ಅಭಿವೃದ್ಧಿಯಲ್ಲಿ ಸ್ಥಳೀಯ ಸಂಸ್ಥೆಗಳ ಸಾಧನೆ ಶೂನ್ಯ!

7

ಅಭಿವೃದ್ಧಿಯಲ್ಲಿ ಸ್ಥಳೀಯ ಸಂಸ್ಥೆಗಳ ಸಾಧನೆ ಶೂನ್ಯ!

Published:
Updated:
ಅಭಿವೃದ್ಧಿಯಲ್ಲಿ ಸ್ಥಳೀಯ ಸಂಸ್ಥೆಗಳ ಸಾಧನೆ ಶೂನ್ಯ!

ಯಾದಗಿರಿ: ಸ್ಥಳೀಯ ಸಂಸ್ಥೆಗಳಿಗೆ ಸರ್ಕಾರ ಬಿಡುಗಡೆ ಮಾಡುತ್ತಾ ಬಂದಿರುವ ಅನುದಾನ ಬಳಕೆ ಮತ್ತು ಅಭಿವೃದ್ಧಿ ಕಾಮಗಾರಿ ಪೂರ್ಣಗೊಳಿಸುವಲ್ಲಿ ಜಿಲ್ಲೆಯಲ್ಲಿನ ಸ್ಥಳೀಯ ಸಂಸ್ಥೆಗಳು ತೋರಿರುವ ನಿರಾಸಕ್ತಿಯಿಂದಾಗಿ ಸಮಗ್ರ ಅಭಿವೃದ್ಧಿಗೆ ಹಿನ್ನಡೆ ಉಂಟಾಗಿದೆ.

2014ರಿಂದ 2017ರ ವರೆಗೆ ವಿವಿಧ ಸ್ಥಳೀಯ ಸಂಸ್ಥೆಗಳು ಪೂರ್ಣಗೊಳಿಸಿರುವ ಕಾಮಗಾರಿಗಳ ಸಂಖ್ಯೆ ಹಾಗೂ ಬಳಕೆ ಮಾಡಿರುವ ಅನುದಾನದ ಕುರಿತಂತೆ ನಗರಾಭಿವೃದ್ಧಿ ಯೋಜನಾ ಕೋಶ ನೀಡಿರುವ ವರದಿ ಬಗ್ಗೆ ಜಿಲ್ಲಾಡಳಿತ ಅತೃಪ್ತಿ ವ್ಯಕ್ತಪಡಿಸಿದೆ. ಜಿಲ್ಲೆಯ ಯಾವೊಂದು ಸ್ಥಳೀಯ ಸಂಸ್ಥೆಗಳು ನಗರಾಭಿವೃದ್ಧಿ ಯೋಜನಾ ಕೋಶ ನೀಡುವ ರ್‍್ಯಾಂಕ್‌ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ. ಇದರಿಂದಾಗಿ ಅಭಿವೃದ್ಧಿಯಲ್ಲಿ ಸ್ಥಳೀಯ ಸಂಸ್ಥೆಗಳ ಸಾಧನೆ ಶೂನ್ಯ ಎಂಬುದಾಗಿ ಜಿಲ್ಲಾ ಯೋಜನಾ ನಿರ್ದೇಶಕ ನಂದಗಿರಿ ಪ್ರತಿಪಾದಿಸುತ್ತಾರೆ.

2016ರ ಬೇಸಿಗೆಯಲ್ಲಿ ಕುಡಿಯುವ ನೀರು ಪೂರೈಕೆ ಕಾಮಗಾರಿಗಳಿಗೆ ಸರ್ಕಾರ ನೀಡಿರುವ ಅನುದಾನವನ್ನು ಜಿಲ್ಲೆಯ ಯಾವೊಂದು ಸ್ಥಳೀಯ ಸಂಸ್ಥೆಗಳು ಸಮರ್ಪಕವಾಗಿ ಬಳಕೆ ಮಾಡಿಲ್ಲ. ಯಾದಗಿರಿ ನಗರಸಭೆಯಲ್ಲಿ ಕುಡಿಯುವ ನೀರಿಗಾಗಿ 2014–15ನೇ ಸಾಲಿನಲ್ಲಿ 5 ಹಾಗೂ 2015–16ನೇ ಸಾಲಿನಲ್ಲಿ 11 ಸೇರಿದಂತೆ ಒಟ್ಟು 16 ಕಾಮಗಾರಿಗಳಿಗೆ ಕ್ರಿಯಾಯೋಜನೆ ರೂಪಿಸಿತ್ತು. ಆದರೆ, ಅವುಗಳಲ್ಲಿ ಕೇವಲ 7 ಕಾಮಗಾರಿಗಳನ್ನಷ್ಟೇ ಪೂರ್ಣಗೊಳಿಸಲು ನಗರಸಭೆ ಶಕ್ತವಾಗಿದೆ.

57 ಕಾಮಗಾರಿಗಳಲ್ಲಿ ಕೇವಲ 32 ಪೂರ್ಣ: ಅದೇ ರಿತಿಯಲ್ಲಿ ಶಹಾಪುರ ನಗರಸಭೆ 10 ಕಾಮಗಾರಿಗಳಲ್ಲಿ 6, ಸುರಪುರ ನಗರಸಭೆ 9 ಕಾಮಗಾರಿಗಳಲ್ಲಿ 7, ಗುರುಮಠಕಲ್ ಪುರಸಭೆ 9 ಕಾಮಗಾರಿಗಳಲ್ಲಿ 6, ಕಕ್ಕೇರಾ ಪುರಸಭೆ 5 ಕಾಮಗಾರಿಗಳಲ್ಲಿ 2, ಕೆಂಭಾವಿ ಪುರಸಭೆ 3 ಕಾಮಗಾರಿಗಳಲ್ಲಿ 1, ಅಧಿಸೂಚಿತ ಪ್ರದೇಶ ಭೀಮರಾಯನಗುಡಿ 5 ಕಾಮಗಾರಿಗಳಲ್ಲಿ 3 ಕುಡಿಯುವ ನೀರಿನ ಕಾಮಗಾರಿಗಳನ್ನಷ್ಟೇ ಪೂರ್ಣಗೊಳಿಸಿವೆ.

ಸರ್ಕಾರ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಗೆ ನೀಡಿದ್ದ ಒಟ್ಟು 57 ಕಾಮಗಾರಿಗಳಲ್ಲಿ ಕೇವಲ 32 ಕಾಮಗಾರಿಗಳನ್ನಷ್ಟೇ ಸ್ಥಳೀಯ ಸಂಸ್ಥೆಗಳು ಪೂರ್ಣಗೊಳಿಸಿವೆ. ಇದರಿಂದ ಸರ್ಕಾರದ ಅನುದಾನ ಸಂಪೂರ್ಣ ಬಳಕೆ ಮಾಡಿಕೊಳ್ಳುವಲ್ಲಿ ಸ್ಥಳೀಯ ಸಂಸ್ಥೆಗಳು ಸೋಮಾರಿತನ ತೋರಿವೆ ಎಂಬುದಾಗಿ ಜಿಲ್ಲಾಡಳಿತ ಸ್ಥಳೀಯ ಸಂಸ್ಥೆಗಳ ಕಾರ್ಯವೈಖರಿ ಕುರಿತು ಅಸಮಾಧಾನ ವ್ಯಕ್ತಪಡಿಸಿದೆ.

ಬಳಕೆಯಾಗದ ಅನುದಾನ: ಸ್ಥಳೀಯ ಸಂಸ್ಥೆಗಳ ಆರ್ಥಿಕ ಪ್ರಗತಿ ಕೂಡ ಕುಸಿದಿದೆ. ಯಾದಗಿರಿ ನಗರಸಭೆಗೆ 2014–15ನೇ ಸಾಲಿನಲ್ಲಿ ಸರ್ಕಾರ₹30 ಲಕ್ಷ ಬಿಡುಗಡೆ ಮಾಡಿದರೆ, ಅದರಲ್ಲಿ ₹ 21ಲಕ್ಷ ಮಾತ್ರ ಬಳಕೆ ಮಾಡಲಾಗಿದೆ. 2015–16ನೇ ಸಾಲಿನಲ್ಲಿ ₹1.1ಕೋಟಿ ಬಿಡುಗಡೆ ಮಾಡಿದ್ದರೆ, ಕೇವಲ 34 ಲಕ್ಷ ಅನುದಾನವನ್ನಷ್ಟೇ ಬಳಕೆ ಮಾಡಿರುವುದು ಬೆಳಕಿಗೆ ಬಂದಿದೆ.

ಶಹಾಪುರ ನಗರಸಭೆ ₹76ಲಕ್ಷ ಅನುದಾನದಲ್ಲಿ ₹41 ಲಕ್ಷ, ಸುರಪುರ ನಗರಸಭೆ ₹57 ಲಕ್ಷದಲ್ಲಿ ₹34ಲಕ್ಷ, ಗುರುಮಠಕಲ್‌ ಪುರಸಭೆ ₹40ಲಕ್ಷದಲ್ಲಿ  ₹22 ಲಕ್ಷ, ಕಕ್ಕೇರಾ ಪುರಸಭೆ ₹29ಲಕ್ಷದಲ್ಲಿ ₹10ಲಕ್ಷ, ಕೆಂಭಾವಿ ಪುರಸಭೆ ₹30ಲಕ್ಷ ಅನುದಾನದಲ್ಲಿ ಕೇವಲ ₹10ಲಕ್ಷ ಹಾಗೂ ಅಧಿಸೂಚಿತ ಪ್ರದೇಶ ಭೀಮರಾಯನಗುಡಿ₹ 36 ಲಕ್ಷ ಅನುದಾನದಲ್ಲಿ ಅತ್ಯಂತ ಕಡಿಮೆ ₹13ಲಕ್ಷ ಅನುದಾನವನ್ನಷ್ಟೇ  ಬಳಕೆ ಮಾಡಿದೆ ಎಂಬುದಾಗಿ ನಗರಾಭಿವೃದ್ಧಿ ಯೋಜನಾ ಕೋಶದ ಅಂಕಿಅಂಶಗಳಿಂದ ತಿಳಿದುಬರುತ್ತದೆ.

₹5.39 ಕೋಟಿ ಉಳಿತಾಯ ಬಜೆಟ್‌: 2016–17ನೇ ಸಾಲಿನಲ್ಲಿ ₹1.79 ಕೋಟಿ ಕೊರತೆ ಬಜೆಟ್‌ ಮಂಡಿಸಿದ್ದ ಯಾದಗಿರಿ ನಗರಸಭೆ, 2017–18ನೇ ಸಾಲಿನಲ್ಲಿ ₹5.39 ಕೋಟಿ ಉಳಿತಾಯ ಬಜೆಟ್‌ ಮಂಡಿಸಿದೆ. ಒಟ್ಟು ₹77.14 ಕೋಟಿಯಷ್ಟು ಬಜೆಟ್‌ ಹೊಂದಿರುವ ನಗರಸಭೆಯ ಅಭಿವೃದ್ಧಿ ಕೇವಲ ಸಿಸಿ ರಸ್ತೆ ನಿರ್ಮಾಣ ಹಾಗೂ ದುರಸ್ತಿ ಕಾಮಗಾರಿಗಳಿಗಷ್ಟೇ ಸೀಮಿತಗೊಂಡಿದೆ. ಇದೇ ಹಾದಿಯಲ್ಲಿ ಶಹಾಪುರ, ಸುರಪುರ ನಗರಸಭೆಗಳೂ ಹೆಜ್ಜೆ ಹಾಕಿವೆ. ಪುರಸಭೆಗಳ ಪ್ರಗತಿಯೂ ಆರಕ್ಕೇರಿಲ್ಲ ಮೂರಕ್ಕಿಳಿದಿಲ್ಲ ಎಂಬಂತಾಗಿದೆ ಎಂದು ಜಿಲ್ಲಾ ಸ್ಲಂ ಜನಾಂದೋಲನದ ಜಿಲ್ಲಾ ಸಂಚಾಲಕಿ ರೇಣುಕಾ ಸಡರಗಿ ಹೇಳುತ್ತಾರೆ.

ತಾಂತ್ರಿಕ ಅಧಿಕಾರಿಗಳ ಕೊರತೆ

ಜಿಲ್ಲೆಯ ಎಲ್ಲಾ ನಗರಸಭೆಗಳಲ್ಲಿ ಎಂಜಿನಿಯರ್‌ಗಳ ಹುದ್ದೆಗಳನ್ನು ತುಂಬಿಲ್ಲ. ಜೆಇ, ಎಇಇ, ಎಇ ಸೇರಿದಂತೆ ಎಲ್ಲಾ ಹುದ್ದೆಗಳು ಖಾಲಿ ಉಳಿದಿವೆ. ಅಭಿವೃದ್ಧಿ ಕಾಮಗಾರಿ ಕ್ರಿಯಾಯೋಜನೆ ರೂಪಿಸಲು ತಾಂತ್ರಿಕ ಅಧಿಕಾರಿಗಳು ಬೇಕು.

ಹಾಗಾಗಿ, ಸದ್ಯ ಲೋಕೋಪಯೋಗಿ ಎಂಜಿನಿಯರ್‌ಗಳ ಸಹಾಯದಿಂದ ಅಭಿವೃದ್ಧಿ ಕ್ರಿಯಾಯೋಜನೆ ಸಿದ್ಧಪಡಿಸಲಾಗುತ್ತಿದೆ. ಅನ್ಯ ಇಲಾಖೆ ಎಂಜಿನಿಯರ್‌ಗಳು ಸ್ಥಳೀಯ ಸಂಸ್ಥೆಗಳ ಕಾರ್ಯಗಳ ಬಗ್ಗೆ ಅಷ್ಟಾಗಿ ಗಮನಹರಿಸುವುದಿಲ್ಲ. ಎಂಜಿಯರ್‌ಗಳ ಕೊರತೆ ಕೂಡ ಸ್ಥಳೀಯ ಸಂಸ್ಥೆಗಳ ಪ್ರಗತಿಯ ಹಿನ್ನಡೆಗೆ ಪ್ರಮುಖ ಕಾರಣವಾಗಿದೆ ಎಂದು ಜಿಲ್ಲಾ ಯೋಜನಾ ನಿರ್ದೇಶಕ ಎಸ್.ಪಿ.ನಂದಗಿರಿ ‘ಪ್ರಜಾವಾಣಿ’ ಗೆ ಮಾಹಿತಿ ನೀಡಿದರು.

ಅಂಕಿ ಅಂಶ

₹5.39 ಯಾದಗಿರಿ ನಗರಸಭೆ ಉಳಿತಾಯ ಬಜೆಟ್‌

₹35 ಸರ್ಕಾರದ ನಗರೋತ್ಥಾನ ಅನುದಾನ

* * 

ರಾಜ್ಯ ಸರ್ಕಾರದ ನಗರೋತ್ಥಾನ ಅನುದಾನ ₹35 ಕೋಟಿ ಸೇರಿಸಿ ನಗರ ಸಭೆ ₹ 5.39 ಕೋಟಿ ಉಳಿತಾಯ ಬಜೆಟ್‌ ಮಂಡಿಸಿದೆ. ಆದರೆ,ಅನುದಾನವನ್ನು ಇದುವರೆಗೂ ಬಿಡುಗಡೆ ಮಾಡಿಲ್ಲ.

ಲಲಿತಾ ಅನಪೂರ,ಅಧ್ಯಕ್ಷೆ, ನಗರಸಭೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry