ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಧತ್ವಕ್ಕೆ ಸವಾಲೆಸೆದ ಶಿಕ್ಷಕ ಈರಪ್ಪ

Last Updated 18 ಜೂನ್ 2017, 7:37 IST
ಅಕ್ಷರ ಗಾತ್ರ

ಸಮಾಜದಲ್ಲಿನ ಅಂಧರಿಗೆ ಲೂಯಿ ಬ್ರೈಲ್‌ ಅವರು ಕಣ್ಣು ಇದ್ದಂತೆ ಎನ್ನುವುದಕ್ಕೆ ಅಂಧ ಶಿಕ್ಷಕರೊಬ್ಬರು ಸಾಕ್ಷಿಯಾಗಿ ನಮ್ಮದೆರು ನಿಲ್ಲುತ್ತಾರೆ. ಪಟ್ಟಣದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆ ಶಿಕ್ಷಕ ಈರಪ್ಪ ಎಸ್. ಮತ್ತಿಹಳ್ಳಿ ಹುಟ್ಟು ಅಂಧರು. ಬೆಂಗಳೂರಿನ ಮಿತ್ರಜ್ಯೋತಿ ಜ್ಞಾನವಾಹಿನಿ ಅವರ ಆಡಿಯೋ ಸಿಡಿ ಸಹಾಯದೊಂದಿಗೆ ಮತ್ತು ಬ್ರೈಲ್ ಪುಸ್ತಕಗಳನ್ನು ಹಿಂದಿನ ದಿನವೇ ಅಭ್ಯಾಸಿಸಿ ತರಗತಿಯಲ್ಲಿ ಪರಿಣಾಮಕಾರಿಯಾಗಿ ಬೋಧಿಸುವಲ್ಲಿ ಸಿದ್ಧಹಸ್ತರು.

ನಿತ್ಯ ತರಗತಿಯಲ್ಲಿ ಬ್ರೈಲ್‌ ಪುಸ್ತಕ ಹಿಡಿದು ಪಾಠ ಮಾಡುವ ವೇಳೆ ಮುಖ್ಯವಾದ ಅಂಶಗಳನ್ನು ಯಾರಾದರೂ ವಿದ್ಯಾರ್ಥಿಗೆ ಹೇಳಿ ಕಪ್ಪು ಹಲಗೆಯಲ್ಲಿ ಬರೆಸುತ್ತಾರೆ. ಈ ಅಂಶಗಳನ್ನು ಗಮನಕೊಟ್ಟು ನೋಟ್‌ ಪುಸ್ತಕದಲ್ಲಿ ಬರೆದುಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸೂಚಿಸುತ್ತಾರೆ.

ಇನ್ನು ವಿಷಯದ ಅಗತ್ಯವಿದ್ದರೆ ಸ್ಮಾಟ್‌ ಮೊಬೈಲ್‌ ಮೂಲಕ ಶೈಕ್ಷಣಿಕ ಆ್ಯಪ್‌ಗಳನ್ನು ಡೌನ್‌ಲೋಡ್‌ ಮಾಡಿ ಪ್ರೊಜೆಕ್ಟರ್‌, ಸ್ಮಾರ್ಟ್ ಕ್ಲಾಸ್‌ ಮೂಲಕ ವಿದ್ಯಾರ್ಥಿಗಳಿಗೆ ಬೋಧಿಸುವ ನೈಪುಣ್ಯ ಇವರಿಗಿದೆ ಎಂದು ಶಾಲೆಯ ಶಿಕ್ಷಕರು ಹೆಮ್ಮೆಯಿಂದ ಹೇಳುತ್ತಾರೆ. ವಾರ್ಷಿಕ ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ಶಿಕ್ಷಕರ ನೆರವಿನೊಂದಿಗೆ ಮೌಲ್ಯಮಾಪನ ಮಾಡುವುದಾಗಿ ಪ್ರತಿಕ್ರಿಯಿಸಿದರು.

ಹಿನ್ನೆಲೆ: ಹುಬ್ಬಳ್ಳಿ ತಾಲ್ಲೂಕಿನ ಸುಳ್ಯದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1ರಿಂದ 5ರವರೆಗೆ ಸಾಮಾನ್ಯ ಶಿಕ್ಷಣ, ನಂತರ ಹುಬ್ಬಳ್ಳಿಯ ಸಿದ್ಧರೂಢರ ಅಂಧ ಮಕ್ಕಳ ಪಾಠಶಾಲೆಯಲ್ಲಿ 6 ಮತ್ತು 7ನೇ ತರಗತಿ, ಆರೂಢ ಅಂಧ ಮಕ್ಕಳ ಪ್ರೌಢಶಾಲೆಯಲ್ಲಿ 8ರಿಂದ 10ನೇ ತರಗತಿ ವರೆಗೆ ಅಭ್ಯಾಸ ಮಾಡಿ ಎಸ್ಸೆಸ್ಸೆಲ್ಸಿಯಲ್ಲಿ ಶೇ 78.53ರಷ್ಟು ಅಂಕ ಗಳಿಸಿದ್ದಾರೆ.

ನಂತರ ಗೋಪನಕೊಪ್ಪದ ಸರ್ಕಾರಿ ಪಿಯುಸಿ ಕಾಲೇಜಿನಲ್ಲಿ ನೇರವಾಗಿ ಎರಡನೇ ವರ್ಷದ ಕಲಾ ವಿಭಾಗದ ವಿದ್ಯಾರ್ಥಿಯಾಗಿ ಪರೀಕ್ಷೆ ಬರೆದು ಶೇ 74ರಷ್ಟು ಅಂಕಗಳಿಸಿದ್ದಾರೆ. ನಂತರ 2008ರಲ್ಲಿ ಧಾರವಾಡದ ಎಸ್‌.ಜೆ.ಎಂ.ವಿ ಮಹಾಲಕ್ಷ್ಮಿ ಕಾಲೇಜಿನಲ್ಲಿ ಬಿ.ಎ ಪದವಿಯನ್ನು ಶೇ 64ರಷ್ಟು ಅಂಕದೊಂದಿಗೆ ಉತ್ತೀರ್ಣರಾದರು. ಧಾರವಾಡದ ಕರ್ನಾಟಕ ವಿ.ವಿಯಲ್ಲಿ ಶೇ 66 ಅಂಕಗಳೊಂದಿಗೆ 2011ರಲ್ಲಿ ಎಂ.ಎ ಸ್ನಾತಕೋತ್ತರ ಪದವಿ ಗಳಿಸಿದ್ದಾರೆ. 

ಬಿಎಡ್‌ಗಾಗಿ ಹೋರಾಟ: ಬಿ.ಎ ಪದವಿ ನಂತರ ಬಿ.ಇಡಿ ಪ್ರವೇಶಕ್ಕೆ ಪ್ರಯತ್ನಿಸಿ ದರು. ಆದರೆ ಅಂಧರು ಎನ್ನುವ ಕಾರಣಕ್ಕೆ ಇವರಿಗೆ ಕರ್ನಾಟಕ ವಿಶ್ವವಿದ್ಯಾನಿಲಯ ಬಿ.ಇಡಿ ಪ್ರವೇಶ ನಿರಾಕರಿಸಿತು. ಬೆಂಗಳೂರಿನ ರಾಷ್ಟ್ರೀಯ ಅಂಧರ ಒಕ್ಕೂಟದವರು ಅಂಧರಿಗೆ ಬಿ. ಇಡಿ ಪದವಿ ನೀಡುವಂತೆ ಹೈಕೋರ್ಟ್ ಮೊರೆ ಹೋದರು.

ಕೊನೆಗೆ ಸುಪ್ರೀಂಕೋರ್ಟ್ ಅಂಧ ಪದವೀಧರರು ಸಮಾಜ ವಿಜ್ಞಾನ ಪಾಠ ಮಾಡಲು ಅರ್ಹರು. ಈ ಕಾರಣಕ್ಕೆ ಅಂಧರಿಗೆ ಬಿ. ಇಡಿ ಪ್ರವೇಶ ನೀಡುವಂತೆ ತೀರ್ಪು ನೀಡಿತು.
ಬಳಿಕ ಈರಪ್ಪ ಎಸ್.ಮತ್ತಿಹಳ್ಳಿ ಅವರಿಗೆ 2013ರಲ್ಲಿ ಹುಬ್ಬಳ್ಳಿಯ ವಿಜಯನಗರ ಬಿ. ಇಡಿ ಕಾಲೇಜಿನಲ್ಲಿ ಪ್ರವೇಶ ದೊರತ ಫಲವಾಗಿ ಶೇ 67 ಅಂಕಗಳೊಂದಿಗೆ ಬಿ.ಇಡಿ ಪಡೆದೆ ಎಂದು ತಮ್ಮ ಸಾಧನೆಯ ಹೆಜ್ಜೆ ಗುರುತನ್ನು ಹೆಮ್ಮೆಯಿಂದ ವಿವರಿಸಿದರು.

ಬಿ.ಇಡಿ ಶಿಕ್ಷಣ ನಂತರ 22 ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೆಸರು ನೋಂದಾಯಿಸಿದರೂ,  ಅಂಧತ್ವದಿಂದ ಸಹಾಯಕರ ನೆರವು ಪಡೆದು 8 ಪರೀಕ್ಷೆಗಳನ್ನು ಎದುರಿಸಿದೆ. ಇದರಲ್ಲಿ ಕೆಜಿಐಡಿ ಮತ್ತು ಮೊರಾರ್ಜಿ ದೇಸಾಯಿ ವಸತಿ ಶಾಲೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ನೆಚ್ಚಿನ ಶಿಕ್ಷಕ ಹುದ್ದೆಯನ್ನು ಆಯ್ಕೆ ಮಾಡಿಕೊಂಡೆ. ಜುಲೈ 16, 2016ರಲ್ಲಿ ಕಂಪ್ಲಿಯ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಸಮಾಜ ವಿಜ್ಞಾನ ಶಿಕ್ಷಕನಾಗಿ ಸೇರಿದೆ ಎಂದು ಹೇಳಿದರು.

ನಮ್ಮ ತಾಯಿ ಪಾರ್ವತಿ, ತಂದೆ ಶಿವಪ್ಪ ಅವರಿಗೆ ಇಬ್ಬರು ಪುತ್ರಿ, ಮೂವರು ಪುತ್ರರು. ಇವರಲ್ಲಿ ಹೆಣ್ಣು ಮಕ್ಕಳಿಗೆ ದೃಷ್ಟಿ ಇದ್ದರೆ ನನಗೆ ನನ್ನ ಸೋದರರಿಬ್ಬರಿಗೆ ಹುಟ್ಟಿನಿಂದ ಕಣ್ಣಿಲ್ಲ. ಈ ಕಾರಣದಿಂದ ನಮ್ಮ ಕುಟುಂಬಕ್ಕೆ ದಿಕ್ಕು ತೋಚದಂತಾಗಿತ್ತು. ಕುಟುಂಬದ ಐದನೇ ಮಗನಾದ ನಾನು(ಈರಪ್ಪ) ಅಂಧತ್ವವನ್ನು ಮೆಟ್ಟಿ ನಿಂತು ಆತ್ಮ ವಿಶ್ವಾಸದಿಂದ ಸಾಧನೆ ಮಾಡಿದೆ. ನನ್ನ ಸಾಧನೆಯ ಹಿಂದೆ ಕುಟುಂಬದ ಬೆಂಬಲವಿದ್ದರೂ ಹೆಚ್ಚಾಗಿ ನನ್ನ ನೆರವಿಗೆ ಧಾವಿಸಿದ್ದು, ರಮೇಶ್ ಹತ್ತಂಗಡಿ ಎನ್ನುವ ದಾನಿಗಳು ಎಂದು ಸ್ಮರಿಸಿದರು.

‘ವಿಶೇಷ ಸಾಧನೆ ಮಾಡುವ ಛಲ ಇದೆ’
ಫ್ರಾನ್ಸ್‌ ದೇಶದ ಲೂಯಿ ಬ್ರೈಲ್‌ ಅವರು ಚಿಕ್ಕ ವಯಸ್ಸಿನಲ್ಲಿ ಕಣ್ಣಿಗೆ ಪೆಟ್ಟು ಬಿದ್ದು, ಅಂಧರಾದರು. ಆದರೆ ಅವರು ಹಿಂಜರಿಯದೇ ವಿಶ್ವವೇ ತಮ್ಮತ್ತ ನೋಡುವಂತೆ ಬ್ರೈಲಿ ಲಿಪಿ ಕಂಡು ಹಿಡಿದು ಸಾಧನೆ ಮಾಡಿದ ಫಲವಾಗಿ ಇಂದು ನನಗೆ ನೌಕರಿ ದೊರೆತಿದೆ. ಈ ಅವಧಿಯಲ್ಲಿ ಅವರಂತೆ ವಿಶೇಷ ಸಾಧನೆ ಮಾಡುವ ಛಲ ಇದೆ.
ಈರಪ್ಪ ಎಸ್. ಮತ್ತಿಹಳ್ಳಿ, ಅಂಧ ಶಿಕ್ಷಕರು

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT