ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಕ್‌ ಗಾರ್ಡನ್‌ಗೆ ಇನ್ನಷ್ಟು ಶಿಲ್ಪಕಲಾಕೃತಿ!

Last Updated 18 ಜೂನ್ 2017, 7:14 IST
ಅಕ್ಷರ ಗಾತ್ರ

ಕಾರವಾರ: ಇಲ್ಲಿನ ರವೀಂದ್ರನಾಥ ಟ್ಯಾಗೋರ್‌ ಕಡಲತೀರದಲ್ಲಿ ನಿರ್ಮಾಣ ಆಗುತ್ತಿರುವ ರಾಕ್‌ ಗಾರ್ಡನ್‌ಗೆ ಇನ್ನಷ್ಟು ಸಿಮೆಂಟ್‌ ಶಿಲ್ಪಕಲಾಕೃತಿಗಳು ಸಿದ್ಧವಾ ಗುತ್ತಿದ್ದು, ಅವುಗಳಿಗೆ ಜೀವಕಳೆ ತುಂಬಲು ಕಲಾವಿದರು  ಶ್ರಮಿಸುತ್ತಿದ್ದಾರೆ.

ರಾಕ್‌ ಗಾರ್ಡನ್‌ಗೆ ಪೂರಕವಾಗಿ ಕಳೆದ ಫೆಬ್ರುವರಿ ನಡೆದ ಸಿಮೆಂಟ್‌ ಶಿಲ್ಪ ಕಲಾಕೃತಿ ಶಿಬಿರದಲ್ಲಿ ಕಲಾವಿದರ ತಂಡ ಜಿಲ್ಲೆಯ ಬುಡಕಟ್ಟುಗಳ ಸಂಸ್ಕೃತಿ, ಜನಜೀವನವನ್ನು ಪ್ರತಿಬಿಂಬಿಸುವ 13 ಶಿಲ್ಪಗಳನ್ನು ರಚಿಸಿದ್ದರು. ಅವುಗಳನ್ನು ಕಡಲತೀರದಲ್ಲಿ ಆಂಜನೇಯ ಪುತ್ಥಳಿ ಸಮೀಪದ ಜಾಗದಲ್ಲಿ ಇಡಲಾಗಿದ್ದು, ಫೈಬರ್‌ ಶೀಟ್‌ಗಳಿಂದ ಅವುಗಳನ್ನು ಭದ್ರಪಡಿಸಲಾಗಿದೆ. ಇದೀಗ ಜಿಲ್ಲಾಡಳಿತ ಇನ್ನೂ 40 ಸಿಮೆಂಟ್‌ ಶಿಲ್ಪ ಕಲಾಕೃತಿಗಳ ರಚನೆಗೆ ಮುಂದಾಗಿದ್ದು, ಕಲಾವಿದರಿಗೆ ಕಡಲತೀರದ ಮಯೂರ ವರ್ಮ ವೇದಿಕೆಯಲ್ಲಿ ಜಾಗ ಕಲ್ಪಿಸಿದೆ.

‘ಹುಬ್ಬಳ್ಳಿ, ಬೀದರ್‌ನಿಂದ 10 ಮಂದಿ ಕಲಾವಿದರು ಇಲ್ಲಿಗೆ ಬಂದಿ ದ್ದೇವೆ. ಜೂನ್‌ 3ರಿಂದ ಕಲಾಕೃತಿಗಳ ರಚನೆಯಲ್ಲಿ ತೊಡಗಿದ್ದು, ಮೊದಲಿಗೆ ಬುಡಕಟ್ಟು ಸಮುದಾಯವನ್ನು ಪ್ರತಿಬಿಂಬಿಸುವ 10 ಕಲಾಕೃತಿಗಳು ಸಿದ್ಧ ಮಾಡುತ್ತಿದ್ದೇವೆ. ಸುಮಾರು 2 ತಿಂಗಳ ಅವಧಿಯಲ್ಲಿ 40 ಕಲಾಕೃತಿಗಳನ್ನು ನಿರ್ಮಾಣ ಮಾಡುವ ಗುರಿ ಇದೆ’ ಎನ್ನುತ್ತಾರೆ ಹುಬ್ಬಳ್ಳಿಯಿಂದ ಬಂದಿರುವ ಕಲಾವಿದ ಮಧುಪ್ರಕಾಶ್‌.

4 ಎಕರೆ ಬಳಕೆ: ‘ರಾಕ್‌ ಗಾರ್ಡನ್‌ಗೆ ಕಡಲತೀರದ 6 ಎಕರೆಯನ್ನು ಮೀಸಲಿಡ ಲಾಗಿದೆ. ಮೊದಲ ಹಂತದಲ್ಲಿ 4 ಎಕರೆ ವ್ಯಾಪ್ತಿಯಲ್ಲಿ ಮಾತ್ರ ಕಾಮಗಾರಿಗೆ ಚಾಲನೆ ನೀಡಲಾಗಿದೆ. ರಾಷ್ಟ್ರೀಯ ಹೆದ್ದಾರಿ–66 ಬದಿಯಲ್ಲಿ ಸದ್ಯ ಕಾಂಪೌಂಡ್‌ ನಿರ್ಮಾಣ ಕಾರ್ಯ ಪ್ರಗತಿ ಯಲ್ಲಿದೆ. ಚತುಷ್ಪಥ ಕಾಮಗಾರಿ ಕೈಗೆತ್ತಿ ಕೊಂಡಿರುವ ಐಆರ್‌ಬಿ ಕಂಪೆನಿಯು ರಾಕ್‌ ಗಾರ್ಡನ್‌ ನಿರ್ಮಾಣಕ್ಕೆ ತನ್ನ ಕಾಣಿಕೆಯನ್ನು ನೀಡುತ್ತಿದೆ.

ಸಿಮೆಂಟ್‌ ಶಿಲ್ಪ ಕಲಾಕೃತಿಗಳು ಹಾಗೂ ಕಂಪೌಂಡ್‌ ನಿರ್ಮಾಣದ ವೆಚ್ಚವನ್ನು ಕಂಪೆನಿಯೇ ಭರಿಸುತ್ತಿದೆ’ ಎಂದು ರಾಕ್‌ ಗಾರ್ಡನ್‌ನ ಉಸ್ತುವಾರಿ ವಹಿಸಿಕೊಂಡಿರುವ ಹುಬ್ಬಳ್ಳಿ–ಅಂಕೋಲಾ ರೈಲ್ವೆ ಯೋಜನೆ ವಿಶೇಷ ಭೂ ಸ್ವಾಧೀನ ಅಧಿಕಾರಿ ಸದಾ ಶಿವ ಪ್ರಭು ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರವಾಸೋದ್ಯಮಕ್ಕೆ ಪೂರಕವಾಗಿ ಕಡಲತೀರದಲ್ಲಿ ಈ ರಾಕ್‌ ಗಾರ್ಡನ್‌ ನಿರ್ಮಾಣವಾಗುತ್ತಿದೆ. ಜಿಲ್ಲೆಯ ಬುಡಕಟ್ಟು ಜನಾಂಗಗಳಾದ ಹಾಲಕ್ಕಿ, ಕುಣಬಿ, ಕುಂಬ್ರಿ ಮರಾಠಿ, ಗೌಳಿ, ಗೊಂಡ, ಸಿದ್ದಿ ಸಮುದಾಯಗಳ ಬದುಕನ್ನು ಪ್ರತಿಬಿಂಬಿಸುವ ಶಿಲ್ಪಗಳು ಗಾರ್ಡನ್‌ನ ಪ್ರಮುಖ ಆಕರ್ಷಣೆಯಾಗಲಿದೆ’ ಎನ್ನುತ್ತಾರೆ ಅವರು.

ಗೋಪುರಕ್ಕೆ ಹಸಿರಿನ ಹೊದಿಕೆ
‘ಕಡಲತೀರದಲ್ಲಿ ಸುಮಾರು 50 ಅಡಿ ಎತ್ತರದ ಗೋಪುರ ಮಾದರಿಯ ಹಳೆಯ ಕಟ್ಟಡವಿದೆ. ಅದರ ಸುತ್ತ ಜಾಲರಿ ಹಾಗೂ ಬಿದಿರನ್ನು ಅಳವಡಿಸಿ, ಹಸಿರಿನ ಹೊದಿಕೆಯನ್ನು ಹಾಸುವ ಉದ್ದೇಶವಿದೆ. ರಾಕ್‌ ಗಾರ್ಡನ್‌ಗೆ ಬರುವ ಪ್ರವಾಸಿಗರು ಈ ಕಟ್ಟಡವನ್ನೇರಿ ಮೇಲ್ತುದಿಯಿಂದ ಸಮೀಪದ ಕಡಲತೀರದ ಸೊಬಗನ್ನು ಸವಿಯಲು ಅವಕಾಶ ಕಲ್ಪಿಸಲಾಗುವುದು’ ಎಂದು ಸದಾಶಿವ ಪ್ರಭು ಹೇಳಿದರು.

ಬರಲಿದೆ 25 ಅಡಿ ಎತ್ತರದ ಕಲಾಕೃತಿ: ‘ಮೀನುಗಾರರನ್ನು ಪ್ರತಿಬಿಂಬಿಸುವ ಸುಮಾರು 25 ಅಡಿ ಎತ್ತರದ ಫೈಬರ್‌ ಶಿಲ್ಪಕಲಾಕೃತಿಯ ರಚನೆಗೆ ಯೋಜನೆ ರೂಪಿಸಲಾಗಿದ್ದು, ಈಗಾಗಲೇ ಇದರ ನೀಲಿನಕ್ಷೆ ಸಿದ್ಧವಾಗಿದೆ. ಇದು ರಾಕ್‌ಗಾರ್ಡನ್‌ ಕೇಂದ್ರಬಿಂದು ಆಗಲಿದೆ’ ಎನ್ನುತ್ತಾರೆ ಸದಾಶಿವ ಪ್ರಭು.

* * 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT