗಳನ್ನು ದುರಸ್ತಿ ಮಾಡಿಸುತ್ತಿಲ್ಲ. ದೂಳಿನಿಂದ ಸಾರ್ವಜನಿಕರು ಅನಾರೋಗ್ಯಕ್ಕೆ ಈಡಾಗುತ್ತಿದ್ದಾರೆ. ಮಳೆ ಸುರಿದರೆ ರಸ್ತೆಗಳು ಕೆಸರಿನ ಹೊಂಡಗಳಾಗುತ್ತವೆ. ಅಲ್ಲಲ್ಲಿ ತೋಡಿರುವ ತಗ್ಗುಗಳಿಂದ ಸಂಚಾರ ದುಸ್ತರವಾಗಿದೆ’ ಎಂದು ಹೇಳಿದರು.

‘ನಗರದ ಕೆಲಕಡೆ ತೋಡಿರುವ ಗುಂಡಿಗಳನ್ನು ಹೆಸರಿಗೆ ಮಾತ್ರ ಮುಚ್ಚಲಾಗಿದೆ. ಹೀಗಾಗಿ ಮಣ್ಣು ಕುಸಿಯುತ್ತಿದೆ. ರಸ್ತೆ ಬದಿಯಲ್ಲಿನ ಮಣ್ಣು ಚರಂಡಿಗಳಲ್ಲಿ ತುಂಬಿಕೊಂಡು ಮಳೆ ನೀರು ಹರಿದು ಹೋಗದೆ ಒಂದೆಡೆ ನಿಲ್ಲುತ್ತಿದೆ’ ಎಂದು ತಿಳಿಸಿದರು.

‘ನಗರದಲ್ಲಿ ನಡೆಯುತ್ತಿರುವ ಒಳಚರಂಡಿ ನಿರ್ಮಾಣ ಹಾಗೂ ನಿರಂತರ ಕುಡಿಯುವ ನೀರು ಪೂರೈಕೆ ಯೋಜನೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಅಗೆದ ರಸ್ತೆ ಹಾಗೂ ತಗ್ಗುಗಳನ್ನು ಗುಣಮಟ್ಟದ ಕಾಮಗಾರಿಯೊಂದಿಗೆ ಸರಿಪಡಿಸಬೇಕು’ ಎಂದು ಒತ್ತಾಯಿಸಿದರು.

ಹದಗೆಟ್ಟ ಆಡಳಿತ ಯಂತ್ರ: ‘ಈಶ್ವರ ಖಂಡ್ರೆ ಜಿಲ್ಲಾ ಉಸ್ತುವಾರಿ ಸಚಿವರಾದ ನಂತರ ಆಡಳಿತ ಯಂತ್ರ ಮತ್ತಷ್ಟು ಹದಗೆಟ್ಟಿದೆ. ಅಧಿಕಾರಿಗಳ ಮೇಲೆ ಹಿಡಿತ ಇಲ್ಲದಾಗಿದೆ. ಸರ್ಕಾರದ ವಿವಿಧ ಯೋಜನೆಗಳ ಲಾಭ ಅರ್ಹರಿಗೆ ತಲುಪುತ್ತಿಲ್ಲ’ ಎಂದು ದೂರಿದರು.

‘ಸರ್ಕಾರದಿಂದ ಅಭಿವೃದ್ಧಿಗೆ ಬಿಡುಗಡೆಯಾಗಿರುವ ಹಾಗೂ ಖರ್ಚಾಗಿ ರುವ ಅನುದಾನದ ಬಗೆಗೆ ಸಚಿವರು ಮಾಹಿತಿ ಕೊಡುತ್ತಿದ್ದಾರೆ. ಆದರೆ, ಯಾವುದೇ ಅಭಿವೃದ್ಧಿ ಕೆಲಸಗಳು ಕಾಣಿಸುತ್ತಿಲ್ಲ’ ಎಂದು ಟೀಕಿಸಿದರು. ‘ಮಿನಿ ವಿಧಾನಸೌಧದ ಸ್ಥಳಕ್ಕೆ ಸಂಬಂಧಿಸಿದಂತೆ ಸಚಿವರಿಗೆ ಅಂತಿಮ ನಿರ್ಣಯ ತೆಗೆದುಕೊಳ್ಳಲು ಆಗುತ್ತಿಲ್ಲ. ಸಭೆಗಳನ್ನು ಕರೆದು ಕಾಲಹರಣ ಮಾಡಲಾಗುತ್ತಿದೆ’ ಎಂದು ಹೇಳಿದರು.

22 ರಂದು ಪಾದಯಾತ್ರೆ: ‘ಬೀದರ್‌ ಬಂದ್‌ ಮುನ್ನಾ ದಿನ ಜೂನ್ 22 ರಂದು ನಗರದ ಪ್ರಮುಖ ಬೀದಿಗಳಲ್ಲಿ ಪಾದಯಾತ್ರೆ ನಡೆಸಿ ಬಂದ್‌ಗೆ ಬೆಂಬಲಿಸುವಂತೆ ವ್ಯಾಪಾರಿಗಳು ಹಾಗೂ ಸಾರ್ವಜನಿಕರಲ್ಲಿ ಮನವಿ ಮಾಡಲಾಗುವುದು’ ಎಂದು ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಸೋಮನಾಥ ಮುಧೋಳಕರ್ ಹೇಳಿದರು.

ಒತ್ತಾಯದಿಂದ ಯಾವುದೇ ಅಂಗಡಿಗಳನ್ನು ಬಂದ್ ಮಾಡಿಸುವುದಿಲ್ಲ. ಬಂದ್ ಹಿಂಪಡೆಯಲು ಮನವಿಗಳು ಬಂದರೆ, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ನಗರಸಭೆ ಅಧ್ಯಕ್ಷರು ಹಾಗೂ ಅಧಿಕಾರಿಗಳು ಜೂನ್ 22 ರಂದು ನಮ್ಮೊಂದಿಗೆ ಆಟೊದಲ್ಲಿ ನಗರದಲ್ಲಿ ಸಂಚಾರ ಮಾಡಬೇಕು ಎನ್ನುವ ಬೇಡಿಕೆ ಇಡಲಾಗುವುದು. ಅದಕ್ಕೆ ಒಪ್ಪಿದರೆ ಮಾತ್ರ ಬಂದ್ ಹಿಂಪಡೆಯುವ ಬಗ್ಗೆ ತೀರ್ಮಾನಿಸಲಾಗುವುದು’ ಎಂದರು.

ನಗರಸಭೆ ಸದಸ್ಯರಾದ ವೀರಶೆಟ್ಟಿ ಭಂಗೂರೆ, ನಬಿ ಖುರೇಶಿ, ಮುಖಂಡರಾದ ಆಕಾಶ ಪಾಟೀಲ ಅಯಾಸಪುರ, ಬಸವರಾಜ ಧನ್ನೂರು, ರೈತ ಸಂಘದ ದಯಾನಂದ ಸ್ವಾಮಿ, ಶಾಮರಾವ್ ಬಾವಗೆ, ಶ್ರೀರಾಮ ಸೇನೆಯ ವೀರಶೆಟ್ಟಿ ಖ್ಯಾಮಾ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಉಮೇಶಕುಮಾರ ಸ್ವಾರಳ್ಳಿಕರ್, ಭಗತ್‌ಸಿಂಗ್ ಯುತ್ ಬ್ರಿಗೇಡ್‌ನ ಜಸ್‌ಪ್ರೀತ್‌ಸಿಂಗ್‌(ಮೌಂಟಿ), ಮಾಣಿಕೇಶ ಪಾಟೀಲ, ಮಾರ್ಟಿನ್‌ ಮಾಸಾ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

* * 

ನಗರದ ಬಡಾವಣೆಗಳಲ್ಲಿ ಕೆಲ ತಿಂಗಳ ಹಿಂದೆ ನಿರ್ಮಿಸಿದ ಸಿಸಿ ರಸ್ತೆಗಳನ್ನು ಒಳಚರಂಡಿ ಕಾಮಗಾರಿಗಾಗಿ ಅಗೆದು  ಹಣ ಪೋಲು ಮಾಡಲಾಗಿದೆ

ಬಿ.ಜಿ.ಶೆಟಕಾರ, ಬೀದರ್ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry