ಕೋಟೆ ಮುಂದಿನ ರಸ್ತೆಗೆ ಹಸಿರು ಸ್ಪರ್ಶ

7

ಕೋಟೆ ಮುಂದಿನ ರಸ್ತೆಗೆ ಹಸಿರು ಸ್ಪರ್ಶ

Published:
Updated:
ಕೋಟೆ ಮುಂದಿನ ರಸ್ತೆಗೆ ಹಸಿರು ಸ್ಪರ್ಶ

ಕಲಬುರ್ಗಿ: ಅಂತೂ ಇಂತೂ ಕಲಬುರ್ಗಿ ಕೋಟೆ ಮುಂದಿನ ರಸ್ತೆ ಕಾಮಗಾರಿ ಪೂರ್ಣಗೊಂಡು ಸಂಚಾರಕ್ಕೆ ಮುಕ್ತವಾಗಿದ್ದು, ಸವಾರರು ನಿಟ್ಟುಸಿರು ಬಿಡುವಂತಾಗಿದೆ.

ನಗರದ ಪ್ರಮುಖ ಐತಿಹಾಸಿಕ ತಾಣದ ಮುಂದಿನ ರಸ್ತೆಗೆ ಈಗ ಹಸಿರು ಸ್ಪರ್ಶ ದೊರೆತಿದೆ. ರಸ್ತೆ ವಿಭಜಕದ ಮಧ್ಯೆ ಸಸಿಗಳನ್ನು ನೆಡಲಾಗಿದೆ. ಜತೆಗೆ ಪಾದಚಾರಿ ಮಾರ್ಗವನ್ನೂ ನಿರ್ಮಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲಾಗಿದೆ.

ವರ್ಷದ ಹಿಂದೆ ಈ ರಸ್ತೆ ಸಂಪೂರ್ಣ ಹಾಳಾಗಿತ್ತು. ಈ ಮಾರ್ಗದಲ್ಲಿ ವಾಹನಗಳ ಸಂಚಾರ ದುಸ್ತರವಾಗಿತ್ತು. ರಸ್ತೆಯಲ್ಲಿ ಬೃಹತ್‌ ಹೊಂಡಗಳು ನಿರ್ಮಾಣವಾಗಿದ್ದವು. ವಾಹನಗಳ ಸಂಚಾರದಿಂದ ಮೇಲೆ ಏಳುತ್ತಿದ್ದ ದೂಳು ಅಸಹನೀಯ ಎನಿಸಿತ್ತು. ಹೀಗಾಗಿ ಈ ಮಾರ್ಗದಲ್ಲಿ ವಾಹನಗಳ ಸಂಚಾರ ಸ್ಥಗಿತಗೊಂಡು, ಬಹುತೇಕರು ಪರ್ಯಾಯ ರಸ್ತೆಯನ್ನು ಅವಲಂಬಿಸಿದ್ದರು. ಆದರೆ, ಈಗ ಆ ರಸ್ತೆಯ ಚಿತ್ರಣವೇ ಬದಲಾಗಿದೆ.

ಕೋಟೆ ಮುಂದಿನ ರಸ್ತೆಯ ಅಭಿವೃದ್ಧಿಗಾಗಿ ₹1ಕೋಟಿ ವೆಚ್ಚದ ಕಾಮಗಾರಿಯನ್ನು ಮಹಾನಗರ ಪಾಲಿಕೆ ಕೈಗೆತ್ತಿಕೊಂಡು ಆರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿದೆ. ಅಲ್ಲದೇ, ರಸ್ತೆ ವಿಭಜಕದಲ್ಲಿ ಹಸಿರು ಬೆಳೆಸಲಾಗಿದೆ. ಅಶೋಕ ವೃಕ್ಷ, ಕಣಗಿಲೆ ಹೂವು ಹಾಗೂ ತಾಳೆಮರಗಳು ಅಲ್ಲಿ ನಳನಳಿಸುತ್ತಿವೆ. ಹುಲ್ಲುಹಾಸು ರಸ್ತೆಯ ಅಂದ–ಚೆಂದ ಹೆಚ್ಚಿಸಿದೆ.

ಕೋಟೆಯ ಮುಂಭಾಗದಿಂದ ಶಹಾ ಬಜಾರ್‌ ನಾಕಾದ ಸಂಪರ್ಕ ರಸ್ತೆವರೆಗೆ ಸುಸಜ್ಜಿತ ಫುಟ್‌ಪಾತ್ ಸಹ ನಿರ್ಮಿಸಲಾಗಿದೆ. ಕಲಬುರ್ಗಿ ಕೋಟೆ ಮುಂದಿನ ಜಾಗ ಐತಿಹಾಸಿಕವಾಗಿ ಮಾತ್ರವಲ್ಲ ವ್ಯಾಪಾರದ ದೃಷ್ಟಿಯಿಂದಲೂ ಮಹತ್ವ ಪಡೆದಿದೆ. ಇಲ್ಲಿನ ಕಪಡಾ ಬಜಾರ್‌, ಮುರ್ಗಿ ಬಜಾರ್‌ನಲ್ಲಿ ಜನಸಂದಣಿ ಹೆಚ್ಚಾಗಿರುತ್ತದೆ.

ಎಲ್‌ಐಸಿ, ಬಿಎಸ್‌ಎನ್‌ಎಲ್‌, ಅಂಚೆ ಕಚೇರಿಗಳು ಇಲ್ಲಿವೆ. ನಗರ ಹಾಗೂ ಗ್ರಾಮೀಣ ಭಾಗದ ಸಾಕಷ್ಟು ಮಂದಿ ನಿತ್ಯವೂ ಈ ಮಾರ್ಗದಲ್ಲಿ ಸಂಚರಿಸುತ್ತಾರೆ. ಇಲ್ಲಿನ ವಾಣಿಜ್ಯ ಚಟುವಟಿಕೆಗಳನ್ನು ಗಮನಿಸಿದ ಮಹಾನಗರ ಪಾಲಿಕೆ, ರಸ್ತೆಯ ಸುಧಾರಣೆಗೆ ಆದ್ಯತೆ ನೀಡಿತ್ತು.

ಪ್ರವಾಸಿಗರಿಗೆ ಅನುಕೂಲ: ಮಳೆಗಾಲದಲ್ಲಿ ಕೆಸರುಗದ್ದೆಯಾಗುತ್ತಿದ್ದ ಈ ರಸ್ತೆಯಿಂದ ಪ್ರವಾಸಿ ವಾಹನಗಳಿಗೂ ತೊಂದರೆ ಆಗಿತ್ತು. ಸುತ್ತಿಬಳಸಿ ಕೋಟೆಗೆ ತಲುಪುವುದು ಅನಿವಾರ್ಯ ಆಗಿತ್ತು. ಸಮರ್ಪಕ ರಸ್ತೆ ಇಲ್ಲದೆ ಶರಣಬಸವೇಶ್ವರ ಕೆರೆ ಹಾಗೂ ಸೂಪರ್‌ ಮಾರ್ಕೆಟ್‌ನ ನಗರ ಬಸ್‌ ನಿಲ್ದಾಣದ ಸಮೀಪ ಪ್ರವಾಸಿ ವಾಹನಗಳನ್ನು ನಿಲುಗಡೆ ಮಾಡಲಾಗುತ್ತಿತ್ತು. ಇದರಿಂದ ಪ್ರವಾಸಿಗರಿಗೂ ಕಿರಿಕಿರಿ ಉಂಟಾಗಿತ್ತು. ಈಗ ಈ ಎಲ್ಲ ಸಮಸ್ಯೆಗಳು ನಿವಾರಣೆಯಾಗಿವೆ.

‘ಇಲ್ಲಿ ಸಂಚರಿಸುವ ಜನರು ಕೋಟೆ ಮುಂದೆ ರಸ್ತೆ ಇದೆ ಎಂಬುದನ್ನೇ ಮರೆತಿದ್ದರು. ಬೃಹತ್‌ ಹೊಂಡ, ದೂಳುಮಯ ರಸ್ತೆಯಲ್ಲಿ ಬೈಕ್‌ ಸಾಗುವುದೇ ಕಷ್ಟವಾಗಿತ್ತು. ಮಳೆಗಾಲದಲ್ಲಿ ನೀರು ನಿಂತು ಬಹಳ ತೊಂದರೆ ಆಗುತ್ತಿತ್ತು. ಇದರಿಂದ ಇಲ್ಲಿನ ಪ್ರವಾಸಿ ಟ್ಯಾಕ್ಸಿ, ಹೋಟೆಲ್‌ಗಳಿಗೆ ಜನ ಬರುತ್ತಿರಲಿಲ್ಲ’ ಎನ್ನುತ್ತಾರೆ ಸ್ಥಳೀಯ ವ್ಯಾಪಾರಿ ಮೊಹ್ಮದ ಯುಸೂಫ್‌.

‘ಐತಿಹಾಸಿಕ ತಾಣಕ್ಕೆ ಭೇಟಿ ನೀಡುವ ಜನರಿಗೆ ಆಗುತ್ತಿದ್ದ ತೊಂದರೆ ತಪ್ಪಿದೆ. ಮೊದಲು ರಸ್ತೆ ಮೇಲ್ದರ್ಜೆಗೇರಿಸಲು ಉದ್ದೇಶಿಸಲಾಗಿತ್ತು. ನಂತರ ಖಾಸಗಿ ಏಜೆನ್ಸಿ ಮೂಲಕ ಹಸಿರು ಬೆಳೆಸಲು ನಿರ್ಧರಿಸಲಾಯಿತು’ ಎಂದು ಪಾಲಿಕೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಆರ್‌. ಜಾಧವ್‌ ‘ಪ್ರಜಾವಾಣಿ’ಗೆ ತಿಳಿಸಿದರು.

* * 

ಕೋಟೆ ರಸ್ತೆಗೆ ಹೊಸ ಮೆರುಗು ಬಂದಿದೆ. ಹಸಿರೀಕರಣವನ್ನೂ ಕೈಗೊಳ್ಳಲಾಗಿದೆ. ಇದರಿಂದ ಪ್ರವಾಸಿಗರ ವಾಹನಗಳನ್ನು ಕೋಟೆ ಸಮೀಪದಲ್ಲೇ ನಿಲುಗಡೆ ಮಾಡಲು ನೆರವಾಗಿದೆ

ಮೊಹ್ಮದ್ ಯುಸೂಫ್‌, ಸ್ಥಳೀಯರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry